ETV Bharat / bharat

ರಾಷ್ಟ್ರೀಯ ಕುಸ್ತಿ ಚಾಂಪಿಯನ್​ಶಿಪ್ ಆಯೋಜನೆ ಮಾಡುತ್ತೇವೆ : ಸಂಜಯ್​ ಸಿಂಗ್​

author img

By PTI

Published : Jan 1, 2024, 11:01 PM IST

Etv Bharat
Etv Bharat

ರಾಷ್ಟ್ರೀಯ ಕುಸ್ತಿ ಚಾಂಪಿಯನ್​ ಶಿಪ್​ನ್ನು ಆಯೋಜನೆ ಮಾಡುವುದಾಗಿ ಡಬ್ಲ್ಯೂಎಫ್​ಐ ಅಧ್ಯಕ್ಷ ಸಂಜಯ್​ ಸಿಂಗ್​ ತಿಳಿಸಿದ್ದಾರೆ.

ನವದೆಹಲಿ : ಶೀಘ್ರದಲ್ಲೇ ರಾಷ್ಟ್ರೀಯ ಕುಸ್ತಿ ಚಾಂಪಿಯನ್​ ಶಿಪ್​ನ್ನು ಆಯೋಜನೆ ಮಾಡುವುದಾಗಿ ಡಬ್ಲ್ಯೂಎಫ್​ಐ ಅಧ್ಯಕ್ಷ ಸಂಜಯ್​ ಸಿಂಗ್​ ತಿಳಿಸಿದ್ದಾರೆ. ಭಾರತದ ಕುಸ್ತಿ ಫೆಡರೇಷನ್​(ಡಬ್ಲ್ಯೂಎಫ್​ಐ) ನೂತನ ಆಡಳಿತ ಸಮಿತಿಯನ್ನು ಕ್ರೀಡಾ ಸಚಿವಾಲಯ ಅಮಾನತು ಮಾಡಿತ್ತು. ಬಳಿಕ ನೂತನ ತಾತ್ಕಾಲಿಕ ಸಮಿತಿಯನ್ನು ನೇಮಕ ಮಾಡಿತ್ತು. ಇದರ ಬೆನ್ನಲ್ಲೇ, ತಾತ್ಕಾಲಿಕ ಸಮಿತಿ ನೇಮಕ ಮಾಡಿರುವುದಕ್ಕೆ ನಾವು ಮಾನ್ಯತೆ ನೀಡುವುದಿಲ್ಲ. ರಾಷ್ಟ್ರೀಯ ಕುಸ್ತಿ ಚಾಂಪಿಯನ್​ ಶಿಪ್​ ಆಯೋಜನೆ ಮಾಡುತ್ತೇವೆ ಎಂದು ಸಂಜಯ್​ ಸಿಂಗ್​ ಹೇಳಿದ್ದಾರೆ.

ಭಾರತದ ಕುಸ್ತಿ ಫೆಡರೇಶನ್​ನ ಅಧ್ಯಕ್ಷೀಯ ಚುನಾವಣೆ ನಡೆದ ಮೂರು ದಿನಗಳ ಬಳಿಕ ಕೇಂದ್ರ ಕ್ರೀಡಾ ಸಚಿವಾಲಯವು ನೂತನ ಆಡಳಿತ ಸಮಿತಿಯನ್ನು ಡಿಸೆಂಬರ್​ 24ರಂದು ಅಮಾನತು ಮಾಡಿತ್ತು. ನಿಯಮ ಉಲ್ಲಂಘನೆ ಕಾರಣಕ್ಕೆ ಸಮಿತಿಯನ್ನು ಅಮಾನತು ಮಾಡಲಾಗಿತ್ತು. ಬಳಿಕ ಸರ್ಕಾರದ ನಿರ್ದೇಶನದಂತೆ, ಭಾರತದ ಒಲಿಂಪಿಕ್ ಸಂಸ್ಥೆ (ಐಒಎ)ಯು ಡಬ್ಲ್ಯೂಎಫ್​ಐ ದೈನಂದಿನ ವ್ಯವಹಾರಗಳನ್ನು ನೋಡಲು ಭೂಪೇಂದರ್ ಸಿಂಗ್​ ಬಾಜ್ವಾ ನೇತೃತ್ವದಲ್ಲಿ ಮಾಜಿ ಹಾಕಿ ಆಟಗಾರ ಎಂ ಸೋಮಯ್ಯ ಮತ್ತು ಮಾಜಿ ಶಟ್ಲರ್​ ಮಂಜುಷಾ ಕನ್ವರ್​ ಒಳಗೊಂಡ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯು ಫೆಬ್ರವರಿ 2ರಿಂದ 5ರ ತನಕ ರಾಷ್ಟ್ರೀಯ ಸೀನಿಯರ್​ ಕುಸ್ತಿ ಚಾಂಪಿಯನ್​ಶಿಪ್​ ನಡೆಸುವುದಾಗಿ ಘೋಷಿಸಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಜಯ್​ ಸಿಂಗ್​, ನಾವು ಈ ತಾತ್ಕಾಲಿಕ ಸಮಿತಿಯನ್ನು ಒಪ್ಪುವುದಿಲ್ಲ. ಶೀಘ್ರದಲ್ಲೇ ರಾಷ್ಟ್ರೀಯ ಸೀನಿಯರ್​ ಕುಸ್ತಿ ಚಾಂಪಿಯನ್​ ಶಿಪ್ ಆಯೋಜಿಸುವುದಾಗಿ ತಿಳಿಸಿದ್ದಾರೆ. ನಾವು ಸಂಸ್ಥೆ ಮೇಲಿನ ಅಮಾನತನ್ನು ಅಂಗೀಕರಿಸುವುದಿಲ್ಲ. ಡಬ್ಲ್ಯೂಎಫ್​ಐ ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ನಾವು ನಮ್ಮ ಕಾರ್ಯವನ್ನು ಮಾಡುತ್ತಿದ್ದೇವೆ. ರಾಜ್ಯ ಸಂಸ್ಥೆಗಳು ತಮ್ಮ ತಂಡಗಳನ್ನು ಕಳುಹಿಸದಿದ್ದರೆ ಅವರು ಹೇಗೆ ಕುಸ್ತಿ ಚಾಂಪಿಯನ್​ ಶಿಪ್​ ನಡೆಸುತ್ತಾರೆ. ಈ ಸಂಬಂಧ ನಾವು ನಮ್ಮ ಕಾರ್ಯಕಾರಿ ಸಮಿತಿಯ ಸಭೆ ಕರೆಯುತ್ತೇವೆ. ಸಭೆಯ ನೋಟಿಸ್​ನ್ನು ಒಂದೆರಡು ದಿನಗಳಲ್ಲಿ ಕಳುಹಿಸಿಕೊಡಲಾಗುವುದು. ತಾತ್ಕಾಲಿಕ ಸಮಿತಿ ಚಾಂಪಿಯನ್ ಶಿಪ್​ ಆಯೋಜಿಸುವ ಮೊದಲು ನಾವು ಆಯೋಜನೆ ಮಾಡುತ್ತೇವೆ ಎಂದು ಹೇಳಿದರು.

