ವಿಶ್ವಕಪ್ ಫೈನಲ್ ನೋಡುತ್ತಿದ್ದಾಗ ಟಿವಿ ಆಫ್ ಮಾಡಿದ್ದಕ್ಕೆ ಮಗನ ಕತ್ತು ಹಿಸುಕಿ ಕೊಂದ ಅಪ್ಪ!

ವಿಶ್ವಕಪ್ ಫೈನಲ್ ನೋಡುತ್ತಿದ್ದಾಗ ಟಿವಿ ಆಫ್ ಮಾಡಿದ್ದಕ್ಕೆ ಮಗನ ಕತ್ತು ಹಿಸುಕಿ ಕೊಂದ ಅಪ್ಪ!
ಭಾರತ ವಿಶ್ವಕಪ್ ಸೋತ ನಿರಾಸೆ ಒಂದೆಡೆಯಾದರೆ, ಈ ವೇಳೆ ನಡೆದ ಕೆಲ ಅವಘಡಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತವೆ.
ಕಾನ್ಪುರ (ಉತ್ತರಪ್ರದೇಶ) : ಕ್ರಿಕೆಟ್ ಹುಚ್ಚು ಕೆಲವೊಮ್ಮೆ ಏನೆಲ್ಲಾ ಅನಾಹುತ ಸೃಷ್ಟಿಸುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಫೈನಲ್ ಪಂದ್ಯವನ್ನು ಮನೆಯಲ್ಲಿ ವೀಕ್ಷಿಸುತ್ತಿದ್ದಾಗ ಟಿವಿ ಆಫ್ ಮಾಡಿದ ಎಂಬ ಕಾರಣಕ್ಕಾಗಿ ಹೆತ್ತ ಮಗನನ್ನೇ ತಂದೆಯೊಬ್ಬ ಕತ್ತು ಹಿಸುಕಿ ಕೊಂದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಂತಕ ತಂದೆ ಈಗ ಜೈಲು ಸೇರಿದ್ದಾನೆ.
ಈ ಘಟನೆ ನಡೆದಿದ್ದು ಉತ್ತರಪ್ರದೇಶದ ಕಾನ್ಪುರದಲ್ಲಿ. ದೀಪಕ್ ನಿಶಾದ್ ಮೃತಪಟ್ಟ ಬಾಲಕ. ಗಣೇಶ್ ಪ್ರಸಾದ್ ಕೊಲೆ ಮಾಡಿದ ತಂದೆ. ಆರೋಪಿ ಗಣೇಶ್, ನವೆಂಬರ್ 19 ರಂದು ರಾತ್ರಿ ವಿಶ್ವಕಪ್ ಫೈನಲ್ ಪಂದ್ಯವನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದರು. ಈ ವೇಳೆ ಪುತ್ರ ದೀಪಕ್ ಬಂದಿದ್ದಾನೆ. ಮನೆಗೆ ಬಂದರೂ ತನ್ನನ್ನು ಗಮನಿಸದ್ದಕ್ಕೆ ದೀಪಕ್ ಟಿವಿ ಸ್ವಿಚ್ಡ್ ಆಫ್ ಮಾಡಿದ್ದಾನೆ. ಕುತೂಹಲದಿಂದ ಪಂದ್ಯ ವೀಕ್ಷಿಸುತ್ತಿದ್ದ ವ್ಯಕ್ತಿಗೆ ಮಗನ ನಡೆಯಿಂದ ಕೋಪ ಬಂದಿದೆ.
ಈ ವಿಚಾರವಾಗಿ ಇಬ್ಬರ ಮಧ್ಯೆ ಜೋರು ಜಗಳವಾಗಿದೆ. ಇಬ್ಬರೂ ಕೈಕೈ ಮಿಲಾಯಿಸಿದ್ದು, ಬಡಿದಾಡಿಕೊಂಡಿದ್ದಾರೆ. ತಂದೆ ಗಣೇಶ್, ವಿದ್ಯುತ್ ತಂತಿಯಿಂದ ಮಗನ ಕತ್ತನ್ನು ಬಲವಾಗಿ ಬಿಗಿದಿದ್ದಾರೆ. ಇದರಿಂದ ಪುತ್ರ ಉಸಿರು ನಿಲ್ಲಿಸಿದ್ದಾನೆ. ಪುತ್ರ ಸಾವಿಗೀಡಾಗಿದ್ದು ಕಂಡು ಹೆದರಿದ ವ್ಯಕ್ತಿ ಮನೆಯಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಆರೋಪಿ ಹುಡುಕಾಡಿ ಬಂಧಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಚಾಕೇರಿ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಕಮಿಷನರ್ ಬ್ರಿಜ್ ನಾರಾಯಣ್ ಸಿಂಗ್, ತಂದೆ ಮಗನ ಮಧ್ಯೆ ಟಿವಿ ನೋಡುವ ವಿಚಾರವಾಗಿ ಜಗಳವಾಗಿದೆ. ಕೋಪದಲ್ಲಿ ತಂದೆ ಮಗನ ಕತ್ತನ್ನು ವೈರಿನಿಂದ ಬಿಗಿದಿದ್ದು, ಪುತ್ರ ಉಸಿರುಗಟ್ಟಿ ಸಾವಿಗೀಡಾಗಿದ್ದಾನೆ. ಆರೋಪಿಯನ್ನು ಬಂಧಿಸಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದರು.
ಸೋಲಿಗೆ ನೊಂದು ಉದ್ಯಮಿ ಆತ್ಮಹತ್ಯೆ: ಕಾನ್ಪುರದಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ವಿಶ್ವಕಪ್ ಸೋಲಿಗೆ ನೊಂದು ಮನೆಯಲ್ಲಿ ಉದ್ಯಮಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ವರದಿಯಾಗಿದೆ. ಮೃತ ಶಿವಂ ಅಗರ್ವಾಲ್ ವಸ್ತುಗಳನ್ನು ರಫ್ತು ಮಾಡುವ ಕೆಲಸ ಮಾಡುತ್ತಿದ್ದರು. ವಿಶ್ವಕಪ್ ಫೈನಲ್ ವೇಳೆ ಮನೆಯಲ್ಲಿ ಟಿವಿ ನೋಡುತ್ತಿದ್ದರು. ಭಾರತ ತಂಡ ಸೋಲುತ್ತದೆ ಎಂದು ಖಚಿತವಾದ ಬಳಿಕ ಆತ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾತ್ರಿ ಊಟಕ್ಕೆ ಕರೆದರೂ ಶಿವಂ ಕೋಣೆಯಿಂದ ಹೊರಬಂದಿರಲಿಲ್ಲ. ಬಳಿಕ ಕಿಟಕಿಯಿಂದ ನೋಡಿದಾಗ ಅವರ ಶವವಾಗಿ ಕಂಡುಬಂದಿದ್ದರು. ಬಳಿಕ ಕೋಣೆ ಬಾಗಿಲು ಮುರಿಯಲಾಗಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಉದ್ಯಮದಲ್ಲಿ ನಷ್ಟವುಂಟಾದ ಕಾರಣ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
