ETV Bharat / bharat

ನೆಹರೂ ಅವರ 2 ಪ್ರಮಾದಗಳಿಂದ ಕಾಶ್ಮೀರಕ್ಕೆ ಸಂಕಷ್ಟ: ಕಣಿವೆ ನಾಡಿನಲ್ಲಿ ಭಯೋತ್ಪಾದನೆಗೆ 45 ಸಾವಿರ ಜನರು ಬಲಿ- ಅಮಿತ್ ಶಾ

author img

By PTI

Published : Dec 6, 2023, 7:48 PM IST

Kashmir suffered for years due to Jawaharlal Nehrus two major blunders: Amit Shah
ನೆಹರೂ ಮಾಡಿದ ಎರಡು ಪ್ರಮಾದಗಳು; ಕಾಶ್ಮೀರದಲ್ಲಿ ಭಯೋತ್ಪಾದನೆಗೆ 45 ಸಾವಿರ ಜನರ ಸಾವು - ಅಮಿತ್ ಶಾ

Amit Shah speaks about Nehru's two major blunders in Lok Sabha: ಜಮ್ಮು ಮತ್ತು ಕಾಶ್ಮೀರದಲ್ಲಿ ಇಲ್ಲಿಯವರೆಗೆ ಭಯೋತ್ಪಾದನೆಗೆ 45 ಸಾವಿರಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಗೃಹ ಸಚಿವ ಅಮಿತ್​ ಶಾ ಇಂದು ಲೋಕಸಭೆಗೆ ತಿಳಿಸಿದರು.

ನವದೆಹಲಿ: ಸಂಪೂರ್ಣ ಕಾಶ್ಮೀರವನ್ನು ಗೆಲ್ಲುವ ಮುನ್ನವೇ ಕದನ ವಿರಾಮ ಘೋಷಿಸಿ, ಈ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕೊಂಡೊಯ್ಯುವ ಮೂಲಕ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಮಾಡಿದ ಎರಡು ಪ್ರಮಾದಗಳೇ ಜಮ್ಮು ಮತ್ತು ಕಾಶ್ಮೀರದ ಜನರ ಇಂದಿನ ಸಂಕಷ್ಟಕ್ಕೆ ಕಾರಣ. ಕಣಿವೆ ನಾಡಿನಲ್ಲಿ ಇದುವರೆಗೂ ಭಯೋತ್ಪಾದನೆಗೆ 45 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರಿಂದು ಲೋಕಸಭೆಗೆ ಈ ಮಾಹಿತಿ ನೀಡಿದರು.

ಜಮ್ಮು ಮತ್ತು ಕಾಶ್ಮೀರ ಪುನರ್‌ವಿಂಗಡಣೆ (ತಿದ್ದುಪಡಿ) ಮಸೂದೆ ಹಾಗೂ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆಗಳ ಕುರಿತು ಮಾತನಾಡಿದ ಗೃಹ ಸಚಿವರು, ''ನೆಹರೂ ಅವರ ಪ್ರಮಾದಗಳಿಂದ ಕಾಶ್ಮೀರ ಸಂಕಷ್ಟಕ್ಕೆ ಸಿಲುಕಿತು. ಮೊದಲನೇಯದಾಗಿ, ನಮ್ಮ ಸೇನೆ ಗೆದ್ದು ಪಂಜಾಬ್ ಪ್ರದೇಶ ತಲುಪಿದ ಕೂಡಲೇ ಕದನ ವಿರಾಮ ಘೋಷಿಸಿದ ಪರಿಣಾಮ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಹುಟ್ಟಿಕೊಂಡಿತು. ಇದಾಗಿ ಮೂರು ದಿನಗಳ ನಂತರ ಕದನ ವಿರಾಮ ಘೋಷಣೆಯಾಗಿದ್ದರೆ, ಪಿಒಕೆ ಭಾರತದ ಭಾಗವಾಗುತ್ತಿತ್ತು'' ಎಂದರು.

''ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋಗಿದ್ದು ಎರಡನೇ ಪ್ರಮಾದ. ಈ ವಿಷಯವನ್ನು ವಿಶ್ವಸಂಸ್ಥೆಗೆ ಕೊಂಡೊಯ್ಯಬೇಕಾದರೆ, ವಿಶ್ವಸಂಸ್ಥೆಯ ಚಾರ್ಟರ್‌ನ ಆರ್ಟಿಕಲ್ 35ರ ಬದಲಿಗೆ ಆರ್ಟಿಕಲ್ 51ರಡಿ ಕಳುಹಿಸಬೇಕಿತ್ತು" ಎಂದರು. ಇದಾದ ನಂತರದಲ್ಲಿ ಕದನ ವಿರಾಮ ''ತಪ್ಪು'' ಎಂದಿದ್ದ ನೆಹರೂ ಹೇಳಿಕೆಯನ್ನು ಉಲ್ಲೇಖಿಸಿದ ಶಾ, ''ಇದು ನೆಹರೂ ಅವರ ತಪ್ಪಲ್ಲ, ಪ್ರಮಾದ. ಈ ದೇಶದ ತುಂಬಾ ಭೂಮಿ ಕಳೆದುಕೊಳ್ಳಬೇಕಾಯಿತು. ಇದೊಂದು ಐತಿಹಾಸಿಕ ಪ್ರಮಾದ'' ಎಂದು ತಿಳಿಸಿದರು. ನೆಹರೂ ಕುರಿತು ಅಮಿತ್​ ಶಾ ಮಾತನಾಡುತ್ತಿದ್ದಂತೆ ಪ್ರತಿಪಕ್ಷಗಳು ಕೋಲಾಹಲ ನಡೆಸಿದವು. ಸಭಾತ್ಯಾಗ ಮಾಡಿದ ಪ್ರತಿಪಕ್ಷಗಳ ಸದಸ್ಯರು, ಕೆಲ ಸಮಯದ ನಂತರ ಕಲಾಪಕ್ಕೆ ಹಿಂತಿರುಗಿದರು.

