ETV Bharat / bharat

ರಾಷ್ಟ್ರಕ್ಕಾಗಿ ಆಡುವುದು ಮತ್ತೆ ಮಹತ್ವ ಪಡೆದುಕೊಳ್ಳಲಿದೆ.. ಕೆಲವೇ ಲೀಗ್​​ಗಳು ಮಾತ್ರವೇ​ ಉಳಿಯಲಿವೆ: ಗಂಗೂಲಿ

author img

By

Published : Feb 6, 2023, 7:51 PM IST

eventually-leagues-with-cricketing-ecosystem-will-survive-rest-will-fade-away-ganguly
eventually-leagues-with-cricketing-ecosystem-will-survive-rest-will-fade-away-ganguly

ಲೀಗ್ ಮಾದರಿಯ ಕ್ರಿಕೆಟ್​ ಬಗ್ಗೆ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಮಾತನಾಡಿದ್ದಾರೆ. ದಿನಕಳೆದಂತೆ ಗಟ್ಟಿ ವ್ಯವಸ್ಥೆಯನ್ನು ಹೊಂದಿರುವ ಲೀಗ್‌ಗಳು ಮಾತ್ರ ಉಳಿಯಲಿದ್ದು, ರಾಷ್ಟ್ರೀಯ ತಂಡಕ್ಕೆ ಆಡುವುದು ಮಹತ್ವ ಪಡೆಯಲಿದೆ ಎಂದು ಅವರು ಹೇಳಿದ್ದಾರೆ.

ಕೋಲ್ಕತ್ತಾ: ಹೆಚ್ಚುತ್ತಿರುವ T20 ಲೀಗ್‌ಗಳಿಂದ ಆಟಗಾರರು ಆಮಿಷಕ್ಕೆ ಒಳಗಾಗುವುದು ಅಲ್ಪಾವಧಿಯ ವಿದ್ಯಮಾನವಾಗಿದೆ. ಅಂತಿಮವಾಗಿ ಕೆಲವೇ ಕೆಲ ಆರ್ಥಿಕವಾಗಿ ಸಬಲವಾದ ಸುಸ್ಥಿರ ಲೀಗ್‌ಗಳು ಮಾತ್ರ ಕ್ರಿಕೆಟ್ ಜಗತ್ತಿನಲ್ಲಿ ಉಳಿಯಲಿವೆ ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಸೋಮವಾರ ಹೇಳಿದ್ದಾರೆ. ಪ್ರಪಂಚದಾದ್ಯಂತ ಟಿ 20 ಲೀಗ್‌ಗಳು ಅಣಬೆಗಳಂತೆ ಹುಟ್ಟಿಕೊಂಡಿರುವುದರಿಂದ, ಆಟಗಾರರು ರಾಷ್ಟ್ರೀಯ ತಂಡಕ್ಕೆ ಆಡುವುದಕ್ಕಿಂತ ಫ್ರಾಂಚೈಸಿ ಕ್ರಿಕೆಟ್‌ಗೆ ಆದ್ಯತೆ ನೀಡಲು ಪ್ರಾರಂಭಿಸಿದ್ದಾರೆ. ಪ್ರಖ್ಯಾತಿ ಪಡೆದಿರುವ ಬಿಗ್ ಬ್ಯಾಷ್ ಲೀಗ್ ಮುಗಿದಿರುವ ಈ ಸಮಯದಲ್ಲಿ ಯುಎಇ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಮತ್ತಷ್ಟು ಲೀಗ್​ನ ಉದ್ಘಾಟನಾ ಪಂದ್ಯಗಳು ಆರಂಭವಾಗಿರುವುದು ಗಮನಾರ್ಹ.

ಈ ವರ್ಷದ ಕೊನೆಯಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಹ ಲೀಗ್ ಯೋಜಿಸಲಾಗಿದೆ. ಆದಾಗ್ಯೂ, ದೀರ್ಘಾವಧಿಯಲ್ಲಿ ಗಟ್ಟಿ ವ್ಯವಸ್ಥೆಯನ್ನು ಹೊಂದಿರುವ ಲೀಗ್‌ಗಳು ಮಾತ್ರ ಉಳಿಯುತ್ತವೆ ಎಂದು ಗಂಗೂಲಿ ಅಭಿಪ್ರಾಯಪಟ್ಟರು. ನಾವು ಪ್ರಪಂಚದಾದ್ಯಂತದ ಲೀಗ್‌ಗಳ ಬಗ್ಗೆ ಮಾತನಾಡುತ್ತಲೇ ಇರುತ್ತೇವೆ, ನೀವು ಐಪಿಎಲ್ ಅನ್ನು ನೋಡಿದರೆ ಅದೊಂದು ವಿಭಿನ್ನ ವ್ಯವಸ್ಥೆ ಹೊಂದಿದೆ ಮತ್ತು ವಿಭಿನ್ನ ಲೀಗ್‌ ಆಗಿದೆ. ಆಸ್ಟ್ರೇಲಿಯಾದಲ್ಲಿ ಬಿಗ್ ಬ್ಯಾಷ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಯುಕೆಯಲ್ಲಿ ದಿ ಹಂಡ್ರೆಡ್ ಜನಪ್ರಿಯವಾಗಿದೆ. ಇನ್ನು ನಾನು ದಕ್ಷಿಣ ಆಫ್ರಿಕಾದಲ್ಲಿ ಸಹ ಲೀಗ್ ಚೆನ್ನಾಗಿ ನಡೆಯುತ್ತಿದೆ, ಕಳೆದ ಮೂರು ವಾರಗಳಿಂದ ನಾನು ಅದನ್ನು ವೀಕ್ಷಿಸುತ್ತಿದ್ದೇನೆ ಎಂದು ಗಂಗೂಲಿ ಇಲ್ಲಿ ನಡೆದ ಕ್ರೀಡಾ ಸಮಾರಂಭದಲ್ಲಿ ತಮ್ಮ ಅನುಭವ ಹಂಚಿಕೊಂಡರು.

