ETV Bharat / bharat

ಸೂಕ್ತ ವ್ಯವಸ್ಥೆ ರೂಪಿಸುವವರೆಗೆ ರಾಜ್ಯಪಾಲರ ಸಂಸ್ಥೆ ರದ್ದುಗೊಳಿಸಿ: ಉದ್ಧವ್​ ಠಾಕ್ರೆ

author img

By

Published : May 12, 2023, 1:06 PM IST

Uddhav Thackeray
ಉದ್ಧವ್​ ಠಾಕ್ರೆ

ತಮ್ಮ ಸರ್ಕಾರದ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯಪಾಲರ ಪಾತ್ರ ಮತ್ತು ಅವರು ತೆಗೆದುಕೊಂಡಿದ್ದ ನಿರ್ಧಾರಗಳ ಬಗ್ಗೆ ಉದ್ಧವ್​ ಠಾಕ್ರೆ ಟೀಕಿಸಿದ್ದು, ಸೂಕ್ತ ವ್ಯವಸ್ಥೆ ರೂಪಿಸುವರೆಗೆ ರಾಜ್ಯಪಾಲರ ಸಂಸ್ಥೆಯನ್ನು ರದ್ದುಗೊಳಿಸಬೇಕೆಂದು ಹೇಳಿದ್ದಾರೆ.

ಮುಂಬೈ (ಮಹಾರಾಷ್ಟ್ರ): ''ನ್ಯಾಯಾಧೀಶರ ಮಾದರಿಯಲ್ಲಿ ರಾಜ್ಯಪಾಲರ ಹುದ್ದೆಗೆ ಅರ್ಹ ವ್ಯಕ್ತಿಯನ್ನು ನೇಮಿಸಲು ಸೂಕ್ತ ವ್ಯವಸ್ಥೆ ರೂಪಿಸಬೇಕು. ಅಲ್ಲಿಯವರೆಗೆ ರಾಜ್ಯಪಾಲರ ಸಂಸ್ಥೆಯನ್ನು ರದ್ದುಗೊಳಿಸಬೇಕೆಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ.

ಕಳೆದ ವರ್ಷ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್​ ಮೈತ್ರಿಕೂಟದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರ ಪತನದ ಸಂದರ್ಭದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಗುರುವಾರ ತನ್ನ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್​, ರಾಜ್ಯಪಾಲರಿಗೆ ರಾಜಕೀಯ ಬಿಕ್ಕಟ್ಟಿನಲ್ಲಿ ಮಧ್ಯಪ್ರವೇಶಿಸುವ ಅಧಿಕಾರವಿಲ್ಲ ಎಂದು ಹೇಳಿತ್ತು. ಇದರ ಬೆನ್ನಲ್ಲೇ ತಮ್ಮ ಸರ್ಕಾರದ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಜ್ಯಪಾಲರ ಪಾತ್ರ ಮತ್ತು ಅವರು ತೆಗೆದುಕೊಂಡಿದ್ದ ನಿರ್ಧಾರಗಳನ್ನು ಉಲ್ಲೇಖಿಸಿ ಇಂದು ಠಾಕ್ರೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ.

''ರಾಜಕೀಯ ಬಿಕ್ಕಟ್ಟಿನಲ್ಲಿ ಈ ಹಿಂದಿನ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಪಾತ್ರ ಅಸಹ್ಯವಾಗಿತ್ತು. ಇದು ನಿನ್ನೆಯ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಸ್ಪಷ್ಟವಾಗಿ ಬಹಿರಂಗವಾಗಿದೆ. ರಾಜ್ಯಪಾಲರು ಎಂದು ಹೆಸರಿಸಲಾದ ರಾಜಕೀಯ ಪಕ್ಷಗಳು ಅಥವಾ ಆರ್‌ಎಸ್‌ಎಸ್‌ನಂತಹ ಸಂಘಟನೆಗಳ ಕಾರ್ಯಕರ್ತರ ಪ್ರವೃತ್ತಿಯು ಮಹತ್ವದ ಹುದ್ದೆಯ ಘನತೆಯನ್ನು ಕಡಿಮೆ ಮಾಡುತ್ತಿದೆ ಎಂಬುವುದರಲ್ಲಿ ಯಾವುದೇ ಮಾತಿಲ್ಲ'' ಎಂದು ಕಿಡಿಕಾರಿದ್ದಾರೆ.

''ಸಂವಿಧಾನದ ರಕ್ಷಣೆ ಮತ್ತು ಉಳಿವಿನ ಹೆಸರಲ್ಲಿ ರಾಜ್ಯಪಾಲರಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದರೆ, ರಾಜ್ಯಪಾಲರಿಂದ ಅದನ್ನು ಮಾಡಲಾಗುತ್ತಿಲ್ಲ. ನಿನ್ನೆಯ ಮಹಾರಾಷ್ಟ್ರ ಮತ್ತು ದೆಹಲಿಯ ಎರಡೂ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್​ ಕೊಟ್ಟಿರುವ ತೀರ್ಪಿನಿಂದ ಇದು ಸ್ಪಷ್ಟವಾಗಿದೆ. ಈ ಹಿಂದೆ ರಾಜ್ಯಪಾಲರ ಕಚೇರಿ ಬಗ್ಗೆ ಹೆಚ್ಚಿನ ಗೌರವವಿತ್ತು. ಆದರೆ, ಈಗ ಅಧಿಕಾರದಲ್ಲಿರುವ ರಾಜ್ಯಪಾಲರನ್ನು 'ಗೃಹಬಳಕೆಯ ಸರಕು'ಗಳಂತೆ ಬಳಸಲಾಗುತ್ತಿದೆ. ಇದರಿಂದ ಹಿಂದಿನ ಗೌರವ ಉಳಿದಿಲ್ಲ'' ಎಂದು ಉದ್ಧವ್ ಠಾಕ್ರೆ ಟೀಕಿಸಿದ್ದಾರೆ.

