ETV Bharat / bharat

ಬೆಳಗ್ಗೆ 9 ಗಂಟೆಯೊಳಗೆ ಮತದಾನ ಮಾಡಿದ್ರೆ ಅವಲಕ್ಕಿ, ಜಿಲೇಬಿ ಉಚಿತ.. ಇಂದೋರ್​ ವರ್ತಕರ ಸಂಘದಿಂದ ಘೋಷಣೆ

author img

By ETV Bharat Karnataka Team

Published : Oct 14, 2023, 9:24 PM IST

ಇಂದೋರ್​ ವರ್ತಕರ ಸಂಘದಿಂದ ಘೋಷಣೆ
ಇಂದೋರ್​ ವರ್ತಕರ ಸಂಘದಿಂದ ಘೋಷಣೆ

ಇಂದೋರ್​ ನಗರದ ವರ್ತಕರ ಸಂಘವು ಮುಂಬರುವ ಚುನಾವಣೆಗೆ ಮತದಾರರಿಗೆ ಆಫರ್​ ನೀಡಿದೆ. ನಿಗದಿತ ಅವಧಿಯೊಳಗೆ ಮತದಾನ ಮಾಡಿದಲ್ಲಿ ಮಾತ್ರ ಆಫರ್ ಸಿಗಲಿದೆ ಎಂದು ತಿಳಿಸಿದೆ.

ಇಂದೋರ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಇಂದೋರ್​ ನಗರ ದೇಶದಲ್ಲೇ ಅತಿ ಪ್ರಸಿದ್ಧಿ. ತನ್ನ ಸ್ವಚ್ಛತೆಯಿಂದಲೇ ಹೆಸರುವಾಸಿಯಾಗಿರುವ ಈ ನಗರದ ವರ್ತಕರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹೊಸ ಆಫರ್​ ಘೋಷಿಸಿದ್ದಾರೆ. ಇದೇನಪ್ಪಾ ರಾಜಕೀಯ ಪಕ್ಷಗಳ ಹಾಗೆ ಇವರೂ ಕೂಡ ಭರವಸೆಗಳನ್ನು ಘೋಷಿಸಿದ್ರಾ ಅಂತೀರಾ.. ಒಂದು ರೀತಿ ಹಾಗೆಯೇ ಆದರೆ, ಅದರ ಹಿಂದೆ ಒಳ್ಳೆಯ ಕಾರಣವಿದೆ.

ರಾಜಸ್ಥಾನ, ಹರಿಯಾಣ, ತೆಲಂಗಾಣ, ಮಿಜೋರಾಂ ಮತ್ತು ಮಧ್ಯಪ್ರದೇಶದ ವಿಧಾನಸಭಾ ಚುನಾವಣೆ ನವೆಂಬರ್​ 7 ರಿಂದ ಆರಂಭವಾಗಲಿದೆ. ಚುನಾವಣೆಯ ಜ್ವರ ಏರಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​, ಬಿಜೆಪಿ ಮಧ್ಯೆ ನೇರ ಪೈಪೋಟಿ ಇದೆ. ಹೀಗಾಗಿ ಮತದಾನ ಹೆಚ್ಚಳಕ್ಕಾಗಿ ಸರ್ಕಾರ ಸೇರಿದಂತೆ ಸಂಘಸಂಸ್ಥೆಗಳು ಅಭಿಯಾನ ನಡೆಸಿವೆ. ಇದೀಗ ಇಂದೋರ್‌ನಲ್ಲಿರುವ ವರ್ತಕರ ಸಂಘವೂ ಅಭಿಯಾನದ ಭಾಗವಾಗಿದ್ದು, ವಿಶೇಷ ಆಫರ್​ ಪ್ರಕಟಿಸಿದೆ.

