ETV Bharat / bharat

ಶಿವಸೇನೆ ಶಾಸಕರ ಅನರ್ಹತೆ ಪ್ರಕರಣ: ಸುಪ್ರೀಂ ಗಡುವು ಬೆನ್ನಲ್ಲೇ ವಿಚಾರಣೆ ಆರಂಭಿಸಿದ ಸ್ಪೀಕರ್

author img

By ETV Bharat Karnataka Team

Published : Nov 22, 2023, 7:32 PM IST

Maharashtra Assembly Speaker begins cross examination in 16 MLAs disqualification cases
ಶಿವಸೇನೆ ಶಾಸಕರ ಅನರ್ಹತೆ ಪ್ರಕರಣ

Shiv Sena MLAs Disqualification Case: ಮಹಾರಾಷ್ಟ್ರದ ಶಿವಸೇನೆ ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆಯನ್ನು ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಆರಂಭಿಸಿದ್ದಾರೆ.

ಮುಂಬೈ (ಮಹಾರಾಷ್ಟ್ರ): ಶಿವಸೇನೆ ಶಾಸಕರ ಅನರ್ಹತೆ ಪ್ರಕರಣ ಸಂಬಂಧಿಸಿದಂತೆ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್​ ವಿಚಾರಣೆಯನ್ನು ಮಂಗಳವಾರದಿಂದ ಆರಂಭಿಸಿದ್ದಾರೆ. ಏಕನಾಥ್ ಶಿಂಧೆ ಬಣದ ಪರವಾಗಿ ಶಿವಸೇನೆ (ಉದ್ಧವ್ ಠಾಕ್ರೆ ಬಣ) ಶಾಸಕ ಮತ್ತು ಮುಖ್ಯ ಸಚೇತಕ ಸುನೀಲ್ ಪ್ರಭು ಅವರನ್ನು ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ವಿಚಾರಣೆಗೆ ಒಳಪಡಿಸಿದರು.

ಶಾಸಕರ ಅನರ್ಹತೆ ಕುರಿತು ಡಿಸೆಂಬರ್ 31ರೊಳಗೆ ನಿರ್ಧರಿಸುವಂತೆ ಸ್ಪೀಕರ್​ಗೆ ಸುಪ್ರೀಂ ಕೋರ್ಟ್ ನೀಡಿದೆ. ಈ ಗಡುವಿನ ದಿನಾಂಕ ಹತ್ತಿರವಾಗುತ್ತಿದ್ದಂತೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ವಿಚಾರಣೆಯ ಪ್ರಕ್ರಿಯೆಗೆ ವೇಗ ನೀಡಿದ್ದಾರೆ. ಈ ವೇಳೆ, ಇಂಗ್ಲಿಷ್‌ ಹಾಗೂ ಮರಾಠಿ ಉತ್ತರಿಸುವ ವಿಷಯವಾಗಿ ಸುನೀಲ್ ಪ್ರಭು ಮತ್ತು ಜೇಠ್ಮಲಾನಿ ನಡುವೆ ವಾಗ್ವಾದ ನಡೆದಿದೆ.

ಸುನೀಲ್ ಪ್ರಭು ತಮ್ಮ ಪಕ್ಷದ ಸದಸ್ಯರು ಮರಾಠಿಯಲ್ಲಿ ಮಾತ್ರ ಉತ್ತರಿಸುತ್ತಾರೆ ಎಂದು ಹೇಳಿದರು. ಆಗ ಜೇಠ್ಮಲಾನಿ, ನೀವು ಅನರ್ಹತೆ ಅರ್ಜಿಯನ್ನು ಇಂಗ್ಲಿಷ್‌ನಲ್ಲಿ ಸಲ್ಲಿಸಿದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರಭು, 'ವಕೀಲರು ನನಗೆ ಮರಾಠಿಯಲ್ಲಿ ಸಂಕ್ಷಿಪ್ತವಾಗಿ ವಿವರಿಸಿದರು. ನಂತರ ಇಂಗ್ಲಿಷ್‌ನಲ್ಲಿ ಅರ್ಜಿ ಭರ್ತಿ ಮಾಡಿದರು ಎಂಬುವುದಾಗಿ ಹೇಳಿದರು. ಈ ವೇಳೆ, ಮರಾಠಿಯಲ್ಲಿ ವಿವರಗಳನ್ನು ತಿಳಿಸಿರುವ ಬಗ್ಗೆ ಅರ್ಜಿಯಲ್ಲಿ ಯಾವುದೇ ಉಲ್ಲೇಖವಿಲ್ಲ ಎಂದು ಜೇಠ್ಮಲಾನಿ ತಿಳಿಸಿದರು.

