ETV Bharat / bharat

ಶ್ರದ್ಧಾ ವಾಕರ್ ಹತ್ಯೆ ಪ್ರಕರಣ: ದೇಹದ ಅಂಗಾಂಗ ಇರಿಸಿದ್ದ ಫ್ರಿಡ್ಜ್ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

author img

By

Published : Aug 5, 2023, 11:00 PM IST

Etv shraddha-walker-murder-case-fridge-used-for-storing-body-parts-produced-before-court-father-testifies
ಶ್ರದ್ಧಾ ವಾಕರ್ ಹತ್ಯೆ ಪ್ರಕರಣ: ದೇಹದ ಭಾಗಗಳು ಇರಿಸಿದ್ದ ಫ್ರಿಡ್ಜ್ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು

Shraddha Walker murder case: ಶ್ರದ್ಧಾ ವಾಕರ್​ ಹತ್ಯೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಆರೋಪಿ ಅಫ್ತಾಬ್​ ಶ್ರದ್ಧಾಳನ್ನು ಕೊಲೆಗೈದು ತುಂಡರಿಸಿ ಇರಿಸಿದ್ದ ಫ್ರಿಡ್ಜ್​ನ್ನು ಸಾಕ್ಷ್ಯವಾಗಿ ಹಾಜರುಪಡಿಸಲಾಗಿದೆ.

ನವದೆಹಲಿ : ಇಡೀ ದೇಶವನ್ನು ಬೆಚ್ಚಿಬೀಳಿಸಿದ್ದ ಶ್ರದ್ಧಾ ವಾಕರ್​ ಕೊಲೆ ಪ್ರಕರಣದ ವಿಚಾರಣೆ ಇಂದು ದೆಹಲಿ ಸಾಕೇತ್​ ನ್ಯಾಯಾಲಯದಲ್ಲಿ ನಡೆದಿದೆ. ಪ್ರಕರಣದ ವಿಚಾರಣೆ ವೇಳೆ ಪೊಲೀಸರು ಆರೋಪಿ ಅಫ್ತಾಬ್ ಅಮೀನ್​​ ಪೂನಾವಾಲಾ ತನ್ನ ಲಿವ್​ ಇನ್​ ಪಾರ್ಟ್​ನರ್​ ಶ್ರದ್ಧಾ ವಾಕರ್​ನ್ನು 35 ಭಾಗಗಳಾಗಿ ಕತ್ತರಿಸಿ ಇರಿಸಿದ್ದ ರೆಫ್ರಿಜರೇಟರ್​ನ್ನು ನ್ಯಾಯಾಲಯಕ್ಕೆ ಸಾಕ್ಷ್ಯವಾಗಿ ಹಾಜರುಪಡಿಸಿದ್ದಾರೆ. ಇದರ ಜೊತೆಗೆ ಎರಡು ಪ್ಲೈವುಡ್​ ತುಂಡನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಹೆಚ್ಚುವರಿ ಸೆಷನ್ಸ್​ ನ್ಯಾಯಾಧೀಶರಾದ ಮನಿಶಾ ಖುರಾನ ಕಕ್ಕರ್​ ಅವರು ಪ್ರಕರಣದ ವಿಚಾರಣೆ ನಡೆಸಿದರು.

ಕಳೆದ 2022ರ ಮೇ 18ರಂದು ನವದೆಹಲಿಯ ಮೆಹ್ರೌಲಿಯಲ್ಲಿ ಅಫ್ತಾಬ್ ಅಮೀನ್​​ ಪೂನಾವಾಲಾ ತನ್ನ ಲಿವ್​ ಇನ್​ ಪಾರ್ಟ್​ನರ್​ ಶ್ರದ್ಧಾ ವಾಕರ್​ನ್ನು ಭೀಕರವಾಗಿ ಹತ್ಯೆ ಮಾಡಿದ್ದ. ಕೊಲೆ ಮಾಡಿದ ನಂತರ ಆರೋಪಿ ಪೂನಾವಾಲಾ ಶ್ರದ್ಧಾಳ ದೇಹವನ್ನು ಗರಗಸದಿಂದ 35 ಭಾಗಗಳಾಗಿ ತುಂಡರಿಸಿದ್ದನು. ಬಳಿಕ ದೇಹದ ಭಾಗಗಳನ್ನು ಫ್ರಿಡ್ಜ್‌ನಲ್ಲಿ ಇರಿಸಿ ಕಸದ ಚೀಲಗಳಲ್ಲಿ ತುಂಬಿ ದೆಹಲಿಯ ವಿವಿಧ ನಿರ್ಜನ ಸ್ಥಳಗಳಲ್ಲಿ ವಿಲೇವಾರಿ ಮಾಡಿದ್ದ.

