ETV Bharat / bharat

ಗ್ರಾನೈಟ್ ಹಗರಣ: ತೆಲಂಗಾಣ ಸಚಿವರ ಮನೆ, ಕಚೇರಿ ಸೇರಿ ಅನೇಕ ಕಡೆ ಇಡಿ - ಐಟಿ ಜಂಟಿ ದಾಳಿ

author img

By

Published : Nov 9, 2022, 8:39 PM IST

ed-raids-premises-linked-to-trs-minister-in-telangana
ಗ್ರಾನೈಟ್ ಹಗರಣ: ತೆಲಂಗಾಣ ಸಚಿವರ ಮನೆ, ಕಚೇರಿ ಸೇರಿ ಅನೇಕ ಕಡೆ ಇಡಿ - ಐಟಿ ಜಂಟಿ ದಾಳಿ

ತೆಲಂಗಾಣದಲ್ಲಿ ಕೆಲವು ಗ್ರಾನೈಟ್ ಕಂಪನಿಗಳು ಅಕ್ರಮ ಎಸಗಿವೆ ಎಂಬ ಎರಡು ದೂರುಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇದರ ಭಾಗವಾಗಿಯೇ ಸಚಿವ ಗಂಗುಲಾ ಕಮಲಾಕರ್ ಮನೆ ಮತ್ತು ಕಚೇರಿಯಲ್ಲಿ ಇಡಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ

ಹೈದರಾಬಾದ್‌ (ತೆಲಂಗಾಣ): ಗ್ರಾನೈಟ್ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ತೆಲಂಗಾಣ ಸಚಿವ ಮತ್ತು ಟಿಆರ್‌ಎಸ್ ನಾಯಕ ಗಂಗುಲಾ ಕಮಲಾಕರ್ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ದಾಳಿ ಮಾಡಿದೆ.

ಕೆಲವು ಗ್ರಾನೈಟ್ ಕಂಪನಿಗಳು ಅಕ್ರಮ ಎಸಗಿವೆ ಎಂಬ ಎರಡು ದೂರುಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಕರೀಂನಗರದ 9 ಗ್ರಾನೈಟ್ ಕಂಪನಿಗಳು ಅಕ್ರಮ ಎಸಗಿವೆ ಎಂದು ಕಳೆದ ವರ್ಷ ಸಿಬಿಐ, ಎನ್‌ಜಿಟಿ, ಕೇಂದ್ರ ಪರಿಸರ ಇಲಾಖೆಯಂತಹ ಕೇಂದ್ರ ತನಿಖಾ ಸಂಸ್ಥೆಗಳಿಗೆ ಪರಾಳ ಶೇಖರ್ ರಾವ್ ಎಂಬುವವರು ದೂರು ನೀಡಿದ್ದರು.

ಈ ಕುರಿತ ವಿವರಗಳನ್ನು ತನಿಖಾ ಸಂಸ್ಥೆಗಳಿಗೆ ನೀಡಲಾಗಿದೆ. 2019ರಲ್ಲಿ ಬಿಜೆಪಿ ಸಂಸದ ಬಂಡಿ ಸಂಜಯ್ ಕೂಡ ​​ಇದೇ ವಿಚಾರವಾಗಿ ಕೇಂದ್ರಕ್ಕೆ ದೂರು ನೀಡಿದ್ದರು. ಈ ಎರಡು ದೂರುಗಳ ಆಧಾರದ ಮೇಲೆ ತನಿಖಾ ಸಂಸ್ಥೆಗಳು ಶೋಧ ನಡೆಸುತ್ತಿವೆ.

