ETV Bharat / international

ನೇಪಾಳ ವಿಮಾನ ಪತನ: ಐವರು ಭಾರತೀಯರು ಸೇರಿ 72 ಪ್ರಯಾಣಿಕರ ಸಾವು

author img

By

Published : Jan 15, 2023, 12:03 PM IST

Updated : Jan 16, 2023, 7:22 AM IST

ಪತನಗೊಂಡ ನೇಪಾಳ ವಿಮಾನದಲ್ಲಿ ಒಟ್ಟು 68 ಪ್ರಯಾಣಿಕರು ಹಾಗೂ ನಾಲ್ಕು ಮಂದಿ ಸಿಬ್ಬಂದಿ ಇದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

Rescue operation at Nepal plane crash site
ನೇಪಾಳ ವಿಮಾನ ಪತನವಾದ ಜಾಗದಲ್ಲಿ ರಕ್ಷಣಾ ಕಾರ್ಯಾಚರಣೆ

ನೇಪಾಳದಲ್ಲಿ ವಿಮಾನ ಪತನ

ಕಠ್ಮಂಡು(ನೇಪಾಳ): 10 ವಿದೇಶಿಗರು ಸೇರಿದಂತೆ 72 ಜನರಿದ್ದ ನೇಪಾಳದ ಪ್ರಯಾಣಿಕ ವಿಮಾನವು ಭಾನುವಾರ ಪೋಖರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್​ ಆಗುವ ವೇಳೆ ನದಿಯ ದಡದಲ್ಲಿ ಪತನಗೊಂಡಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದ್ದು, 68 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 72 ಮಂದಿ ಕೂಡ ಸಾವನ್ನಪ್ಪಿದ್ದಾರೆ ಎಂದು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 10 ವಿದೇಶಿ ಪ್ರಯಾಣಿಕರಲ್ಲಿ 5 ಮಂದಿ ಭಾರತೀಯರಾಗಿದ್ದರು.

ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರ (CAAN) ಪ್ರಕಾರ, ಯೇತಿ ಏರ್‌ಲೈನ್ಸ್‌ನ 9N-ANC ATR-72 ವಿಮಾನವು ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 10.33 ಕ್ಕೆ ಟೇಕಾಫ್ ಆಗಿದೆ. ಪೋಖರಾ ಹಿಮಾಲಯ ಭಾಗದ ಪ್ರಮುಖ ಪ್ರವಾಸಿ ತಾಣವಾಗಿದೆ. ಪೋಖರಾ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ, ಹಳೆಯ ವಿಮಾನ ನಿಲ್ದಾಣ ಮತ್ತು ಹೊಸ ವಿಮಾನ ನಿಲ್ದಾಣದ ನಡುವಿನ ಸೇಟಿ ನದಿಯ ದಡದಲ್ಲಿ ವಿಮಾನ ಪತನಗೊಂಡಿದೆ. ಒಟ್ಟು 68 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ವಿಮಾನದಲ್ಲಿದ್ದರು ಎಂದು ಯೇತಿ ಏರ್‌ಲೈನ್ಸ್ ವಕ್ತಾರ ಸುದರ್ಶನ್ ಬರ್ತೌಲಾ ಹೇಳಿದ್ದಾರೆ.

  • #WATCH | A passenger aircraft crashed at Pokhara International Airport in Nepal today. 68 passengers and four crew members were onboard at the time of crash. Details awaited. pic.twitter.com/DBDbTtTxNc

    — ANI (@ANI) January 15, 2023 " class="align-text-top noRightClick twitterSection" data=" ">

