ETV Bharat / bharat

ವಿಶೇಷ ಅಂಕಣ: ಯುದ್ಧೋಪಾದಿಯಲ್ಲಿ ನಡೆಯುತ್ತಿದೆ ಲಸಿಕೆ ಕಾರ್ಯಕ್ರಮ

author img

By

Published : Feb 17, 2021, 11:49 AM IST

Vaccination
ಕೋವಿಡ್‌ 19

ಕೋವಿಡ್‌ 19 ಲಸಿಕೆಯು ಆರು ತಿಂಗಳಲ್ಲಿ ಅವಧಿ ಮೀರುತ್ತದೆ ಎಂದು ಹೇಳಲಾಗಿದೆ. ಉತ್ಪಾದಕರ ಬಳಿ ಇರುವ ಕೋಟ್ಯಂತರ ಲಸಿಕೆ ಡೋಸ್‌ಗಳನ್ನು ಬಳಸಿಕೊಳ್ಳಲು ತಕ್ಷಣದ ಕ್ರಮ ಕೈಗೊಳ್ಳಬೇಕಿದೆ.

ಕಳೆದ ಒಂದು ವರ್ಷದಿಂದ ಇಡೀ ವಿಶ್ವವನ್ನೇ ನಡುಗಿಸಿದ ಕೋವಿಡ್ -19 ಸಾಂಕ್ರಾಮಿಕ ರೋಗವು ಈಗಲೂ ಅಲೆ ಅಲೆಯಾಗಿ ಹಲವು ದೇಶಗಳನ್ನು ಬಾಧಿಸುತ್ತಲೇ ಇದೆ. ಕಳೆದ ಮೂರು ದಶಕಗಳಿಂದಲೂ ಆರ್ಥಿಕ ಹಿಂಜರಿತವನ್ನು ಅನುಭವಿಸುತ್ತಿರುವ ಬ್ರಿಟನ್‌, 1.5 ಕೋಟಿ ಜನರಿಗೆ ಲಸಿಕೆಯನ್ನು ನೀಡಿದೆ. ಆದರೂ, ಲಾಕ್‌ಡೌನ್‌ ಸಡಿಲಗೊಳಿಸಲು ಹಿಂಜರಿಯುತ್ತಿದೆ.

ಜರ್ಮನಿ, ಫ್ರಾನ್ಸ್‌, ಇಸ್ರೇಲ್‌, ನೆದರ್ಲೆಂಡ್ಸ್, ಪೋರ್ಚುಗಲ್‌ ಮತ್ತು ವಿಯೆಟ್ನಾಂ ಕೂಡಾ ವೈರಸ್‌ ತಡೆಯಲು ಲಾಕ್‌ಡೌನ್‌ ಹೊರತುಪಡಿಸಿ ಬೇರಾವುದೇ ಪರಿಣಾಮಕಾರಿ ಕ್ರಮವಿಲ್ಲ ಎಂದು ನಿರ್ಧರಿಸಿದಂತಿದೆ. ಈ ನಿಲುವಿಗೆ ಪುಷ್ಟಿ ನೀಡುವಂತೆ ಯುಕೆಯಲ್ಲಿ ಕಂಡು ಬಂದಿರುವ ಕೆಂಟ್‌ ಕೋವಿಡ್‌ 70 ರಷ್ಟು ಹೆಚ್ಚು ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ.

ಭಾರತದಲ್ಲಿ ಈವರೆಗೆ 80 ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗಿದೆ. ಕಳೆದ ಒಂದು ವಾರದಲ್ಲಿ 185 ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣಗಳು ಕಂಡು ಬಂದಿಲ್ಲ. ಕೇರಳ ಮತ್ತು ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ರೋಗ ಹೆಚ್ಚು ಕಂಡುಬರುತ್ತಿದೆ. ಇದು ನಾಗರಿಕರಲ್ಲಿ ವಿಚಿತ್ರ ಭೀತಿಯ ಸನ್ನಿವೇಶವನ್ನು ನಿರ್ಮಿಸಿದೆ.

