ETV Bharat / bharat

ಭಯೋತ್ಪಾದನೆ, ಗ್ಯಾಂಗ್​​ಸ್ಟರ್​ಗಳ ಹಾವಳಿ.. 8 ರಾಜ್ಯಗಳ 70 ಕಡೆ ಎನ್​ಐಎ ಮಿಂಚಿನ ದಾಳಿ

author img

By

Published : Feb 21, 2023, 9:55 AM IST

ಎನ್​ಐಎ ಮಿಂಚಿನ ದಾಳಿ
ಎನ್​ಐಎ ಮಿಂಚಿನ ದಾಳಿ

ಉತ್ತರ ಭಾರತದ 8 ರಾಜ್ಯಗಳಲ್ಲಿ ಎನ್​ಐಎ ದಾಳಿ- ಭಯೋತ್ಪಾದನೆ ಗೂಂಡಾಗಿರಿ ಪ್ರಕರಣ- 70 ಕಡೆ ಎನ್​ಐಎ ದಾಳಿ- ಬಿಷ್ಣೋಯ್ ಗ್ಯಾಂಗ್‌ಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ

ನವದೆಹಲಿ: ಭಯೋತ್ಪಾದನೆ ಚಟುವಟಿಕೆ ಮತ್ತು ಗೂಂಡಾಗಿರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಉತ್ತರ ಭಾರತದ 8 ರಾಜ್ಯಗಳ 70ಕ್ಕೂ ಹೆಚ್ಚು ಕಡೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಂದು ಬೆಳಗ್ಗೆ ದಾಳಿ ನಡೆಸಿದೆ. ಪಂಜಾಬ್, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ, ದೆಹಲಿ ಮತ್ತು ಛಂಡೀಗಢ, ಮಧ್ಯಪ್ರದೇಶಗಳಲ್ಲಿ ಗೂಂಡಾಗಿರಿ, ದರೋಡೆಕೋರರ ಉಪಟಳ ಹೆಚ್ಚಾದ ಬಗ್ಗೆ ದೂರುಗಳು ದಾಖಲಾಗಿದ್ದವು. ಇದರ ವಿರುದ್ಧ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಿಲಿಭಿತ್, ಪ್ರತಾಪ್‌ಗಢ ಮತ್ತು ಮತ್ತಿತರ ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ. ಪಂಜಾಬ್​ ಗಾಯಕ ಸಿಧು ಮೂಸೆವಾಲಾ ಹತ್ಯೆ ಆರೋಪಿಗಳಾದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಮುಂದುವರಿದಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಪಂಜಾಬ್‌ನ ರೂಪನಗರ ಜಿಲ್ಲೆಯಲ್ಲಿ ನಡೆದ ದಾಳಿಯಲ್ಲಿ ಈ ಗ್ಯಾಂಗ್‌ನ ನಾಲ್ವರು ಸದಸ್ಯರನ್ನು ಬಂಧಿಸಲಾಗಿತ್ತು. ಗ್ಯಾಂಗ್​ಸ್ಟರ್​ಗಳ ವಿರುದ್ಧ ಕೊಲೆ ಮತ್ತು ಅಕ್ರಮ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.

