ETV Bharat / bharat

ಒಡಿಶಾ ಮದ್ಯ ತಯಾರಿಕಾ ಕಂಪನಿಯಲ್ಲಿ ಮುಂದುವರೆದ ಐಟಿ ಶೋಧ: 46 ಕೋಟಿ ಮೌಲ್ಯದ ನೋಟು ಎಣಿಕೆ ಪೂರ್ಣ

author img

By ETV Bharat Karnataka Team

Published : Dec 9, 2023, 5:16 PM IST

Updated : Dec 9, 2023, 5:37 PM IST

IT raids in Odisha: Rs 46 Cr Cash Counted So Far In Last Two Days
ಒಡಿಶಾ ಮದ್ಯ ತಯಾರಿಕಾ ಕಂಪನಿಯಲ್ಲಿ ಮುಂದುವರೆದ ಐಟಿ ಶೋಧ: ₹46 ಕೋಟಿ ಮೌಲ್ಯದ ನೋಟು ಎಣಿಕೆ ಪೂರ್ಣ

IT raids in Odisha: ಒಡಿಶಾದಲ್ಲಿ ಮದ್ಯ ತಯಾರಿಕೆ ಹಾಗೂ ಮಾರಾಟ ಕಂಪನಿ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿಯಲ್ಲಿ ಪತ್ತೆಯಾದ ನಗದು ಹಣದಲ್ಲಿ ಇದುವರೆಗೆ 46 ಕೋಟಿ ರೂ. ಮೌಲ್ಯದ ನೋಟು ಎಣಿಕೆ ಪೂರ್ಣಗೊಂಡಿದೆ.

ಬಲಂಗೀರ್ (ಒಡಿಶಾ): ಒಡಿಶಾದಲ್ಲಿ ಮದ್ಯ ತಯಾರಿಕೆ ಹಾಗೂ ಮಾರಾಟ ಕಂಪನಿ ಮೇಲೆ ಎರಡು ದಿನಗಳ ಹಿಂದೆ ದಾಳಿ ಮಾಡಿರುವ ಆದಾಯ ತೆರಿಗೆ (ಐಟಿ) ಇಲಾಖೆಯು ತನ್ನ ಕಾರ್ಯಾಚರಣೆ ತೀವ್ರಗೊಳಿಸಿದೆ. ಸುಮಾರು 225 ಕೋಟಿ ರೂ.ಗಳ ಮೌಲ್ಯದ ನೋಟುಗಳು ಪತ್ತೆಯಾಗಿದ್ದು, ಇದರ ಎಣಿಕೆ ಕಾರ್ಯಯನ್ನು ಎಸ್​ಬಿಐ ನಡೆಸುತ್ತಿದೆ. ಒಟ್ಟು 176 ಬ್ಯಾಗ್‌ಗಳಲ್ಲಿ ಎಸ್​ಬಿಐ ಬ್ಯಾಂಕ್​ಗೆ ನೋಟುಗಳನ್ನು ರವಾನಿಸಲಾಗಿದ್ದು, ಎರಡು ದಿನದಲ್ಲಿ ಇದುವರೆಗೆ 46 ಕೋಟಿ ರೂ. ಮೌಲ್ಯದ ನೋಟುಗಳ ಎಣಿಕೆ ಕಾರ್ಯ ಮುಗಿದಿದೆ ಎಂದು ಎಂದು ಎಸ್‌ಬಿಐನ ಬಲಂಗೀರ್​ ಪ್ರಾದೇಶಿಕ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ.

ಪಶ್ಚಿಮ ಒಡಿಶಾದ ಅತಿದೊಡ್ಡ ದೇಶೀಯ ಮದ್ಯ ತಯಾರಕರಲ್ಲಿ ಒಂದಾದ ಬಾಲ್ಡಿಯೊ ಸಾಹು ಮತ್ತು ಗ್ರೂಪ್ ಆಫ್ ಕಂಪನಿಗಳಿಗೆ ಸಂಬಂಧಿಸಿದ ಉತ್ಪಾದನಾ ಘಟಕಗಳು ಮತ್ತು ಮಧ್ಯಸ್ಥಗಾರರ ಆವರಣಗಳ ಮೇಲೆ ಐಟಿ ದಾಳಿ ನಡೆಸಿದೆ. ಇದೀಗ ಈ ಗುಂಪಿಗೆ ಸಂಬಂಧಿಸಿದ ಎಲ್ಲ ವ್ಯಕ್ತಿಗಳ ಕಚೇರಿಗಳು ಮತ್ತು ನಿವಾಸಗಳನ್ನು ಐಟಿ ಟಾರ್ಗೆಟ್​ ಮಾಡಿದೆ. ಇದುವರೆಗೆ ಸಂಬಲ್‌ಪುರ, ರೂರ್ಕೆಲಾ, ಬೋಲಂಗೀರ್, ಸುಂದರ್‌ಗಢ್ ಮತ್ತು ಭುವನೇಶ್ವರದಲ್ಲಿ ದಾಳಿ ನಡೆಸಲಾಗಿದೆ. ಜಾರ್ಖಂಡ್‌ನ ಕಾಂಗ್ರೆಸ್ ಸಂಸದರೊಂದಿಗೆ ಒಂದು ಗುಂಪು ಸಂಪರ್ಕ ಹೊಂದಿದೆ ಎಂದು ಹೇಳಲಾಗುತ್ತಿದೆ.

