ETV Bharat / bharat

ಮಕ್ಕಳ ವಿಷಯಕ್ಕೆ ನಡೆದ ಗಲಾಟೆಗೆ ಓರ್ವ ಸಾವು: ಪೊಲೀಸರ ಮೇಲೆ ಕಲ್ಲು ತೂರಾಟ, ಗಾಯ

author img

By

Published : Apr 9, 2023, 9:08 AM IST

ಮಕ್ಕಳ ವಿಷಯಕ್ಕೆ ನಡೆದ ಗಲಾಟೆಗೆ ಓರ್ವ ಸಾವು
ಮಕ್ಕಳ ವಿಷಯಕ್ಕೆ ನಡೆದ ಗಲಾಟೆಗೆ ಓರ್ವ ಸಾವು

ಸಣ್ಣ ವಿಚಾರಕ್ಕೆ ನಡೆದ ಎರಡು ಗುಂಪುಗಳ ನಡುವಿನ ಗಲಾಟೆಯಲ್ಲಿ ಓರ್ವನ ಪ್ರಾಣ ಹಾರಿ ಹೋಗಿದೆ. ಸ್ಥಳಕ್ಕೆ ಬಂದ ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಲಾಗಿದ್ದು, ಮೂವರು ಗಾಯಗೊಂಡಿದ್ದಾರೆ.

ಬೆಮೆತಾರಾ(ಛತ್ತೀಸ್‌ಗಢ): ಆಟದ ವೇಳೆ ಸೈಕಲ್​ನಿಂದ ಬಿದ್ದ ಕಾರಣಕ್ಕೆ ಮಕ್ಕಳಲ್ಲಿ ಆರಂಭವಾದ ಜಗಳ ಎರಡು ಗುಂಪುಗಳ ಮಧ್ಯೆ ಮಾರಾಮಾರಿಗೆ ಕಾರಣವಾಗಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಇನ್ನೋರ್ವನ ಸ್ಥಿತಿ ಗಂಭೀರವಾಗಿದೆ. ಪರಿಸ್ಥಿತಿ ನಿಯಂತ್ರಣದ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದ್ದು, ಇನ್ಸ್​ಪೆಕ್ಟರ್​ ಸೇರಿ ಮೂವರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಛತ್ತೀಸ್‌ಗಢದ ಸಜಾ ವಿಧಾನಸಭಾ ಕ್ಷೇತ್ರದ ಬಿರಾನ್‌ಪುರ ಗ್ರಾಮದಲ್ಲಿ ಹೊಡೆದಾಟ ನಡೆದಿದೆ. ಸೈಕಲ್​ನಿಂದ ಬಿದ್ದ ಸಣ್ಣ ವಿಷಯಕ್ಕೆ ಮಕ್ಕಳ ನಡುವೆ ಜಗಳ ಪ್ರಾರಂಭವಾಗಿದೆ. ಬಳಿಕ ಎರಡು ಗುಂಪುಗಳು ಇದೇ ವಿಚಾರಕ್ಕೆ ವಾಗ್ವಾದಕ್ಕೆ ಇಳಿದಿವೆ. ಮಾತಿಗೆ ಮಾತು ಬೆಳೆದು ಎರಡು ಗುಂಪುಗಳ ಜನರು ಕೋಲುಗಳು ಮತ್ತು ಹರಿತವಾದ ಆಯುಧಗಳಿಂದ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ 22 ವರ್ಷದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಕ್ಕಳ ನಡುವಿನ ಸಣ್ಣ ಜಗಳ ವಿಕೋಪಕ್ಕೆ ತಿರುಗಿ, ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಸಜಾ ಪೊಲೀಸ್ ಠಾಣೆಯ ಸಬ್​ಇನ್ಸ್‌ಪೆಕ್ಟರ್ ಬಿಆರ್ ಠಾಕೂರ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಉದ್ರಿಕ್ತರಾಗಿದ್ದ ಗುಂಪುಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮ ಇನ್​ಸ್ಪೆಕ್ಟರ್​ ಠಾಕೂರ್ ಸೇರಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ತೀವ್ರ ಗಾಯಗೊಂಡ ಇನ್​ಸ್ಪೆಕ್ಟರ್ ಠಾಕೂರ್ ಅವರನ್ನು ಸಾಜಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಗಿದ್ದು, ಅವರು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿಷೇಧಾಜ್ಞೆ ಜಾರಿ: ಸ್ಥಳದಲ್ಲಿ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾದ ಬಳಿಕ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಗಲಭೆಗೆ ಕಾರಣವಾದ 11 ಜನರನ್ನು ಗುರುತಿಸಲಾಗಿದೆ. ಅವರಲ್ಲಿ 9 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಉದ್ರಿಕ್ತ ಕೆಲ ಯುವಕರು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಗ್ರಾಮದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಬೆಮೆತಾರಾ ಕಲೆಕ್ಟರ್ ಪದುಮ್ ಸಿಂಗ್ ಎಲ್ಮಾ ತಿಳಿಸಿದರು.