ಮುಂದಿನ ನಾಲ್ಕೈದು ವರ್ಷಗಳಲ್ಲಿ ಎಲ್ಲ ಗೊತ್ತಾಗುತ್ತೆ: ಈ ಎಲ್ಲ ಲೀಗ್‌ಗಳಲ್ಲಿ ಸಾಮಾನ್ಯವಾದ ವಿಷಯವೆಂದರೆ ಅವರು ಕ್ರಿಕೆಟ್ ಜನಪ್ರಿಯವಾಗಿರುವ ದೇಶಗಳಲ್ಲಿದ್ದಾರೆ. ಹಾಗಾಗಿ ಮುಂದಿನ ಸಮಯದಲ್ಲಿ ಅಂದರೆ ನಾಲ್ಕೈದು ವರ್ಷಗಳಲ್ಲಿ ಇದು ಒಂದು ಹಂತಕ್ಕೆ ಬರಲಿದೆ ಎಂದು ನಾನು ನಂಬುತ್ತೇನೆ. ಕೆಲವೇ ಕೆಲವು ಲೀಗ್​ಗಳು ಅಸ್ತಿತ್ವದಲ್ಲಿವೆ ಮತ್ತು ಯಾವುದು ಅಸ್ತಿತ್ವದಲ್ಲಿರುತ್ತದೆ ಎಂದು ನನಗೆ ತಿಳಿದಿದೆ. ಕೆಲವು ಲೀಗ್‌ಗಳು ಉಳಿಯುತ್ತವೆ ಮತ್ತು ಕೆಲವು ಮರೆಯಾಗುತ್ತವೆ.

ಏಕೆಂದರೆ ಅವೆಲ್ಲ ಅಷ್ಟು ಮುಖ್ಯವಲ್ಲ ಎಂಬುದನ್ನು ಆಟಗಾರರು ಅರ್ಥಮಾಡಿಕೊಳ್ಳುತ್ತಾರೆ. ಇದೀಗ ಆಟಗಾರರಿಗೆ ಇದು ಹೊಸದಾಗಿದೆ, ಹೀಗಾಗಿ ಪ್ರತಿಯೊಬ್ಬರೂ ಅದರ ಭಾಗವಾಗಲು ಬಯಸುತ್ತಾರೆ. ಆದ್ದರಿಂದಲೇ ಲೀಗ್​ನಲ್ಲಿ ಅಷ್ಟು ಜನ ಆಡುತ್ತಿರುವುದು ಎಂದು ಗಂಗೂಲಿ ಹೇಳಿದರು. ಆದರೆ, ಅಂತಿಮವಾಗಿ ದೇಶವೇ ಮುಖ್ಯ ಎಂಬ ಹಂತ ಮರಳುತ್ತದೆ. ಏಕೆಂದರೆ ಲೀಗ್​ನ ನಿರ್ದಿಷ್ಟ ವ್ಯವಸ್ಥೆಯಿಂದಾಗಿ ಕೆಲವೇ ಲೀಗ್​ಗಳು ಮಾತ್ರ ಉಳಿಯುತ್ತವೆ. 90 ರ ದಶಕದಲ್ಲಿ ಜಿಂಬಾಬ್ವೆ ವಿಶ್ವ ಕ್ರಿಕೆಟ್‌ನಲ್ಲಿ ಪ್ರಬಲ ಶಕ್ತಿಯಾಗಿತ್ತು. ಆದರೆ ಆ ದೇಶದಲ್ಲಿನ ಆಡಳಿತಾತ್ಮಕ ಸಮಸ್ಯೆಗಳಿಂದ ದೇಶದಲ್ಲಿ ಕ್ರಿಕೆಟ್ ಹಾಳಾಯಿತು ಎಂದು ಗಂಗೂಲಿ ತಿಳಿಸಿದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಣಗಾಡುತ್ತಿರುವ ತಂಡಗಳ ವಿಷಯದಲ್ಲಿ ಆಡಳಿತ ಸುಧಾರಣೆ ಮಾಡಬೇಕಿದೆ. ಇದನ್ನು ನಾನು ಹೇಳುತ್ತಲೇ ಇದ್ದೇನೆ. ನಾನು ಐದು ವರ್ಷಗಳ ಕಾಲ CAB ಅಧ್ಯಕ್ಷ ಮತ್ತು ನಂತರ ಮೂರು ವರ್ಷಗಳ ಕಾಲ BCCI ಅಧ್ಯಕ್ಷನಾಗಿದ್ದೆ. ICC ಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ. ಸಂಪೂರ್ಣ ರಚನೆ ಮತ್ತು ಬೆಂಬಲ ವ್ಯವಸ್ಥೆಯು ಆಟವನ್ನು ಸಾಧ್ಯವಾಗಿಸುತ್ತದೆ ಎಂಬುದನ್ನು ನಾನು ನೋಡಿದ್ದೇನೆ ಎಂದು ಅವರು ಇದೇ ವೇಳೆ ಹೇಳಿದರು.

ಇದನ್ನೂ ಓದಿ: 2023ರ ಮಹಿಳಾ ಟಿ-20 ವಿಶ್ವಕಪ್ - ಭಾರತ ತಂಡಕ್ಕೆ ಹರ್ಮನ್‌ಪ್ರೀತ್ ಕೌರ್ ಸಾರಥಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.