ETV Bharat / bharat

ಮಿಜೋರಾಂ: ಸ್ಕೂಟರ್​ ಟ್ಯಾಕ್ಸಿಯಲ್ಲಿ ಸಂಚರಿಸಿದ ರಾಹುಲ್​ ಗಾಂಧಿ; ಜನರ ಶಿಸ್ತಿಗೆ ಮೆಚ್ಚುಗೆ

author img

By ETV Bharat Karnataka Team

Published : Oct 17, 2023, 7:05 PM IST

Rahul Gandhi rides pillion on scooter taxi in Aizawl, hails traffic discipline
ಮಿಜೋರಾಂ ವಿಧಾನಸಭೆ ಚುನಾವಣೆ: ಸ್ಕೂಟರ್​ ಟ್ಯಾಕ್ಸಿಯಲ್ಲಿ ಸಂಚರಿಸಿದ ರಾಹುಲ್​ ಗಾಂಧಿ

ಮಿಜೋರಾಂ ರಾಜಧಾನಿ ಐಜ್ವಾಲ್ ನಗರದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಸ್ಕೂಟರ್​ ಟ್ಯಾಕ್ಸಿಯಲ್ಲಿ ಹಿಂಬದಿ ಸವಾರರಾಗಿ ಸಂಚರಿಸಿದರು.

ಐಜ್ವಾಲ್ (ಮಿಜೋರಾಂ): ಮುಂದಿನ ತಿಂಗಳು ವಿಧಾನಸಭಾ ಚುನಾವಣೆ ನಡೆಯಲಿರುವ ಈಶಾನ್ಯ ರಾಜ್ಯ ಮಿಜೋರಾಂಗೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮಂಗಳವಾರ ಸ್ಕೂಟರ್​ ಟ್ಯಾಕ್ಸಿಯಲ್ಲಿ ಸವಾರಿ ಮಾಡಿದರು. ರಾಜಧಾನಿ ಐಜ್ವಾಲ್ ನಗರದಲ್ಲಿ ಸ್ಕೂಟರ್‌ ಹಿಂಬದಿ ಸವಾರರಾಗಿ ಸಂಚರಿಸಿದ ಅವರು, ರಾಜ್ಯದ ಸಂಚಾರ ವ್ಯವಸ್ಥೆ ಹಾಗೂ ಜನರ ಶಿಸ್ತು ಅನ್ನು ಶ್ಲಾಘಿಸಿದರು.

40 ಸದಸ್ಯ ಬಲದ ಮಿಜೋರಾಂ ವಿಧಾನಸಭೆಗೆ ನವೆಂಬರ್ 7ರಂದು ಮತದಾನ ನಡೆಯಲಿದೆ. ಪಕ್ಷದ ಪರ ಚುನಾವಣಾ ಪ್ರಚಾರಕ್ಕೆಂದು ಸೋಮವಾರ ರಾಹುಲ್​ ಗಾಂಧಿ ರಾಜ್ಯಕ್ಕೆ ಆಗಮಿಸಿದ್ದಾರೆ. ಮೊದಲ ದಿನ ಐಜ್ವಾಲ್​ನಲ್ಲಿ ಚನ್ಮಾರಿ ಪ್ರದೇಶದಿಂದ ರಾಜಭವನದವರೆಗೆ ಪಾದಯಾತ್ರೆ ಕೈಗೊಂಡಿದ್ದರು. ನಂತರ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದ ಅವರು, ಕೇಂದ್ರ ಆಡಳಿತಾರೂಢ ಬಿಜೆಪಿ ಹಾಗೂ ರಾಜ್ಯದ ಮಿಜೋ ನ್ಯಾಷನಲ್​ ಫ್ರಂಟ್​ ವಿರುದ್ಧವೂ ವಾಗ್ದಾಳಿ ನಡೆಸಿದ್ದರು.

ಇಂದು ಬೆಳಿಗ್ಗೆ ಝರ್ಕಾವ್ಟ್​ ಪ್ರದೇಶದಲ್ಲಿರುವ ಕಾಂಗ್ರೆಸ್​ ನಾಯಕ, ಮಾಜಿ ಮುಖ್ಯಮಂತ್ರಿ ಲಾಲ್ ಥನ್ಹಾವ್ಲಾ ನಿವಾಸಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿ ಸಮಾಲೋಚನೆ ನಡೆಸಿದರು. ಅಲ್ಲಿಂದ ಮರಳಿ ಬರಬೇಕಾದರೆ ಬಾಡಿಗೆ ಸ್ಕೂಟರ್​ನಲ್ಲಿ ಬಂದು ಗಮನ ಸೆಳೆದರು. ನಂತರ ಪಕ್ಷದ ಹಿರಿಯ ನಾಯಕರೊಂದಿಗೆ ಸಂವಾದ ನಡೆಸಿದರು. ಜೊತೆಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್​, ರಾಜ್ಯದ ದಕ್ಷಿಣ ಭಾಗದ ಲುಂಗ್ಲೈ ಪಟ್ಟಣದಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡರು.

