ETV Bharat / bharat

ಬಿಲ್ಲು ಮುರಿದಿದ್ದರಿಂದ ಕಮರಿದ ಕನಸು: ಸಾಲ ತೀರಿಸಲು ಚಹಾ ಮಾರುತ್ತಿರುವ ರಾಷ್ಟ್ರೀಯ ಆರ್ಚರಿ ಪಟು

author img

By

Published : Jan 7, 2023, 9:34 PM IST

ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದ ಜಾರ್ಖಂಡ್​​ನ ಆರ್ಚರಿ ಪಟು ದೀಪ್ತಿ ಕುಮಾರಿ ಈಗ ರಾಂಚಿಯಲ್ಲಿ ಟೀ ಸ್ಟಾಲ್ ನಡೆಸುತ್ತಿದ್ದಾರೆ. 4.5 ಲಕ್ಷ ರೂಪಾಯಿ ಮೌಲ್ಯದ ಬಿಲ್ಲು ಮುರಿದ ನಂತರ ಆಕೆಯ ಕನಸು ಕಮರಿ ಹೋಗಿದ್ದು, ಸಾಲ ತೀರಿಸಲು ಚಹಾ ಮಾರುವ ಪರಿಸ್ಥಿತಿ ನಿರ್ಮಾಣವಾಗಿದೆ.

national-archer-deepti-kumari-facing-financial-crisis-in-lohardaga
ಬಿಲ್ಲು ಮುರಿದಿದ್ದರಿಂದ ಕಮರಿದ ಕನಸು: ಸಾಲ ತೀರಿಸಲು ಚಹಾ ಮಾರುತ್ತಿರುವ ರಾಷ್ಟ್ರೀಯ ಆರ್ಚರಿ ಪಟು

ಲೋಹರ್ದಗಾ (ಜಾರ್ಖಂಡ್​): ಪ್ರತಿಭೆ ಯಾರಪ್ಪನ ಸೊತ್ತಲ್ಲ ಎಂಬ ಮಾತಿದೆ. ಆದರೆ, ಪ್ರತಿಭೆ ಹೊಂದಿದ್ದರೂ ಪರಿಸ್ಥಿತಿಯು ಸಂಕಷ್ಟಕ್ಕೆ ದೂಡುವಂತೆ ಮಾಡುತ್ತದೆ. ಇಂತಹದ್ದೇ ಕಠಿಣ ಪರಿಸ್ಥಿತಿಯನ್ನು ಜಾರ್ಖಂಡ್​​ನ ರಾಷ್ಟ್ರೀಯ ಬಿಲ್ಲುಗಾರ್ತಿ ದೀಪ್ತಿ ಕುಮಾರಿ ಎದುರಿಸುತ್ತಿದ್ದಾರೆ. ದೀಪ್ತಿ ಪ್ರತಿಭಾವಂತೆ ಆಗಿದ್ದರೂ ಆರ್ಥಿಕ ಬಿಕ್ಕಟ್ಟು ಆಕೆಯ ಇಡೀ ಕುಟುಂಬವನ್ನು ಆವರಿಸಿದೆ. ಇದೇ ಕಾರಣದಿಂದಾಗಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದ ಆರ್ಚರಿ ಪಟು ಈಗ ರಾಂಚಿಯಲ್ಲಿ ಚಹಾ ಮಾರಾಟ ಮಾಡುತ್ತಿದ್ದಾರೆ.