ವಾರದ ಹಿಂದಷ್ಟೇ ಸಿರ್ಸಾ ಮೂಲದ ಲಾಜಿಸ್ಟಿಕ್ಸ್ ಪೂರೈಕೆದಾರ ಮತ್ತು ಕುಖ್ಯಾತ ರೌಡಿಯೊಬ್ಬನನ್ನು ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದ ವೇಳೆ ಬಂಧಿಸಲಾಗಿತ್ತು. ದೇಶ ಸೇರಿದಂತೆ ವಿದೇಶಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಸಂಚು ರೂಪಿಸುತ್ತಿರುವ ಕ್ರಿಮಿನಲ್ ಗ್ಯಾಂಗ್‌ಸ್ಟರ್‌ಗಳನ್ನು ಎನ್​ಐಎ ಗುರುತಿಸಿದೆ. ಶಸ್ತ್ರಾಸ್ತ್ರ ಪೂರೈಕೆದಾರನ ಬಂಧನ ಬಳಿಕ ಹರಿಯಾಣ ಮತ್ತು ಪಂಜಾಬ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ, ಕ್ರಿಮಿನಲ್ ಗ್ಯಾಂಗ್​ಸ್ಟರ್​ಗಳನ್ನು ಬೇರುಸಹಿತ ಕಿತ್ತುಹಾಕುವ ಕ್ರಮ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕಳೆದ ವರ್ಷ ನವೆಂಬರ್‌ನಲ್ಲಿ ಎನ್‌ಐಎ ಪಂಜಾಬ್‌ನ ತರನ್​ರರನ್​, ಫಜಿಲ್ಕಾ, ಲೂಧಿಯಾನ, ಮೊಹಾಲಿ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ವ್ಯಾಪಕ ದಾಳಿ ನಡೆಸಿತ್ತು. ಆ ಸಮಯದಲ್ಲಿ ರಾಜಸ್ಥಾನ ಮತ್ತು ದೆಹಲಿಯ ಭಾಗಗಳಲ್ಲಿಯೂ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಕ್ರಿಮಿನಲ್ ಚಟುವಟಿಕೆ, ಭಯೋತ್ಪಾದಕ ಜಾಲವನ್ನು ಮಟ್ಟಹಾಕಲು ಮತ್ತು ಶಸ್ತ್ರಾಸ್ತ್ರ ಪೂರೈಕೆದಾರರ ಮೇಲೆ ತೀವ್ರ ನಿಗಾ ಇಡಲಾಗುತ್ತಿದೆ.

ದಕ್ಷಿಣ ಭಾರತದಲ್ಲಿ ನಡೆದಿದ್ದ ದಾಳಿ: ಕೆಲ ದಿನಗಳ ಹಿಂದೆ ದಕ್ಷಿಣ ಭಾರತದ ತಮಿಳುನಾಡು, ಕರ್ನಾಟಕ, ಕೇರಳ, ತೆಲಂಗಾಣ ಸೇರಿದಂತೆ ವಿವಿಧ ಪ್ರದೇಶಗಳ ಮೇಲೆ ಎನ್​ಐಎ ದಾಳಿ ಮಾಡಿತ್ತು. ಕೇರಳಧ ಕೊಯಮತ್ತೂರು ಕಾರ್​ ಬಾಂಬ್​, ಕರ್ನಾಟಕದ ಮಂಗಳೂರಿನಲ್ಲಿ ಕುಕ್ಕರ್​ ಬಾಂಬ್​ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಮಿಂಚಿನ ದಾಳಿ ನಡೆಸಿತ್ತು.

2022 ರ ಅಕ್ಟೋಬರ್​ 23 ರಂದು ತಮಿಳುನಾಡಿನ ಕೊಯಮತ್ತೂರು, ನವೆಂಬರ್​ 19 ರಂದು ಕರ್ನಾಟಕದ ಮಂಗಳೂರಿನಲ್ಲಿ ಬಾಂಬ್​ ಸ್ಫೋಟ ಸಂಭವಿಸಿದ್ದವು. ಇವೆರಡೂ ಪ್ರಕರಣಗಳ ಹಿಂದೆ ಉಗ್ರರ ಕೈವಾಡ ಶಂಕೆಯ ಮೇಲೆ ಎನ್​ಐಎ ಈ ದಾಳಿ ನಡೆಸಿತ್ತು.

ತಮಿಳುನಾಡಿನ ಕೊಡುಂಗಯ್ಯೂರು ಮತ್ತು ಕೇರಳದ ಮನ್ನಾಡಿ ಸೇರಿದಂತೆ ಮೂರು ರಾಜ್ಯಗಳ ಸುಮಾರು 45 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿತ್ತು. ಕಳೆದ ವರ್ಷ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಕೊಟ್ಟೈ ಈಶ್ವರನ್ ದೇವಾಲಯದ ಮುಂಭಾಗದಲ್ಲಿ ಸ್ಫೋಟಕಗಳನ್ನು ತುಂಬಿದ ಕಾರಿನಲ್ಲಿ ಬಾಂಬ್ ಸ್ಫೋಟವಾಗಿತ್ತು. ಪ್ರಾಥಮಿಕ ತನಿಖೆಯಲ್ಲಿ 11 ಆರೋಪಿಗಳನ್ನು ಬಂಧಿಸಲಾಗಿದೆ.

ಓದಿ: ಬಾಂಬ್​ ಸ್ಫೋಟ ಪ್ರಕರಣ: ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಎನ್​ಐಎ ಮಿಂಚಿನ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.