ಶುಕ್ರವಾರದವರೆಗೆ ಸುಮಾರು 225 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿಕೊಳ್ಳಲಾಗಿದೆ. ಐಟಿ ಅಧಿಕಾರಿಗಳು ಶನಿವಾರ ಬಲಂಗೀರ್​ ಜಿಲ್ಲೆಯ ಸುದಾಪಾರ ಪ್ರದೇಶದಲ್ಲಿ ಸ್ವದೇಶಿ ನಿರ್ಮಿತ ಮದ್ಯ ತಯಾರಕರ ಮನೆಯಿಂದ ಇನ್ನೂ 20 ಬ್ಯಾಗ್​ಗಳ ನಗದನ್ನು ವಶಪಡಿಸಿಕೊಂಡಿದ್ದಾರೆ. ಸುದಾಪರದಲ್ಲಿ ವಶಪಡಿಸಿಕೊಂಡ ಹಣದ ಮೊತ್ತವನ್ನು ಎಣಿಕೆ ಮಾಡಲಾಗುತ್ತಿದೆ. ಇದು ಅಂದಾಜು 50 ಕೋಟಿ ರೂ.ಗಳು ಇರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹಣ ತುಂಬಿದ್ದ 156 ಬ್ಯಾಗ್‌ಗಳನ್ನು ಶುಕ್ರವಾರದಂದು ಎಣಿಕೆಗಾಗಿ ಬಲಂಗೀರ್​ನಲ್ಲಿರುವ ಎಸ್‌ಬಿಐ ಮುಖ್ಯ ಶಾಖೆಗೆ ಐಟಿ ಅಧಿಕಾರಿಗಳು ಕೊಂಡೊಯ್ದಿದ್ದರು. ಮತ್ತೊಂದೆಡೆ, ಆದಾಯ ತೆರಿಗೆ ಇಲಾಖೆಯ ಡಿಜಿ ಸಂಜಯ್ ಬಹದ್ದೂರ್ ಕಳೆದ ಮೂರು ದಿನಗಳಿಂದ ಭುವನೇಶ್ವರದಲ್ಲೇ ಮೊಕ್ಕಾಂ ಹೂಡಿದ್ದಾರೆ. ಆದರೆ, ಐಟಿ ದಾಳಿಗಳ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ ಅವರು, ನಮ್ಮ ಅಧಿಕಾರಿಗಳು ತಮ್ಮ ಕಾರ್ಯವನ್ನೂ ಇನ್ನೂ ಮುಂದುವರಿಸಿದ್ದಾರೆ ಎಂದು ಶನಿವಾರ ಮಾಧ್ಯಮದವರಿಗೆ ಹೇಳಿದ್ದಾರೆ.

ಸುಮಾರು 150 ಅಧಿಕಾರಿಗಳು ಮದ್ಯ ತಯಾರಿಕೆ ಕಂಪನಿ ಮೇಲಿನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಅಲ್ಲದೇ, ಐಟಿ ಇಲಾಖೆಯು ಹೈದರಾಬಾದ್‌ನಿಂದ ಇನ್ನೂ 20 ಅಧಿಕಾರಿಗಳ ತಂಡವನ್ನು ಕರೆಸಿಕೊಂಡಿದೆ. ಈ ಅಧಿಕಾರಿಗಳು ದಾಳಿಯ ಸಮಯದಲ್ಲಿ ವಿವಿಧ ಸ್ಥಳಗಳಿಂದ ವಶಪಡಿಸಿಕೊಂಡ ಡಿಜಿಟಲ್ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಷ್ಟೇ ಅಲ್ಲ, ವಶಪಡಿಸಿಕೊಂಡ ಹಣವನ್ನು ಸಂಬಲ್‌ಪುರ ಮತ್ತು ಬಲಂಗೀರ್​ನಲ್ಲಿರುವ ಎರಡು ಎಸ್‌ಬಿಐ ಶಾಖೆಗಳಲ್ಲಿ ಎಣಿಕೆ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ. ನಗದು ಹಣದಲ್ಲಿ ಹೆಚ್ಚಾಗಿ 500 ರೂ. ಮುಖಬೆಲೆಯ ನೋಟುಗಳು ಇದ್ದು, ಎಣಿಕೆಯು ಕಠಿಣ ಕಾರ್ಯವಾಗಿದೆ. ಹೆಚ್ಚಿನ ಒತ್ತಡದಿಂದ ಯಂತ್ರಗಳಲ್ಲಿ ದೋಷಗಳು ಕಂಡುಬರುತ್ತಿವೆ. ಈ ಕಾರ್ಯ ಚುರುಕುಗೊಳಿಸಲು ವಿವಿಧ ಬ್ಯಾಂಕ್‌ಗಳಿಂದ ನೋಟು ಎಣಿಕೆ ಯಂತ್ರಗಳನ್ನು ತರಿಸಲಾಗಿದೆ ಎಂದೂ ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ: ಮದ್ಯ ತಯಾರಿಕಾ ಕಂಪನಿ ಮೇಲೆ ಐಟಿ ದಾಳಿ: ₹300 ಕೋಟಿಗೂ ಅಧಿಕ ನಗದು ಪತ್ತೆ!

Last Updated :Dec 9, 2023, 5:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.