ಇಡಿ ಮತ್ತು ಐಟಿ ಜಂಟಿ ದಾಳಿ: ಇಂದು ಇಡಿ ಮತ್ತು ಐಟಿ ಇಲಾಖೆಯ ಅಧಿಕಾರಿಗಳು 20 ತಂಡಗಳಾಗಿ ವಿಂಗಡಿಸಿ ಹೈದರಾಬಾದ್ ಮತ್ತು ಕರೀಂನಗರದ ಗ್ರಾನೈಟ್ ಕಂಪನಿಗಳ ಮಾಲೀಕರ ಮನೆ ಮತ್ತು ಕಚೇರಿಗಳಲ್ಲಿ ದಾಳಿ ಮಾಡಿ ತಪಾಸಣೆ ನಡೆಸಿದರು. ಹೈದರಾಬಾದ್‌ನ ಸೋಮಾಜಿಗುಡಾದಲ್ಲಿರುವ ಪಿಎಸ್‌ಆರ್ ಗ್ರಾನೈಟ್ಸ್ ಕಚೇರಿಗಳು ಮತ್ತು ಹೈದರ್‌ಗುಡಾದ ಉಪ್ಪಾರಪಲ್ಲಿಯಲ್ಲಿರುವ ಎಸ್‌ವಿಜಿ ಗ್ರಾನೈಟ್ಸ್ ಮುಖ್ಯಸ್ಥರ ಮನೆ ಮತ್ತು ಕಚೇರಿಗಳಲ್ಲೂ ಶೋಧ ನಡೆಸಲಾಗಿದೆ.

ಈ ವೇಳೆ ಕಂಪನಿಯ ಮುಖ್ಯಸ್ಥ ಶ್ರೀಧರ್ ರಾವ್ ಕರೀಂನಗರದ ಮೂರು ಗ್ರಾನೈಟ್ ಕ್ವಾರಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಗೋದಾಮಿನಲ್ಲಿ ಸಂಗ್ರಹವಾಗಿರುವ ಗ್ರಾನೈಟ್ ಅನ್ನು ಕ್ವಾರಿಗಳಿಂದ ಬಂದರುಗಳಿಗೆ ಸ್ಥಳಾಂತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅಧಿಕಾರಿಗಳು ಬಯಲು ಮಾಡಿದ್ದಾರೆ.

ಹಿಮಾಯತ್ ನಗರದ ಶ್ವೇತಾ ಗ್ರಾನೈಟ್ಸ್ ಸೇರಿದಂತೆ ಬಂಜಾರಾ ಹಿಲ್ಸ್‌ನಲ್ಲಿರುವ ಗ್ರಾನೈಟ್ ಕಚೇರಿ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗ್ಗೆಯಿಂದಲೇ ಅಧಿಕಾರಿಗಳು ವಿಶೇಷ ತಂಡಗಳಾಗಿ ವಿಂಗಡಿಸಿ ದಾಳಿ ನಡೆಸಿ, ಗ್ರಾನೈಟ್ ಕಂಪನಿಗಳು ಹವಾಲಾ, ಅಕ್ರಮ ಹಣ ವರ್ಗಾವಣೆ, ಅಕ್ರಮ ಗಣಿಗಾರಿಕೆ ಮೂಲಕ ನಿಯಮಗಳಿಗೆ ವಿರುದ್ಧವಾಗಿ ರಫ್ತು ಮಾಡಿರುವ ಮಾಹಿತಿ ಆಧರಿಸಿ ಅಧಿಕಾರಿಗಳು ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಚಿವ ಕಮಲಾಕರ್ ಮನೆ, ಕಚೇರಿಯಲ್ಲೂ ಶೋಧ: ಜಾರಿ ನಿರ್ದೇಶನಾಲಯ ಮತ್ತು ಐಟಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕರೀಂನಗರದ ಆರು ಪ್ರದೇಶಗಳಲ್ಲಿ ಶೋಧ ನಡೆಸಿದ್ದಾರೆ. ಕ್ರಿಶ್ಚಿಯನ್ ಕಾಲೋನಿಯಲ್ಲಿರುವ ಸಚಿವ ಗಂಗುಲಾ ಕಮಲಾಕರ್ ಮನೆಯಲ್ಲೂ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ. ಸಚಿವ ಕಮಲಾಕರ್ ಕುಟುಂಬ ಸದಸ್ಯರೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿದ್ದು, ಬೀಗ ತೆಗೆಯುವ ಯಂತ್ರ ತಂದು ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಜೊತೆಗೆ ಸಚಿವರ ಕಚೇರಿಯಲ್ಲೂ ಶೋಧ ಕಾರ್ಯ ನಡೆಸಿದ್ದಾರೆ.