ವಿಶೇಷ ಸ್ಥಾನಮಾನ ಮರಳಿ ತರುವ ಪ್ರಮೇಯವೇ ಇಲ್ಲ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಕಲಂ 370 ರದ್ಧತಿ ಕುರಿತ ಮಾತನಾಡಿದ ಅಮಿತ್ ಶಾ, ''ಇದನ್ನು ಮತ್ತೆ ತರುವ ಯಾವುದೇ ಪ್ರಮೇಯವೇ ಬರಲ್ಲ. ಅದು ತಾತ್ಕಾಲಿಕ ವ್ಯವಸ್ಥೆಯಾಗಿತ್ತು. ಎಂದಾದರೂ ಹೋಗಲೇಬೇಕಿತ್ತು. ನಿಮಗೆ (ಪ್ರತಿಪಕ್ಷಗಳು) ಧೈರ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಧೈರ್ಯದಿಂದ ಮಾಡಿ ತೋರಿಸಿದರು'' ಎಂದರು.

ಭಯೋತ್ಪಾದನೆಗೆ 45 ಸಾವಿರ ಜನ ಬಲಿ: ಇದೇ ವೇಳೆ, ಕಣಿವೆ ನಾಡಿನ ಭಯೋತ್ಪಾದನೆ ಬಗ್ಗೆ ಮಾತನಾಡಿದ ಅಮಿತ್​ ಶಾ, ''ಜಮ್ಮು ಮತ್ತು ಕಾಶ್ಮೀರದಲ್ಲಿ ಇದುವರೆಗೂ ಭಯೋತ್ಪಾದನೆಗೆ 45 ಸಾವಿರಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಲ್ಲಿನ ಭಯೋತ್ಪಾದಕ ಘಟನೆಗಳನ್ನು ಶೂನ್ಯಕ್ಕಿಳಿಸುವ ಯೋಜನೆ ಕಳೆದ ಮೂರು ವರ್ಷಗಳಿಂದ ಜಾರಿಯಲ್ಲಿದೆ. 2024ರಲ್ಲೂ ಮೋದಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ನಾನು ನಂಬಿದ್ದೇನೆ. ಜಮ್ಮು ಮತ್ತು ಕಾಶ್ಮೀರದಲ್ಲಿ 2026ರ ವೇಳೆಗೆ ಭಯೋತ್ಪಾದನೆ ಘಟನೆಗಳೇ ಇರುವುದಿಲ್ಲ ಎಂಬ ವಿಶ್ವಾಸ ನನಗಿದೆ'' ಎಂದು ತಿಳಿಸಿದರು.

2018ರಿಂದ ಭಯೋತ್ಪಾದನಾ ಕೃತ್ಯಗಳು ಕುಸಿತ: ಮತ್ತೊಂದೆಡೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ಘಟನೆಗಳಲ್ಲಿ ಕಳೆದ ಆರು ವರ್ಷಗಳಿಂದ ಕುಸಿತ ಕಂಡಿವೆ. 2023ರಲ್ಲಿ ಅತ್ಯಂತ ಕಡಿಮೆ ಪ್ರಕರಣಗಳು ವರದಿಯಾಗಿವೆ ಎಂದು ರಾಜ್ಯಸಭೆಗೆ ಸರ್ಕಾರ ತಿಳಿಸಿವೆ. 2018ರಲ್ಲಿ 228, 2019ರಲ್ಲಿ 153, 2020ರಲ್ಲಿ 126, 2021ರಲ್ಲಿ 129, 2022ರಲ್ಲಿ 125 ಹಾಗೂ ಈ ವರ್ಷದ ಆರಂಭದಿಂದ ನವೆಂಬರ್ 15ರವರೆಗೆ ಅತಿ ಕಡಿಮೆ ಎಂದರೆ, 41 ಭಯೋತ್ಪಾದನಾ ಘಟನೆಗಳು ನಡೆದಿವೆ ಎಂದು ಅಂಕಿಅಂಶಗಳು ತಿಳಿಸಿವೆ.

ಇದನ್ನೂ ಓದಿ: ವಿಧಾನಸಭೆಯಲ್ಲಿ ಕಾಶ್ಮೀರಿ ವಲಸಿಗರು, ಪಿಒಕೆ ನಿರಾಶ್ರಿತರಿಗೆ ಅವಕಾಶ ನೀಡುವ ಮಸೂದೆ ಪಾಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.