ETV Bharat / bharat

ಶಿಕ್ಷಕರನ್ನು ಬೋಧಕೇತರ ಕರ್ತವ್ಯಕ್ಕೆ ನಿಯೋಜಿಸುವಂತಿಲ್ಲ: ಆಂಧ್ರಪ್ರದೇಶ ಸರ್ಕಾರ ಆದೇಶ

author img

By

Published : Nov 30, 2022, 4:21 PM IST

ಶಿಕ್ಷಕರನ್ನು ಬೋಧಕೇತರ ಕರ್ತವ್ಯಕ್ಕೆ ನಿಯೋಜಿಸುವಂತಿಲ್ಲ: ಆಂಧ್ರ ಪ್ರದೇಶ ಸರ್ಕಾರ ಆದೇಶ
ಶಿಕ್ಷಕರನ್ನು ಬೋಧಕೇತರ ಕರ್ತವ್ಯಕ್ಕೆ ನಿಯೋಜಿಸುವಂತಿಲ್ಲ: ಆಂಧ್ರ ಪ್ರದೇಶ ಸರ್ಕಾರ ಆದೇಶ

ಶಿಕ್ಷಣ ಹಕ್ಕು ಕಾಯ್ದೆ, 2009 ರ ಸೆಕ್ಷನ್ 27, ಶಿಕ್ಷಣೇತರ ಉದ್ದೇಶಗಳಿಗಾಗಿ ಶಿಕ್ಷಕರ ನಿಯೋಜನೆಯನ್ನು ನಿಷೇಧಿಸುತ್ತದೆ. ಅದಕ್ಕೆ ಅನುಗುಣವಾಗಿ ಮತ್ತು ಆರ್‌ಟಿಇ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಲು ಅಗತ್ಯ ತಿದ್ದುಪಡಿಗಳನ್ನು ಮಾಡಿದ್ದೇವೆ ಎಂದು ಶಾಲಾ ಶಿಕ್ಷಣ ಆಯುಕ್ತ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಅಮರಾವತಿ: ಆಂಧ್ರಪ್ರದೇಶದ ಸರ್ಕಾರಿ ಶಿಕ್ಷಕರು ಇನ್ಮುಂದೆ ಮಕ್ಕಳಿಗೆ ಕಲಿಸುವ ತಮ್ಮ ಮುಖ್ಯ ಕಾರ್ಯವನ್ನು ಹೊರತುಪಡಿಸಿ ಬೇರಾವ ಸರ್ಕಾರಿ ಕೆಲಸಗಳನ್ನು ಮಾಡಬೇಕಿಲ್ಲ. ರಾಜ್ಯ ಸರ್ಕಾರವು ಉಚಿತ ಮತ್ತು ಕಡ್ಡಾಯ ಶಿಕ್ಷಣದ ಮಕ್ಕಳ ಹಕ್ಕು ನಿಯಮಗಳು, ಆಂಧ್ರ ಪ್ರದೇಶ 2010ಕ್ಕೆ ತಿದ್ದುಪಡಿ ಮಾಡಿದ್ದು, ಶಿಕ್ಷಣೇತರ ಉದ್ದೇಶಗಳಿಗಾಗಿ ಶಿಕ್ಷಕರ ನಿಯೋಜನೆಯನ್ನು ನಿಷೇಧಿಸಿದೆ.

ಆರ್​ಟಿಇ ಕಾಯ್ದೆ ನಿಯಮಗಳಿಗೆ ತಿದ್ದುಪಡಿಗಳ ಪ್ರಕಾರ ಶಿಕ್ಷಕರನ್ನು ಚುನಾವಣಾ ಕರ್ತವ್ಯ, ಜನಗಣತಿ ಕೆಲಸ ಮುಂತಾದ ಕರ್ತವ್ಯಗಳಿಗೆ ನಿಯೋಜಿಸುವಂತಿಲ್ಲ. ಶಾಲಾ ಶಿಕ್ಷಣ ಇಲಾಖೆಯು ಹಲವಾರು ಸಚಿವರು ಮತ್ತು ಶಾಸಕರುಗಳಿಗೆ ಆಪ್ತ ಸಹಾಯಕರಾಗಿ ನಿಯೋಜಿತರಾಗಿದ್ದ ಅನೇಕ ಶಿಕ್ಷಕರನ್ನು ಆ ಕರ್ತವ್ಯಗಳಿಂದ ಬಿಡುಗಡೆ ಮಾಡಿದ್ದು, ಅವರನ್ನು ಮರಳಿ ಶಾಲೆಗಳಲ್ಲಿ ಕಲಿಸಲು ನಿಯೋಜಿಸಲಾಗಿದೆ.

