ETV Bharat / bharat

ವಿಮಾನ ಪತನಕ್ಕೂ ಮುನ್ನ ಯುಪಿ ಯುವಕನಿಂದ ಫೇಸ್‌ಬುಕ್‌ ಲೈವ್‌: ಭಯಾನಕ ದೃಶ್ಯ ಸೆರೆ

author img

By

Published : Jan 16, 2023, 9:53 AM IST

Updated : Jan 16, 2023, 1:52 PM IST

Nepal plane crash
ನೇಪಾಳ ವಿಮಾನ ಪತನ

ನೇಪಾಳದ ಪೋಖರಾದಲ್ಲಿ ಯೇತಿ ಏರ್‌ಲೈನ್ಸ್ ವಿಮಾನ ಪತನಗೊಳ್ಳುವ ಕೆಲವೇ ನಿಮಿಷಗಳ ಮೊದಲು, ಉತ್ತರ ಪ್ರದೇಶದ ಗಾಜಿಪುರದ ನಿವಾಸಿಗಳು ವಿಮಾನದಲ್ಲಿ ತಮ್ಮ ಅನುಭವ ಹಂಚಿಕೊಳ್ಳಲು ಫೇಸ್‌ಬುಕ್‌ ಲೈವ್ ಮಾಡುತ್ತಿದ್ದರು.

ವಿಮಾನ ಪತನಕ್ಕೂ ಮುನ್ನ ಯುಪಿ ಯುವಕನಿಂದ ಫೇಸ್‌ಬುಕ್‌ ಲೈವ್‌

ಲಕ್ನೋ (ಉತ್ತರ ಪ್ರದೇಶ) : ಯೇತಿ ಏರ್‌ಲೈನ್ಸ್‌ಗೆ ಸೇರಿದ ಎಟಿಆರ್–72 ವಿಮಾನ ನೆಲಕ್ಕಪ್ಪಳಿಸುವ ಮುನ್ನ ಪ್ರಯಾಣಿಕರೊಬ್ಬರು ಫೇಸ್‌ಬುಕ್‌ ಲೈವ್‌ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಲವೇ ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಪ್ರಯಾಣಿಕರ ಚೀರಾಟ ಹಾಗೂ ಬೆಂಕಿಯ ಜ್ವಾಲೆಗಳನ್ನು ಕಾಣಬಹುದು. ಉತ್ತರ ಪ್ರದೇಶದ ಸೋನು ಜೈಸ್ವಾಲ್‌ ಎಂಬುವರು ಫೇಸ್‌ಬುಕ್‌ ಲೈವ್‌ ಆರಂಭಿಸಿದ್ದರಷ್ಟೇ. ಆಗ ವಿಮಾನ ಅಲ್ಲಾಡತೊಡಗಿದ ದೃಶ್ಯಗಳು ಲೈವ್‌ನಲ್ಲಿ ಗೋಚರಿಸಿವೆ. ಅಪಘಾತಕ್ಕೆ ಕೆಲವು ಸೆಕೆಂಡ್​​ಗಳ ಮೊದಲಿನ ವಿಡಿಯೋ ಇದು ಎನ್ನಲಾಗಿದೆ. ಫೇಸ್‌ಬುಕ್‌ನಲ್ಲಿನ 1.3 ನಿಮಿಷಗಳ ಲೈವ್ ವಿಡಿಯೋದಲ್ಲಿ, ಅವರಲ್ಲಿ ಒಬ್ಬರು "ಮೌಜ್ ಕರ್ ದಿ" (ಇದು ಮೋಜಿನ ಸಂಗತಿ) ಎಂದು ಕೂಗುವುದನ್ನು ನೋಡಬಹುದು.

ಐವರು ಭಾರತೀಯರು ಸಾವು: ಅವಘಡದಲ್ಲಿ ಮೃತಪಟ್ಟವರಲ್ಲಿ ಐವರು ಭಾರತೀಯರಿದ್ದು, ಈ ಪೈಕಿ ನಾಲ್ವರು ಪ್ಯಾರಾಗ್ಲೈಡಿಂಗ್‌ಗೆ ಪೊಖರಾಗೆ ಹೊರಟಿದ್ದರು ಎಂದು ಯೇತಿ ಏರ್‌ಲೈನ್ಸ್‌ನ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮೃತಪಟ್ಟ ಭಾರತೀಯರನ್ನು ಅಭಿಷೇಕ್ ಕುಶ್ವಾಹಾ (25), ವಿಶಾಲ್‌ ಶರ್ಮಾ (22), ಅನಿಲ್ ಕುಮಾರ್ ರಾಜ್ಬರ್ (27), ಸೋನು ಜೈಸ್ವಾಲ್‌ (35) ಮತ್ತು ಸಂಜಯ್‌ ಜೈಸ್ವಾಲ್‌ ಎಂದು ಗುರುತಿಸಲಾಗಿದೆ. ಇವರು ಪೋಖರಾಗೆ ಪ್ಯಾರಾಗ್ಲೈಡಿಂಗ್‌ ಮಾಡಲು ತೆರಳುತ್ತಿದ್ದರು. ಶುಕ್ರವಾರವಷ್ಟೇ ಕಾಠ್ಮಂಡುವಿಗೆ ಬಂದಿದ್ದರು. ಈ ಪೈಕಿ ಸೋನಿ ವಾರಾಣಸಿಯವರು. ಮೃತರ ಶವಗಳ ಗುರುತು ಪತ್ತೆಯ ಯತ್ನ ನಡೆದಿದ್ದು, ಭಾರತದಲ್ಲಿನ ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲು ಇಲ್ಲಿನ ಭಾರತೀಯ ರಾಯಭಾರ ಕಚೇರಿ ಯತ್ನಿಸುತ್ತಿದೆ ಎಂದು ತಿಳಿದು ಬಂದಿದೆ.