ಘಟನಾ ಸ್ಥಳಕ್ಕೆ ನೇಪಾಳ ಪ್ರಧಾನಿ ಭೇಟಿ: ವಿಮಾನ ಪತನವಾದ ಸ್ಥಳಕ್ಕೆ ನೇಪಾಳ ಪ್ರಧಾನಿ ಪುಷ್ಪ ಕಮಲ್ ದಹಾಲ್ ಅಲಿಯಾಸ್​ ಪ್ರಚಂಡ ಭೇಟಿ ನೀಡಿದ್ದಾರೆ. ಇದಕ್ಕೂ ಮುನ್ನ ಪ್ರಚಂಡ ಅವರು ಸಚಿವ ಸಂಪುಟದ ತುರ್ತು ಸಭೆ ನಡೆಸಿದರು. ಅಪಘಾತಕ್ಕೆ ಕಾರಣಗಳ ಬಗ್ಗೆ ತನಿಖೆ ನಡೆಸಲು ಐವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಈ ದುರಂತ ಹಿನ್ನೆಲೆಯಲ್ಲಿ ನೇಪಾಳ ಸರ್ಕಾರ ಸೋಮವಾರ ಒಂದು ದಿನದ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದೆ.

27 ವರ್ಷಗಳಲ್ಲಿ 27 ವಿಮಾನ ದುರಂತಗಳು: ಕಳೆದ ವರ್ಷ ಮೇ 30ರಂದು ತಾರಾ ಏರ್​ಜೆಟ್​ ನಾಪತ್ತೆಯಾಗಿ, ತಡವಾಗಿ ಬೆಟ್ಟದ ಮೇಲೆ ಪತನಗೊಂಡು ಪತ್ತೆಯಾಗಿತ್ತು. ಈ ಏರ್​ಜೆಟ್​ನಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ 22 ಮಂದಿಯ ಶವಗಳನ್ನು ಧ್ವಂಸಗೊಂಡಿದ್ದ ಏರ್​ಜೆಟ್​ನಿಂದ ಹೊರತೆಗೆಯಲಾಗಿತ್ತು. ಈ ಘಟನೆ ಮಾಸುವ ಮುನ್ನುವೇ ಇದೀಗ ಇಂದು ಮತ್ತೊಂದು ವಿಮಾನ ಪತನ ದುರಂತ ನಡೆದಿದೆ. ಇದೊಂದೇ ಅಲ್ಲ ಈ ಹಿಂದೆಯೂ ನೇಪಾಳದಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಸೇರಿ ಹಲವಾರು ವಿಮಾನ ದುರಂತಗಳು ಸಂಭವಿಸಿವೆ. ಇಂದು ಮಧ್ಯಾಹ್ನ ನಡೆದ ಯೇತಿ ಏರ್​ಲೈನ್ಸ್​ನ ವಿಮಾನ ಪತನ ಹಿಂದಿನ ಭೀಕರ ವಿಮಾನ ದುರಂತಗಳನ್ನು ಮತ್ತೆ ನೆನಪಿಸಿದೆ. ದಾಖಲೆಗಳ ಪ್ರಕಾರ ನೇಪಾಳದಲ್ಲಿ ಕಳೆದ 27 ವರ್ಷಗಳಲ್ಲಿ ಸುಮಾರು 27 ವಿಮಾನ ಪತನದಂತಹ ದುರಂತಗಳು ಸಂಭವಿಸಿವೆ.

ರಾಯಲ್ ನೇಪಾಲ್ ಏರ್‌ಲೈನ್ಸ್ ವಿಮಾನ ಅಪಘಾತ: 1962, ಆಗಸ್ಟ್ 1ರಂದು, ಆಗಿನ ರಾಯಲ್ ನೇಪಾಲ್ ಏರ್‌ಲೈನ್ಸ್ ನಿರ್ವಹಿಸುತ್ತಿದ್ದ ಡಗ್ಲಾಸ್ ಡಿಸಿ -3 ವಿಮಾನ ಗೌಚರ್ ವಿಮಾನ ನಿಲ್ದಾಣದಿಂದ ಪಾಲಂ(ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ವೇಳೆ ನೇಪಾಳದಲ್ಲಿ ಅಪಘಾತಕ್ಕೀಡಾಯಿತು. ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ 10 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಸಾವನ್ನಪ್ಪಿದ್ದರು.