ಮುಂದಿನ ಎರಡರಿಂದ ಮೂರು ವಾರಗಳಲ್ಲಿ 50 ಕ್ಕೂ ಹೆಚ್ಚು ವಯಸ್ಸಿನವರಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಆರಂಭಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ದೇಶದಲ್ಲಿ ಇನ್ನೂ 18 ಲಸಿಕೆಗಳಿಗೆ ಶೀಘ್ರದಲ್ಲೇ ಅನುಮತಿ ನೀಡಲಾಗುತ್ತದೆ. ಮೊದಲ ಹಂತದಲ್ಲಿ 3 ಕೋಟಿ ಮುನ್ನೆಲೆಯಲ್ಲಿ ಕೆಲಸ ಮಾಡುತ್ತಿರುವ ಕೋವಿಡ್‌ ಯೋಧರಿಗೆ ಲಸಿಕೆ ನೀಡುವ ಯೋಜನೆ ರೂಪಿಸಲಾಗಿತ್ತು. ಆದರೆ, ಕೋಟ್ಯಂತರ ಜನರು ಲಸಿಕೆಯನ್ನು ಪಡೆಯಲು ಮುಂದೆ ಬರಲಿಲ್ಲ. ಲಸಿಕೆ ಬಗ್ಗೆ ಇರುವ ಹಿಂಜರಿಕೆಯೇ ಇದಕ್ಕೆ ಕಾರಣ.

ಪ್ರಸ್ತುತ ವೇಗದಲ್ಲಿ ಲಸಿಕೆ ನೀಡುತ್ತಿದ್ದರೆ ಇಡೀ ದೇಶದ ಜನರಿಗೆ ಲಸಿಕೆ ಒದಗಿಸಲು ಐದು ವರ್ಷಗಳೇ ಬೇಕಾಗಬಹುದು ಎಂದು ಅಧ್ಯಯನಗಳು ಹೇಳುತ್ತಿವೆ. ಒಂದೆಡೆ ವೈರಸ್‌ ವಿವಿಧ ರೂಪಾಂತರವನ್ನು ಪಡೆಯುತ್ತಿದ್ದರೆ, ಮತ್ತೊಂದೆಡೆ ಲಸಿಕೆ ಸ್ವೀಕರಿಸಲು ಜನರಲ್ಲಿ ಹಿಂಜರಿಕೆ ಕಾಣಿಸುತ್ತಿದೆ. ಈ ಮಧ್ಯೆಯೇ ಕೋಟ್ಯಂತರ ಜನರು ಜೀವ ರಕ್ಷಕ ಲಸಿಕೆ ನಿರೀಕ್ಷಿಸುತ್ತಲೂ ಇದ್ದಾರೆ. ಈ ವ್ಯತ್ಯಯವನ್ನು ನಿವಾರಿಸುವಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.

ಭಾರತವು ವಿಶ್ವದಲ್ಲೇ ಜೀವ ರಕ್ಷಕ ಲಸಿಕೆಯ ಉತ್ಪಾದಕನಾಗಿ ಹೊರಹೊಮ್ಮಿದೆ. ಲಸಿಕೆಯನ್ನು ದೇಶದ ಮೂಲೆ ಮೂಲೆಗೂ ಸಾಗಿಸುವ ಸಾಮರ್ಥ್ಯ ಹೊಂದಿರುವ ನಿಟ್ಟಿನಲ್ಲಿ ದೇಶ ಹೆಗ್ಗಳಿಕೆಯನ್ನೂ ಪಡೆದಿದೆ.

ಇನ್ನೊಂದೆಡೆ, ಲಸಿಕೆಯ ಮೊದಲ ಡೋಸ್ ಪಡೆದುಕೊಂಡ ಶೇ. 10 ರಷ್ಟು ಜನರು ಮಾತ್ರ ಎರಡನೇ ಡೋಸ್‌ ತೆಗೆದುಕೊಳ್ಳಲು ಮುಂದೆ ಬಂದಿರುವುದು ಕಂಡುಬಂದಿದೆ. ಮೊದಲ ಡೋಸ್ ತೆಗೆದುಕೊಂಡ 28 ದಿನಗಳೊಳಗೆ ತಪ್ಪದೇ ಎರಡನೇ ಡೋಸ್ ತೆಗೆದುಕೊಳ್ಳಬೇಕು ಎಂದು ಪದೇ ಪದೇ ಜನರಿಗೆ ತಿಳಿಸಿದರೂ, ಪರಿಸ್ಥಿತಿ ಹೀಗಿದೆ. ಈವರೆಗೆ ದೇಶದ ಒಟ್ಟು ಶೇ.0.6 ರಷ್ಟು ಜನರಿಗೆ ಲಸಿಕೆ ನೀಡಲಾಗಿದೆ. ನಮ್ಮ ಎದುರು ಇರುವ ಕೆಲಸದ ವ್ಯಾಪ್ತಿ ಎಷ್ಟು ದೊಡ್ಡದಿದೆ ಎಂಬುದನ್ನು ಈ ಚಿತ್ರಣವು ನಮಗೆ ತಿಳಿಸುತ್ತದೆ.

