ETV Bharat / bharat

Mathura: ಮಥುರಾ ದೇಗುಲದ ಬಳಿ ತೆರವು ಕಾರ್ಯ: 10 ದಿನ ಯಥಾಸ್ಥಿತಿಗೆ ಸುಪ್ರೀಂ ಕೋರ್ಟ್ ಆದೇಶ

author img

By

Published : Aug 16, 2023, 3:13 PM IST

Krishna Janmabhoomi encroachments case Mathura
ಮಥುರಾದ ಕೃಷ್ಣ ಜನ್ಮಭೂಮಿ ಬಳಿ 10 ದಿನಗಳ ಕಾಲ ಯಥಾಸ್ಥಿತಿ ಕಾಯ್ದುಕೊಳ್ಳಲು ಸುಪ್ರೀಂ ಕೋರ್ಟ್ ಆದೇಶ..

Demolition drive near Mathura: ಮಥುರಾದ ಕೃಷ್ಣ ಜನ್ಮಭೂಮಿ ಸಮೀಪದ ಅತಿಕ್ರಮಣ ತೆರವಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಇಂದು ಆದೇಶಿಸಿದೆ.

ನವದೆಹಲಿ: ಉತ್ತರ ಪ್ರದೇಶದ ಮಥುರಾದ ಕೃಷ್ಣ ಜನ್ಮಭೂಮಿ ಬಳಿಯ ಅತಿಕ್ರಮಣ ತೆರವುಗೊಳಿಸಲು ರೈಲ್ವೆ ಅಧಿಕಾರಿಗಳು ನಡೆಸುತ್ತಿರುವ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮುಂದಿನ 10 ದಿನಗಳ ಕಾಲ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಇಂದು (ಬುಧವಾರ) ಆದೇಶಿಸಿದೆ.

ನ್ಯಾಯಮೂರ್ತಿ ಅನಿರುದ್ಧ ಬೋಸ್, ನ್ಯಾ. ಸಂಜಯ್ ಕುಮಾರ್ ಮತ್ತು ನ್ಯಾ.ಎಸ್‌.ವಿ.ಎನ್.ಭಟ್ಟಿ ಅವರನ್ನೊಳಗೊಂಡ ಪೀಠವು, "ಕೃಷ್ಣ ಜನ್ಮಭೂಮಿ ಬಳಿಯ ಅತಿಕ್ರಮಣ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಹತ್ತು ದಿನಗಳ ಅವಧಿಗೆ ಯಥಾಸ್ಥಿತಿ ಇರಲಿ. ಒಂದು ವಾರದ ನಂತರ ವಿಚಾರಣೆಗೆ ಪಟ್ಟಿ ಮಾಡಿ'' ಎಂದು ಹೇಳಿತು. ಇದೇ ವೇಳೆ, ಕೇಂದ್ರ ಸರ್ಕಾರ ಮತ್ತು ರೈಲ್ವೆ ಇಲಾಖೆಗೆ ನೊಟೀಸ್ ಜಾರಿ ಮಾಡಿದೆ.

ಮಥುರಾ ಮತ್ತು ವೃಂದಾವನ ನಡುವಿನ ಸಂಪರ್ಕವನ್ನು ಸುಗಮಗೊಳಿಸಲು ಅಸ್ತಿತ್ವದಲ್ಲಿರುವ ಮೀಟರ್ ಗೇಜ್ ರೈಲ್ವೆ ಹಳಿಯನ್ನು ಬ್ರಾಡ್ ಗೇಜ್ ಟ್ರ್ಯಾಕ್‌ಗೆ ಪರಿವರ್ತಿಸುವ ಪ್ರಯತ್ನಗಳ ಭಾಗವಾಗಿ ರೈಲ್ವೆ ಇಲಾಖೆಯು ದೇವಾಲಯದ ಸಂಕೀರ್ಣದ ಹಿಂದಿನ ಅತಿಕ್ರಮಣಗಳನ್ನು ತೆರವುಗೊಳಿಸುತ್ತಿದೆ.

ಸಂವಿಧಾನದ 21ನೇ ವಿಧಿಯ ಉಲ್ಲಂಘನೆ- ಆರೋಪ: ಯಾಕೂಬ್ ಷಾ ನೇತೃತ್ವದ ಅರ್ಜಿದಾರರು, ''ಮಥುರಾ ಸಿವಿಲ್ ನ್ಯಾಯಾಲಯದಲ್ಲಿ ಕೆಡವುವಿಕೆಯ ಕಾರ್ಯಾಚರಣೆ ವಿರುದ್ಧದ ಮೇಲ್ಮನವಿಯು ಬಾಕಿ ಉಳಿದಿರುವಾಗ, ಇದು ಸಂಪೂರ್ಣವಾಗಿ ಕಾನೂನುಬಾಹಿರ, ಅನಿಯಂತ್ರಿತ ಮತ್ತು ಸಂವಿಧಾನದ 21ನೇ ವಿಧಿಯ ಉಲ್ಲಂಘನೆ'' ಎಂದು ಹೇಳಿದರು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ.ಸಿ.ಸೇನ್, ''ಇದು ಕೃಷ್ಣ ಜನ್ಮಭೂಮಿ ಬಳಿ ಧ್ವಂಸ ಪ್ರಕರಣವಾಗಿದೆ. ಈಗಾಗಲೇ ಹಲವು ಮನೆಗಳನ್ನು ಬುಲ್ಡೋಜರ್ ಮೂಲಕ ಕೆಡಲಾಗಿದೆ'' ಎಂದು ವಾದಿಸಿದರು. ಉತ್ತರ ಪ್ರದೇಶದ ನ್ಯಾಯಾಲಯಗಳಿಗೆ ರಜೆ ಇರುವ ದಿನಗಳಂದು ರೈಲ್ವೆ ಇಲಾಖೆ ತೆರವು ಕಾರ್ಯಾಚರಣೆ ಕಸರತ್ತು ನಡೆಸಿದೆ. ಇದರಿಂದಾಗಿ ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಬೇಕು" ಎಂದು ಕೋರಿದರು.

ಇದನ್ನೂ ಓದಿ: ಧಾರಾಕಾರ ಮಳೆಗೆ ಅಪಾಯದ ಮಟ್ಟ ತಲುಪಿದ ಡ್ಯಾಂ: ಮತ್ತೆ ಜಲಾವೃತಗೊಂಡ ಪಂಜಾಬ್​.. ಡ್ರೋನ್​ ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.