ರಾಹುಲ್ ಸ್ಕೂಟರ್​ ಸವಾರಿ​ ಕುರಿತು ಮಾಹಿತಿ ನೀಡಿದ ರಾಜ್ಯ ಕಾಂಗ್ರೆಸ್​ ಮಾಧ್ಯಮ ವಿಭಾಗದ ಮುಖ್ಯಸ್ಥ ಲಾಲ್ರೆಮ್ರುತಾ ರೆಂತ್ಲೆಯಿ, ''ರಾಹುಲ್​ ಗಾಂಧಿ ರಾಜ್ಯದ ಸಂಚಾರಿ ಶಿಷ್ಟಾಚಾರ ಪಾಲನೆಗೆ ಸಂತಸ ವ್ಯಕ್ತಪಡಿಸಿದರು. ಜೊತೆಗೆ ಸಂಚಾರದ ವೇಳೆ ಪರಸ್ಪರ ಗೌರವ ಕೊಡುವ ಇಲ್ಲಿನ ಸಂಸ್ಕೃತಿಯಿಂದ ಸಾಕಷ್ಟು ಕಲಿಯುವ ಅವಶ್ಯಕತೆ ಎಂಬುವುದಾಗಿ ತಿಳಿಸಿದರು'' ಎಂದು ಹೇಳಿದರು. ಐಜ್ವಾಲ್​ 'ಭಾರತದ ಶಾಂತ' ನಗರ ಎಂದೇ ಹೆಸರಾಗಿದ್ದು, ಇಲ್ಲಿನ ಜನರ ಸಂಚಾರ ಶಿಸ್ತಿನ ಬಗ್ಗೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್​ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

39 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಮಿಜೋರಾಂಗೆ ರಾಹುಲ್ ಗಾಂಧಿ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್ ಸೋಮವಾರ ವಿಧಾನಸಭಾ ಚುನಾವಣೆಗೆ 39 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಿಜೋ ನ್ಯಾಷನಲ್ ಫ್ರಂಟ್ ಅಧ್ಯಕ್ಷ ಮತ್ತು ಹಾಲಿ ಮುಖ್ಯಮಂತ್ರಿ ಝೋರಾಮ್‌ತಂಗ ಪ್ರತಿನಿಧಿಸುವ ಐಜ್ವಾಲ್ ಈಸ್ಟ್-1 ಕ್ಷೇತ್ರದಿಂದ ಕಾಂಗ್ರೆಸ್​ ಲಾಲಸಂಗಲೂರಾ ರಾಲ್ಟೆ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ ಸಮಿತಿಯ ಮುಖ್ಯಸ್ಥ ಲಾಲ್ಸಾವ್ತಾ ಅವರು ಐಜ್ವಾಲ್ ವೆಸ್ಟ್-3 (ಎಸ್ಟಿ) ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಕಳೆದ ಬಾರಿ ಐದು ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಇತ್ತೀಚೆಗೆ ಎರಡು ಸ್ಥಳೀಯ ಪಕ್ಷಗಳಾದ ಪೀಪಲ್ಸ್ ಕಾನ್ಫರೆನ್ಸ್ ಮತ್ತು ಜೋರಾಮ್ ನ್ಯಾಶನಲಿಸ್ಟ್ ಪಾರ್ಟಿ ಜೊತೆಗೂಡಿ ಮಿಜೋರಾಂ ಸೆಕ್ಯುಲರ್ ಮೈತ್ರಿಕೂಟ ರಚಿಸಿದೆ.

ಇದನ್ನೂ ಓದಿ: 'ಇಂಡಿಯಾ' ಮೈತ್ರಿಕೂಟ ದೇಶದ ಶೇ 60ರಷ್ಟು ಭಾಗವನ್ನು ಪ್ರತಿನಿಧಿಸುತ್ತದೆ: ರಾಹುಲ್​ ಗಾಂಧಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.