ETV Bharat / bharat

'ದೇಶದ ಭದ್ರತೆಗೆ ಅಪಾಯ': ಜಮ್ಮು ಕಾಶ್ಮೀರದ 4 ಸರ್ಕಾರಿ ನೌಕರರು ವಜಾ

author img

By ANI

Published : Nov 22, 2023, 2:00 PM IST

Four govt employees sacked in J-K in 'interest of security of State'
Four govt employees sacked in J-K in 'interest of security of State'

ದೇಶದ ಭದ್ರತೆಗೆ ಅಪಾಯ ತರಬಹುದು ಎಂಬ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರ ಸರ್ಕಾರ ನಾಲ್ವರು ಸರ್ಕಾರಿ ನೌಕರರನ್ನು ವಜಾಗೊಳಿಸಿದೆ.

ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ದೇಶದ ಭದ್ರತೆಗೆ ಅಪಾಯ ತಂದೊಡ್ಡಬಹುದು ಎಂಬ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಕಾಶ್ಮೀರ ವೈದ್ಯರ ಸಂಘದ ಅಧ್ಯಕ್ಷ ಡಾ.ನಿಸಾರ್-ಉಲ್-ಹಸನ್ ಸೇರಿದಂತೆ ನಾಲ್ವರು ಸರ್ಕಾರಿ ನೌಕರರನ್ನು ವಜಾಗೊಳಿಸಿದೆ.

ಸಂವಿಧಾನದ 311 (2) (ಸಿ) ವಿಧಿಯಡಿ ನೌಕರರನ್ನು ವಜಾಗೊಳಿಸಲಾಗಿದೆ. ಆಯಾ ಸಂದರ್ಭಗಳಲ್ಲಿ ದೇಶದ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ನೌಕರನ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ವಿಚಾರ ದೇಶದ ರಾಷ್ಟ್ರಪತಿಗಳು ಅಥವಾ ರಾಜ್ಯಪಾಲರಿಗೆ ಮನವರಿಕೆಯಾದಲ್ಲಿ ಅಂಥ ನೌಕರನ ವಿರುದ್ಧ ಯಾವುದೇ ತನಿಖೆ ನಡೆಸದೆ ಮತ್ತು ಆ ನೌಕರನಿಗೆ ಸ್ಪಷ್ಟೀಕರಣ ನೀಡುವ ಅವಕಾಶ ನೀಡದೆ ಅವನನ್ನು ನೌಕರಿಯಿಂದ ವಜಾಗೊಳಿಸುವ ಅಧಿಕಾರವನ್ನು ಸಂವಿಧಾನದ 311 (2) (ಸಿ) ವಿಧಿ ಸರ್ಕಾರಕ್ಕೆ ನೀಡುತ್ತದೆ.

ವಜಾಗೊಂಡ ನೌಕರರು ದೇಶದ ಭದ್ರತೆಗೆ ಮಾರಕವಾಗಿದ್ದಾರೆ ಎಂದು ಆರೋಪಿಸಲಾಗಿದೆ ಮತ್ತು ದೇಶದ ಭದ್ರತೆಯ ಹಿತದೃಷ್ಟಿಯಿಂದ ಪ್ರಕರಣದ ಬಗ್ಗೆ ತನಿಖೆ ನಡೆಸುವುದು ಸೂಕ್ತವಲ್ಲ ಎಂದು ಬುಧವಾರ ಹೊರಡಿಸಿದ ಸರ್ಕಾರಿ ಆದೇಶಗಳಲ್ಲಿ ತಿಳಿಸಲಾಗಿದೆ.