ತಂದೆ ಮತ್ತು ತಾಯಿಯೊಂದಿಗೆ ದೀಪ್ತಿ ಕುಮಾರಿ
ತಂದೆ ಮತ್ತು ತಾಯಿಯೊಂದಿಗೆ ದೀಪ್ತಿ ಕುಮಾರಿ

ಲೋಹರ್ಡಗಾ ಜಿಲ್ಲೆಯ ರಾಜಾ ಬಂಗ್ಲಾ ಗ್ರಾಮದ ನಿವಾಸಿ ಬಜರಂಗ ಪ್ರಜಾಪತಿ ಅವರ ಪುತ್ರಿಯಾಗಿರುವ ದೀಪ್ತಿ ಕುಮಾರಿ ಅವರದ್ದು ಬಡ ಕುಟುಂಬ. ತಂದೆ ರೈತರಾಗಿದ್ದು, ಕಷ್ಟಪಟ್ಟು ಮನೆ ನಡೆಸುತ್ತಿದ್ದರೂ ಮಗಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದಾರೆ. ಬಿಲ್ಲುಗಾರಿಕೆಯಲ್ಲಿನ ಮಗಳ ಕೈಚಳಕವನ್ನು ಮನಗಂಡಿದ್ದ ತಂದೆ ಪ್ರಜಾಪತಿ, ಬಡತನದಲ್ಲೂ ದೀಪ್ತಿಯನ್ನು ಸೆರೈಕೆಲಾ ಖಾರ್ಸಾವನ್ ತರಬೇತಿ ಕೇಂದ್ರಕ್ಕೆ ಕಳುಹಿಸಿದ್ದರು. ಇದಕ್ಕೆ ಅವರು ಸಾಲದ ಹೊರೆಯನ್ನೂ ಹೊತ್ತಿಕೊಂಡಿದ್ದರು. ಇತ್ತ, ತಂದೆಯ ಕಣ್ಣಲ್ಲಿ ಕಂಡ ಕನಸನ್ನು ದೀಪ್ತಿ ತನ್ನ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಭಾವದಿಂದ ನನಸಾಗಿಸಲು ಪ್ರಯತ್ನಿಸಿದ್ದರು.

ಸೆರೈಕೆಲಾ ಖಾರ್ಸಾವನ್ ತರಬೇತಿ ಕೇಂದ್ರದಲ್ಲಿದ್ದ ದೀಪ್ತಿ ಕುಮಾರಿ, ಪ್ರಸ್ತುತ ಅಂತಾರಾಷ್ಟ್ರೀಯ ಬಿಲ್ಲುಗಾರಿಕೆ ಆಟಗಾರ್ತಿ ದೀಪಿಕಾ ಕುಮಾರಿ ಅವರನ್ನು ಭೇಟಿಯಾಗಿ, ಅವರಿಂದಲೂ ಪ್ರಭಾವಿತರಾಗಿದ್ದರು. ತಮ್ಮ ಕೌಶಲ್ಯವನ್ನು ಚುರುಕುಗೊಳಿಸುವ ಮೂಲಕ ತಾನು ಕೂಡ ಬಿಲ್ಲುಗಾರಿಕೆ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನವನ್ನು ಸಾಧಿಸಬೇಕೆಂದು ನಿರ್ಧರಿಸಿದ್ದರು. ಇದಕ್ಕಾಗಿ ದೀಪ್ತಿ ಅನೇಕ ರಾಷ್ಟ್ರೀಯ ಮತ್ತು ರಾಜ್ಯ ಚಾಂಪಿಯನ್‌ಶಿಪ್‌ಗಳಲ್ಲಿ ದೀಪ್ತಿ ಪಾಲ್ಗೊಂಡು ಮಿಂಚಲು ತೊಡಗಿದ್ದರು.

ಬಿಲ್ಲು ಮುರಿದಿದ್ದರಿಂದ ಕಮರಿದ ಕನಸು: ಆದರೆ, ಒಂದು ದಿನ ದೀಪ್ತಿ ಕೋಲ್ಕತ್ತಾದ ಟ್ರಯಲ್ ಸೆಂಟರ್‌ನಿಂದ ನಿರಾಶೆಗೊಂಡು ಮನೆಗೆ ಹಿಂತಿರುಗಬೇಕಾಯಿತು. ಹೌದು, 2013ರಲ್ಲಿ ಕೋಲ್ಕತ್ತಾದಲ್ಲಿ ವಿಶ್ವಕಪ್‌ನ ಟ್ರಯಲ್ ನಡೆಯುತ್ತಿತ್ತು. ಅಲ್ಲಿಗೆ ದೀಪ್ತಿ ಕುಮಾರಿ ಕೂಡ ಭಾಗವಹಿಸಲು ಹೋಗಿದ್ದರು. ಈ ಟ್ರಯಲ್‌ನಲ್ಲಿ ಆಯ್ಕೆಯಾದರೆ ಮುಂದೆ ಆಡುವ ಅವರ ಕನಸು ನನಸಾಗುತ್ತಿತ್ತು. ಆದರೆ, ಅಷ್ಟರಲ್ಲಿ ಈ ಕೇಂದ್ರದಲ್ಲಿದ್ದವರೊಬ್ಬರು 4.5 ಲಕ್ಷ ರೂಪಾಯಿ ಮೌಲ್ಯದ ಬಿಲ್ಲು ಮುರಿದಿದ್ದರು.