ಆರೋಪಿ ಅಫ್ತಾಬ್​ ಶ್ರದ್ಧಾಳ ದೇಹದ ಭಾಗಗಳನ್ನು ಪ್ಲಾಸ್ಟಿಕ್​ ಚೀಲದಲ್ಲಿ ಸುತ್ತಿ ಫ್ರಿಡ್ಜ್​​ನಲ್ಲಿ ಇಟ್ಟಿದ್ದ. ಈ ಸಂದರ್ಭದಲ್ಲಿ ಅಫ್ತಾಬ್​ನ ಇನ್ನೋರ್ವ ಗೆಳತಿ ಮನೆಗೆ ಭೇಟಿ ನೀಡಿದ್ದಳು. ತುಂಡರಿಸಿದ ದೇಹದಿಂದ ವಾಸನೆ ಬಾರದಿರಲೆಂದು ಆರೋಪಿ ಅಫ್ತಾಬ್​ ಸುಗಂಧ ದ್ರವ್ಯವನ್ನು ಹಾಕಿದ್ದ ಎಂದು ಹೇಳಲಾಗಿದೆ. ಅಲ್ಲದೆ ಸುತ್ತಮುತ್ತಲಿನವರಿಗೂ ಅನುಮಾನ ಬಾರದಿರಲಿ ಎಂದು ಇಲ್ಲಿ ಸುಗಂಧ ದ್ರವ್ಯವನ್ನು ಹಾಕಿದ್ದ.

ಮಗಳು ನಾಪತ್ತೆಯಾದ ಬಗ್ಗೆ ಶ್ರದ್ಧಾಳ ತಂದೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಅಫ್ತಾಬ್​ನಲ್ಲಿ ಬಂಧಿಸಿದ್ದರು. ಆರೋಪಿಯನ್ನು ವಿಚಾರಣೆ ನಡೆಸಿದಾಗ ಶ್ರದ್ಧಾಳನ್ನು ಕೊಲೆಗೈದಿರುವ ಬಗ್ಗೆ ಬಾಯ್ಬಿಟ್ಟಿದ್ದ. ತನಿಖೆ ಮುಂದುವರೆಸಿದ ಪೊಲೀಸರಿಗೆ ಆರೋಪಿಯು ಇಲ್ಲಿನ ಅರಣ್ಯ ಪ್ರದೇಶದಲ್ಲಿ ವಿಲೇವಾರಿ ಮಾಡಿದ್ದ ದೇಹದ ಹಲವು ಭಾಗಗಳು ಪತ್ತೆಯಾಗಿದ್ದವು.

ಪ್ರಕರಣ ಸಂಬಂಧ ಇಂದು ನ್ಯಾಯಾಲಯವು ಶ್ರದ್ಧಾ ಅವರ ತಂದೆಯ ಹೇಳಿಕೆಯನ್ನು ದಾಖಲಿಸಿಕೊಂಡಿದೆ. ಇದರ ಜೊತೆಗೆ ನ್ಯಾಯಾಲಯಕ್ಕೆ ಹಾಜರುಪಡಿಸಿದ ರೆಫ್ರಿಜರೇಟರ್ ಮತ್ತು ಪ್ಲೈವುಡ್ ತುಂಡುಗಳನ್ನು ಅವರು ಗುರುತಿಸಿದ್ದಾರೆ. ಅಪ್ತಾಬ್​ ಪೂನಾವಾಲ ವಿಚಾರಣೆ ವೇಳೆ ಎಫ್‌ಎಸ್‌ಎಲ್ ತಂಡವು ಮೃತ ಶ್ರದ್ಧಾಳ 13 ಮೂಳೆಗಳನ್ನು ವಶಪಡಿಸಿಕೊಂಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಮುಂದಿನ ವಿಚಾರಣೆಯಲ್ಲಿ, ಅಫ್ತಾಬ್ ಪರ ವಕೀಲರು ಶ್ರದ್ಧಾ ಅವರ ತಂದೆ ಮತ್ತು ಸಹೋದರನನ್ನು ಮರು ವಿಚಾರಣೆಗೆ ಒಳಪಡಿಸಲಿದ್ದಾರೆ.

ಇದನ್ನೂ ಓದಿ : 'ಅಫ್ತಾಬ್​ ಅಮೀನ್​ ತನ್ನ ಕೈಯಿಂದಲೇ ಶ್ರದ್ಧಾಳ ಕತ್ತು ಹಿಸುಕಿ ಕೊಂದಿರುವುದಾಗಿ ಒಪ್ಪಿಕೊಂಡಿದ್ದ': ದೆಹಲಿ ಕೋರ್ಟ್​ನಲ್ಲಿ ಸಂತ್ರಸ್ತೆ ತಂದೆ ಹೇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.