ETV Bharat / bharat

ಮಥುರಾದಲ್ಲಿ ಟ್ರ್ಯಾಕ್‌ ಬಿಟ್ಟು ಪ್ಲಾಟ್‌ಫಾರ್ಮ್‌ ಮೇಲೆ ಹತ್ತಿದ ರೈಲು-ವಿಡಿಯೋ​

author img

By ETV Bharat Karnataka Team

Published : Sep 27, 2023, 9:54 AM IST

UP EMU train climbs on platform
ಮಥುರಾದಲ್ಲಿ ರೈಲು ಅಪಘಾತ

ಮಥುರಾದಲ್ಲಿ ರೈಲು ಅಪಘಾತ ಸಂಭವಿಸಿದೆ. ಶಕುರ್‌ಬಸ್ತಿಯಿಂದ ಬರುತ್ತಿದ್ದ ಇಎಂಯು ರೈಲು ಟ್ರ್ಯಾಕ್‌ ಬಿಟ್ಟು ಪ್ಲಾಟ್‌ಫಾರ್ಮ್‌ ಮೇಲೆ ಹತ್ತಿದ್ದು, ಅವಾಂತರ ಸೃಷ್ಟಿಸಿತು.

ಮಥುರಾ (ಉತ್ತರ ಪ್ರದೇಶ) : ಉತ್ತರ ಪ್ರದೇಶದ ಮಥುರಾ ಜಂಕ್ಷನ್‌ನಲ್ಲಿ ಕಳೆದ ತಡರಾತ್ರಿ ರೈಲು ಅಪಘಾತ ಸಂಭವಿಸಿದೆ. ಶಕುರ್ ಬಸ್ತಿಯಿಂದ ಬರುತ್ತಿದ್ದ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಇಎಂಯು) ರೈಲು ಹಠಾತ್ತನೆ ಹಳಿ ಬಿಟ್ಟು ಮಥುರಾ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ ಮೇಲೆ ಹತ್ತಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಮಾಹಿತಿ ಪ್ರಕಾರ, ಈ ಇಎಂಯು ರೈಲು ಶಕುರ್​ ಬಸ್ತಿಯಿಂದ ಬರುತ್ತಿತ್ತು. ರಾತ್ರಿ 10:49 ರ ಸುಮಾರಿಗೆ ಮಥುರಾ ಜಂಕ್ಷನ್ ತಲುಪಿದೆ. ರೈಲಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಕೆಳಗಿಳಿದಿದ್ದಾರೆ. ಬಳಿಕ ರೈಲು ಹಳಿಯಿಂದ ದೂರ ಸ್ವಲ್ಪ ದೂರ ಸರಿದು ಪ್ಲಾಟ್‌ಫಾರ್ಮ್‌ ಮೇಲೆ ಏರಿದೆ. ಪರಿಣಾಮ, ಪ್ಲಾಟ್‌ಫಾರ್ಮ್ ಮುರಿದು ಹೋಗಿದೆ. ರೈಲಿನ ಕೆಲವು ಭಾಗಗಳಿಗೆ ಹಾನಿಯಾಗಿದೆ. ಘಟನೆಯಿಂದಾಗಿ ಈ ಮಾರ್ಗದ ಮೂಲಕ ಹಾದು ಹೋಗುವ ಮಾಲ್ವಾ ಎಕ್ಸ್‌ಪ್ರೆಸ್ ಸೇರಿದಂತೆ ಇತರೆ ರೈಲುಗಳ ಸಂಚಾರಕ್ಕೆ ತೊಂದರೆಯಾಗಿದೆ. ಅವಘಡ ಸಂಭವಿಸಿದ ಬಳಿಕ ಕೆಲಕಾಲ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಜನರು ಭಯಭೀತರಾಗಿ ಅತ್ತಿತ್ತ ಓಡಲಾರಂಭಿಸಿದ್ದರು.