ರೇಪ್​ ಮಾಡಿ ಮಹಿಳೆಯ ಹತ್ಯೆ: ರಾಜಸ್ಥಾನದ ಬಾರ್ಮರ್​ ಜಿಲ್ಲೆಯಲ್ಲಿ ಮಹಿಳೆಯ ಮೇಲೆ ರೇಪ್​ ಮಾಡಿ, ಬಳಿಕ ವಿಷಯ ಹೊರಬರದಂತೆ ತಡೆಯಲು ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸಜೀವವಾಗಿ ದಹಿಸಿದ ಹೃದಯವಿದ್ರಾವಕ ಘಟನೆ ನಡೆದಿದೆ. ಆರೋಪಿ ಪರಾರಿಯಾಗಿದ್ದು, ಪ್ರಕರಣ ದಾಖಲಿಸಲಾಗಿದೆ.

ಮನೆಯಲ್ಲಿ ಯಾರು ಇಲ್ಲದ ವೇಳೆ ನುಗ್ಗಿದ ಪಕ್ಕದ ಮನೆಯ ವ್ಯಕ್ತಿ, ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ. ಇದನ್ನು ವಿರೋಧಿಸಿದ ಕಾರಣಕ್ಕಾಗಿ ಆಕೆಯ ಮೇಲೆ ಹಲ್ಲೆ ಮಾಡಿ, ಬೆಂಕಿ ಹಚ್ಚಿದ್ದಾನೆ. ಕಿರುಚಾಡುತ್ತಿದ್ದ ವೇಳೆ ಮಹಿಳೆಯ ಸಹೋದರಿ ಸ್ಥಳಕ್ಕೆ ಧಾವಿಸಿ ಆಕೆಯನ್ನು ರಕ್ಷಿಸಿದ್ದಾಳೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆದರೆ, ಚಿಕಿತ್ಸೆ ಫಲಿಸದೇ ಮಹಿಳೆ ಸಾವನ್ನಪ್ಪಿದ್ದಾಳೆ. ಇದು ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ಆಸ್ಪತ್ರೆ ಮುಂಭಾಗ ಪ್ರತಿಭಟನೆ ನಡೆಸಲಾಗುತ್ತಿದೆ. ಪರಿಹಾರ ಮತ್ತು ಆರೋಪಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗುತ್ತಿದೆ.

ಓದಿ: ರಾಹುಲ್​ಗೆ ಶಿಕ್ಷೆ ವಿಧಿಸಿದ ಸೂರತ್​ ಜಡ್ಜ್​ ನಾಲಿಗೆ ಕತ್ತರಿಸುವೆ ಎಂದ ಕಾಂಗ್ರೆಸ್​​ ಜಿಲ್ಲಾಧ್ಯಕ್ಷನ ವಿರುದ್ಧ ಕೇಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.