ETV Bharat / bharat

ಹನುಮ ಜಯಂತಿ: ಕಾನೂನು ಸುವ್ಯವಸ್ಥೆ ಕಾಪಾಡುವಂತೆ ರಾಜ್ಯಗಳಿಗೆ ಕೇಂದ್ರದ ಸೂಚನೆ

author img

By

Published : Apr 5, 2023, 9:57 PM IST

Ministry of Home Affairs
ಗೃಹ ಸಚಿವಾಲಯ

ನಾಳೆ ನಡೆಯಲಿರುವ ಹನುಮ ಜಯಂತಿಯ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತೆ ಗೃಹ ವ್ಯವಹಾರಗಳ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.

ನವದೆಹಲಿ: ದೇಶದ ವಿವಿಧ ಭಾಗಗಳಲ್ಲಿ ರಾಮನವಮಿ ಮೆರವಣಿಗೆ ಸಂದರ್ಭದಲ್ಲಿ ಉಂಟಾದ ಕೋಮು ಹಿಂಸಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು(ಎಂಎಚ್​ಎ) ಇಂದು, ಹನುಮ ಜಯಂತಿಯ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿದೆ. ನಾಳೆ ನಡೆಯಲಿರುವ ಹನುಮ ಜಯಂತಿಗೆ ಈಗಾಗಲೇ ಭರ್ಜರಿ ತಯಾರಿ ಜರುಗುತ್ತಿದ್ದು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ಖಚಿತಪಡಿಸಬೇಕು ಎಂದು ಸಚಿವಾಲಯದ ವಕ್ತಾರರು ತಿಳಿಸಿದರು.

ಶಾಂತಿಯುತವಾಗಿ ಹನುಮ ಜಯಂತಿ ಆಚರಿಸಲು ಸಲಹೆ: "ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು, ಹಬ್ಬವನ್ನು ಶಾಂತಿಯುತವಾಗಿ ಆಚರಿಸುವುದು ಮತ್ತು ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಯಾವುದೇ ಅಂಶಗಳ ಮೇಲ್ವಿಚಾರಣೆಯನ್ನು ಮಾಡುವ ಬಗ್ಗೆ ಖಚಿತಪಡಿಸಿಕೊಳ್ಳಲು ಸರ್ಕಾರಗಳಿಗೆ ಪ್ರೋತ್ಸಾಹಿಸಲಾಗುತ್ತದೆ" ಎಂದು ವಕ್ತಾರರು ಹೇಳಿದರು. ಹಿಂಸಾಚಾರದಲ್ಲಿ ತೊಡಗಿರುವವರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಲ್ಲಾ ರಾಜ್ಯಗಳು ಮತ್ತು ಯುಟಿಗಳಿಗೆ ತಿಳಿಸಲಾಗಿದೆ.

ಗೃಹ ಸಚಿವಾಲಯದಲ್ಲಿ ಭದ್ರತಾ ಪರಿಶೀಲನಾ ಸಭೆ: ಮಂಗಳವಾರ ತಡರಾತ್ರಿ ಗೃಹ ಸಚಿವಾಲಯದಲ್ಲಿ ನಡೆದ ಭದ್ರತಾ ಪರಿಶೀಲನಾ ಸಭೆಯ ನಂತರ, ಈ ಸಲಹೆಯನ್ನು ನೀಡಲಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳು ಈಟಿವಿ ಭಾರತ್‌ಗೆ ತಿಳಿಸಿವೆ. ರಾಮನವಮಿ ಮೆರವಣಿಗೆ ವೇಳೆ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ನಡೆದ ಹಿಂಸಾತ್ಮಕ ಘಟನೆಗಳ ಬಗ್ಗೆ ಗೃಹ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.

ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಬಗ್ಗೆ ಚರ್ಚೆ: ಗೃಹ ಸಚಿವಾಲಯವು ರಾಜ್ಯ ಆಡಳಿತಗಳಿಗೆ ಮತ್ತು ಭದ್ರತಾ ಏಜೆನ್ಸಿಗಳಿಗೆ ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಪ್ರದೇಶಗಳ ಮೇಲೆ ಸರಿಯಾದ ನಿಗಾ ಇರಿಸುವಂತೆ ತಿಳಿಸಲಾಗಿದೆ. ಗೃಹ ಸಚಿವ ಅಮಿತ್ ಶಾ ಅವರು, ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಮತ್ತು ಕೇಂದ್ರ ಅರೆಸೇನಾ ಪಡೆಗಳ ಮುಖ್ಯಸ್ಥರೊಂದಿಗೆ ನಾರ್ತ್ ಬ್ಲಾಕ್‌ನಲ್ಲಿ ಭದ್ರತಾ ಪರಿಶೀಲನಾ ಸಭೆ ನಡೆಸಿದರು. ಪಶ್ಚಿಮ ಬಂಗಾಳ, ಬಿಹಾರ, ಮಹಾರಾಷ್ಟ್ರ ಹಾಗೂ ಗುಜರಾತ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿಯ ಬಗ್ಗೆ ಚರ್ಚಿಸಲಾಗಿದೆ ಎಂದು ಎಂದು ಮೂಲಗಳು ತಿಳಿಸಿವೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಬಿಹಾರ ಸರ್ಕಾರಕ್ಕೆ ಸಹಾಯ ಮಾಡಲು ಕೇಂದ್ರ ಅರೆಸೇನಾ ಪಡೆಗಳನ್ನು ಕಳುಹಿಸುವುದರ ಜೊತೆಗೆ, ಎಂಎಚ್​ಎ ಮಂಗಳವಾರ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದ ಬಗ್ಗೆ ರಾಜ್ಯ ಸರ್ಕಾರದಿಂದ ವಿವರವಾದ ವರದಿ ಕೇಳಿದೆ.

ಕೋಲ್ಕತ್ತಾ ಹೈಕೋರ್ಟ್ ಎಚ್ಚರಿಕೆ: ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ನಡೆದಂತಹ ಅಶಾಂತಿ ಪುನರಾವರ್ತನೆಯಾಗದಂತೆ ಕೋಲ್ಕತ್ತಾ ಹೈಕೋರ್ಟ್ ತಿಳಿಸಿದೆ. ಗುರುವಾರ ನಡೆಯಲಿರುವ ರಾಜ್ಯದ ಎಲ್ಲಾ ಹನುಮ ಜಯಂತಿ ಮೆರವಣಿಗೆಗಳಿಗೆ ರಾಜ್ಯ ಪೊಲೀಸರು ಮತ್ತು ಕೇಂದ್ರ ಪಡೆಗಳಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಆದೇಶಿಸಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿತು.

ಮೆರವಣಿಗೆಯಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಪೊಲೀಸರು ನಿರ್ದಿಷ್ಟಪಡಿಸಬೇಕು ಎಂದು ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ವಿಭಾಗೀಯ ಪೀಠ ಆದೇಶಿಸಿದೆ. ಅಲ್ಲದೇ ಯಾವುದೇ ತೊಂದರೆಯಾಗದಂತೆ ಮೆರವಣಿಗೆ ಮಾರ್ಗಗಳನ್ನು ಮೊಟಕುಗೊಳಿಸಬೇಕು. ರಸ್ತೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುವಂತೆಯೂ ಸೂಚಿಸಲಾಗಿದೆ. ಪೊಲೀಸ್ ಸ್ವಯಂಸೇವಕರ ಪಾತ್ರವನ್ನು ಸಹ ನಿರ್ದಿಷ್ಟಪಡಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಇದಲ್ಲದೇ, ಸಾರ್ವಜನಿಕ ಪ್ರತಿನಿಧಿಗಳು ಪರಿಸ್ಥಿತಿಯನ್ನು ಹದಗೆಡಿಸುವ ಯಾವುದೇ ಹೇಳಿಕೆಗಳನ್ನು ನೀಡದೇ ಇರುವುದು ಬಹಳ ಮುಖ್ಯ ಎಂದು ನ್ಯಾಯಾಧೀಶರು ಹೇಳಿದರು.

ಮೆರವಣಿಗೆ ನಡೆಸಲು 2 ಸಾವಿರ ಅರ್ಜಿ: ರಾಮನವಮಿ ಮೆರವಣಿಗೆಯಲ್ಲಿ ನಡೆದ ಘಟನೆಗಳ ನಂತರ ಹನುಮ ಜಯಂತಿಯಂದು ಮತ್ತೆ ಉದ್ವಿಗ್ನತೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಪ್ರತಿಪಕ್ಷದ ನಾಯಕ ಸುವೇಂದು ಅಧಿಕಾರಿ ನ್ಯಾಯಾಲಯಕ್ಕೆ ಮನವಿ ಮಾಡಿದರು. ಗುರುವಾರ ಹನುಮ ಜಯಂತಿ ನಿಮಿತ್ತ ಮೆರವಣಿಗೆ ನಡೆಸಲು ರಾಜ್ಯದಿಂದ 2 ಸಾವಿರ ಅರ್ಜಿಗಳು ಬಂದಿವೆ ಎಂದು ಪ್ರಕರಣದ ವಿಚಾರಣೆ ವೇಳೆ ರಾಜ್ಯದ ಅಡ್ವೊಕೇಟ್ ಜನರಲ್ ಬುಧವಾರ ತಿಳಿಸಿದ್ದಾರೆ.

