ETV Bharat / bharat

ವಾಯುವ್ಯ ಮಾರುತಗಳಿಂದ ಇಳಿಯುತ್ತಿರುವ ದೆಹಲಿ ವಾಯುಮಾಲಿನ್ಯ: ಕೆಲ ನಿರ್ಬಂಧಗಳು ಸಡಿಲ

author img

By ETV Bharat Karnataka Team

Published : Nov 19, 2023, 7:20 PM IST

ಇಳಿಯುತ್ತಿರುವ ದೆಹಲಿ ವಾಯುಮಾಲಿನ್ಯ
ಇಳಿಯುತ್ತಿರುವ ದೆಹಲಿ ವಾಯುಮಾಲಿನ್ಯ

ದೆಹಲಿಯಲ್ಲಿ ವಾಯು ಗುಣಮಟ್ಟ ಇಳಿಕೆಯತ್ತ ಸಾಗುತ್ತಿದೆ. ಇದರಿಂದ ಡೀಸೆಲ್ ವಾಹನಗಳ ಪ್ರವೇಶ ಮತ್ತು ಕಟ್ಟಡ ನಿರ್ಮಾಣ ಚಟುವಟಿಕೆಗಳ ಮೇಲಿನ ನಿರ್ಬಂಧಗಳನ್ನು ಸಡಿಲಿಸಲಾಗಿದೆ.

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮುಂದುವರಿದಿದೆ. ಶನಿವಾರದ 'ಅತ್ಯಂತ ಕಳಪೆ ಮಟ್ಟ'ಕ್ಕೆ ಹೋಲಿಸಿದರೆ ಭಾನುವಾರ ಬೆಳಗ್ಗೆ 'ಕಳಪೆ' ಮಟ್ಟಕ್ಕೆ ಇಳಿದಿದೆ. ತೀವ್ರ ಕಳಪೆಯಾಗಿದ್ದ ವಾತಾವರಣ ತುಸು ತಹಬದಿಗೆ ಬಂದಿದ್ದು, ಡೀಸೆಲ್ ವಾಹನಗಳ ಪ್ರವೇಶ ಮತ್ತು ನಿರ್ಮಾಣ ಚಟುವಟಿಕೆಗಳ ಮೇಲಿನ ನಿರ್ಬಂಧಗಳನ್ನು ತೆರವು ಮಾಡಲಾಗಿದೆ.

ಹವಾಮಾನ ಅಧಿಕಾರಿಗಳ ಪ್ರಕಾರ, ಗಾಳಿಯ ವೇಗ ಮತ್ತು ಅದರ ದಿಕ್ಕಿನಿಂದಾಗಿ ಗಾಳಿಯ ಗುಣಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡಿದೆ. ಭಾನುವಾರ ಬೆಳಗ್ಗೆ 7 ಗಂಟೆಗೆ ರಾಜಧಾನಿಯ ವಾಯು ಗುಣಮಟ್ಟ ಸೂಚ್ಯಂಕ(AQI) 290 ರಷ್ಟಿತ್ತು. ಇಲ್ಲಿ ಸರಾಸರಿ ಎಕ್ಯೂಐ ಪ್ರತಿ ದಿನ 4 ಗಂಟೆಗೆ ಅಳೆಯಲಾಗುತ್ತದೆ. ಶನಿವಾರ 319, ಶುಕ್ರವಾರ 405 ಮತ್ತು ಗುರುವಾರ 419 ಇತ್ತು. ಇತರೆ ನಗರಗಳಾದ ಘಾಜಿಯಾಬಾದ್ (275), ಗುರುಗ್ರಾಮ್ (242) ಮತ್ತು ನೋಯ್ಡಾದಲ್ಲಿ 252 ಎಕ್ಯೂಐ ದಾಖಲಾಗಿತ್ತು.

