ETV Bharat / bharat

ದೇಶದಲ್ಲಿ ರಾಮರಾಜ್ಯಕ್ಕೆ ರಾಮಮಂದಿರ ನಾಂದಿ: ಯೋಗಿ ಆದಿತ್ಯನಾಥ್

author img

By ETV Bharat Karnataka Team

Published : Nov 5, 2023, 3:58 PM IST

ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್

Ram Temple construction in Ayodhya: ಅಯೋಧ್ಯೆಯಲ್ಲಿ ರಾಮಮಂದಿರ ಪೂರ್ಣವಾದ ಬಳಿಕ ದೇಶದಲ್ಲಿ ರಾಮರಾಜ್ಯ ಆರಂಭವಾಗಲಿದೆ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಹೇಳಿದರು.

ಸುಕ್ಮಾ (ಛತ್ತೀಸ್​ಗಢ): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದರ ಮೂಲಕ ದೇಶದಲ್ಲಿ ರಾಮರಾಜ್ಯ ಆರಂಭವಾಗಲಿದೆ. ಜಾತಿ ಮತ್ತು ಧರ್ಮದ ತಾರತಮ್ಯ ಇರುವುದಿಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.

ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ಕೊಂಟಾದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಬಡವರಿಗೆ ವಸತಿ, ಶೌಚಾಲಯ, ನೀರು ಮತ್ತು ಆರೋಗ್ಯ ವಿಮೆಗೆ ಸಂಬಂಧಿಸಿದಂತೆ ಯೋಜನೆಗಳನ್ನು ಜಾರಿ ಮಾಡುವ ಮೂಲಕ ರಾಮರಾಜ್ಯಕ್ಕೆ ಆರಂಭ ನೀಡಿದರು. ಈಗ ಅಯೋಧ್ಯೆಯಲ್ಲಿ ಭಗವಾನ್​ ಶ್ರೀರಾಮನ ಮಂದಿರ ನಿರ್ಮಾಣ ಮೂಲಕ ಅದು ಮತ್ತಷ್ಟು ಸಾಕಾರವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ತನ್ನ ಒಂಬತ್ತೂವರೆ ವರ್ಷಗಳ ಆಡಳಿತದಲ್ಲಿ ಹಲವಾರು ಜನಪರ ಯೋಜನೆಗಳ ಮೂಲಕ ಪ್ರಾಚೀನ ಕಾಲದಿಂದಲೂ ಬಳಸಲಾಗುವ 'ರಾಮ ರಾಜ್ಯ' ಎಂಬ ಪದದ ಅಡಿಪಾಯವನ್ನು ಹಾಕಿದೆ. ಜನವರಿಯಲ್ಲಿ ಅಯೋಧ್ಯೆ ರಾಮಮಂದಿರ ಉದ್ಘಾಟನೆಯಾಗಲಿದೆ. ಛತ್ತೀಸ್‌ಗಢದ ಜನರು ಉತ್ತರಪ್ರದೇಶಕ್ಕಿಂತಲೂ ಹೆಚ್ಚು ಸಂತೋಷಪಡಬೇಕು. ಏಕೆಂದರೆ ಛತ್ತೀಸ್‌ಗಢ ರಾಮನ 'ನಾನಿಹಾಲ್' (ಮಾತೃಭೂಮಿ) ಆಗಿದೆ ಎಂದರು.

ತಾರತಮ್ಯವಿಲ್ಲದ ಆಡಳಿತ: ರಾಮ ರಾಜ್ಯ ಎಂದರೆ ಜಾತಿ ಮತ್ತು ಧರ್ಮದ ತಾರತಮ್ಯ ಇಲ್ಲದ ನಿಯಮವಾಗಿದೆ. ಇಂತಹ ಆಡಳಿತದಲ್ಲಿ ಯೋಜನೆಗಳ ಪ್ರಯೋಜನಗಳು ಬಡವರು, ವಂಚಿತರು ಮತ್ತು ಬುಡಕಟ್ಟು ಸೇರಿದಂತೆ ಎಲ್ಲರಿಗೂ ತಲುಪುತ್ತವೆ. ಪ್ರತಿಯೊಬ್ಬರಿಗೂ ಭದ್ರತೆ, ಸೌಲಭ್ಯಗಳು ಮತ್ತು ಸಂಪನ್ಮೂಲಗಳ ಮೇಲಿನ ಹಕ್ಕುಗಳು ಸಿಗುತ್ತವೆ. ಇದು ರಾಮರಾಜ್ಯ. ಅಂತಹ ಸಂಸ್ಕೃತಿಗೆ ಕೇಂದ್ರ ಸರ್ಕಾರ ಈಗಾಗಲೇ ಆರಂಭ ನೀಡಿದೆ ಎಂದು ಆದಿತ್ಯನಾಥ್ ಪ್ರತಿಪಾದಿಸಿದರು.

