ETV Bharat / bharat

CJI: ನ್ಯಾಯ ಪಡೆಯುವ ಹಾದಿಯ ಅಡೆತಡೆ ನಿವಾರಣೆ ನ್ಯಾಯಾಂಗ ವ್ಯವಸ್ಥೆಗೆ ದೊಡ್ಡ ಸವಾಲು- ನ್ಯಾ.ಡಿ.ವೈ.ಚಂದ್ರಚೂಡ್

author img

By

Published : Aug 15, 2023, 7:58 PM IST

Greatest challenge before judiciary is to eliminate barriers to accessing justice: CJI
ನ್ಯಾಯ ಪಡೆಯುವಲ್ಲಿರುವ ಅಡತಡೆ ನಿವಾರಣೆಯೇ ನ್ಯಾಯಾಂಗ ವ್ಯವಸ್ಥೆಯ ಮುಂದಿರುವ ಸವಾಲು: ನ್ಯಾ.ಚಂದ್ರಚೂಡ್

CJI Independence Day Speech: ಸುಪ್ರೀಂ ಕೋರ್ಟ್‌ನ 9,423 ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸಲಾಗಿದೆ ಎಂದು ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ತಿಳಿಸಿದರು.

ನವದೆಹಲಿ: ನ್ಯಾಯ ಪಡೆಯುವಿಕೆ ಹಾದಿಯಲ್ಲಿರುವ ಅಡೆತಡೆಗಳನ್ನು ನಿವಾರಿಸುವುದೇ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮುಂದಿರುವ ಅತಿ ದೊಡ್ಡ ಸವಾಲಾಗಿದೆ. ಕಟ್ಟಕಡೆಯ ವ್ಯಕ್ತಿಯೂ ನ್ಯಾಯಾಂಗದಲ್ಲಿ ಒಳಗೊಳ್ಳಬೇಕು. ಆತ ನ್ಯಾಯ ಪಡೆಯುವುದನ್ನು ಖಚಿತಪಡಿಸಿಕೊಳ್ಳಬೇಕಿದೆ ಎಂದು ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹೇಳಿದರು.

ಸುಪ್ರೀಂ ಕೋರ್ಟ್​ ಆವರಣದಲ್ಲಿ ಇಂದು (ಮಂಗಳವಾರ) ಬಾರ್ ಅಸೋಸಿಯೇಷನ್ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ''ನಾನು ಭವಿಷ್ಯವನ್ನು ನೋಡುವಾಗ ನಾಗರಿಕರು ನ್ಯಾಯ ಪಡೆಯಲು ಇರುವ ಅಡೆತಡೆಗಳನ್ನು ನಿವಾರಿಸುವುದೇ ಭಾರತೀಯ ನ್ಯಾಯಾಂಗದ ಮುಂದಿರುವ ದೊಡ್ಡ ಸವಾಲು ಎಂದು ನಂಬುತ್ತೇನೆ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

''ನಾಗರಿಕರು ನ್ಯಾಯಾಲಯಗಳನ್ನು ಸಮೀಪಿಸದಂತೆ ತಡೆಯುವ ತೊಡಕುಗಳನ್ನು ತೊಡೆದುಹಾಕಬೇಕು. ನ್ಯಾಯ ವಿತರಿಸುವ ನ್ಯಾಯಾಲಯಗಳ ಸಾಮರ್ಥ್ಯದ ಮೇಲೆ ವಿಶ್ವಾಸವನ್ನು ಬೆಳೆಸಬೇಕು. ಈ ಕಾರ್ಯವಿಧಾನದ ಮೂಲಕ ನ್ಯಾಯದ ಪ್ರವೇಶವನ್ನು ಹೆಚ್ಚಿಸಬೇಕು. ನಮ್ಮ ನ್ಯಾಯಾಂಗದ ಭವಿಷ್ಯವು ಅಂತರ್ಗತವಾಗಿದೆ ಮತ್ತು ಕಟ್ಟಕಡೆಯ ವ್ಯಕ್ತಿಗೆ ತಲುಪುವಿಕೆಯನ್ನು ಖಚಿತಪಡಿಸಿಕೊಳ್ಳುವ ಮಾರ್ಗವನ್ನೂ ನಾವು ಹೊಂದಿದ್ದೇವೆ'' ಎಂದು ತಿಳಿಸಿದರು.

