ETV Bharat / bharat

ಹನ್ನೆರೆಡಕ್ಕೇರಿದ ಬಿಜೆಪಿ ಆಡಳಿತ ಇರುವ ರಾಜ್ಯಗಳ ಸಂಖ್ಯೆ: 3ಕ್ಕೆ ಕುಸಿದ ಕಾಂಗ್ರೆಸ್​

author img

By PTI

Published : Dec 3, 2023, 5:08 PM IST

ಇಂದಿನ ಚುನಾವಣಾ ಫಲಿತಾಂಶಗಳೊಂದಿಗೆ ದೇಶದಲ್ಲಿ ಬಿಜೆಪಿ ಒಟ್ಟು 12 ರಾಜ್ಯಗಳಲ್ಲಿ ಸ್ವಂತ ಬಲದ ಮೇಲೆ ಅಧಿಕಾರದಲ್ಲಿರಲಿದೆ.

BJP on way to rule 12 states on its own, Congress down to 3
BJP on way to rule 12 states on its own, Congress down to 3

ನವದೆಹಲಿ: ಇತ್ತೀಚೆಗೆ ಚುನಾವಣೆ ನಡೆದ ನಾಲ್ಕು ರಾಜ್ಯಗಳ ಪೈಕಿ ಮೂರರಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ಪಕ್ಷವು ಈಗ 12 ರಾಜ್ಯಗಳಲ್ಲಿ ಸ್ವಂತವಾಗಿ ಅಧಿಕಾರದಲ್ಲಿರಲಿದೆ. ಹಾಗೆಯೇ ರಾಜಸ್ಥಾನ ಮತ್ತು ಛತ್ತೀಸಗಢದಲ್ಲಿ ಸೋತ ನಂತರ ದೇಶದ ಎರಡನೇ ಅತಿದೊಡ್ಡ ರಾಷ್ಟ್ರೀಯ ಪಕ್ಷ ಕಾಂಗ್ರೆಸ್​ನ ಅಧಿಕಾರ ಮೂರು ರಾಜ್ಯಗಳಿಗೆ ಸೀಮಿತವಾಗಲಿದೆ.

ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಸರ್ಕಾರ ನಡೆಸುತ್ತಿರುವ ಆಮ್ ಆದ್ಮಿ ಪಕ್ಷವು ರಾಷ್ಟ್ರೀಯ ಪಕ್ಷಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಉತ್ತರಾಖಂಡ್, ಹರಿಯಾಣ, ಉತ್ತರ ಪ್ರದೇಶ, ಗುಜರಾತ್, ಗೋವಾ, ಅಸ್ಸೋಂ, ತ್ರಿಪುರ, ಮಣಿಪುರ, ಅರುಣಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಇಂದಿನ ಮತ ಎಣಿಕೆಯ ನಂತರ ಮಧ್ಯಪ್ರದೇಶದಲ್ಲಿ ಅಧಿಕಾರ ಮರಳಿ ಪಡೆಯಲಿದೆ ಮತ್ತು ರಾಜಸ್ಥಾನ ಹಾಗೂ ಛತ್ತೀಸಗಢ ರಾಜ್ಯಗಳನ್ನು ಕಾಂಗ್ರೆಸ್​ನಿಂದ ಕಸಿದುಕೊಳ್ಳಲು ಸಜ್ಜಾಗಿದೆ. ಇದಲ್ಲದೇ ಮಹಾರಾಷ್ಟ್ರ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ ಈ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಮೈತ್ರಿಕೂಟದ ಭಾಗವಾಗಿದೆ.