ಹನುಮ ಜಯಂತಿಗೆ ರಾಜ್ಯ ಕೆಲವು ಹೊಸ ಕ್ರಮಗಳನ್ನು ಕೈಗೊಂಡಿದೆ. ಮೆರವಣಿಗೆ ನಡೆಸುವ ವ್ಯಕ್ತಿಗಳು ಮತ್ತು ಸಂಘಟನೆಗಳು ಯಾವುದೇ ರೀತಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುವುದಿಲ್ಲ ಎಂದು ಘೋಷಣೆ ಮಾಡಬೇಕು. ಪೊಲೀಸರು ಕಾನೂನು ಮತ್ತು ಸುವ್ಯವಸ್ಥೆಯನ್ನು ನಿಯಂತ್ರಿಸಲು ಸಿದ್ಧರಾಗಬೇಕು. ಮೆರವಣಿಗೆ ಯಾವಾಗ ಮತ್ತು ಎಲ್ಲಿ ಪ್ರಾರಂಭವಾಗುತ್ತದೆ, ಯಾವಾಗ ಮತ್ತು ಎಲ್ಲಿ ಕೊನೆಗೊಳ್ಳುತ್ತದೆ ಎಂಬುದನ್ನು ಸಹ ಮುಂಚಿತವಾಗಿ ಘೋಷಿಸಬೇಕು. ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಬ್ಯಾರಿಕೇಡ್ ಹಾಕಬೇಕು. ಪೊಲೀಸರಿಗೆ ಸಹಾಯ ಮಾಡಲು ಮೆರವಣಿಗೆಯಲ್ಲಿ ಸ್ವಯಂಸೇವಕರು ಇರಬೇಕು. ಮೆರವಣಿಗೆ ರಸ್ತೆಯ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಲು ಚಿಂತಿಸಲಾಗಿದೆ ಎಂದು ಅಡ್ವೊಕೇಟ್ ಜನರಲ್ ಹೇಳಿದರು.

ರಾಜ್ಯದಲ್ಲಿ ರಾಮನವಮಿ ಮತ್ತು ಹನುಮ ಜಯಂತಿಯಂದು ಮೆರವಣಿಗೆಗಳು ಸಾಮಾನ್ಯವಲ್ಲ ಎಂದು ಹೇಳಿದ ಅಡ್ವೊಕೇಟ್ ಜನರಲ್, ಕಳೆದ ಐದು ವರ್ಷಗಳಲ್ಲಿ ಈ ಸಂದರ್ಭದಲ್ಲಿ ಮೆರವಣಿಗೆಗಳ ಸಂಖ್ಯೆ ಹೆಚ್ಚಾಗಿದೆ. ಅನೇಕ ಧಾರ್ಮಿಕ ಸಂಸ್ಥೆಗಳು ಮೆರವಣಿಗೆಗಳನ್ನು ನಡೆಸುತ್ತಿವೆ. ಮೆರವಣಿಗೆಗೆ 15 ದಿನಗಳ ಮೊದಲು ಪೊಲೀಸರಿಗೆ ಮಾಹಿತಿ ನೀಡುವಂತೆ ನ್ಯಾಯಾಲಯ ಆದೇಶಿಸಬೇಕು.

"ಮುಖ್ಯಮಂತ್ರಿಗಳು ಕೆಲವು ಸಮುದಾಯಗಳ ವಿರುದ್ಧ ಪದೇ ಪದೇ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು. ನ್ಯಾಯಾಲಯವು ತಕ್ಷಣವೇ ಇವೆಲ್ಲವನ್ನು ತಡೆಯಲು ಆದೇಶ ನೀಡಬೇಕು" ಎಂದು ವಕೀಲ ಪ್ರಿಯಾಂಕಾ ತಿಬ್ರೆವಾಲ್ ಆರೋಪಿಸಿದರು.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿಗೆ ಕೊಲೆ ಬೆದರಿಕೆ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.