ಇಂತಹ ಭವ್ಯ ರಾಮ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಅಡ್ಡಗಾಲು ಹಾಕಿತ್ತು. ಭಾರತೀಯರ ಆಶೋತ್ತರವಾಗಿದ್ದ ರಾಮನ ಸನ್ನಿಧಾನದ ವಿರುದ್ಧವೇ ಆ ಪಕ್ಷ ನಿಂತಿತ್ತು. ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಅಯೋಧ್ಯೆಯಲ್ಲಿ ರಾಮನ ಮಂದಿರ ನಿರ್ಮಾಣವಾಗಿದೆ. ಮುಂದಿನ ವರ್ಷ ಉದ್ಘಾಟನೆಗೊಳ್ಳಲಿದೆ ಎಂದರು.

ಲವ್​ ಜಿಹಾದ್​ಗೆ ಕಾಂಗ್ರೆಸ್​ ಬೆಂಬಲ: ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ ಯೋಗಿ ಆದಿತ್ಯನಾಥ್, ಲವ್ ಜಿಹಾದ್, ಧಾರ್ಮಿಕ ಮತಾಂತರದಂತಹ ಚಟುವಟಿಕೆಗಳ ಬಗ್ಗೆ ಇಲ್ಲಿನ ಸರ್ಕಾರ ಮೌನವಾಗಿದೆ. ಇಂತಹ ಅಕ್ರಮ ಚಟುವಟಿಕೆಗಳಿಗೆ ಎಲ್ಲ ರೀತಿಯಿಂದಲೂ ಪ್ರೋತ್ಸಾಹ ನೀಡುತ್ತಿದೆ. ಮುಖ್ಯಮಂತ್ರಿ ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಜನರಿಗೆ ಸಮಸ್ಯೆಗಳನ್ನೇ ಹರಡುತ್ತಿದೆ ಎಂದು ಆರೋಪಿಸಿದರು.

ರಾಜ್ಯಕ್ಕೆ ಕಾಂಗ್ರೆಸ್ ಸರ್ಕಾರವೇ ಸಮಸ್ಯೆಯಾಗಿ ಪರಿಣಮಿಸಿದೆ. ಆದಷ್ಟು ಬೇಗ ಈ ಸಮಸ್ಯೆಯನ್ನು ತೊಡೆದುಹಾಕಬೇಕಿದೆ. ಇಲ್ಲಿನ ಜನರ ಕನಸುಗಳನ್ನು ನನಸಾಗಿಸಲು ಬಿಜೆಪಿಗೆ ಬೆಂಬಲ ನೀಡಿ ಎಂದು ಕೋರಿದರು. ಕಲ್ಲಿದ್ದಲು, ಮದ್ಯ, ಗಣಿಗಾರಿಕೆ ಮತ್ತು ಲೋಕಸೇವಾ ಆಯೋಗದ ನೇಮಕಾತಿಗಳಲ್ಲಿ ಹಗರಣ ಇದು ಸರ್ಕಾರದ ಸಾಧನೆಗಳಾಗಿವೆ ಎಂದು ಛೇಡಿಸಿದರು.

ಛತ್ತೀಸ್‌ಗಢದಲ್ಲಿ ನವೆಂಬರ್ 7 ರಂದು 20 ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆಯಲಿದೆ. ಚುನಾವಣಾ ಪ್ರಚಾರ ಇಂದು (ಭಾನುವಾರ) ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ.

ಇದನ್ನೂ ಓದಿ: ಜನವರಿ 22ಕ್ಕೆ ರಾಮಮಂದಿರ ಉದ್ಘಾಟನೆ ಜತೆಗೆ ಮಸೀದಿ ನಿರ್ಮಾಣಕ್ಕೂ ಅಡಿಪಾಯ ಹಾಕಿ: ಮೋದಿಗೆ ಮುಸ್ಲಿಂ ಮುಖಂಡರ ಮನವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.