ETV Bharat / bharat

ಕೊರೊನಾ ಮುನ್ನೆಚ್ಚರಿಕೆ: ಜೀನೋಮ್​ ಸೀಕ್ವೆನ್ಸಿಂಗ್ ಹೆಚ್ಚಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ

author img

By

Published : Dec 21, 2022, 8:59 AM IST

covid-positive-cases
ಜೀನೋಮ್​ ಸೀಕ್ವೆನ್ಸಿಂಗ್ ಹೆಚ್ಚಿಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ

ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಕೊರೊನಾ ವಿಪರೀತ ಏರಿಕೆ ಕಾಣುತ್ತಿರುವ ಕಾರಣ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸಿ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ.

ನವದೆಹಲಿ: ಚೀನಾ, ಅಮೆರಿಕ, ಬ್ರೆಜಿಲ್​ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಕೋವಿಡ್​​ ಹಠಾತ್​ ಏರಿಕೆ ಕಾಣುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ದೇಶದಲ್ಲಿ ಪಾಸಿಟಿವ್​ ಪ್ರಕರಣಗಳ ಜೀನೋಮ್​ ಸೀಕ್ವೆನ್ಸಿಂಗ್​ ಹೆಚ್ಚಿಸುವಂತೆ ಎಲ್ಲ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಕೋವಿಡ್​ ಪರಿಸ್ಥಿತಿ ಪರಾಮರ್ಶೆಗೆ ಇಂದು ಕೇಂದ್ರ ಸಚಿವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.

ಈ ಸಂಬಂಧ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಪತ್ರ ರವಾನಿಸಿದೆ. ಜಪಾನ್, ಅಮೆರಿಕ, ಕೊರಿಯಾ, ಬ್ರೆಜಿಲ್ ಮತ್ತು ಚೀನಾದಲ್ಲಿ ಕೊರೊನಾ ವೈರಸ್​ ತಾಂಡವ ಜೋರಾಗಿದೆ. ಇದು ವಿಶ್ವದ ಇತರೆ ರಾಷ್ಟ್ರಗಳಿಗೆ ಆತಂಕ ತಂದಿದೆ. ಭಾರತದಲ್ಲಿ ಮೂರು ತಿಂಗಳಲ್ಲೇ ಅತಿ ಕಡಿಮೆ ಕೇಸ್​ಗಳು ದಾಖಲಾಗಿದ್ದರೂ, ಹೊಸ ರೂಪಾಂತರಿಗಳನ್ನು ಪತ್ತೆ ಮಾಡಲು ಸ್ಯಾಂಪಲ್​ಗಳನ್ನು ಜೀನೋಮ್​ ಸೀಕ್ವೆನ್ಸಿಂಗ್ ಲ್ಯಾಬ್​ಗೆ ಕಳುಹಿಸಲು ಸೂಚಿಸಲಾಗಿದೆ.

ಹೆಚ್ಚು ಟೆಸ್ಟ್​ಗಳನ್ನು ಮಾಡುವ ಮೂಲಕ ಕೊರೊನಾದ ಹೊಸ ರೂಪಾಂತರಿಗಳನ್ನು ಬೇಗನೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ. ಪರೀಕ್ಷೆ-ಜಾಡು-ಚಿಕಿತ್ಸೆ-ಲಸಿಕೆಯ ವಿಧಾನವನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ವೈರಸ್​ ಹರಡುವುದನ್ನು ತಡೆಯಬಹುದು ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಆರೋಗ್ಯ ಸಚಿವಾಲಯವು ಹೊರಡಿಸಿದ ಕೊರೊನಾ ಮಾರ್ಗಸೂಚಿಗಳಾದ ಶಂಕಿತ ಮತ್ತು ದೃಢೀಕೃತ ಪ್ರಕರಣಗಳ ಪತ್ತೆ, ಪ್ರತ್ಯೇಕತೆ, ಪರೀಕ್ಷೆ ಮತ್ತು ಲಸಿಕೆ ನಿಯಮಗಳನ್ನು ಪಾಲಿಸಲು ಕೂಡ ಸೂಚಿಸಲಾಗಿದೆ.

ಓದಿ: ಅನ್ಯಧರ್ಮೀಯರ ಹಿಟ್​ ಲಿಸ್ಟ್​ ತಯಾರಿಸಿದ್ದ ಪಿಎಫ್​ಐ ರಹಸ್ಯ ವಿಭಾಗ: ಕೋರ್ಟ್​ಗೆ ಎನ್​ಐಎ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.