ETV Bharat / bharat

NCP ವಿಭಜನೆ ಬಳಿಕ ಶರದ್ ಪವಾರ್ ಮೊದಲ ಹುಟ್ಟುಹಬ್ಬ: ಆಚರಣೆ ಬೇಡ ಎಂದ ಪವಾರ್​!

author img

By ETV Bharat Karnataka Team

Published : Dec 12, 2023, 4:38 PM IST

ಎನ್​​ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಇಂದು 83ನೇ ವಸಂತಕ್ಕೆ ಕಾಲಿರಿಸಿದ್ದು, ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿದಂತೆ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

Etv Bharatncp-chief-sharad-pawar-decided-to-not-celebrating-his-83th-birthday
Etv BharatNCP ವಿಭಜನೆಯ ನಂತರ ಶರದ್ ಪವಾರ್ ಅವರ ಮೊದಲ ಹುಟ್ಟುಹಬ್ಬ: ಆಚರಣೆ ಬೇಡೆ ಎಂದ ಪವಾರ್​!

ಪುಣೆ(ಮಹಾರಾಷ್ಟ್ರ): ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ ) ಮುಖ್ಯಸ್ಥ ಶರದ್ ಪವಾರ್ ಅವರು ಇಂದು 83ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಆದರೆ, ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ. ಈ ಕುರಿತು ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಹುಟ್ಟುಹಬ್ಬ ಆಚರಿಸಿದಂತೆ ಮನವಿ ಮಾಡಿದ್ದಾರೆ. ಮತ್ತೊಂದೆಡೆ, ಎನ್​ಸಿಪಿ ವಿಭಜನೆಯಾದ ಬಳಿಕ ಅವರ ಮೊದಲ ಹುಟ್ಟುಹಬ್ಬ ಇದಾಗಿದ್ದು, ಅಜಿತ್ ಪವಾರ್ ಇಂದು ಶರದ್ ಪವಾರ್ ಅವರನ್ನು ಭೇಟಿಯಾಗುತ್ತಾರಾ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಶರದ್ ಪವಾರ್ ಅವರು 12 ಡಿಸೆಂಬರ್ 1940 ರಂದು ಜನಿಸಿದ್ದರು. ಪ್ರತಿ ವರ್ಷ ಎನ್‌ಸಿಪಿ ಕಾರ್ಯಕರ್ತರು ಶರದ್ ಪವಾರ್ ಅವರ ಜನ್ಮದಿನವನ್ನು ಡಿಸೆಂಬರ್ 12 ರಂದು ರಾಜ್ಯಾದ್ಯಂತ ವಿವಿಧ ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಆಚರಿಸುತ್ತಿದ್ದರು. ಆದರೆ, ರಾಜ್ಯದಲ್ಲಿ ಈ ವರ್ಷ ಸುರಿದ ಅಕಾಲಿಕ ಮಳೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಶರದ್ ಪವಾರ್ ಅವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. ಹುಟ್ಟುಹಬ್ಬದ ಶುಭಾಶಯ ಕೋರಿದ ಯಾವುದೇ ಬ್ಯಾನರ್ ಅಳವಡಿಸದಂತೆ ಸ್ವತಃ ಶರದ್ ಪವಾರ್ ಅವರು ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.

ನಾಲ್ಕು ಬಾರಿ ಸಿಎಂ, ಎರಡು ಬಾರಿ ಕೇಂದ್ರ ಸಚಿವ: ಎನ್​ಸಿಪಿ ಸಂಸ್ಥಾಪಕ ಅಧ್ಯಕ್ಷ ಶರದ್ ಪವಾರ್ ಅವರು ಸುದೀರ್ಘ ರಾಜಕೀಯ ಇತಿಹಾಸವನ್ನು ಹೊಂದಿದ್ದಾರೆ. ಶರದ್ ಪವಾರ್ ನಾಲ್ಕು ಅವಧಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು. ಜೊತೆಗೆ ಅವರು ಪಿ.ವಿ.ನರಸಿಂಹ ರಾವ್ ಅವರ ಸಂಪುಟದಲ್ಲಿ ರಕ್ಷಣಾ ಖಾತೆ ಮತ್ತು ಮನಮೋಹನ್ ಸಿಂಗ್ ಸಂಪುಟದಲ್ಲಿ ಕೃಷಿ ಖಾತೆ ನಿಭಾಯಿಸಿದ್ದಾರೆ. ಶರದ್ ಪವಾರ್ ಅವರು ಕಾಂಗ್ರೆಸ್ ಪಕ್ಷವನ್ನು ತೊರೆದು 1999 ರಲ್ಲಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿದ್ದರು. ಹಲವು ರಾಜಕೀಯ ಬೆಳವಣಿಗೆಗಳಿಂದ ಅವರು ಪ್ರಸ್ತುತ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಅಧ್ಯಕ್ಷರಾಗಿ ಮುಂದುವರೆಯುತ್ತಿದ್ದಾರೆ. ಅವರ ನಾಯಕತ್ವದಲ್ಲಿ ಈ ಹಿಂದೆ ಶಿವಸೇನೆ, ಕಾಂಗ್ರೆಸ್ ಮತ್ತು ಎನ್​ಸಿಪಿ ರಾಜ್ಯದಲ್ಲಿ ಸರ್ಕಾರ ರಚಿಸಿದ್ದವು.

ರಾಜಕೀಯ ಚಾಣಕ್ಯ ಪವಾರ್​: ಶರದ್ ಪವಾರ್ ಅವರು ರಾಜಕೀಯದಲ್ಲಿ 'ಚಾಣಕ್ಯ' ಎಂದೇ ಖ್ಯಾತರಾಗಿದ್ದಾರೆ. ಶರದ್ ಪವಾರ್ ಅವರ ರಾಜಕೀಯ ಇನ್ನೂ ಯಾರಿಗೂ ಅರ್ಥವಾಗಿಲ್ಲ ಎಂದು ರಾಜಕೀಯ ವಲಯದಲ್ಲಿ ಮಾತನಾಡಿಕೊಳ್ಳುತ್ತಾರೆ. ಶರದ್ ಪವಾರ್ ಅವರು ರಾಜಕೀಯ ಹೊರತಾಗಿ 2005 ರಿಂದ 2008 ರವರೆಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಅವರು 2010 ರಿಂದ 2012 ರವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ: ಪ್ರಧಾನಿ ವಿರುದ್ಧ ಆಕ್ಷೇಪಾರ್ಹ ಲೇಖನ ಆರೋಪ: ಶಿವಸೇನೆ ಸಂಸದ ಸಂಜಯ್ ರಾವತ್ ವಿರುದ್ಧ ಪ್ರಕರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.