ಈ ಬಗ್ಗೆ ಮಾಹಿತಿ ನೀಡಿದ ಮಥುರಾ ರೈಲು ನಿಲ್ದಾಣದ ನಿರ್ದೇಶಕ ಎಸ್.ಕೆ.ಶ್ರೀವಾಸ್ತವ, "ಶಕುರ್​ ಬಸ್ತಿಯಿಂದ ರೈಲು ಬಂದು ಜಂಕ್ಷನ್‌ನಲ್ಲಿ ನಿಂತಿತ್ತು. ಈ ವೇಳೆ ಎಲ್ಲಾ ಪ್ರಯಾಣಿಕರು ರೈಲಿನಿಂದ ಕೆಳಗೆ ಇಳಿದಿದ್ದರು. ನಂತರ ರೈಲು ಇದ್ದಕ್ಕಿದ್ದಂತೆ ಹಳಿ ಬಿಟ್ಟು ಪ್ಲಾಟ್‌ಫಾರ್ಮ್‌ಗೆ ಹತ್ತಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಘಟನೆಯಿಂದಾಗಿ ಮೇಲಿನ ಪ್ಲಾಟ್‌ಫಾರ್ಮ್ ಮತ್ತು ಶೆಡ್‌ಗೆ ಹಾನಿಯಾಗಿದೆ. ಕೆಲ ವಾಹನಗಳಿಗೂ ತೊಂದರೆಯಾಗಿದೆ" ಎಂದು ಮಾಧ್ಯಮಗಳಿಗೆ ತಿಳಿಸಿದರು.

ಇದನ್ನೂ ಓದಿ : Watch : ಇಂಜಿನ್​ ಇಲ್ಲದೆ ಹಳಿ ಮೇಲೆ ಚಲಿಸಿದ ರೈಲು ಬೋಗಿ-ವಿಡಿಯೋ

ಇನ್ನು ಪ್ಲಾಟ್‌ಫಾರ್ಮ್‌ನಿಂದ ರೈಲನ್ನು ತೆಗೆಯುವ ಕೆಲಸ ನಡೆಯುತ್ತಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರೈಲನ್ನು ಸ್ಥಳಾಂತರಿಸಿದ ಬಳಿಕ ಇತರೆ ರೈಲುಗಳ ಸಂಚಾರ ಪುನರಾರಂಭಿಸಲಾಗುತ್ತದೆ. ಅವಘಡದ ವೇಳೆ ರೈಲಿನಲ್ಲಿ ಯಾರೂ ಇಲ್ಲದಿದ್ದುದರಿಂದ ಅದೃಷ್ಟವಶಾತ್ ದುರಂತ ತಪ್ಪಿದೆ.

ಇದನ್ನೂ ಓದಿ : VIDEO : ಹಳಿ ದಾಟಲು ದುಸ್ಸಾಹಸ.. ದಾವಣಗೆರೆಯಲ್ಲಿ ಚಲಿಸುತ್ತಿದ್ದ ರೈಲಿನಡಿ ಮಲಗಿ ಪ್ರಾಣ ಉಳಿಸಿಕೊಂಡ ಶಿಕ್ಷಕ !

ಕಳೆದ ಆಗಸ್ಟ್​ ತಿಂಗಳ 15 ರಂದೂ ಸಹ ಇಂತಹದೇ ಘಟನೆ ಸಂಭವಿಸಿತ್ತು. ಗುಜರಾತ್​ನ​ ಖೇಡಾ ಜಿಲ್ಲೆಯ ಅಹಮದಾಬಾದ್ ಬಳಿ ಗೂಡ್ಸ್ ರೈಲು ಹಳಿ ತಪ್ಪಿತ್ತು. ಕೆಲವು ತಾಂತ್ರಿಕ ಕಾರಣದಿಂದ ಕೋಚ್ ಹಳಿ ತಪ್ಪಿದೆ ಎಂದು ತಿಳಿದುಬಂದಿತ್ತು. ಪರಿಣಾಮ ವಡೋದರಾದಿಂದ ಅಹಮದಾಬಾದ್‌ಗೆ ಕೆಲಕಾಲ ರೈಲು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಘಟನೆಯಿಂದ ಯಾವುದೇ ಪ್ರಾಣಹಾನಿಯಾಗಿರಲಿಲ್ಲ.​ ರೈಲು ಹಳಿ ತಪ್ಪಿದ ಮಾಹಿತಿ ಸಿಕ್ಕ ತಕ್ಷಣವೇ ರೈಲ್ವೆ ಅಧಿಕಾರಿಗಳು ಮತ್ತು ನೌಕರರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿ : ಹಳಿ ತಪ್ಪಿದ ಗೂಡ್ಸ್​ ರೈಲು : ವಡೋದರಾ - ಅಹಮದಾಬಾದ್​​​​​​​​​​ ನಡುವೆ ಸಂಚಾರ ಅಸ್ತವ್ಯಸ್ತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.