ETV Bharat / bharat

ಮತ ಚಲಾಯಿಸಲು ಬಂದು ಮತಗಟ್ಟೆಯಲ್ಲೇ ಕುಸಿದು ಬಿದ್ದು ಇಬ್ಬರ ಸಾವು: ಹೃದಯಾಘಾತದ ಶಂಕೆ

author img

By ETV Bharat Karnataka Team

Published : Nov 25, 2023, 11:02 PM IST

Etv Bharat
Etv Bharat

Rajasthan elections 2023: ರಾಜಸ್ಥಾನದಲ್ಲಿ ಮತದಾನದ ವೇಳೆ ಮತಗಟ್ಟೆಯಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಉದಯಪುರ ಮತ್ತು ಜಲಾವರ್ ಜಿಲ್ಲೆಗಳಲ್ಲಿ ಮತದಾನ ಮಾಡಲು ಬಂದಿದ್ದಾಗ ಇಬ್ಬರು ವೃದ್ಧರ ಆರೋಗ್ಯ ಹದಗೆಟ್ಟು ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.

ಉದಯಪುರ/ಜಲಾವರ್: ರಾಜಸ್ಥಾನದಲ್ಲಿ ಶನಿವಾರ ವಿಧಾನಸಭಾ ಚುನಾವಣೆಗೆ ಮತದಾನದ ಸಂದರ್ಭದಲ್ಲಿ ಇಬ್ಬರು ವೃದ್ಧರು ಮತಗಟ್ಟೆಯಲ್ಲೇ ಕುಸಿದು ಬಿದ್ದು ಮೃತಪಟ್ಟ ಪ್ರತ್ಯೇಕ ಘಟನೆ ಉದಯಪುರ ಮತ್ತು ಜಲಾವರ್​ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರೂ ಕೂಡ ಹೃದಯಾಘಾತದಿಂದ ಕೊನೆಯುಸಿರೆಳೆದಿರುವ ಶಂಕೆ ವ್ಯಕ್ತವಾಗಿದೆ.

ರಾಜಸ್ಥಾನದ 200 ವಿಧಾನಸಭಾ ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಿಗೆ ಶನಿವಾರ ಮತದಾನ ನಡೆದಿದೆ. ರಾಜ್ಯದ 5.26 ಕೋಟಿ ಮತದಾರರದಲ್ಲಿ ಸಂಜೆ 5 ಗಂಟೆಯವರೆಗೆ ಶೇ.68.24ರಷ್ಟು ಮತಗಳು ಚಲಾವಣೆಯಾಗಿದೆ. ಈ ಮಧ್ಯೆ, ಉದಯಪುರ ಮತ್ತು ಜಲಾವರ್ ಜಿಲ್ಲೆಗಳಿಂದ ಮತಗಟ್ಟೆಯಲ್ಲಿ ಇಬ್ಬರು ಆರೋಗ್ಯ ಹದಗೆಟ್ಟು ಸಾವನ್ನಪ್ಪಿರುವ ಘಟನೆಗಳು ವರದಿಯಾಗಿದೆ. ಉದಯಪುರ ಜಿಲ್ಲೆಯ ಹಿರಾನ್ ಮ್ಯಾಗ್ರಿ ನಿವಾಸಿ, 69 ವರ್ಷದ ಸತ್ಯೇಂದ್ರ ಕುಮಾರ್ ಅರೋರಾ ಮತ್ತು ಜಲಾವರ್ ಜಿಲ್ಲೆಯ ಬಕಾನಿ ಪಟ್ಟಣ ನಿವಾಸಿ, 78 ವರ್ಷದ ಕನ್ಹಯ್ಯಾ ಲಾಲ್ ಮೃತರು ಎಂದು ಗುರುತಿಸಲಾಗಿದೆ.

ಸತ್ಯೇಂದ್ರ ಕುಮಾರ್ ಉದಯಪುರ ನಗರದ ಹಿರಾನ್ ಮ್ಯಾಗ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಆಂಥೋನಿ ಶಾಲೆಗೆ ಸೈಕಲ್​ ಮತದಾನ ಮಾಡಲು ಬಂದಿದ್ದರು. ಈ ವೇಳೆ, ಏಕಾಏಕಿ ಆರೋಗ್ಯ ಹದಗೆಟ್ಟು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅಷ್ಟರಲ್ಲಿ ಮತಗಟ್ಟೆಯಲ್ಲಿದ್ದ ಜನತೆ ಅವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮತ್ತೊಂದೆಡೆ, ಜಲಾವರ್‌ ಜಿಲ್ಲೆಯ ಖಾನ್‌ಪುರ ವಿಧಾನಸಭಾ ಕ್ಷೇತ್ರದ ಬಕಾನಿ ಪಟ್ಟಣದಲ್ಲಿ ಮತದಾನ ಮಾಡಲು ಬಂದಾಗ ಕನ್ಹಯ್ಯಾ ಲಾಲ್ ಕೂಡ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತಗಟ್ಟೆ ಮೇಲೆ ಕಲ್ಲು ತೂರಾಟ: ಸಿಕರ್ ಜಿಲ್ಲೆಯ ಫತೇಪುರ್ ಶೇಖಾವತಿಯ ಮತಗಟ್ಟೆಯಲ್ಲಿ ಮತದಾನದ ಸಂದರ್ಭದಲ್ಲಿ ಗಲಾಟೆ ಉಂಟಾಗಿತ್ತು. ಬಳಿಕ ಅಭ್ಯರ್ಥಿಗಳ ಬೆಂಬಲಿಗರು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಅಲ್ಲದೇ, ಪೊಲೀಸರು ಲಾಠಿ ಪ್ರಹಾರ ನಡೆಸಿ, ಕಲ್ಲು ತೂರಾಟ ನಡೆಸಿದ ಹಲವರನ್ನು ಬಂಧಿಸಿದ್ದಾರೆ. ನಕಲಿ ಮತದಾನದ ವಿಚಾರವಾಗಿ ಆರಂಭವಾದ ಜಗಳ ಕಲ್ಲು ತೂರಾಟಕ್ಕೆ ತಿರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭರತಪುರ ನಗರದ ವಿಧಾನಸಭಾ ಕ್ಷೇತ್ರದ ದ್ವಾರಿಕಾಪುರಿ ಸುಕೇತಿ ಮತಗಟ್ಟೆ ಬಳಿ ಕೂಡ ಗಲಾಟೆ ಉಂಟಾಗಿದೆ. ಕುಡುಕನೊಬ್ಬ ಮತಗಟ್ಟೆಗೆ ನುಗ್ಗಿ ಮತಗಟ್ಟೆ ಏಜೆಂಟರೊಂದಿಗೆ ಜಗಳವಾಡಿದ್ದಾನೆ. ಇದರಿಂದ ಮತಗಟ್ಟೆ ಸಿಬ್ಬಂದಿ ಹಾಗೂ ಮತದಾರರ ನಡುವೆ ನೂಕುನುಗ್ಗಲು ಉಂಟಾಗಿ 15 ನಿಮಿಷಗಳ ಕಾಲ ಮತದಾನ ಸ್ಥಗಿತಗೊಂಡಿತ್ತು. ಇದರ ಮಾಹಿತಿ ಪಡೆದ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಇದನ್ನೂ ಓದಿ: ರಾಜಸ್ಥಾನ ಚುನಾವಣೆ: 199 ಕ್ಷೇತ್ರಗಳಿಗೆ ಶೇ.68ರಷ್ಟು ಮತದಾನ, ಕಳೆದ ಬಾರಿಗಿಂತ ಕಡಿಮೆ ವೋಟಿಂಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.