ETV Bharat / bharat

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ.. ತಂದೆ, ಇಬ್ಬರು ಮಕ್ಕಳ ಬಂಧನ

author img

By

Published : Jul 11, 2023, 8:33 PM IST

stone-pelting-on-vande-bharat-express-in-ayodhya
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ... ತಂದೆ, ಇಬ್ಬರು ಮಕ್ಕಳ ಬಂಧನ

ಉತ್ತರ ಪ್ರದೇಶದ ಅಯೋಧ್ಯೆ ಜಿಲ್ಲೆಯಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ ನಡೆಸಲಾಗಿದೆ. ಈ ಘಟನೆ ಸಂಬಂಧ ತಂದೆ ಹಾಗೂ ಇಬ್ಬರು ಮಕ್ಕಳನ್ನು ಪೊಲೀಸರು ಬಂಧಿಸಿದ್ದಾರೆ.

ಲಖನೌ (ಉತ್ತರ ಪ್ರದೇಶ): ದೇಶದ ಮೊದಲ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್​ ಮೇಲೆ ನಿರಂತರವಾಗಿ ಕಲ್ಲು ತೂರಾಟ ಘಟನೆಗಳು ವರದಿಯಾಗುತ್ತಿವೆ. ಇದೀಗ ಉತ್ತರ ಪ್ರದೇಶದಲ್ಲೂ ಗೋರಖ್‌ಪುರ ಮತ್ತು ಲಖನೌ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್​ ರೈಲಿಗೆ ಕಲ್ಲು ಎಸೆಯಲಾಗಿದೆ. ರೈಲಿನ ಹಲವು ಕೋಚ್​ಗಳಿಗೆ ಹಾನಿಯಾಗಿದೆ.

ಜುಲೈ 7ರಂದು ಪ್ರಧಾನಿ ನರೇಂದ್ರ ಮೋದಿ ಈ ಗೋರಖ್‌ಪುರ - ಲಖನೌ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದ್ದರು. ಜುಲೈ 9ರಿಂದ ರೈಲಿನ ಔಪಚಾರಿಕ ಕಾರ್ಯಾಚರಣೆ ಆರಂಭವಾಗಿದೆ. ಇದಾದ ಎರಡೇ ದಿನಗಳಲ್ಲಿ ಎಂದರೆ ಇಂದು ರೈಲಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಅದೃಷ್ಟವಶಾತ್​ ಯಾವುದೇ ಪ್ರಯಾಣಿಕರಿಗೆ ಗಾಯವಾಗಿಲ್ಲ.

ಇದನ್ನೂ ಓದಿ: ಆರಂಭವಾದ ಆರೇ ದಿನಗಳಲ್ಲಿ ಎಮ್ಮೆಗಳಿಗೆ ಡಿಕ್ಕಿ ಹೊಡೆದು ವಂದೇ ಭಾರತ್ ಹೈಸ್ಪೀಡ್ ರೈಲು ಜಖಂ

ಇಂದು ಬೆಳಗ್ಗೆ ಗೋರಖ್‌ಪುರದಿಂದ ಲಖನೌಗೆ ರೈಲು ಹೊರಟಿತ್ತು. ಈ ವೇಳೆ ಅಯೋಧ್ಯೆ ಸಮೀಪದ ಸೋಹವಾಲ್ ಬಳಿ ರೈಲಿನ ವಿವಿಧ ಬೋಗಿಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಇದರಿಂದಾಗಿ ಕೋಚ್ ಸಿ1ರ ಸೀಟ್ ಸಂಖ್ಯೆ 33, 34, ಕೋಚ್ ಸಿ3ರ 20, 21, 22, ಕೋಚ್ ಸಿ5ರ 10, 11, 12 ಮತ್ತು ಕೋಚ್ ಇ1ರ ಸೀಟ್ ಸಂಖ್ಯೆ 35, 36ರ ಗ್ಲಾಸ್​ಗಳು ಹಾನಿಗೊಳಗಾಗಿವೆ. ಈ ಘಟನೆಗೆ ಸಂಬಂಧಿಸಿದಂತೆ ತಂದೆ ಹಾಗೂ ಇಬ್ಬರು ಮಕ್ಕಳನ್ನು ಬಂಧಿಸಲಾಗಿದೆ.