2022ರಲ್ಲಿ ಮಹಾರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎದ್ದಿತ್ತು. ಶಿವಸೇನೆ ನಾಯಕ ಏಕನಾಥ್​ ಶಿಂಧೆ ನೇತೃತ್ವದಲ್ಲಿ ಸುಮಾರು 50 ಶಾಸಕರು ಬಂಡಾಯದ ಬಾವುಟ ಹಾರಿಸಿದ್ದರು. ಹೀಗಾಗಿ ಆ ವರ್ಷ ಜೂನ್​ 29ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ​ ರಾಜೀನಾಮೆ ನೀಡಿದ್ದರು. ಈ ಮೂಲಕ ಶಿವಸೇನೆ, ಕಾಂಗ್ರೆಸ್​, ಎನ್​ಸಿಪಿ ಮೈತ್ರಿಕೂಟದ ಮಹಾ ವಿಕಾಸ ಅಘಾಡಿ ಸರ್ಕಾರ ಪತನವಾಗಿತ್ತು. ಮತ್ತೊಂದೆಡೆ, ಏಕನಾಥ್​ ಶಿಂಧೆ ಬಿಜೆಪಿ ಜೊತೆಗೂಡಿ ಸರ್ಕಾರ ರಚನೆ ಮಾಡಿದ್ದಾರೆ.

ಅದೇ ಜೂನ್​ನಲ್ಲಿ ಉದ್ಧವ್ ಠಾಕ್ರೆ​ ಬಣದ ಶಿವಸೇನೆಯು ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೇರಿದಂತೆ 16 ಬಂಡಾಯ ಶಾಸಕರ ವಿರುದ್ಧ ಅನರ್ಹತೆಗೆ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣ ಸುಪ್ರೀಂ ಕೋರ್ಟ್​ ಮೆಟ್ಟಿಲು ಕೂಡ ಏರಿದೆ. ಅಕ್ಟೋಬರ್‌ನಲ್ಲಿ ಅನರ್ಹತೆ ಅರ್ಜಿಗಳ ವಿಚಾರಣೆಯಲ್ಲಿ ಸ್ಪೀಕರ್​ ವಿಳಂಬ ಧೋರಣೆ ವಿರುದ್ಧ ಕೋಪಗೊಂಡಿದ್ದ ಸುಪ್ರೀಂ ಕೋರ್ಟ್, ಡಿಸೆಂಬರ್ 31ರೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆದೇಶ ನೀಡಿದೆ. ಹೀಗಾಗಿ ಶಾಸಕರ ಅನರ್ಹತೆ ಕುರಿತು ವಿಚಾರಣೆ ಪೂರ್ಣಗೊಳಿಸಿ ತೀರ್ಪು ನೀಡಲು ಸ್ಪೀಕರ್‌ಗೆ ಈಗ ಕೇವಲ 40 ದಿನಗಳು ಬಾಕಿ ಉಳಿದಿದೆ.

ಇದನ್ನೂ ಓದಿ: ಬಂಡೆದ್ದ ಶಿವಸೇನೆ, ಎನ್​ಸಿಪಿ ಶಾಸಕರ ಅನರ್ಹತೆ ಪ್ರಕರಣ: ಮಹಾರಾಷ್ಟ್ರ ಸ್ಪೀಕರ್​ಗೆ ಅಂತಿಮ ಗಡುವು ನೀಡಿದ ಸುಪ್ರೀಂ ಕೋರ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.