ETV Bharat / bharat

'ಮಹಾ' ರಾಜಕಾರಣ: ಸರ್ಕಾರದಿಂದ ಸಂಪೂರ್ಣ ಮಾಹಿತಿ ಕೇಳಿದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ

author img

By

Published : Jun 28, 2022, 12:39 PM IST

Governor Bhagat Singh Koshary
ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ

ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು ವಿಚಾರವಾಗಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಮಧ್ಯಪ್ರವೇಶಿಸಿದ್ದಾರೆ. ಜೂನ್ 22, 23 ಮತ್ತು 24ರ ಮೂರು ದಿನಗಳಲ್ಲಿ ಯಾವೆಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದರ ಬಗ್ಗೆ ಮಾಹಿತಿ ಕೇಳಿದ್ದಾರೆ.

ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರ ರಾಜಕೀಯ ಕದನ ಮುಂದುವರೆದಿದೆ. ಶಿವಸೇನಾ ನಾಯಕ ಏಕನಾಥ್ ಶಿಂಧೆ ಅವರ ತಂಡದ ಬಂಡಾಯ, ರಾಜ್ಯದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಇದೀಗ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಮಧ್ಯಪ್ರವೇಶಿಸಿದ್ದಾರೆ.

ಜೂನ್ 22 ರಿಂದ 24ರ ವರೆಗೆ ರಾಜ್ಯ ಸರ್ಕಾರ ಹೊರಡಿಸಿರುವ ಎಲ್ಲ ಸರ್ಕಾರಿ ನಿರ್ಣಯಗಳು (ಜಿಆರ್) ಮತ್ತು ಸುತ್ತೋಲೆಗಳ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಸೋಮವಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ. ಮಹಾರಾಷ್ಟ್ರ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಪ್ರವೀಣ್ ದಾರೆಕರ್ ಅವರು ಕಳೆದ ವಾರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ತಮ್ಮ ಬೇಡಿಕೆ ಸಲ್ಲಿಸಿದ್ದರು. ಸರ್ಕಾರಿ ಆದೇಶಗಳನ್ನು ತಪ್ಪಾಗಿ ಹೊರಡಿಸಿರುವ ವಿಚಾರದಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದರು.

ಪತ್ರದಲ್ಲಿ ಹೇಳಿದ್ದೇನು? ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿ ಅತ್ಯಂತ ಅಸ್ಥಿರವಾಗಿದೆ. ಶಿವಸೇನೆ ಪಕ್ಷದಲ್ಲಿ ದೊಡ್ಡ ಪ್ರಮಾಣದ ಬಂಡಾಯ ಎದ್ದ ನಂತರ ಸ್ವತಃ ರಾಜ್ಯದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡುವ ಇಂಗಿತವನ್ನು ಪ್ರಕಟಿಸಿದ್ದಾರೆ. ಮುಖ್ಯಮಂತ್ರಿ ಅಧಿಕೃತ ನಿವಾಸವನ್ನೂ ಖಾಲಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯ ಸರ್ಕಾರ ನಿರ್ದಾಕ್ಷಣ್ಯವಾಗಿ ಸರ್ಕಾರಿ ಆದೇಶಗಳನ್ನು (ಜಿಆರ್) ಹೊರಡಿಸುವ ಮೂಲಕ ಕೆಲ ನಿರ್ಧಾರವನ್ನು ಜಾರಿಗೆ ತರುತ್ತಿದೆ. ಮಹಾವಿಕಾಸ್ ಅಘಾಡಿ ಸರ್ಕಾರ ಹಿಂದೆಂದೂ ಈ ರೀತಿ ನಿರ್ಧಾರಗಳನ್ನು ತೆಗೆದುಕೊಂಡಿರಲಿಲ್ಲ.

ಇದನ್ನೂ ಓದಿ: ಸಂಜಯ್​ ರಾವುತ್​ ಇಂದು ಇಡಿ ವಿಚಾರಣೆಗೆ ಹಾಜರಾಗ್ತಾರಾ?

ಇಂದು ಮಾಧ್ಯಮಗಳಲ್ಲೂ ವಿವರವಾದ ಸುದ್ದಿ ಪ್ರಕಟವಾಗುತ್ತಿದೆ. 48 ಗಂಟೆಗಳಲ್ಲಿ 160 ಸರ್ಕಾರಿ ಆದೇಶಗಳನ್ನು ಹೊರಡಿಸಲಾಗಿದೆ. ಪೊಲೀಸ್ ಪಡೆ ಮತ್ತು ಪ್ರಮುಖ ಇಲಾಖೆಗಳಲ್ಲಿಯೂ ಬದಲಾವಣೆಗಳನ್ನು ಮಾಡಲಾಗುತ್ತಿದೆ. ನೀವು ಕೂಡಲೇ ಮಧ್ಯ ಪ್ರವೇಶಿಸಿ ಇದಕ್ಕೆ ಕಡಿವಾಣ ಹಾಕಬೇಕು ಎಂದು ಪ್ರತಿಪಕ್ಷ ನಾಯಕರು ಮನವಿ ಮಾಡಿದ್ದರು.


ETV Bharat Logo

Copyright © 2024 Ushodaya Enterprises Pvt. Ltd., All Rights Reserved.