ಥಾಯ್ ಏರ್‌ವೇಸ್ ವಿಮಾನ ಅಪಘಾತ: 1992, ಜುಲೈ 31ರಂದು ಥಾಯ್ ಏರ್‌ವೇಸ್ ಇಂಟರ್‌ನ್ಯಾಶನಲ್ ಫ್ಲೈಟ್ 311 ಥೈಲ್ಯಾಂಡ್‌ನ ಡಾನ್ ಮುಯಾಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪಿಸುತ್ತಿರುವಾಗ ಪತನಗೊಂಡಿತ್ತು. ವಿಮಾನದಲ್ಲಿದ್ದ ಎಲ್ಲಾ 99 ಪ್ರಯಾಣಿಕರು ಮತ್ತು 14 ಸಿಬ್ಬಂದಿ ಸಾವನ್ನಪ್ಪಿದ್ದರು.

ಪಾಕ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ ಅಪಘಾತ: ಇದಾದ ಎರಡು ತಿಂಗಳಲ್ಲೇ ಅಂದರೆ ಸೆ. 28ರಂದು ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಮೀಪಿಸುತ್ತಿರುವಾಗ ಅಪಘಾತಕ್ಕೀಡಾಗಿತ್ತು. ಅದರಲ್ಲಿದ್ದ ಎಲ್ಲಾ 155 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಮರಣ ಹೊಂದಿದ್ದರು. ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್‌ನ ಇತಿಹಾಸದಲ್ಲಿ ಇದು ಅತ್ಯಂತ ಭೀಕರ ವಿಮಾನ ಅಪಘಾತಗಳಲ್ಲಿ ಒಂದು ಹೇಳಲಾಗುತ್ತದೆ.

ರಾಯಲ್ ನೇಪಾಲ್ ಏರ್‌ಲೈನ್ಸ್ ಟ್ವಿನ್ ಓಟರ್ ಅಪಘಾತ: 2000, ಜುಲೈ 27ರಂದು, ರಾಯಲ್ ನೇಪಾಲ್ ಏರ್‌ಲೈನ್ಸ್ ಡಿ ಹ್ಯಾವಿಲ್ಯಾಂಡ್ ಕೆನಡಾ DHC-6 ಟ್ವಿನ್ ಓಟರ್, ಬಜಾಂಗ್ ವಿಮಾನ ನಿಲ್ದಾಣದಿಂದ ಧಂಗಧಿ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ಪತನಗೊಂಡಿತ್ತು. ಇದರಲ್ಲಿ ಎಲ್ಲಾ 25 ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದರು. ದಡೆಲ್‌ಧುರಾದ ಜೋಗ್‌ಬುಡಾದ ಶಿವಲಿಕ್ ಬೆಟ್ಟಗಳ 4,300 ಅಡಿ ಎತ್ತರದ ಜರಯಾಖಾಲಿ ಬೆಟ್ಟದ ಮೇಲೆ ವಿಮಾನ ಮರಗಳಿಗೆ ಅಪ್ಪಳಿಸಿ, ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

ಯೇತಿ ಏರ್‌ಲೈನ್ಸ್ ಅಪಘಾತ: 2008 ಅಕ್ಟೋಬರ್​ನಲ್ಲಿ, ಯೇತಿ ಏರ್‌ಲೈನ್ಸ್ ಏರ್‌ಲೈನರ್ 103- ದೇಶೀಯ ನೇಪಾಳಿ ವಿಮಾನ ಪತಗೊಂಡು, ಕನಿಷ್ಠ 14 ಜನರು ಸಾವನ್ನಪ್ಪಿದ್ದರು.

