ETV Bharat / bharat

ಪ್ರೀತಿಯ ಮೇಲೆ ಹಗೆ; ನಡುರಸ್ತೆಯಲ್ಲೇ ನಡೀತು ಯುವಕನ ಬರ್ಬರ ಹತ್ಯೆ

author img

By

Published : May 5, 2022, 10:02 AM IST

Updated : May 6, 2022, 12:09 PM IST

honor-killing
ವ್ಯಕ್ತಿಯ ಬರ್ಬರ ಹತ್ಯೆ

ಕುಟುಂಬಸ್ಥರ ವಿರೋಧದ ಮಧ್ಯೆ ಮದುವೆಯಾಗಿದ್ದಕ್ಕೆ ಕೋಪಗೊಂಡ ಯುವತಿಯ ಮನೆಯವರು ಯುವಕನನ್ನು ಕಬ್ಬಿಣದ ರಾಡ್​, ಚಾಕುವಿನಿಂದ ತಿವಿದು ಕೊಲೆ ಮಾಡಿದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಯುವತಿಯ ಸಹೋದರ ಸೇರಿ ಇಬ್ಬರ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹೈದರಾಬಾದ್: ಕುಟುಂಬಸ್ಥರ ವಿರೋಧದ ಮಧ್ಯೆ ಪ್ರೀತಿಸಿ ಮದುವೆಯಾಗಿದ್ದಕ್ಕೆ ವ್ಯಕ್ತಿಯನ್ನು, ಆತನ ಪತ್ನಿಯ ಮುಂದೆಯೇ ನಡುರಸ್ತೆಯಲ್ಲಿ ಬರ್ಬರವಾಗಿ ಕೊಚ್ಚಿ ಕೊಂದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ರಂಗಾರೆಡ್ಡಿ ಜಿಲ್ಲೆಯ ಮಾರ್ಪಳ್ಳಿ ಗ್ರಾಮದ ವಿಲ್ಲುಪುರಂ ನಾಗರಾಜ್​ ಮೃತ ವ್ಯಕ್ತಿ. ನಾಗರಾಜ ಮಾರ್ಪಳ್ಳಿ ಸಮೀಪದ ಘನಾಪುರ ಗ್ರಾಮದ ಸೈಯದ್ ಅಶ್ರೀನ್ ಸುಲ್ತಾನಾ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇದು ಉಭಯ ಕುಟುಂಬಗಳ ವಿರೋಧಕ್ಕೆ ಕಾರಣವಾಗಿತ್ತು.

ಅಲ್ಲದೇ, ಕುಟುಂಬದವರ ಅನುಮತಿ ಇಲ್ಲದೇ ಯುವತಿಯನ್ನು ಕರೆದುಕೊಂಡು ಹೋಗಿ ಗೌಪ್ಯವಾಗಿ ಮದುವೆಯಾಗಿದ್ದ ನಾಗರಾಜ್,​ ಹೈದರಾಬಾದ್​ನಲ್ಲಿ ಪ್ರೀತಿಸಿ ಮದುವೆಯಾದ ಹೆಂಡತಿಯ ಜೊತೆ ಜೀವನ ನಡೆಸುತ್ತಿದ್ದರು. ಇದು ಯುವತಿಯ ಮನೆಯವರನ್ನು ಕೆರಳಿಸಿದೆ. ನಿನ್ನೆ ರಾತ್ರಿ (ಬುಧವಾರ) ಯುವತಿಯ ಅಣ್ಣ ಮತ್ತು ಆತನ ಸ್ನೇಹಿತ ಮಾರಕಾಯುಧಗಳಿಂದ ನಾಗರಾಜ್​ನ ಮೇಲೆ ದಾಳಿ ನಡೆಸಿ ಬರ್ಬರವಾಗಿ ಕೊಂದು ಹಾಕಿದ್ದಾರೆ.