  • " class="align-text-top noRightClick twitterSection" data="">

ಭೀಕರ ವಾಯು ದುರಂತ: 72 ಜನರಿದ್ದ ನೇಪಾಳದ ಯೇತಿ ಏರ್‌ಲೈನ್ಸ್‌ಗೆ ಸೇರಿದ ವಿಮಾನ ನೇಪಾಳದ ಪೋಖರಾ ವಿಮಾನ ನಿಲ್ದಾಣದ ಬಳಿ ನಿನ್ನೆ ಭೀಕರ ಅಪಘಾತಕ್ಕೆ ತುತ್ತಾಗಿತ್ತು. ದುರ್ಘಟನೆಯಲ್ಲಿ ವಿಮಾನದಲ್ಲಿದ್ದ 68 ಪ್ರಯಾಣಿಕರು, ನಾಲ್ವರು ಸಿಬ್ಬಂದಿ ಸೇರಿ ಎಲ್ಲಾ 72 ಜನರು ಸಾವನ್ನಪ್ಪಿದ್ದಾರೆ. ಭಾನುವಾರ ತಡರಾತ್ರಿವರೆಗೆ 69 ಶವಗಳನ್ನು ಪತ್ತೆ ಮಾಡಲಾಗಿದ್ದು, ಇನ್ನುಳಿದ ದೇಹಗಳಿಗೆ ಶೋಧ ನಡೆದಿದೆ. ಅಪಘಾತಕ್ಕೆ ತುತ್ತಾದ ವಿಮಾನದಲ್ಲಿ 5 ಭಾರತೀಯರು ಸೇರಿದಂತೆ 10 ವಿದೇಶಿ ಪ್ರಯಾಣಿಕರು ಕೂಡ ಇದ್ದರು. ಈ 10 ಜನರಲ್ಲಿ ಇಬ್ಬರು ಮಕ್ಕಳಿದ್ದರು ಎನ್ನಲಾಗಿದೆ. ತಾಂತ್ರಿಕ ದೋಷದಿಂದ ಹೀಗಾಗಿರಬಹುದು ಎಂಬ ಗುಮಾನಿಯಿದೆ. ತನಿಖೆಗೆ ನೇಪಾಳ ಸರ್ಕಾರ 5 ಜನರ ತಂಡ ರಚಿಸಿದೆ. ಇದು ನೇಪಾಳ ಕಳೆದ 30 ವರ್ಷದಲ್ಲಿ ಕಂಡ ಅತಿ ಭೀಕರ ವಾಯು ದುರಂತ ಎಂದು ಹೇಳಲಾಗಿದೆ.

300 ಅಡಿ ಕಂದಕದಲ್ಲಿ ಅವಶೇಷ: ನತದೃಷ್ಟ ವಿಮಾನ ಭಾನುವಾರ ಬೆಳಗ್ಗೆ 10.33ಕ್ಕೆ ರಾಜಧಾನಿ ಕಾಠ್ಮಂಡುವಿನ ತ್ರಿಭುವನ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಮುಖ ಪ್ರವಾಸಿ ತಾಣವಾದ ಪೋಖರಾಗೆ ಹೊರಟಿತ್ತು. ಬೆಳಗ್ಗೆ 11 ಗಂಟೆಗೆ ವಿಮಾನ ಇನ್ನೇನು ರನ್‌ವೇನತ್ತ ಇಳಿಯಲು ಸಜ್ಜಾಗುತ್ತಿದೆ ಎನ್ನುವ ಹಂತದಲ್ಲಿ, ಇದ್ದಕ್ಕಿದ್ದಂತೆ ವಿಚಿತ್ರ ರೀತಿಯಲ್ಲಿ ಮಗುಚಿಕೊಂಡು ವಿಮಾನ ನಿಲ್ದಾಣದ ಸಮೀಪದಲ್ಲೇ ಇರುವ ಸೇತಿ ನದಿಯ ಸಮೀಪ ಪತನಗೊಂಡಿತು. ವಿಮಾನದ ಅರ್ಧ ಭಾಗ ನದಿ ಸಮೀಪದ ಸುಮಾರು 300 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಲ್ಯಾಂಡಿಂಗ್‌ಗೆ ಕೇವಲ 10-20 ಸೆಕೆಂಡ್‌ ಇದ್ದಾಗ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ನೇಪಾಳ ವಿಮಾನ ಪತನ: ಐವರು ಭಾರತೀಯರು ಸೇರಿ 72 ಪ್ರಯಾಣಿಕರ ಸಾವು

Last Updated :Jan 16, 2023, 1:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.