"ನಾವು ಆದ್ಯತೆಯ ಆಧಾರದ ಮೇಲೆ ನಮ್ಮ ನ್ಯಾಯಾಲಯದ ಮೂಲಸೌಕರ್ಯವನ್ನು ಕೂಲಂಕಷವಾಗಿ ಪರಿಶೀಲಿಸಬೇಕಾಗಿದೆ. ಭವಿಷ್ಯದ ಸವಾಲುಗಳನ್ನು ಎದುರಿಸಲು ನ್ಯಾಯಾಂಗ ಮೂಲಸೌಕರ್ಯವನ್ನು ಆಧುನೀಕರಿಸಲು ಒತ್ತು ನೀಡುವುದು ಮುಖ್ಯ. ಕಾರ್ಯವಿಧಾನದ ಅಡೆತಡೆಗಳನ್ನು ನಿವಾರಿಸಲು ತಂತ್ರಜ್ಞಾನದ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು. ಇದರ ಭಾಗವಾಗಿ ನಾವು ಇ-ಕೋರ್ಟ್‌ಗಳ ಯೋಜನೆಯ ಮೂರನೇ ಹಂತವನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಇದಕ್ಕೆ ಕೇಂದ್ರದಿಂದ 7,000 ಕೋಟಿ ರೂಪಾಯಿಗಳ ಅನುದಾನಕ್ಕೆ ಮಂಜೂರಾತಿ ದೊರೆತಿದೆ" ಎಂದು ವಿವರಿಸಿದರು.

''ನ್ಯಾಯಾಲಯದ ದಾಖಲೆಗಳ ಡಿಜಿಟಲೀಕರಣ ಮತ್ತು ಎಲ್ಲ ನ್ಯಾಯಾಲಯ ಸಂಕೀರ್ಣಗಳಲ್ಲಿ ಮುಂಗಡ ಇ-ಸೇವಾ ಕೇಂದ್ರಗಳ ಸ್ಥಾಪನೆ ಆಗಬೇಕಿದೆ. ನ್ಯಾಯವನ್ನು ಬಯಸುವ ಪ್ರತಿಯೊಬ್ಬ ವ್ಯಕ್ತಿಗೆ ಕೈಗೆಟುಕುವ ನ್ಯಾಯಾಂಗ ವ್ಯವಸ್ಥೆಯನ್ನು ರಚಿಸುವುದು ನಮ್ಮ ಗುರಿ. ನಾವು ಈಗಾಗಲೇ ನ್ಯಾಯಾಲಯದ ಆವರಣ ಮತ್ತು ನ್ಯಾಯಾಲಯದ ಸೇವೆಗಳನ್ನು ದಿವ್ಯಾಂಗಸ್ನೇಹಿಯನ್ನಾಗಿ ಮಾಡಲು ಪ್ರಯತ್ನಿಸುತ್ತಿದ್ದೇವೆ'' ಎಂದು ಅವರು ಹೇಳಿದರು.

9,423 ತೀರ್ಪುಗಳ ಭಾಷಾಂತರ: ಮುಂದುವರೆದು ಮಾತನಾಡಿದ ಸಿಜೆಐ, "ಪ್ರಧಾನಿಯವರು ಇಂದು ಕೆಂಪು ಕೋಟೆಯಲ್ಲಿ ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಭಾಷಾಂತರಿಸುವ ಸುಪ್ರೀಂ ಕೋರ್ಟ್‌ನ ಪ್ರಯತ್ನಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂಬುದನ್ನು ನಾನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು" ಎಂದು ಹೇಳಿದರು.

"ಇಲ್ಲಿಯವರೆಗೆ ಸುಪ್ರೀಂ ಕೋರ್ಟ್‌ನ 9,423 ತೀರ್ಪುಗಳನ್ನು ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸಲಾಗಿದೆ. ಈ ಪೈಕಿ 8,977 ಹಿಂದಿಗೆ ಭಾಷಾಂತರ ಮಾಡಲಾಗಿದೆ. ಜೊತೆಗೆ ಅಸ್ಸಾಮಿ, ಬಂಗಾಳಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಪಂಜಾಬಿ, ತಮಿಳು ಮತ್ತು ಉರ್ದು ಮುಂತಾದ ಭಾಷೆಗಳಿಗೆ ತೀರ್ಪುಗಳನ್ನು ಅನುವಾದ ಮಾಡಲಾಗಿದೆ. ಈ ವರ್ಷದ ಮಾರ್ಚ್ ಮತ್ತು ಜೂನ್ ನಡುವೆ 19,000ಕ್ಕೂ ಹೆಚ್ಚು ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ವಿಲೇವಾರಿ ಮಾಡಿದೆ'' ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: Independence day: ಯುವಶಕ್ತಿಯಿಂದ ಭಾರತ ವಿಶ್ವಗುರು: ಪ್ರಧಾನಿ ನರೇಂದ್ರ ಮೋದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.