ETV Bharat / bharat

ನವದೆಹಲಿ ಜಿ20 ಶೃಂಗಸಭೆ ಮುಗಿಸಿ ವಿಯೆಟ್ನಾಂಗೆ ತೆರಳಿದ ಅಮೆರಿಕ ಅಧ್ಯಕ್ಷ ಜೋ ಬೈಡನ್

author img

By ETV Bharat Karnataka Team

Published : Sep 10, 2023, 2:15 PM IST

US President Biden
ಅಮೆರಿಕದ ಅಧ್ಯಕ್ಷ ಜೋ ಬೈಡನ್

ಎರಡು ದಿನಗಳ ಭಾರತ ಭೇಟಿ ಮುಗಿಸಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್ ವಿಯೆಟ್ನಾಂಗೆ ತೆರಳಿದರು.

ನವದೆಹಲಿ : ಜಿ20 ಸಮ್ಮೇಳನದಲ್ಲಿ ಪಾಲ್ಗೊಂಡ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಂದು ವಿಯೆಟ್ನಾಂ ಪ್ರವಾಸ ಕೈಗೊಂಡರು. ಇದಕ್ಕೂ ಮುನ್ನ ಇಂದು ಬೆಳಗ್ಗೆ ರಾಜಧಾನಿಯ ರಾಜ್‌ಘಾಟ್‌ನಲ್ಲಿರುವ ರಾಷ್ಟ್ರಪಿತ ಮಹಾತ್ಮ ಗಾಂಧಿ ಸಮಾಧಿಗೆ ಬೈಡನ್ ಸೇರಿದಂತೆ ಇತರೆ ಜಿ20 ಪ್ರತಿನಿಧಿಗಳು ಗೌರವ ನಮನ ಸಲ್ಲಿಸಿದರು.

ಜೋ ಬೈಡನ್​​ ಅವರು ಅಮೆರಿಕ ಅಧ್ಯಕ್ಷರಾದ ನಂತರ ಭಾರತಕ್ಕೆ ನೀಡಿರುವ ಮೊದಲ ಭೇಟಿ ಇದಾಗಿತ್ತು. ಎರಡು ದಿನಗಳ ಶೃಂಗಸಭೆಯಲ್ಲಿ ಭಾಗವಹಿಸಲು ಶುಕ್ರವಾರ ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದ ಅಧ್ಯಕ್ಷರು, ಅದೇ ದಿನ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. 'ಒನ್ ಅರ್ಥ್' ನಂತಹ ವಿವಿಧ ವಿಷಯಗಳ ಕುರಿತಾದ ಜಿ20 ಶೃಂಗಸಭೆಯ ಸೆಷನ್‌ಗಳಲ್ಲಿ ಭಾಗವಹಿಸಿದರು.

ದ್ವಿಪಕ್ಷೀಯ ಮಾತುಕತೆ ವೇಳೆ ಭಾರತ ಮತ್ತು ಯುಎಸ್ ನಡುವೆ ಮತ್ತಷ್ಟು ಬಾಂಧವ್ಯ ವೃದ್ಧಿಸಲು ಆರ್ಥಿಕ, ಸಾರ್ವಜನಿಕ ಸಂಪರ್ಕ ಸೇರಿದಂತೆ ಅನೇಕ ವಿಷಯಗಳ ಕುರಿತು ಚರ್ಚಿಸಲಾಗಿತ್ತು. ಭಾರತ ಮತ್ತು ಯುಎಸ್ ನಡುವಿನ ಸ್ನೇಹವು ಜಾಗತಿಕ ಒಳಿತನ್ನು ಹೆಚ್ಚಿಸುವಲ್ಲಿ ಮಹತ್ತರವಾದ ಪಾತ್ರ ವಹಿಸುತ್ತದೆ. ಉಭಯ ದೇಶಗಳ ನಾಯಕರು ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ಒಳಗೊಳ್ಳುವಿಕೆ ಸೇರಿದಂತೆ ಎಲ್ಲಾ ನಾಗರಿಕರಿಗೆ ಸಮಾನ ಅವಕಾಶಗಳ ಹಂಚಿಕೆಯ ಮೌಲ್ಯಗಳು ಎರಡೂ ದೇಶಗಳ ಯಶಸ್ಸಿಗೆ ಪ್ರಮುಖ ಕಾರಣವಾಗಿವೆ ಎಂದು ಬೈಡನ್ ಹೇಳಿದ್ದಾರೆ.

ಮುಕ್ತ, ಅಂತರ್ಗತ ಮತ್ತು ಚೇತರಿಸಿಕೊಳ್ಳುತ್ತಿರುವ ಇಂಡೋ-ಪೆಸಿಫಿಕ್ ವಿಷಯವನ್ನು ಬೆಂಬಲಿಸುವಲ್ಲಿ ಕ್ವಾಡ್‌ನ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದ್ದರು. ಎರಡೂ ರಾಷ್ಟ್ರಗಳು ಟೆಲಿಕಾಂ, ಬಾಹ್ಯಾಕಾಶ, ನವೀಕರಿಸಬಹುದಾದ ಇಂಧನ, ರಕ್ಷಣೆ ಮತ್ತು ಶಿಕ್ಷಣ ಮತ್ತು ವೈವಿಧ್ಯಮಯ ವಲಯಗಳಲ್ಲಿ ಪರಸ್ಪರ ಸಹಕಾರಕ್ಕೆ ಒಪ್ಪಿಕೊಂಡಿವೆ ಎಂದು ತಿಳಿಸಿದ್ದಾರೆ.

ಇನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವಕ್ಕಾಗಿ ಭಾರತದ ಪ್ರಯತ್ನಕ್ಕೆ ಅಮೆರಿಕ ಅಧ್ಯಕ್ಷರು ತಮ್ಮ ಬೆಂಬಲ ವ್ಯಕ್ತಪಡಿಸಿದ್ದರು. ಭಾರತದ 31 ಡ್ರೋನ್‌ಗಳ ಖರೀದಿ ಮತ್ತು ಜೆಟ್ ಇಂಜಿನ್‌ಗಳ ಜಂಟಿ ಅಭಿವೃದ್ಧಿಯಲ್ಲಿನ ಪ್ರಗತಿಯನ್ನು ಸ್ವಾಗತಿಸಿದರು. ಮತ್ತು ಹೊಸ ಯೋಜನೆಯಾದ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಅನ್ನು ಶ್ಲಾಘಿಸಿದರು, ಇದು ಪ್ರಾದೇಶಿಕ ಸಹಕಾರ, ಸಂಪರ್ಕ ಮತ್ತು ಪ್ರಗತಿಯನ್ನು ರೂಪಿಸುವ ಐತಿಹಾಸಿಕ ಯೋಜನೆ ಎಂದು ವಿವರಿಸಿದರು.

ಶೃಂಗಸಭೆ ಮೊದಲ ದಿನ ನಡೆದ ಬೆಳವಣಿಗೆಗಳು:

  • ಬೆಳಗ್ಗೆ 9.30 ರಿಂದ 10.30: ಶೃಂಗಸಭೆ ನಡೆಯುವ ಸ್ಥಳವಾದ ಭಾರತ ಮಂಟಪಕ್ಕೆ ನಾಯಕರು ಮತ್ತು ನಿಯೋಗದ ಮುಖ್ಯಸ್ಥರ ಆಗಮನದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೇರಿದಂತೆ ಎಲ್ಲಾ ರಾಷ್ಟ್ರಗಳ ನಾಯಕರನ್ನು ವೈಯಕ್ತಿಕವಾಗಿ ಸ್ವಾಗತಿಸಿದರು.
  • ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30: ಭಾರತ ಮಂಟಪದ ಶೃಂಗ ಸಭಾಂಗಣದಲ್ಲಿ ‘ಒಂದು ಭೂಮಿ’ ಎಂಬ ವಿಷಯದಡಿಯಲ್ಲಿ ಮೊದಲ ಅಧಿವೇಶನ ನಡೆಯಿತು.
  • ಮಧ್ಯಾಹ್ನ 1.30 ರಿಂದ 3.30 ರ ನಡುವೆ ವಿವಿಧ ದ್ವಿಪಕ್ಷೀಯ ಸಭೆಗಳು ನಡೆದವು.
  • ಮಧ್ಯಾಹ್ನ 3.30 ರಿಂದ 4.45: 'ಒಂದು ಕುಟುಂಬ' ಎಂಬ ವಿಷಯದಡಿ ಎರಡನೇ ಅಧಿವೇಶನ ನಡೆಯಿತು.
  • ಸಂಜೆ 5.30 ಕ್ಕೆ ಜಾಗತಿಕ ಜೈವಿಕ ಇಂಧನ ಒಕ್ಕೂಟಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದರು.
  • ಸಂಜೆ 5.45 ಕ್ಕೆ ಪ್ರಧಾನಿ ಮೋದಿ, ಅಧ್ಯಕ್ಷ ಬೈಡನ್, ಸೌದಿ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಮತ್ತು ಇಯು ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಅನ್ನು ಘೋಷಿಸಿದರು.
  • ಸಂಜೆ 7 ರಿಂದ 8 ಗಂಟೆಯ ನಡುವೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಯೋಜಿಸಿದ್ದ ಭೋಜನಕೂಟಕ್ಕೆ ನಾಯಕರು ಮತ್ತು ನಿಯೋಗದ ಮುಖ್ಯಸ್ಥರು ಆಗಮಿಸಿದರು. ಭೋಜನದ ಬಳಿಕ ನಾಯಕರು ಸಂವಾದ ನಡೆಸಿ, ಹೋಟೆಲ್‌ಗಳಿಗೆ ಹಿಂತಿರುಗಿದರು.

ಇದನ್ನೂ ಓದಿ : ಜಿ20 ಔತಣಕೂಟದಲ್ಲಿ ನಿತೀಶ್, ಸ್ಟಾಲಿನ್, ಮಮತಾ ಭಾಗಿ; ಗೆಹ್ಲೋಟ್​, ಕೇಜ್ರಿವಾಲ್ ಗೈರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.