ETV Bharat / bharat

₹20 ಲಕ್ಷ ಚಿನ್ನಾಭರಣ ಕಳ್ಳತನ ದೂರು ನೀಡಿದಾಕೆಗೇ ಕೌನ್ಸೆಲಿಂಗ್​ ಮಾಡಿದ ಪೊಲೀಸರು!

author img

By

Published : Sep 14, 2022, 10:12 PM IST

police-consider-mental-illness-to-complainant
ದೂರು ನೀಡಿದಾಕೆಗೇ ಕೌನ್ಸೆಲಿಂಗ್​ ಮಾಡಿದ ಪೊಲೀಸರು

ಮನೆಯಲ್ಲಿ ಲಕ್ಷಗಟ್ಟಲೆ ಚಿನ್ನಾಭರಣ ಕಳ್ಳತನವಾದ ಬಗ್ಗೆ ಕೇಸ್​ ನೀಡಿದ ದೂರುದಾರೆಗೆ ಪೊಲೀಸರು ಮಾನಸಿಕ ಆಸ್ಪತ್ರೆಯಲ್ಲಿ ಕೌನ್ಸೆಲಿಂಗ್​ ಮಾಡಿಸಿದ ಪ್ರಸಂಗ ನಡೆದಿದೆ.

ವಡೋದರಾ, ಗುಜರಾತ್​: ಮನೆಯಲ್ಲಿ ಕಳ್ಳತನವಾಗಿದೆ ಎಂದು ದೂರು ನೀಡಿದ ಮಹಿಳೆಯನ್ನು ಪೊಲೀಸರು ಕೇಸ್​ ಪಡೆಯುವ ಬದಲು ಆಕೆಗೆ ಮಾನಸಿಕ ಆಸ್ಪತ್ರೆಯಲ್ಲಿ ಕೌನ್ಸೆಲಿಂಗ್​ ಕೊಡಿಸಿದ ವಿಚಿತ್ರ ಘಟನೆ ಗುಜರಾತ್​ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಸಮಾಲೋಚನೆಯಲ್ಲಿ ಮಹಿಳೆ ಆರೋಗ್ಯವಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಇದು ಪೊಲೀಸರ ನಡೆಯ ಬಗ್ಗೆಯೇ ಅನುಮಾನ ಮೂಡಿಸಿದೆ.

ವಡೋದರಾದ ಸಲಾತ್‌ವಾಲಾ ಪ್ರದೇಶದಲ್ಲಿ ನೆಲೆಸಿರುವ ರಮಿಲಾಬೆನ್​ ಕಳ್ಳತನದ ದೂರು ನೀಡಿದಾಕೆ. ಜುಲೈ 12 ರಂದು ಮನೆಯ ಕಪಾಟಿನಲ್ಲಿದ್ದ 20.91 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ. ಈ ಬಗ್ಗೆ ರಮಿಲಾಬೆನ್​ ಅವರು ದೂರು ನೀಡಲು ಪೊಲೀಸ್​ ಠಾಣೆಗೆ ಹೋಗಿದ್ದಾರೆ. ಪೊಲೀಸರು ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿ ಕಳುಹಿಸಿದ್ದರು.

ಕೆಲ ದಿನಗಳ ಬಳಿಕ ಮತ್ತೆ ಪ್ರಕರಣದ ಬಗ್ಗೆ ವಿಚಾರಿಸಲು ಹೋದಾಗ ಪೊಲೀಸರು ನಿರ್ಲಕ್ಷ್ಯ ತೋರಿದ್ದಾರೆ. ರಮಿಲಾಬೆನ್​ ಅವರ ಪತಿ, ದೂರು ಪಡೆದ ಪ್ರತಿ ಕೇಳಿದರೂ ಪೊಲೀಸರು ನೀಡಿಲ್ಲ. ಈ ಬಗ್ಗೆ ಪೊಲೀಸ್​ ಆಯುಕ್ತರಿಗೂ ಕುಟುಂಬ ದೂರು ನೀಡಿದೆ.

ದೂರುದಾರೆ ಮೇಲೆ ಹೇಳಿಕೆ ಬದಲಿಸಿದ ಆರೋಪ: ಇನ್ನು ಪ್ರಕರಣವನ್ನು ಪೊಲೀಸರು ನಿರ್ಲಕ್ಷಿಸಲು ಆಕೆಯ ನೀಡಿದ ಹೇಳಿಕೆಗಳೇ ಕಾರಣ ಎಂದು ಹೇಳಲಾಗಿದೆ. ದೂರುದಾರೆ ಪ್ರತಿ ಬಾರಿಯೂ ದೂರಿನ ಬಗ್ಗೆ ನಿಖರ ಮಾಹಿತಿ ನೀಡುತ್ತಿಲ್ಲ. ಪದೇ ಪದೇ ಹೇಳಿಕೆ ಬದಲಿಸುತ್ತಿದ್ದಾಳೆ. ಹೀಗಾಗಿ ಆಕೆಯನ್ನು ಕೌನ್ಸೆಲಿಂಗ್​ ಮಾಡಲು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂಬುದು ಪೊಲೀಸರ ವಾದವಾಗಿದೆ.

ಸಮಾಲೋಚನೆಯ ವೇಳೆ ದೂರುದಾರೆ ಆರೋಗ್ಯವಾಗಿದ್ದಾಳೆ ಎಂದು ವೈದ್ಯರು ತಿಳಿಸಿದ ಬಳಿಕವೂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ದೂರುದಾರೆಯ ಪುತ್ರನೂ ಕೂಡ ಮನೆಯಲ್ಲಿ ಕಳ್ಳತನವಾಗಿದೆ ಎಂದು ಹೇಳಿಕೆ ನೀಡಿದ್ದಾನೆ. ಅದರೆ, ಪೊಲೀಸರು ಮಾತ್ರ ಈ ಬಗ್ಗೆ ಕ್ಯಾರೇ ಎನ್ನುತ್ತಿಲ್ಲ.

ಇದು ಪೊಲೀಸ್​ ವ್ಯವಸ್ಥೆಯ ಮೇಲೆಯೇ ಅನುಮಾನ ಮೂಡಿಸುವಂತಾಗಿದೆ ಎಂದು ದೂರುದಾರೆ ಆರೋಪಿಸಿದ್ದಾರೆ. ಅಷ್ಟಕ್ಕೂ ಪೊಲೀಸರು ಪ್ರಕರಣವನ್ನು ತನಿಖೆ ನಡೆಸದೇ ನಿರ್ಲಕ್ಷ್ಯ ವಹಿಸುತ್ತಿರುವ ಬಗ್ಗೆ ಕಾರಣ ತಿಳಿದುಬಂದಿಲ್ಲ.

ಓದಿ: ಮೊಬೈಲ್​ ನೆಟ್‌ವರ್ಕ್​ಗಾಗಿ ಮರ ಏರುತ್ತಿರುವ ಜನ.. ಸೌಲಭ್ಯಕ್ಕಾಗಿ ಏನೇನೋ ಕಸರತ್ತು.. ಇದೆಂಥಾ ಪಡಿಪಾಟಲು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.