ಕಾಮನರೋಡ್‌ನಲ್ಲಿರುವ ಅರವಿಂದ ಗ್ರಾನೈಟ್ಸ್ ಮತ್ತು ಮಂಕಮ್ಮ ತೋಟದ ಶ್ವೇತಾ ಗ್ರಾನೈಟ್ಸ್ ಸೇರಿದಂತೆ ಗ್ರಾನೈಟ್ ಅಸೋಸಿಯೇಷನ್ ​​ಕಚೇರಿ ಮೇಲೂ ದಾಳಿ ನಡೆಸಲಾಯಿತು. ಲೇಬರ್‌ ಅಡ್ಡಾದಲ್ಲಿರುವ ಟಿಎಸ್‌ಆರ್ ಕಂಪನಿ ಸೇರಿದಂತೆ ಬಾವುಪೇಟಾದಲ್ಲಿ ಹಲವಾರು ಗ್ರಾನೈಟ್‌ ಕಂಪನಿಗಳಲ್ಲಿ ತನಿಖೆ ನಡೆಸಲಾಯಿತು.

ಏನಿದು ಪ್ರಕರಣ?: ರಾಜ್ಯ ಸರ್ಕಾರದಿಂದ ಗುತ್ತಿಗೆ ಪಡೆದಿರುವ ಎಕರೆಗಿಂತ ಹೆಚ್ಚು ಭೂಮಿಯಲ್ಲಿ ಗಣಿಗಾರಿಕೆ ನಡೆಸಿರುವ ಬಗ್ಗೆ ಇಡಿ ಅಧಿಕಾರಿಗಳಿಗೆ ದೂರುಗಳು ಸಲ್ಲಿಕೆಯಾಗಿವೆ. ಪರಿಸರಕ್ಕೆ ಹಾನಿಯಾಗುವುದರ ಜೊತೆಗೆ ಸರ್ಕಾರದ ಬೊಕ್ಕಸಕ್ಕೂ ಹಾನಿಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಹಿಂದೆ ಸರ್ಕಾರ 9 ಗಣಿ ಕಂಪನಿಗಳಿಗೆ 750 ಕೋಟಿ ದಂಡ ವಿಧಿಸಿದ್ದರೂ, ಅಕ್ರಮವಾಗಿ ಪಾವತಿಯಿಂದ ವಿನಾಯಿತಿ ಪಡೆದಿರುವುದು ಕೇಂದ್ರ ತನಿಖಾ ಸಂಸ್ಥೆಗಳ ಗಮನಕ್ಕೆ ಬಂದಿದೆ. ವಿದೇಶಗಳಲ್ಲಿ ಬೇಡಿಕೆ ಇರುವ ಕಾರಣ ಕರೀಂನಗರ ಗ್ರಾನೈಟ್ ಚೀನಾಕ್ಕೆ ಹೆಚ್ಚಿನ ಪ್ರಮಾಣದಲ್ಲಿ ರಫ್ತಾಗುತ್ತಿದೆ. ಈ ರಫ್ತಾಗಿರುವ ಗ್ರಾನೈಟ್ ಹೊರತಾಗಿ ಕರೀಂನಗರ ಗ್ರಾನೈಟ್ ಕಂಪನಿಗಳು ಅಲ್ಪ ಮೊತ್ತದ ರಾಯಧನ ಪಾವತಿಸಿರುವ ಆರೋಪಗಳಿವೆ.

ಸದ್ಯ ಇಡಿ ಅಧಿಕಾರಿಗಳು ಸಂಪೂರ್ಣ ವಿವರಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. ಸಾಕಷ್ಟು ಮೌಲ್ಯದ ದಾಖಲೆಗಳು ಮತ್ತು ಹಾರ್ಡ್ ಡಿಸ್​ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಆರೋಪಿ ಗ್ರಾನೈಟ್ ಕಂಪನಿಗಳಿಂದ ಸುಮಾರು 50 ಕೋಟಿ ನಗದು ಹೊಂದಿರುವ ಕೆಲವು ಖಾತೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ತೆಲಂಗಾಣದ ಬಿಜೆಪಿ ಶಾಸಕ ರಾಜಾಸಿಂಗ್​ಗೆ ಷರತ್ತಬದ್ಧ ಜಾಮೀನು ಮಂಜೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.