ಅವಲಕ್ಕಿ, ಜಿಲೇಬಿ ಫ್ರೀ: ರಾಜಕೀಯ ಪಕ್ಷಗಳು ಈಗಾಗಲೇ ಮತದಾರರನ್ನು ಸೆಳೆಯಲು ಹಲವು 'ಉಚಿತ'ಗಳನ್ನು ಘೋಷಿಸಿವೆ. ಅದರಂತೆ ವರ್ತಕರ ಸಂಘವೂ ಫ್ರೀ ಆಫರ್​ ನೀಡಿದೆ. ಮತದಾನ ದಿನದಂದು ಯಾರು ಬೆಳಗ್ಗೆ 9 ಗಂಟೆಯೊಳಗೆ ಬಂದು ಮತದಾನ ಮಾಡುತ್ತಾರೋ ಅವರಿಗೆ ಒಗ್ಗರಣೆ ಅವಲಕ್ಕಿ ಮತ್ತು ಜಿಲೇಬಿಯನ್ನು ಉಚಿತವಾಗಿ ನೀಡಲಿದೆ. 6 ರ ಬಳಿಕ ಮತದಾನ ಮಾಡಿದಲ್ಲಿ ಅವರಿಗೆ ಶೇ.10 ರಿಯಾಯಿತಿ ದರದಲ್ಲಿ ತಿಂಡಿ, ಸ್ವೀಟ್​ ಸಿಗಲಿದೆ ಎಂದು ಹೇಳಿದೆ.

ಇಂದೋರ್‌ನ ಫುಡ್ ಹಬ್ '56 ದುಕಾನ್' ಆವರಣದಲ್ಲಿರುವ ಅಂಗಡಿಗಳ ಮಾಲೀಕರು ಈ ವಿನೂತನ ಕೊಡುಗೆಯನ್ನು ಘೋಷಿಸಿದ್ದಾರೆ. ಮತದಾನ ಮಾಡಿ ಬೆರಳಿನ ಶಾಯಿ ತೋರಿಸಿದವರಿಗೆ ಉಚಿತವಾಗಿ ಒಗ್ಗರಣೆ ಅವಲಕ್ಕಿ ಮತ್ತು ಜಿಲೇಬಿ ಸಿಗಲಿದೆ. 9 ಗಂಟೆಯೊಳಗೆ ನೀವು ಮತದಾನ ಮಾಡಬೇಕು ಎಂದು ವರ್ತಕರ ಸಂಘದ ಅಧ್ಯಕ್ಷ ಗುಂಜನ್ ಶರ್ಮಾ ಹೇಳಿದರು. ಸ್ವಚ್ಛತೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ಇಂದೋರ್ ನಗರ ಇದೀಗ ಶೇಕಡವಾರು ಮತದಾನದಲ್ಲೂ ಅಗ್ರಸ್ಥಾನದಲ್ಲಿಡಲು ಈ ಪ್ರಯತ್ನ ಎಂದು ಅವರು ಹೇಳಿದರು.

ಇಂದೋರ್ ಜಿಲ್ಲೆಯಲ್ಲಿ ಐದು ಅಸೆಂಬ್ಲಿ ಸ್ಥಾನಗಳಿವೆ. 2018 ರಲ್ಲಿ 14.72 ಲಕ್ಷ ಮತದಾರರಲ್ಲಿ 67 ಪ್ರತಿಶತ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಈ ಬಾರಿ 15.55 ಲಕ್ಷ ಅರ್ಹ ಮತದಾರರಿದ್ದಾರೆ. ರಾಜ್ಯದ 230 ಸ್ಥಾನಗಳಿಗೆ ನವೆಂಬರ್ 17 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಇದನ್ನೂ ಓದಿ: ರಾಜಕೀಯ ಪಕ್ಷಗಳ ಯೋಜನೆಗಳು 'ಉಚಿತ'ವಲ್ಲ: ಫ್ರೀ ಯೋಜನೆಗಳ ಬಗ್ಗೆ ಚುನಾವಣಾ ಆಯೋಗ ಅಸಮಾಧಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.