ETV Bharat / bharat

ಗುಜರಾತ್​ ಗಲಭೆ ಕುರಿತ ಸಾಕ್ಷ್ಯಚಿತ್ರ: ಬಿಬಿಸಿಗೆ ದೆಹಲಿ ಹೈಕೋರ್ಟ್​ ಸಮನ್ಸ್​ ಜಾರಿ

author img

By

Published : May 22, 2023, 7:49 PM IST

ಬಿಬಿಸಿಗೆ ದೆಹಲಿ ಹೈಕೋರ್ಟ್​ ಸಮನ್ಸ್​ ಜಾರಿ
ಬಿಬಿಸಿಗೆ ದೆಹಲಿ ಹೈಕೋರ್ಟ್​ ಸಮನ್ಸ್​ ಜಾರಿ

ಗುಜರಾತ್​ ಗಲಭೆ ಕುರಿತ ಸಾಕ್ಷ್ಯಚಿತ್ರದಲ್ಲಿ ದೇಶದ ಮಾನಹಾನಿ ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್​ ಬ್ರಿಟಿಷ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ಗೆ(ಬಿಬಿಸಿ) ಸಮನ್ಸ್​ ಜಾರಿ ಮಾಡಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ನ್ಯಾಯಾಂಗ ಮತ್ತು ದೇಶದ ಘನತೆಗೆ ಧಕ್ಕೆ ತರುವ ಮಾದರಿಯಲ್ಲಿ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್‌’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದ ಬ್ರಿಟಿಷ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ಗೆ (ಬಿಬಿಸಿ) ದೆಹಲಿ ಹೈಕೋರ್ಟ್‌ ಸೋಮವಾರ ನೋಟಿಸ್‌ ಜಾರಿಗೊಳಿಸಿದೆ. ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 15 ರಂದು ವಿಚಾರಣೆ ನಡೆಸಲಾಗುವುದು ಎಂದು ಹೇಳಿದೆ.

ಬಿಬಿಸಿ ಸಾಕ್ಷ್ಯಚಿತ್ರದಿಂದಾಗಿ ದೇಶದ ಘನತೆಗೆ ಧಕ್ಕೆಯುಂಟಾಗಿದೆ. ಇದರ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ದೇಶದ ನ್ಯಾಯಾಂಗದ ವಿರುದ್ಧ ಸುಳ್ಳು ಹಾಗೂ ಮಾನಹಾನಿಕರ ಆರೋಪಗಳನ್ನು ಮಾಡಲಾಗಿದೆ ಎಂದು ಆರೋಪಿಸಿ ಗುಜರಾತ್‌ ಮೂಲದ ‘ಜಸ್ಟಿಸ್‌ ಆನ್‌ ಟ್ರಯಲ್‌’ ಎಂಬ ಸ್ವಯಂ ಸೇವಾ ಸಂಸ್ಥೆಯು (ಎನ್‌ಜಿಒ) ಮಾನನಷ್ಟ ಮೊಕದ್ದಮೆ ದಾಖಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ದತ್ತ ಅವರಿದ್ದ ಏಕಸದಸ್ಯ ಪೀಠವು ಬಿಬಿಸಿ (ಬ್ರಿಟನ್‌) ಹಾಗೂ ಬಿಬಿಸಿ ಇಂಡಿಯಾಗೆ ನೋಟಿಸ್‌ ನೀಡಿದೆ.

ಮಾನಹಾನಿ ಅರ್ಜಿಯು ನ್ಯಾಯಮೂರ್ತಿ ಸಚಿನ್ ದತ್ತಾ ಅವರ ಮುಂದೆ ಇಂದು ವಿಚಾರಣೆಗೆ ಬಂದಿತು. ಬಿಬಿಸಿಯ ಬ್ರಿಟನ್​ ಮತ್ತು ಭಾರತದ ಎರಡೂ ಕಚೇರಿಗಳಿಗೆ ನೋಟಿಸ್ ಜಾರಿ ಮಾಡಲು ಆದೇಶಿಸಿದರು. ಅಲ್ಲದೇ, ಮೊಕದ್ದಮೆಯ ಬಗ್ಗೆ ತನ್ನ ಪ್ರತಿಕ್ರಿಯೆ ಸಲ್ಲಿಸುವಂತೆ ಬಿಬಿಸಿಗೆ ಸೂಚಿಸಿತು.

