ETV Bharat / bharat

ಮಂಜಿನ ಹೊದಿಕೆಯಾದ ಉತ್ತರ ಭಾರತ: ಕೊರೆಯುವ ಚಳಿಗೆ ಹೆಪ್ಪುಗಟ್ಟಿದ ದಾಲ್ ಸರೋವರ

author img

By ETV Bharat Karnataka Team

Published : Dec 25, 2023, 1:51 PM IST

ಉತ್ತರ ಭಾರತದಲ್ಲಿ ಚಳಿ ಜನರನ್ನು ನಡುಗಿಸುತ್ತಿದೆ. ಕೆಲವೆಡೆ ಮಂಜಿನ ಹೊದಿಕೆ ಬಿದ್ದಿದೆ. ಜಮ್ಮು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಅತಿ ಶೀತ ದಾಖಲಾಗಿದೆ.

ಉತ್ತರ ಭಾರತದಲ್ಲಿ ಚಳಿ
ಉತ್ತರ ಭಾರತದಲ್ಲಿ ಚಳಿ

ನವದೆಹಲಿ: ಈಗ ದೇಶದ ತುಂಬೆಲ್ಲಾ ಥಂಡಿ ಥಂಡಿ ಹವಾ. ಅದರಲ್ಲೂ ಉತ್ತರ ಭಾರತ ಚಳಿಗೆ ತಲ್ಲಣಿಸುತ್ತಿದೆ. ಜಮ್ಮು ಕಾಶ್ಮೀರದ ಪಹಲ್ಗಾಮ್ ಪ್ರದೇಶದಲ್ಲಿ ಅತ್ಯಂತ ಶೀತ ದಾಖಲಾಗಿದೆ. ತಮಿಳುನಾಡಿನ ಊಟಿ, ಪಂಜಾಬ್ ಮತ್ತು ಹರಿಯಾಣದ ಕೆಲ ಪ್ರದೇಶಗಳಲ್ಲಿ ಮಂಜಿನ ಹೊದಿಕೆ ಬಿದ್ದಿದೆ. ರಾಷ್ಟ್ರ ರಾಜಧಾನಿ ದೆಹಲಿಯ ವಾಯುಗುಣಮಟ್ಟ ತುಸು ಸುಧಾರಿಸಿದರೆ, ದಟ್ಟ ಮಂಜಿನಿಂದಾಗಿ ವಿಮಾನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ.

ಸೋಮವಾರ ಬೆಳಗ್ಗೆ ದೆಹಲಿಯಲ್ಲಿ ತಾಪಮಾನ 9.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಷ್ಟ್ರ ರಾಜಧಾನಿಯ ಹಲವು ಪ್ರದೇಶಗಳಲ್ಲಿ ದಟ್ಟ ಮಂಜಿನಿಂದಾಗಿ ಗೋಚರತೆ ತೀರಾ ಕಡಿಮೆಯಾಗಿದೆ. ಚುಮುಚುಮು ಚಳಿಯಿಂದಾಗಿ ಜನರು ದೈನಂದಿನ ಕೆಲಸಕ್ಕೆ ಹೊರಬರಲು ಕೂಡ ಪರದಾಡುವಂತಾಗಿದೆ.

ಸುಧಾರಿಸದ ದೆಹಲಿ ಗಾಳಿ ಗುಣಮಟ್ಟ: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ಮಾಹಿತಿಯ ಪ್ರಕಾರ, ಸೋಮವಾರ ದೆಹಲಿಯ ಗಾಳಿಯ ಗುಣಮಟ್ಟವು 'ಅತ್ಯಂತ ಕಳಪೆ'ಯಲ್ಲಿಯೇ ಮುಂದುವರಿದಿದೆ. ವಾಯು ಗುಣಮಟ್ಟ ಸೂಚ್ಯಂಕ (AQI) ಸುಮಾರು 400 ರಷ್ಟಿದೆ. ತೀವ್ರ ಕಳಪೆ ಮಟ್ಟದಿಂದ ಕಳಪೆ ಮಟ್ಟದತ್ತ ಸಾಗುತ್ತಿದೆ. ಅನಿವಾರ್ಯವಲ್ಲದ ನಿರ್ಮಾಣ ಕಾರ್ಯಗಳ ಮೇಲಿನ ನಿಷೇಧ ಚಾಲ್ತಿಯಲ್ಲಿದೆ.

ಮಂಜಿನ ಹೊದಿಕೆ: ಪಂಜಾಬ್ ಮತ್ತು ಹರಿಯಾಣಗಳಲ್ಲಿ ವಿಪರೀತ ಶೀತದಿಂದಾಗಿ ಬಹುತೇಕ ಭಾಗಗಳಲ್ಲಿ ಮಂಜು ಆವರಿಸಿದೆ. ಸೋಮವಾರ ಮುಂಜಾನೆ ದಟ್ಟ ಮಂಜನಿಂದಾಗಿ ಗೋಚರತೆ ಕಡಿಮೆಯಾಗಿದೆ. ಸಿರ್ಸಾ, ಭಿವಾನಿ, ಅಮೃತಸರ, ಲುಧಿಯಾನ ಮತ್ತು ಪಟಿಯಾಲದಲ್ಲಿ ದಟ್ಟವಾದ ಮಂಜು ಕವಿದಿದೆ ಎಂದು ಹವಾಮಾನ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.