16 ಶಾಸಕರ ಅನರ್ಹತೆ ತೀರ್ಮಾನವಾಗಲಿ: ಮತ್ತೊಂದೆಡೆ, ಏಕನಾಥ್ ಶಿಂಧೆ ಬಣ ಸೇರಿರುವ 16 ಶಾಸಕರ ಅನರ್ಹತೆ ಬಗ್ಗೆ ಸ್ಪೀಕರ್​​ ರಾಹುಲ್​​ ನಾವರ್ಕರ್​ ಬೇಗ ತೀರ್ಮಾನಿಸಬೇಕೆಂದು ಠಾಕ್ರೆ ಆಗ್ರಹಿಸಿದ್ದಾರೆ. ''ಸುಪ್ರೀಂ ಕೋರ್ಟ್ ನಿನ್ನೆಯ ತನ್ನ ತೀರ್ಪಿನಲ್ಲಿ ಅನರ್ಹತೆ ಕುರಿತು ಸಮಂಜಸವಾದ ಕಾಲಾವಕಾಶ ನೀಡಿದೆ. ಇದರಿಂದ 16 ಶಾಸಕರಿಗೆ ಸಿಕ್ಕಿರುವ ಜೀವದಾನ ತಾತ್ಕಾಲಿಕ ಮತ್ತು ಅದಕ್ಕೆ ಮಿತಿಗಳಿವೆ. ಆದ್ದರಿಂದ ಸ್ಪೀಕರ್​ ತಮ್ಮ ನಿರ್ಧಾರವನ್ನು ಆದಷ್ಟು ಬೇಗ ತೆಗೆದುಕೊಳ್ಳಬೇಕು'' ಎಂದು ಹೇಳಿದ್ದಾರೆ.

ಇದೇ ವೇಳೆ ಠಾಕ್ರೆ ರಾಜೀನಾಮೆ ನೀಡದಿದ್ದಲ್ಲಿ ಅವರನ್ನು ಮುಖ್ಯಮಂತ್ರಿಯಾಗಿ ಮರುಸ್ಥಾಪಿಸಬಹುದಿತ್ತು ಎಂದು ಸುಪ್ರೀಂ ಕೋರ್ಟ್‌ನ ಉಲ್ಲೇಖದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ''ಇದರರ್ಥ ಈಗ ಅಸ್ತಿತ್ವದಲ್ಲಿರುವ ಸರ್ಕಾರವು ಕಾನೂನುಬಾಹಿರವಾಗಿದೆ. ಆದರೆ, ನಾನು ನೈತಿಕತೆಯಿಂದ ರಾಜೀನಾಮೆ ನೀಡಿದ್ದೆ. ನನ್ನ ಈ ನಿರ್ಧಾರದಿಂದ ನಾನು ತೃಪ್ತನಾಗಿದ್ದೇನೆ. ಮುಂದೆ ಅಂತಿಮವಾಗಿ ಅವರು ಜನತಾ ನ್ಯಾಯಾಲಯದಲ್ಲಿ ಚುನಾವಣೆ ಎದುರಿಸಲಿ'' ಎಂದು ಬಿಜೆಪಿ ಹಾಗೂ ಏಕನಾಥ್ ಶಿಂಧೆ ಬಣಕ್ಕೆ ಸವಾಲು ಹಾಕಿದರು.

ಮತ್ತೊಬ್ಬ ಮುಖಂಡ ಅನಿಲ್ ಪರಬ್ ಮಾತನಾಡಿ, ''ನಾವು ಈಗಿನ ಸರ್ಕಾರ ಕಾನೂನುಬಾಹಿರ ಎಂದು ಹೇಳುತ್ತಿದ್ದೇವೆ. ಈ ಹಿಂದೆ ಶಾಸಕರು ವಿಪ್​ ಉಲ್ಲಂಘಿಸಿದ್ದಾರೆ. ಆದ್ದರಿಂದ ಆ ಶಾಸಕರ ಅನರ್ಹತೆ ಬಗ್ಗೆ ತೀರ್ಮಾನಿಸಲು ಸ್ಪೀಕರ್ ಹೆಚ್ಚು ಸಮಯ ತೆಗೆದುಕೊಳ್ಳಬಾರದು. ಬಂಡಾಯ ಶಾಸಕರಿಗೆ ಪಾರಾಗಲು ಯಾವುದೇ ಅವಕಾಶವಿಲ್ಲ. ಅವರಿಗೆ ಸ್ವಲ್ಪ ಸಮಯ ಮಾತ್ರ ಉಳಿದಿದೆ'' ಎಂದು ಹೇಳಿದ್ದಾರೆ.

ಇದನ್ನೂ ಓದಿ: 2024ರ ಚುನಾವಣೆಗೆ ಪ್ರತಿಪಕ್ಷಗಳಿಂದ ಒಗ್ಗಟ್ಟಿನ ಮಂತ್ರ: ಶರದ್ ಪವಾರ್, ಉದ್ಧವ್ ಠಾಕ್ರೆ ಭೇಟಿಯಾದ ನಿತೀಶ್ ಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.