ಶಿಕ್ಷಣ ಹಕ್ಕು ಕಾಯ್ದೆ, 2009 ರ ಸೆಕ್ಷನ್ 27, ಶಿಕ್ಷಣೇತರ ಉದ್ದೇಶಗಳಿಗಾಗಿ ಶಿಕ್ಷಕರ ನಿಯೋಜನೆಯನ್ನು ನಿಷೇಧಿಸುತ್ತದೆ. ಅದಕ್ಕೆ ಅನುಗುಣವಾಗಿ ಮತ್ತು ಆರ್‌ಟಿಇ ಕಾಯ್ದೆಯನ್ನು ಮತ್ತಷ್ಟು ಬಲಪಡಿಸಲು ಅಗತ್ಯ ತಿದ್ದುಪಡಿಗಳನ್ನು ಮಾಡಿದ್ದೇವೆ ಎಂದು ಶಾಲಾ ಶಿಕ್ಷಣ ಆಯುಕ್ತ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಶಿಕ್ಷಕರು ತಮ್ಮ ಗಮನವನ್ನು ಪ್ರಮುಖ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸುವಂತಾಗಲು ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಸುಧಾರಿಸುವುದು ಈ ಬದಲಾವಣೆಗಳ ಉದ್ದೇಶವಾಗಿದೆ. ಕಲಿಕೆಯ ಫಲಿತಾಂಶಗಳನ್ನು ಸುಧಾರಿಸಲು ಶಿಕ್ಷಕರ ಸೇವೆಗಳನ್ನು ಶೈಕ್ಷಣಿಕ ಕೆಲಸಕ್ಕೆ ಮಾತ್ರ ಬಳಸಿಕೊಳ್ಳಬೇಕೆಂದು ವಿವಿಧ ಶಿಕ್ಷಕರ ಸಂಘಗಳು ಸರ್ಕಾರಕ್ಕೆ ಮನವಿ ಮಾಡಿದ್ದವು ಎಂದು ಆಯುಕ್ತರು ಮಾಹಿತಿ ನೀಡಿದರು.

ವಾರ್ಷಿಕ ಶೈಕ್ಷಣಿಕ ಸಮೀಕ್ಷೆಯ ಪ್ರಕಾರ, 3 ನೇ ತರಗತಿಯಲ್ಲಿ ಕೇವಲ ಶೇ 22.4 ರಷ್ಟು ಮಕ್ಕಳು ಮಾತ್ರ 2 ನೇ ತರಗತಿ ಪಠ್ಯವನ್ನು ಓದಬಲ್ಲರು ಮತ್ತು ಕೇವಲ ಶೇ 38.4 ರಷ್ಟು ಮಕ್ಕಳು ಗಣಿತ ವ್ಯವಕಲನವನ್ನು ಬಿಡಿಸಬಲ್ಲರು. 5 ನೇ ತರಗತಿಯಲ್ಲಿ, ಕೇವಲ ಶೇ 39.3 ರಷ್ಟು ವಿದ್ಯಾರ್ಥಿಗಳು ಗಣಿತ ಮೊತ್ತವನ್ನು ಭಾಗಿಸಬಲ್ಲರು. ಆದರೆ ಈ ಸಂಖ್ಯೆ 8 ನೇ ತರಗತಿಯಲ್ಲಿ ಶೇ 47.60 ಮಾತ್ರ ಇದೆ. ಆಂಧ್ರಪ್ರದೇಶದ ವಿದ್ಯಾರ್ಥಿಗಳು ಓದಿನಲ್ಲಿ ಮತ್ತು ಗ್ರಹಿಕೆಯ ಕೌಶಲ್ಯಗಳಲ್ಲಿ ಕಳಪೆಯಾಗಿದ್ದಾರೆ ಎಂಬುದನ್ನು ವಿದ್ಯಾರ್ಥಿಗಳ ಕಲಿಕಾ ಸಾಧನೆಯ ಸಮೀಕ್ಷೆಯು ಬಹಿರಂಗಪಡಿಸಿದೆ ಎಂದು ಸುರೇಶ್ ಕುಮಾರ್ ವಿವರಿಸಿದರು.

ಇದನ್ನೂ ಓದಿ: ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ಸಂಬಂಧಿಸಿದ ಶಿಫಾರಸುಗಳನ್ನು ಜಾರಿ ಮಾಡಿ : ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.