ಮೂರನೇ ಬಾರಿಗೆ ದೇಶಾದ್ಯಂತ ನಡೆಸಿದ ಸೆರಾಲಾಜಿಕಲ್‌ ಸಮೀಕ್ಷೆಯಲ್ಲಿ, ದೇಶದ 21.5 ರಷ್ಟು ಜನರು ಕೋವಿಡ್‌ ವಿರುದ್ಧ ಹೋರಾಟ ನಡೆಸುವಲ್ಲಿ ಪ್ರತಿಕಾಯಗಳನ್ನು ಬೆಳೆಸಿಕೊಂಡಿರುವುದು ತಿಳಿದುಬಂದಿದೆ. ಅಂದರೆ, ಐವರಲ್ಲಿ ಒಬ್ಬ ವ್ಯಕ್ತಿ ಮಾತ್ರ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದಾನೆ. ರೋಗನಿರೋಧಕ ಶಕ್ತಿ ಇಲ್ಲದ ವ್ಯಕ್ತಿಗೆ ಲಸಿಕೆಯನ್ನು ಒದಗಿಸಬೇಕು. 60 ರಿಂದ 70 ರಷ್ಟು ಜನರಲ್ಲಿ ಪ್ರತಿಕಾಯಗಳು ಬೆಳೆದ ನಂತರವೇ ಸಾಮೂಹಿಕ ರೋಗನಿರೋಧಕತೆ ಬೆಳೆಯುತ್ತದೆ. ಈ ಸನ್ನಿವೇಶದಲ್ಲಿ ದೇಶದ ಜನರ ರಕ್ಷಣೆಗಾಗಿ ಲಸಿಕೆಯನ್ನು ಒದಗಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ.

ಎಲ್ಲರೂ ಸುರಕ್ಷಿತವಾಗುವವರೆಗೂ ಯಾರೂ ಸುರಕ್ಷಿತವಲ್ಲ ಎಂದು ವಿಶ್ವ ಆರೋಗ್ಯ ಸಂಘಟನೆ ಹೇಳಿದೆ. ಈ ಒಂದು ಸಲಹೆಯೇ ನಾವು ಕೈಗೊಳ್ಳಬೇಕಾದ ಕ್ರಮಗಳನ್ನು ಸೂಚಿಸುತ್ತದೆ. ಲಸಿಕೆ ನೀಡುವಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಖಾಸಗಿ ಆಸ್ಪತ್ರೆಗಳನ್ನೂ ಬಳಸಿಕೊಳ್ಳಬೇಕಿದೆ.

ಕೋವಿಡ್‌ 19 ಲಸಿಕೆಯು ಆರು ತಿಂಗಳಲ್ಲಿ ಅವಧಿ ಮೀರುತ್ತದೆ ಎಂದು ಹೇಳಲಾಗಿದೆ. ಉತ್ಪಾದಕರ ಬಳಿ ಇರುವ ಕೋಟ್ಯಂತರ ಲಸಿಕೆ ಡೋಸ್‌ಗಳನ್ನು ಬಳಸಿಕೊಳ್ಳಲು ತಕ್ಷಣದ ಕ್ರಮ ಕೈಗೊಳ್ಳಬೇಕಿದೆ. ಪರಿಪೂರ್ಣವಾದ ನೀತಿ ನಿಯಮಗಳ ಜೊತೆಗೆ ಮಾಡಬಾರದ ಮತ್ತು ಮಾಡಬೇಕಿರುವ ಕ್ರಮಗಳನ್ನು ರೂಪಿಸಬೇಕು ಮತ್ತು ಈ ಮೂಲಕ ಉತ್ಪಾದನೆ, ಸಂಗ್ರಹ ಮತ್ತು ವಿತರಣೆಯನ್ನು ನಿಯಂತ್ರಿಸಬೇಕು. ಇದರಿಂದ ಲಸಿಕೆ ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಯಬಹುದು. ಬೇಡಿಕೆಗೆ ಸೂಕ್ತ ಪೂರೈಕೆಯನ್ನು ಒದಗಿಸುವ ನಿಟ್ಟಿನಲ್ಲಿ ಲಸಿಕೆ ಉತ್ಪಾದನೆಗೆ ಪ್ರೋತ್ಸಾಹ ನೀಡಬೇಕು. ಲಸಿಕೆಯ ಪರಿಣಾಮಕಾರಿತ್ವದ ಅವಧಿ ಇನ್ನೂ ತಿಳಿದಿಲ್ಲವಾದ್ದರಿಂದ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತಹ ಮುನ್ನೆಚ್ಚರಿಕೆ ಕ್ರಮಗಳ ಕೈಗೊಳ್ಳುವಿಕೆಯನ್ನು ಮುಂದುವರಿಸಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.