ನಡುರಸ್ತೆಯ ಮೇಲೆ ಯುವಕನ ಬರ್ಬರ ಹತ್ಯೆ
ಹತ್ಯೆಯಾದ ಯುವಕ, ಮಾಧ್ಯಮಗಳ ಜೊತೆ ಮಾತನಾಡುತ್ತಿರುವ ಯುವತಿ

ವಿವರ: ನಾಗರಾಜ ಮತ್ತು ಅಶ್ರೀನ್​ ಸುಲ್ತಾನಾ 4 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದನ್ನು ತಿಳಿದ ಅಶ್ರಿನ್ ಕುಟುಂಬಸ್ಥರು ಇಬ್ಬರಿಗೂ ಎಚ್ಚರಿಕೆ ನೀಡಿದ್ದರು. ಅಶ್ರೀನ್ ಅವರನ್ನು ಮದುವೆಯಾಗಲು ನಿರ್ಧರಿಸಿದ ನಾಗರಾಜ್, ಕೆಲ ತಿಂಗಳ ಹಿಂದೆ ಹೈದರಾಬಾದ್‌ನ ಕಾರು ಕಂಪನಿಯೊಂದರಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸಕ್ಕೆ ಸೇರಿದ್ದರು. ಬಳಿಕ ಇಬ್ಬರೂ ಜನವರಿ 31 ರಂದು ಗೌಪ್ಯವಾಗಿ ಲಾಲ್ ದರ್ವಾಜಾದ ಆರ್ಯ ಸಮಾಜದಲ್ಲಿ ವಿವಾಹವಾಗಿದ್ದಾರೆ. ಬಳಿಕ ಹೈದರಾಬಾದ್​ನಲ್ಲಿ ರಹಸ್ಯವಾಗಿ ಜೀವನ ಸಾಗಿಸುತ್ತಿದ್ದರು. ಈ ವಿಷಯ ಯುವತಿಯ ಮನೆಯವರನ್ನು ಕೆರಳಿಸಿತ್ತು.

ಹಿಂಬಾಲಿಸಿ ಬಂದು ದಾಳಿ: ಇಬ್ಬರೂ ಹೈದರಾಬಾದ್​ನಲ್ಲಿ ವಾಸವಾಗಿದ್ದನ್ನು ಪತ್ತೆ ಮಾಡಿದ ಯುವತಿಯ ಕುಟುಂಬಸ್ಥರು ನಾಗರಾಜನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಬುಧವಾರ ರಾತ್ರಿ ನಾಗರಾಜ ಮತ್ತು ಆಶ್ರೀನ್ ಮನೆಯಿಂದ ಹೊರಗೆ ಬಂದಾಗ ಅಶ್ರೀನ್ ಸಹೋದರ ಮತ್ತು ಆತನ ಸ್ನೇಹಿತ ಬೈಕ್​ನಲ್ಲಿ ಹಿಂಬಾಲಿಸಿ ಬಂದು ಹಲ್ಲೆ ಮಾಡಿದ್ದಾರೆ. ನಾಗರಾಜ್​ ಮೇಲೆ ಕಬ್ಬಿಣದ ರಾಡ್​ನಿಂದ ಹೊಡೆದಿದ್ದಲ್ಲದೇ, ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ. ನಾಗರಾಜನ ಸಂಬಂಧಿಕರು ಆಶ್ರೀನ್​ರನ್ನು ಕರೆದುಕೊಂಡು ಹೋಗಿದ್ದಾರೆ. ಕೊಲೆಯ ಬಗ್ಗೆ ಸಾಕ್ಷ್ಯ ಸಂಗ್ರಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಿಂದ ಆಕ್ರೋಶಗೊಂಡ ಬಿಜೆಪಿ ಮುಖಂಡರು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಪೊಲೀಸ್ ಠಾಣೆ ಎದುರು ಧರಣಿ ನಡೆಸಿದರು.

ಇದನ್ನೂ ಓದಿ: ಪಿಎಸ್‌ಐ ಅಕ್ರಮ: ಡಿವೈಎಸ್​ಪಿ ವಿಚಾರಣೆ, ಮತ್ತೊಬ್ಬ ಕಾನ್ಸ್​ಟೇಬಲ್ ಬಂಧನ

Last Updated :May 6, 2022, 12:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.