ಮೇಕೆಗಳಿಗೆ ಡಿಕ್ಕಿ ಹೊಡೆದದ್ದರಿಂದ ರೈಲಿಗೆ ಕಲ್ಲು: ಭಾನುವಾರ ರೈಲ್ವೆ ಹಳಿಯಲ್ಲಿ ಮೇಕೆಗಳು ಮೇಯುತ್ತಿದ್ದವು. ಈ ವೇಳೆ, ಮೇಕೆಗಳಿಗೆ ವಂದೇ ಭಾರತ್ ರೈಲು ಡಿಕ್ಕಿ ಹೊಡೆದಿದೆ. ನಂಹು ಪಾಸ್ವಾನ್ ಎಂಬುವರಿಗೆ ಮೇಕೆಗಳು ಸೇರಿದ್ದು, ಘಟನೆಯಿಂದ ಪಾಸ್ವಾನ್ ಕುಟುಂಬಸ್ಥರು ಆಕ್ರೋಶಗೊಂಡಿದ್ದರು. ಹೀಗಾಗಿ ಇಂದು ರೈಲನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ ಎಂದು ಅಯೋಧ್ಯಾ ಎಸ್‌ಎಸ್‌ಪಿ ಆರ್‌ಕೆ ನಯ್ಯರ್ ತಿಳಿಸಿದ್ದಾರೆ.

ಈ ಘಟನೆ ಸಂಬಂಧ ಈಗಾಗಲೇ ಪಾಸ್ವಾನ್ ಹಾಗೂ ಆತನ ಮಕ್ಕಳಾದ ಅಜಯ್ ಮತ್ತು ವಿಜಯ್​ನನ್ನು ಬಂಧಿಸಿದ್ದೇವೆ ಎಂದು ನಯ್ಯರ್ ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ, ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಇನ್ಸ್‌ಪೆಕ್ಟರ್ ಸೋನು ಕುಮಾರ್ ಸಿಂಗ್, ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಎರಡು ಕೋಚ್‌ಗಳ ಕಿಟಕಿಗಳು ಭಾಗಶಃ ಹಾನಿಗೊಳಗಾಗಿವೆ. ಆದಾಗ್ಯೂ, ರೈಲು ಲಖನೌದವರೆಗೆ ತನ್ನ ಪ್ರಯಾಣವನ್ನು ಮುಂದುವರೆಸಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Vande Bharat Express: ದಾವಣಗೆರೆಯಲ್ಲಿ ವಂದೇ ಭಾರತ್ ರೈಲಿಗೆ ಕಲ್ಲೆಸೆದ ಕಿಡಿಗೇಡಿಗಳು: ಕಿಟಕಿಗೆ ಹಾನಿ

ಈ ಹಿಂದೆ ಬೆಂಗಳೂರಿನ ಕಂಟೋನ್ಮೆಂಟ್ ಮತ್ತು ಕೃಷ್ಣರಾಜಪುರಂ ರೈಲು ನಿಲ್ದಾಣದ ನಡುವೆ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ ನಡೆದಿತ್ತು. ಅಲ್ಲದೇ, ದಾವಣಗೆರೆಯಲ್ಲೂ ವಂದೇ ಭಾರತ್​ ರೈಲಿಗೆ ಕಿಡಿಗೇಡಿಗಳು ಕಲ್ಲು ಎಸೆದಿದ್ದರು. ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ಮೇಲೆ ಕಲ್ಲು ತೂರಾಟ ಮಾಡಲಾಗಿತ್ತು. ಇದಲ್ಲದೇ ಕೇರಳದಲ್ಲಿಯೂ ವಂದೇ ಭಾರತ್ ಎಕ್ಸ್​​ಪ್ರೆಸ್ ಮೇಲೆ ಕಲ್ಲು ಎಸೆಯಲಾಗಿತ್ತು.

ಇದನ್ನೂ ಓದಿ: ನೀಲ್‌ಗಾಯ್‌ಗೆ ವಂದೇ ಭಾರತ್ ರೈಲು ಡಿಕ್ಕಿ; ಪ್ರಾಣಿಯ ಮೃತದೇಹ ಬಿದ್ದು ಸ್ಥಳದಲ್ಲೇ ವ್ಯಕ್ತಿ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.