ಕುಪ್ವಾರಾದ ಕುನಾನ್ ಗ್ರಾಮದ ಪೊಲೀಸ್ ಕಾನ್​ಸ್ಟೆಬಲ್ ಅಬ್ದುಲ್ ಮಜೀದ್ ಭಟ್, ಕುಪ್ವಾರಾದ ಶಿಕ್ಷಕ ಫಾರೂಕ್ ಅಹ್ಮದ್ ಮಿರ್, ಉನ್ನತ ಶಿಕ್ಷಣ ಇಲಾಖೆಯ ಪ್ರಯೋಗಾಲಯ ನೌಕರ ಮತ್ತು ದಕ್ಷಿಣ ಕಾಶ್ಮೀರದ ಕುಲ್ಗಾಮ್ ನಿವಾಸಿ ಅಬ್ದುಲ್ ಸಲಾಮ್ ರಾಥರ್ ಇವರು ವಜಾಗೊಂಡ ಇತರ ಮೂವರು ನೌಕರರರಾಗಿದ್ದಾರೆ.

"ಪ್ರಕರಣದ ವಾಸ್ತವಾಂಶಗಳು ಮತ್ತು ಸಂದರ್ಭಗಳನ್ನು ಪರಿಗಣಿಸಿದ ನಂತರ ಮತ್ತು ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, ಶ್ರೀನಗರದ ಎಸ್ಎಂಎಚ್ಎಸ್ ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ (ವೈದ್ಯಕೀಯ) ಡಾ.ನಿಸಾರ್-ಉಲ್-ಹಸನ್ ಅವರ ಚಟುವಟಿಕೆಗಳ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಮಾಹಿತಿ ಪಡೆದಿದ್ದಾರೆ ಮತ್ತು ಅವರನ್ನು ಸೇವೆಯಿಂದ ವಜಾಗೊಳಿಸಲು ಆದೇಶಿಸಲಾಗಿದೆ" ಎಂದು ನವೆಂಬರ್ 21ರಂದು ಸಾಮಾನ್ಯ ಆಡಳಿತ ಇಲಾಖೆ ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

"ಭಾರತದ ಸಂವಿಧಾನದ 311 ನೇ ವಿಧಿಯ ಷರತ್ತು (2) ರ ಉಪ-ಷರತ್ತು (ಸಿ) ಅಡಿಯಲ್ಲಿ ಲೆಫ್ಟಿನೆಂಟ್ ಗವರ್ನರ್​ ಅವರಿಗೆ ವಿಷಯದ ಮನವರಿಕೆಯಾಗಿರುವಾಗ ದೇಶದ ಭದ್ರತೆಯ ಹಿತದೃಷ್ಟಿಯಿಂದ ಡಾ.ನಿಸಾರ್-ಉಲ್-ಹಸನ್ ಪ್ರಕರಣದಲ್ಲಿ ವಿಚಾರಣೆ ನಡೆಸುವುದು ಸೂಕ್ತವಲ್ಲ" ಎಂದು ಅದು ಹೇಳಿದೆ.

ಉತ್ತರ ಕಾಶ್ಮೀರದ ಸೊಪೋರ್​ನ ಅಚಬಾಲ್ ಗ್ರಾಮದ ನಿವಾಸಿ ಡಾ.ನಿಸಾರ್-ಉಲ್-ಹಸನ್ ಅವರು ಕಾಶ್ಮೀರದ ವೈದ್ಯರ ಸಂಘದ ಅಧ್ಯಕ್ಷರಾಗಿ ಸರ್ಕಾರ ಮತ್ತು ಅದರ ನೀತಿಗಳ ವಿರುದ್ಧ ಸತತವಾಗಿ ಟೀಕೆ ಮಾಡುತ್ತಿದ್ದರು. ದೇಶದ ಭದ್ರತೆಗೆ ಬೆದರಿಕೆ ಒಡ್ಡಿದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಏಪ್ರಿಲ್ 2021ರಿಂದ ಸುಮಾರು 55 ಉದ್ಯೋಗಿಗಳನ್ನು ವಜಾಗೊಳಿಸಿದೆ.

ಇದನ್ನೂ ಓದಿ: ಕರಾರುವಾಕ್ಕಾಗಿ ಗುರಿ ಹೊಡೆದುರುಳಿಸಿದ ಸ್ವದೇಶಿ ನಿರ್ಮಿತ 'ಇಂಫಾಲ್' ಯುದ್ಧನೌಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.