ETV Bharat / bharat

ಕಾಂಗ್ರೆಸ್​ ಉಸ್ತುವಾರಿಗಳ ಬದಲು: ಪ್ರಿಯಾಂಕಾಗೆ ಹೊಣೆ ರಹಿತ ಹುದ್ದೆ, ಛತ್ತೀಸ್​ಗಢಕ್ಕೆ ಸಚಿನ್​ ಪೈಲಟ್​ ಸಾರಥ್ಯ

author img

By ETV Bharat Karnataka Team

Published : Dec 24, 2023, 7:07 AM IST

ಕಾಂಗ್ರೆಸ್​ ಉಸ್ತುವಾರಿಗಳ ಬದಲು
ಕಾಂಗ್ರೆಸ್​ ಉಸ್ತುವಾರಿಗಳ ಬದಲು

ರಾಜ್ಯಗಳ ಉಸ್ತುವಾರಿಗಳನ್ನು ಬದಲಿಸಿ ಕಾಂಗ್ರೆಸ್​ ಆದೇಶಿಸಿದೆ. ಸಿಡಬ್ಲ್ಯೂಸಿ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಅವರು ಈ ನಿರ್ಧಾರ ತಳೆದಿದ್ದಾರೆ.

ನವದೆಹಲಿ: ಪಕ್ಷದ ಸಂಘಟನೆ ಮತ್ತು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಗುರಿ ಹಾಕಿಕೊಂಡಿರುವ ಕಾಂಗ್ರೆಸ್​ ತನ್ನ ಉಸ್ತುವಾರಿ, ಕಾರ್ಯದರ್ಶಿಗಳನ್ನು ಬದಲಾವಣೆ ಮಾಡಿದೆ. ವಿಶೇಷವೆಂದರೆ ಉತ್ತರಪ್ರದೇಶ ರಾಜ್ಯದ ಉಸ್ತುವಾರಿಯಾಗಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಥಾನಕ್ಕೆ ಅವಿನಾಶ್​ ಪಾಂಡೆ ಅವರನ್ನು ನೇಮಿಸಿ ಆದೇಶಿಸಲಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯ ಎರಡು ದಿನಗಳ ನಂತರ ಈ ನೇಮಕಾತಿಗಳನ್ನು ಮಾಡಲಾಗಿದೆ. ಸಭೆಯಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ದರು. ಪಕ್ಷದ ಬಲವರ್ಧನೆ ಮತ್ತು ಮುಂಬರುವ ಸವಾಲುಗಳನ್ನು ಎದುರಿಸಲು ಹೊಸ ತಂಡ ಕಟ್ಟಲಾಗಿದೆ.

ಸಚಿನ್​ ಪೈಲಟ್​ಗೆ ಛತ್ತೀಸ್​ಗಢ ಉಸ್ತುವಾರಿ: ಇತ್ತೀಚೆಗೆ ನಡೆದ ಛತ್ತೀಸ್​ಗಢ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡು ಅಧಿಕಾರ ಕಳೆದುಕೊಂಡ ಕಾಂಗ್ರೆಸ್​, ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್​ ಪೈಲಟ್​ ಅವರನ್ನು ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದೆ. ಉತ್ತರಪ್ರದೇಶದ ಸಹ ಉಸ್ತುವಾರಿಯಾಗಿದ್ದ ಕುಮಾರಿ ಸೆಲ್ಜಾರ ಅವರಿಗೆ ಉತ್ತರಾಖಂಡದ ಉಸ್ತುವಾರಿ ಹೊಣೆ ನೀಡಲಾಗಿದೆ.

ಉತ್ತರಪ್ರದೇಶದ ಉಸ್ತುವಾರಿಯಾಗಿದ್ದ ಪ್ರಿಯಾಂಕಾ ಗಾಂಧಿ ಅವರನ್ನು ಬದಲಿಸಿ, ಹಿರಿಯ ನಾಯಕ ಅವಿನಾಶ್ ಪಾಂಡೆಗೆ ಅವಕಾಶ ನೀಡಲಾಗಿದೆ. ಸದ್ಯ ಪ್ರಿಯಾಂಕಾ ಯಾವುದೇ ಗುರುತರ ಜವಾಬ್ದಾರಿ ಇಲ್ಲದ ಕಾರ್ಯದರ್ಶಿಯಾಗಿ ಮುಂದುವರೆಯಲಿದ್ದಾರೆ ಎಂದು ಕಾಂಗ್ರೆಸ್​ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕರ್ನಾಟಕದ ಉಸ್ತುವಾರಿ ಮುಂದುವರಿಕೆ: ಕರ್ನಾಟಕದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ಶ್ರಮಿಸಿದ ಹಿರಿಯ ನಾಯಕರಾದ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ರಾಜ್ಯ ಉಸ್ತುವಾರಿಯಾಗಿ ಮುಂದುವರೆಸಲಾಗಿದೆ. ಜೊತೆಗೆ ಪಕ್ಷದ ಸಂವಹನಕಾರರಾಗಿ ಹಿರಿಯ ನಾಯಕ ಜೈರಾಮ್ ರಮೇಶ್, ಕೆ.ಸಿ ವೇಣುಗೋಪಾಲ್ ​(ಸಂಘಟನೆ) ಹಾಗೂ ಗುಜರಾತ್ ಉಸ್ತುವಾರಿಯಾಗಿ ಮುಕುಲ್ ವಾಸ್ನಿಕ್ ಅವರನ್ನು ನೇಮಿಸಲಾಗಿದೆ.

ಜಾರ್ಖಂಡ್‌ನ ಜೊತೆಗೆ ಪಶ್ಚಿಮ ಬಂಗಾಳದ ಹೆಚ್ಚುವರಿ ಉಸ್ತುವಾರಿಯಾಗಿ ಜಿಎ ಮಿರ್, ದೀಪಾ ದಾಸ್ಮುನ್ಶಿ ಅವರಿಗೆ ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದ ಜೊತೆಗೆ ತೆಲಂಗಾಣಕ್ಕೂ ಹೆಚ್ಚುವರಿ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ.

ಅಸ್ಸೋಂನ ಉಸ್ತುವಾರಿಯಾಗಿದ್ದ ಜಿತೇಂದ್ರ ಸಿಂಗ್ ಅವರನ್ನು ಬದಲಿಸಿ ಮಧ್ಯಪ್ರದೇಶದ ಹೆಚ್ಚುವರಿ ಉಸ್ತುವಾರಿ ನೀಡಲಾಗಿದ್ದು, ದೀಪಕ್ ಬಬಾರಿಯಾ ಅವರಿಗೆ ದೆಹಲಿ ಮತ್ತು ಹರಿಯಾಣದ ಹೊಣೆ ನೀಡಲಾಗಿದೆ. ಈ ಎಲ್ಲಾ ನೇಮಕಾತಿಗಳು ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ. (ಪಿಟಿಐ)

ಇದನ್ನೂ ಓದಿ: ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆ; ತಕ್ಷಣದಿಂದಲೇ ಸಂಘಟನಾತ್ಮಕ ಜವಾಬ್ದಾರಿ ಆರಂಭಿಸುವಂತೆ ವಿಜಯೇಂದ್ರ ಕರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.