ಸಮ-ಬೆಸ ಪದ್ಧತಿ ಜಾರಿ ಆತಂಕ: ಕಳೆದ ಮೂರು ದಿನಗಳ ಹಿಂದೆ ಅಂದರೆ, ಗುರುವಾ ಶುಕ್ರವಾರ, ದೆಹಲಿಯ ವಾಯುಮಾಲಿನ್ಯವು ತೀವ್ರ ಕಳಪೆಯಾಗಿತ್ತು. ವಾತಾವರಣ ಕಲುಷಿತವಾದ ಕಾರಣ ಯಾವುದೇ ಹಂತದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ವಾಹನಗಳಿಗೆ 'ಬೆಸ-ಸಮ' ಪದ್ಧತಿಯನ್ನು ಮರು ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಬೀಳುವ ಆತಂಕ ಇತ್ತು. ಇದಕ್ಕೆ ಕಾರಣ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಟಾಕಿ ಹೊಗೆಯು ಗಾಳಿಯನ್ನು ಮತ್ತಷ್ಟು ವಿಷಪೂರಿತ ಮಾಡಿತ್ತು. ಇದರಿಂದ ವಾಯು ಮಾಲಿನ್ಯವು 450 ಎಕ್ಯೂಐ ಮತ್ತು ಅದಕ್ಕಿಂತ ಹೆಚ್ಚಿನ ಪ್ಲಸ್​ಗೆ ತಲುಪುವ ಆತಂಕ ವ್ಯಕ್ತವಾಗಿದೆ.

ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳ ಪ್ರಕಾರ, ವಾಯುವ್ಯ ಭಾರತದ ಕಡೆಯಿಂದ ಗಾಳಿಯು ಬೀಸುತ್ತಿದ್ದು, ದೆಹಲಿ ಸೇರಿದಂತೆ ವಿವಿಧೆಡೆ 'ಹೊಗೆ'ಯಾಡುತ್ತಿರುವುದು ಕಡಿಮೆಯಾಗಲಿದೆ. ತ್ಯಾಜ್ಯ ಸುಡುವ ಮೂಲಕ ಹರಡುವ ಹೊಗೆಯನ್ನು ಅದು ಮುಂದಕ್ಕೆ ಸಾಗಿಸಲು ನೆರವಾಗಲಿದೆ. ಇದರಿಂದ ವಾಯುಮಾಲಿನ್ಯ ನಿಯಂತ್ರಣ ಯೋಜನೆಯಾದ ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲಾನ್ (GRAP) ಪ್ರಕಾರ ನಗರದಲ್ಲಿನ ನಿರ್ಬಂಧಗಳು ನಿಧಾನವಾಗಿ ತೆರವಾಗಲಿವೆ.

ದೆಹಲಿ ನಗರದ ಹಲವು ಪ್ರದೇಶಗಳಲ್ಲಿ ಸರ್ಕಾರ ಆ್ಯಂಟಿಸ್ಮಾಗ್ ಗನ್​ಗಳಿಂದ ನೀರನ್ನು ಗಾಳಿಯಲ್ಲಿ ಸ್ಪ್ರೇ ಮಾಡುವ ಮೂಲಕ ವಾಯು ಮಾಲಿನ್ಯಕ್ಕೆ ಕಡಿವಾಣ ಹಾಕುವ ಪ್ರಯತ್ನ ಮಾಡುತ್ತಿದೆ. ಪಟಾಕಿ ಹಾಗೂ ತ್ಯಾಜ್ಯ ಸುಡುವುದರಿಂದ ವಾಯು ಮಾಲಿನ್ಯದ ಮಟ್ಟ ಹೆಚ್ಚಾಗುತ್ತಿದೆ. ವಾಯುಮಾಲಿನ್ಯದ ಸೂಚ್ಯಂಕ 300 ರಿಂದ 400ರ ವರೆಗೆ ಇದ್ದರೆ ಅದನ್ನು ಕಳಪೆ ಹಾಗೂ 400 ರಿಂದ 500 ಇದ್ದರೆ ಅದನ್ನು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ದೆಹಲಿ ಮಾಲಿನ್ಯಕ್ಕೆ ಪಾಕ್​​ ಕಾರಣವೆಂದ ಯುಪಿ ಸರ್ಕಾರ: ಅಲ್ಲಿ ನಾವು ಕೈಗಾರಿಕೆ ನಿಷೇಧಿಸಬೇಕಾ? ಎಂದು ಸುಪ್ರೀಂ ಗರಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.