ಕಾಂಗ್ರೆಸ್ ಈಗ ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ತೆಲಂಗಾಣ ಮೂರು ರಾಜ್ಯಗಳಲ್ಲಿ ಸ್ವತಂತ್ರವಾಗಿ ಅಧಿಕಾರದಲ್ಲಿರಲಿದೆ. ಬಿಹಾರ ಮತ್ತು ಜಾರ್ಖಂಡ್​ನಲ್ಲಿ ಕಾಂಗ್ರೆಸ್ ಆಡಳಿತ ಮೈತ್ರಿಕೂಟದ ಭಾಗವಾಗಿದೆ ಮತ್ತು ತಮಿಳುನಾಡಿನ ಆಡಳಿತಾರೂಢ ಡಿಎಂಕೆಯ ಮಿತ್ರ ಪಕ್ಷವಾಗಿದೆ. ಆದರೂ ಕಾಂಗ್ರೆಸ್​ ಸರ್ಕಾರದಲ್ಲಿ ಭಾಗಿಯಾಗಿಲ್ಲ.

ಕಾಂಗ್ರೆಸ್​ ಮತಗಳಿಕೆ ಪ್ರಮಾಣ ಕಡಿಮೆಯಾಗಿರುವ ಮಧ್ಯೆ ಎರಡು ರಾಜ್ಯಗಳಲ್ಲಿ ಅಧಿಕಾರ ಹೊಂದಿರುವ ಆಮ್ ಆದ್ಮಿ ಪಾರ್ಟಿ ರಾಷ್ಟ್ರ ಮಟ್ಟದಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. "ಇಂದಿನ ಫಲಿತಾಂಶದ ನಂತರ, ಆಮ್ ಆದ್ಮಿ ಪಕ್ಷವು ಪಂಜಾಬ್ ಮತ್ತು ದೆಹಲಿ ಎರಡು ರಾಜ್ಯ ಸರ್ಕಾರಗಳೊಂದಿಗೆ ಉತ್ತರ ಭಾರತದಲ್ಲಿ ಅತಿದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ" ಎಂದು ಎಎಪಿ ನಾಯಕಿ ಜಾಸ್ಮಿನ್ ಶಾ ಹೇಳಿದ್ದಾರೆ.

ಪ್ರಸ್ತುತ ಭಾರತದಲ್ಲಿ ಬಿಜೆಪಿ, ಕಾಂಗ್ರೆಸ್, ಬಹುಜನ ಸಮಾಜ ಪಕ್ಷ (ಬಿಎಸ್ಪಿ), ಸಿಪಿಐ (ಎಂ), ನ್ಯಾಷನಲಿಸ್ಟ್​ ಕಾಂಗ್ರೆಸ್ ಪಾರ್ಟಿ(ಎನ್​ಸಿಪಿ) ಮತ್ತು ಎಎಪಿ ಈ ಆರು ಪಕ್ಷಗಳು ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆದಿವೆ. ಸಿಕ್ಕಿಂ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ 2024ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿಯೂ ವಿಧಾನಸಭಾ ಚುನಾವಣೆ ನಡೆಯುವುದು ಬಾಕಿ ಇದೆ.

ಈ ಸುತ್ತಿನಲ್ಲಿ ಹಲವಾರು ಹಾಲಿ ಸಂಸದರು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದ, ಲೋಕಸಭೆಯಲ್ಲಿ ಆ ಸ್ಥಾನಗಳು ಖಾಲಿಯಾಗುವ ನಿರೀಕ್ಷೆಯಿದೆ. ಆದಾಗ್ಯೂ ಮುಂದಿನ ವರ್ಷ ದೇಶದ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ, ಸಂಸದರು ಶಾಸಕರಾಗಿ ಆಯ್ಕೆಯಾಗಿ ತಮ್ಮ ಸ್ಥಾನಗಳನ್ನು ತೊರೆದರೂ ಆ ಸ್ಥಾನಗಳಿಗೆ ಯಾವುದೇ ಉಪಚುನಾವಣೆ ನಡೆಯುವುದಿಲ್ಲ.

ಇದನ್ನೂ ಓದಿ : ತೆಲಂಗಾಣ ಜನತೆಯ ಆಕಾಂಕ್ಷೆ ಈಡೇರಿಸಲಿದೆ ಕಾಂಗ್ರೆಸ್: ರೇವಂತ್ ರೆಡ್ಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.