ನಾವು ಯಾವುದೇ ನಿಯಮವನ್ನು ಉಲ್ಲಂಘನೆ ಮಾಡಿಲ್ಲ ಎಂದು ಕ್ರೀಡಾ ಸಚಿವಾಲಯಕ್ಕೆ ಸ್ಪಷ್ಟನೆ ನೀಡಿದ್ದೇವೆ. ಈ ಬಗ್ಗೆ ಕ್ರೀಡಾ ಸಚಿವಾಲಯದ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ. ಒಂದೆರೆಡು ದಿನ ಈ ಬಗ್ಗೆ ಕಾಯುತ್ತೇವೆ. ಬಳಿಕ ನಮ್ಮ ಸಂಸ್ಥೆ ಮೇಲಿನ ಅಮಾನತನ್ನು ಪರಿಗಣಿಸುವುದಿಲ್ಲ. ನಾವು ಪ್ರಜಾಸತ್ತಾತ್ಮಕವಾಗಿ ಆಯ್ಕೆ ಆಗಿದ್ದೇವೆ. ಅವರು ಹೇಗೆ ಅದನ್ನು ನಿರ್ಲಕ್ಷಿಸುತ್ತಾರೆ. ಈ ತಾತ್ಕಾಲಿಕ ಸಮಿತಿಗೆ ನಾವು ಮಾನ್ಯತೆ ನೀಡುವುದಿಲ್ಲ ಎಂದರು.

ಡಬ್ಲ್ಯೂಎಫ್​ಐನ ಅಧ್ಯಕ್ಷರಾಗಿ ಸಂಜಯ್​ ಸಿಂಗ್​ ಆಯ್ಕೆ ಆಗುತ್ತಿದ್ದಂತೆ ಕುಸ್ತಿಪಟುಗಳು ತಮ್ಮ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ ತಮ್ಮ ಪ್ರಶಸ್ತಿಗಳನ್ನು ಸರ್ಕಾರಕ್ಕೆ ಹಿಂತಿರುಗಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಕುಸ್ತಿ ಪಟು ಸಾಕ್ಷಿ ಮಲಿಕ್ ಕುಸ್ತಿಗೆ ರಾಜೀನಾಮೆ ನೀಡಿದ್ದರು. ಅಲ್ಲದೆ ಭಜರಂಗ್​ ಪೂನಿಯಾ ತಮ್ಮ ಪದ್ಮಶ್ರೀ ಪ್ರಶಸ್ತಿ ಮತ್ತು ವಿನೇಶ್​ ಫೋಗಟ್​ ತನ್ನ ಅರ್ಜುನ ಪ್ರಶಸ್ತಿ ಮತ್ತು ಖೇಲ್​ ರತ್ನ ಪ್ರಶಸ್ತಿ ಹಿಂದಿರುಗಿಸಿ ಆಕ್ರೋಶ ಹೊರಹಾಕಿದ್ದರು. ಈ ಸಂಜಯ್ ಸಿಂಗ್​ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ಬ್ರಿಜ್​ ಭೂಷಣ್​ ಶರಣ್​ ಸಿಂಗ್​ ಅವರ ಆಪ್ತರಾಗಿದ್ದಾರೆ.

ಇದನ್ನೂ ಓದಿ : ನನ್ನ ಖೇಲ್ ರತ್ನ, ಅರ್ಜುನ ಪ್ರಶಸ್ತಿ ಹಿಂದಿರುಗಿಸುತ್ತಿದ್ದೇನೆ: ವಿನೇಶ್ ಫೋಗಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.