ಹರಿಯಾಣದ ನರ್ನಾಲ್‌ನಲ್ಲಿ ಕನಿಷ್ಠ ತಾಪಮಾನ 6.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ರೋಹ್ಟಕ್‌ನಲ್ಲಿ 7.6 ಡಿಗ್ರಿ ಇತ್ತು. ಫತೇಹಾಬಾದ್‌ನಲ್ಲಿ ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ರಾತ್ರಿ ತಾಪಮಾನವು 6.5 ಡಿಗ್ರಿ ಸೆಲ್ಸಿಯಸ್, ಬಟಿಂಡಾದಲ್ಲಿ 6.2 ಡಿಗ್ರಿ, ಫರೀದ್‌ಕೋಟ್‌ನಲ್ಲಿ 7.5 ಡಿಗ್ರಿ, ಗುರುದಾಸ್‌ಪುರದಲ್ಲಿ 6.7 ಡಿಗ್ರಿ, ಅಮೃತಸರದಲ್ಲಿ 7.2 ಡಿಗ್ರಿ, ಲೂಧಿಯಾನದಲ್ಲಿ 7.1 ಡಿಗ್ರಿ ಮತ್ತು ಪಟಿಯಾಲದಲ್ಲಿ 8.7 ಡಿಗ್ರಿ ದಾಖಲಾಗಿದೆ. ಉಭಯ ರಾಜ್ಯಗಳ ರಾಜಧಾನಿಯಾಗಿರುವ ಚಂಡೀಗಢದಲ್ಲಿ ಕನಿಷ್ಠ 7.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಕಾಶ್ಮೀರದ ಪಹಲ್ಗಾಮ್ ಅತ್ಯಂತ ಶೀತ ಪ್ರದೇಶ: ಕಣಿವೆ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ. ಪಹಲ್ಗಾಮ್ ಪ್ರದೇಶವು ಅತ್ಯಂತ ಶೀತ ಪ್ರದೇಶವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರ ಮುಂಜಾನೆ ಕಣಿವೆಯಲ್ಲಿ ದಟ್ಟವಾದ ಮಂಜು ದೈನಂದಿನ ಜೀವನವನ್ನು ಅಸ್ತವ್ಯಸ್ತಗೊಳಿಸಿತು. ಕಣಿವೆಯಲ್ಲಿ ಸತತ ಎರಡು ದಿನ ತಾಪಮಾನವು ಇಳಿಮುಖವಾಗಿದೆ.

ಜಮ್ಮು ಮತ್ತು ಕಾಶ್ಮೀರದ ಬೇಸಿಗೆಯ ರಾಜಧಾನಿ ಶ್ರೀನಗರದಲ್ಲಿ -2.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹಿಂದಿನ ರಾತ್ರಿ -2.1 ಡಿಗ್ರಿಗಿಂತ ಸ್ವಲ್ಪ ಕಡಿಮೆ ಇತ್ತು. ಅಮರನಾಥ ಯಾತ್ರೆ ಹೊರಡುವ ಬೇಸ್ ಕ್ಯಾಂಪ್‌ಗಳಲ್ಲಿ ಒಂದಾಗಿರುವ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಕನಿಷ್ಠ ಮೈನಸ್ 4.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಹಿಂದಿನ ರಾತ್ರಿ -3.9 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇತ್ತು.

ಹೆಪ್ಪುಗಟ್ಟಿದ ದಾಲ್​ ಸರೋವರ: ಸ್ಥಳೀಯವಾಗಿ ಚಿಲ್ಲಾ-ಇ-ಕಲನ್ (ಚಳಿ) ಎಂದು ಕರೆಯುವ ಶೀತದಿಂದಾಗಿ ಪ್ರಸಿದ್ಧ ದಾಲ್​ ಸರೋವರ ಹೆಪ್ಪುಗಟ್ಟಿದೆ. ಇಲ್ಲಿ ಮುಂದಿನ 40 ದಿನಗಳ ಕಾಲ ಕಠಿಣ ಚಳಿಗಾಲದ ಅವಧಿಯಾಗಿದೆ. ಈ ಅವಧಿಯಲ್ಲಿ ಹಿಮಪಾತದ ಸಾಧ್ಯತೆಗಳು ಅತ್ಯಧಿಕವಾಗಿರುತ್ತವೆ.

ಇದನ್ನೂ ಓದಿ: ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ: ಮಾರ್ಚ್‌ವರೆಗೆ ಅಯೋಧ್ಯೆ ಹೌಸ್‌ ಫುಲ್‌, ಹೋಟೆಲ್‌ ದರ 1 ಲಕ್ಷ !

ETV Bharat Logo

Copyright © 2024 Ushodaya Enterprises Pvt. Ltd., All Rights Reserved.