ಅಗ್ನಿ ಏರ್ ಕ್ರ್ಯಾಶ್: 2010 ಅಕ್ಟೋಬರ್​ನಲ್ಲಿ, ಕಠ್ಮಂಡುವಿನಿಂದ ನೇಪಾಳದ ಲುಕ್ಲಾಗೆ ಸಂಚರಿಸುತ್ತಿದ್ದ ಅಗ್ನಿ ವಿಮಾನ ಪತನಗೊಂಡು ವಿಮಾನದಲ್ಲಿದ್ದ ಎಲ್ಲಾ 14 ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದರು.

ಬುದ್ಧ ಏರ್ ಫ್ಲೈಟ್ ಕ್ರ್ಯಾಶ್: 2011 ಸೆಪ್ಟೆಂಬರ್​ 25ರಂದು ಬೀಚ್‌ಕ್ರಾಫ್ಟ್ 1900 ಡಿ ಪ್ರಯಾಣಿಕ ವಿಮಾನವಾದ ಬುದ್ಧ ಏರ್ ಫ್ಲೈಟ್ 103 ನೇಪಾಳದ ಲಲಿತ್‌ಪುರದಲ್ಲಿ ಹತ್ತಿರದ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಹವಾಮಾನ ಸಮಸ್ಯೆಯಿಂದಾಗಿ ಲ್ಯಾಂಡಿಂಗ್​ ವೇಳೆ ಪತನಗೊಂಡಿತ್ತು. ವಿಮಾನದಲ್ಲಿದ್ದ ಎಲ್ಲಾ 19 ಪ್ರಯಾಣಿಕರು ಮತ್ತು ಸಿಬ್ಬಂದಿ ಕೊನೆಯುಸಿರೆಳೆದಿದ್ದರು.

ಸೀತಾ ಏರ್ ಕ್ರ್ಯಾಶ್: 2012ರ ಸೆಪ್ಟೆಂಬರ್​ನಲ್ಲಿ, ಸೀತಾ ಏರ್ ಫ್ಲೈಟ್ 601 (ST601), ನೇಪಾಳಿ ದೇಶಿ ಪ್ರಯಾಣಿಕ ವಿಮಾನ ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲುಕ್ಲಾದಲ್ಲಿನ ತೇನ್ಸಿಂಗ್-ಹಿಲರಿ ವಿಮಾನ ನಿಲ್ದಾಣಕ್ಕೆ ಸಾಗುವ ವೇಳೆ ಅಪಘಾತಕ್ಕೀಡಾಗಿ ವಿಮಾನದಲ್ಲಿದ್ದ ಎಲ್ಲಾ 19 ಪ್ರಯಾಣಿಕರು ಸಾವನ್ನಪ್ಪಿದ್ದರು.

ಯುಎಸ್-ಬಾಂಗ್ಲಾ ವಿಮಾನ ಅಪಘಾತ: 2018ರ ಮಾರ್ಚ್​ನಲ್ಲಿ, ಬಾಂಗ್ಲಾದೇಶದ ಢಾಕಾದಿಂದ ಬಂದಿದ್ದ ಯುಎಸ್-ಬಾಂಗ್ಲಾ ಏರ್ಲೈನ್ಸ್ ಫ್ಲೈಟ್ 211 ಕಠ್ಮಂಡುವಿನಲ್ಲಿ ಲ್ಯಾಂಡಿಂಗ್​ ಆಗುವ ವೇಳೆ ಪತನಗೊಂಡಿತ್ತು. ವಿಮಾನದಲ್ಲಿದ್ದ 71 ಪ್ರಯಾಣಿಕರಲ್ಲಿ 51 ಮಂದಿ ಸಾವನ್ನಪ್ಪಿದ್ದರು.

ಇದನ್ನೂ ಓದಿ: ಮಧ್ಯ ಕೊಲಂಬಿಯಾದಲ್ಲಿ ವಿಮಾನ ಪತನ: 8 ಮಂದಿ ದುರ್ಮರಣ

Last Updated : Jan 16, 2023, 7:22 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.