ದೇಶದ ಮಾನಹಾನಿ ಆರೋಪ: ಇದೇ ವೇಳೆ ಜಸ್ಟಿಸ್‌ ಆನ್‌ ಟ್ರಯಲ್‌ ಎನ್​ಜಿಒದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು, ಇಂಡಿಯಾ: ದಿ ಮೋದಿ ಕ್ವೆಶ್ಚನ್ ಸಾಕ್ಷ್ಯಚಿತ್ರವು ಭಾರತ ಮತ್ತು ನ್ಯಾಯಾಂಗದ ಮಾನಹಾನಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪ್ರಚೋದನಾತ್ಮಕ ಅಂಶಗಳನ್ನು ಇದು ಹೊಂದಿದೆ ಎಂದು ಆರೋಪಿಸಿದರು.

ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA) ಅಡಿ ವಿದೇಶಿ ನಿಧಿಗೆ ಸಂಬಂಧಿಸಿದ ಅಕ್ರಮಗಳ ಆರೋಪದಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಬಿಬಿಸಿ ಇಂಡಿಯಾ ವಿರುದ್ಧ ಕೇಸ್​ ದಾಖಲಿಸಿತ್ತು. ಇದೇ ವೇಳೆ, ವಿವಾದಾತ್ಮಕ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿ, ದೇಶದ ಘನತೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿತು.

ಏನಿದು ಕೇಸ್?​: ಬ್ರಿಟನ್‌ನ ರಾಷ್ಟ್ರೀಯ ಪ್ರಸಾರ ಸಂಸ್ಥೆಯಾಗಿರುವ ಬಿಬಿಸಿಯು 2002ರ ಗುಜರಾತ್‌ ಗಲಭೆಗೆ ಸಂಬಂಧಿಸಿದಂತೆ ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿದೆ. ಅದರಲ್ಲಿ ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ನಡೆದ ಗಲಭೆ ಮತ್ತು ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಭಿತ್ತರಿಸಲಾಗಿದೆ. ಇದರಲ್ಲಿ ಅಂದಿನ ಸರ್ಕಾರ ಕಠಿಣ ಕ್ರಮ ಕೈಗೊಳ್ಳದೇ, ಪರೋಕ್ಷ ಬೆಂಬಲ ನೀಡಿದೆ ಎಂಬರ್ಥದಲ್ಲಿ ಡಾಕ್ಯುಮೆಂಟರಿ ಒಳಗೊಂಡಿದೆ.

ಇದಲ್ಲದೇ, ಪ್ರಧಾನಿ ಮೋದಿ ಅವರನ್ನೂ ಅವಹೇಳನ ಮಾಡುವ ರೀತಿಯಲ್ಲಿ ತೋರಿಸಲಾಗಿದೆ. ದೇಶ ಮತ್ತು ನ್ಯಾಯಾಂಗವೂ ಈ ಗಲಭೆಯನ್ನು ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂಬುದು ಸಾಕ್ಷ್ಯಚಿತ್ರದಲ್ಲಿನ ಸಾರವಾಗಿತ್ತು. ಇದು ವಿವಾದಕ್ಕೆ ಕಾರಣವಾಗಿ, ದೇಶದಲ್ಲಿ ಪ್ರಸಾರಕ್ಕೆ ಕೇಂದ್ರ ಸರ್ಕಾರ ನಿಷೇಧ ಹೇರಿತ್ತು.

ಸಾಕ್ಷ್ಯಚಿತ್ರವನ್ನು ಎರಡು ಕಂತುಗಳನ್ನು ಬಿಡುಗಡೆ ಮಾಡಲಾಗಿತ್ತು. ಸಾಕ್ಷ್ಯಚಿತ್ರದ ಎರಡೂ ಕಂತುಗಳನ್ನೂ ಈ ವರ್ಷದ ಜನವರಿಯಲ್ಲಿ ಪ್ರದರ್ಶಿಸಲಾಗಿದೆ. ಸಾಕ್ಷ್ಯಚಿತ್ರವು ಭಾರತದ ವರ್ಚಸ್ಸಿಗೆ ಕುಂದುಂಟುಮಾಡುವ ವಿಷಯವನ್ನು ಒಳಗೊಂಡಿದೆ. ಇದಕ್ಕಾಗಿ ಬಿಬಿಸಿಯನ್ನು ಹೊಣೆಯಾಗಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಓದಿ: ಹೈದ್ರಾಬಾದ್​, ಕೇರಳ, ಜೆಎನ್​ಯು ಬಳಿಕ ಕೋಲ್ಕತ್ತಾ ವಿವಿಯಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.