ಈ ಬಿಲ್ಲು ಮುರಿಯುವುದರೊಂದಿಗೆ ದೀಪ್ತಿಯ ಕನಸುಗಳಿಗೆ ಗ್ರಹಣ ಹಿಡಿದಂತಾಯಿತು. ಕೋಲ್ಕತ್ತಾದಿಂದ ದೀಪ್ತಿ ನಿರಾಸೆಯಿಂದ ಮರಳಬೇಕಾಯಿತು. ಸಾಕಷ್ಟು ಪ್ರಯತ್ನಗಳ ನಂತರವೂ ಅವರಿಗೆ ಮತ್ತೊಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಆಟವಾಡುವ ಸಂದರ್ಭ ಕೂಡಿ ಬರಲೇ ಇಲ್ಲ. ಈ ಸಮಯದಲ್ಲಿ ಯಾರೂ ಕೂಡ ದೀಪ್ತಿ ನೆರವಿಗೆ ಬರಲಿಲ್ಲ. ಹೀಗೆ ಬಿಲ್ಲು ಮುರಿಯುವುದರೊಂದಿಗೆ ದೇಶಕ್ಕೆ ಪದಕ ಗೆಲ್ಲುವ ದೀಪ್ತಿಯ ಕನಸು ಕಮರಿ ಹೋಗಿದೆ.

ಸಾಲ ತೀರಿಸಲು ಚಹಾ ಮಾರುವ ಪರಿಸ್ಥಿತಿ: ದೀಪ್ತಿ ಕುಮಾರಿಗೆ ತನ್ನ ಬಡತನದ ಮಧ್ಯೆ ಲಕ್ಷಾಂತರ ರೂಪಾಯಿ ಮೌಲ್ಯದ ಬಿಲ್ಲು ಮುರಿದ್ದರಿಂದ ಈ ಆಘಾತದಿಂದ ಎಂದಿಗೂ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬಿಲ್ಲು ಖರೀದಿಸಲು ಪಡೆದ ಸಾಲವನ್ನು ಮರು ಪಾವತಿಸಲು ದೀಪ್ತಿ ಸ್ವತಃ ರಾಂಚಿಯ ಅರ್ಗೋರಾದಲ್ಲಿ ಚಹಾ ಮಾರುತ್ತಿದ್ದಾರೆ. ರಾಷ್ಟ್ರೀಯ ಮತ್ತು ರಾಜ್ಯ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದಿರುವ ದೀಪ್ತಿ ಇಂದು ಅಂಗಡಿ ಇಟ್ಟುಕೊಂಡು ಟೀ ಸ್ಟಾಲ್ ನಡೆಸುವಂತೆ ಆಗಿದೆ.

ಇತ್ತ, ದೀಪ್ತಿ ಕುಮಾರಿ ಅವರ ಮೂವರು ಒಡಹುಟ್ಟಿದವರು ಸಹ ಆರ್ಚರಿ ಪಟುಗಳಾಗಿದ್ದು, ಮುಂದೆ ಸಾಗಬೇಕೆಂಬುದು ಅವರ ಕನಸು. ಆದರೆ, ಬಡತನದ ಸರಪಳಿ ಅವರನ್ನು ಮುಂದೆ ಹೋಗಲು ಬಿಡುತ್ತಿಲ್ಲ. ಬಡತನದಿಂದಾಗಿ ಎಲ್ಲರ ಕನಸು ಭಗ್ನವಾಗುತ್ತಿದೆ. ದೀಪ್ತಿ ಅವರ ಸಹೋದರ ಅಭಿಮನ್ಯು ಆಟೋ ಓಡಿಸುತ್ತಾರೆ. ತಂದೆ ಕೃಷಿ ಮಾಡುತ್ತಾರೆ. ಇಡೀ ಕುಟುಂಬ ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದೆ.

ಇದನ್ನೂ ಓದಿ: ದುಬೈ ಟೂರ್ನಿ ಬಳಿಕ ಟೆನಿಸ್​ ಅಂಗಳಕ್ಕೆ ಸಾನಿಯಾ ಮಿರ್ಜಾ ವಿದಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.