ETV Bharat / bharat

ಬಾಲ್ಯ ವಿವಾಹಗಳ ವಿರುದ್ಧ ಸರ್ಕಾರದ ಕಠಿಣ ಕ್ರಮ: 12ನೇ ವಯಸ್ಸಿನಲ್ಲಿ ಮದುವೆಯಾಗಿದ್ದ ಯುವತಿ ಆತ್ಮಹತ್ಯೆ

author img

By

Published : Feb 4, 2023, 7:56 PM IST

child-marriage-issue-woman-committed-suicide-in-assam
ಬಾಲ್ಯ ವಿವಾಹಗಳ ವಿರುದ್ಧ ಸರ್ಕಾರದ ಕಠಿಣ ಕ್ರಮ: 12ನೇ ವಯಸ್ಸಿನಲ್ಲಿ ಮದುವೆಯಾಗಿದ್ದ ಯುವತಿ ಆತ್ಮಹತ್ಯೆ

ಅಸ್ಸೋಂನಲ್ಲಿ ಬಾಲ್ಯ ವಿವಾಹಗಳ ವಿರುದ್ಧ ಸರ್ಕಾರದ ಕಠಿಣ ಕ್ರಮಕ್ಕೆ ಹೆದರಿ 22 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.

ಗುವಾಹಟಿ (ಅಸ್ಸೋಂ): ಈಶಾನ್ಯ ರಾಜ್ಯವಾದ ಅಸ್ಸೋಂನಲ್ಲಿ ಬಾಲ್ಯ ವಿವಾಹ ಪ್ರಕರಣಗಳ ವಿರುದ್ಧ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳುತ್ತಿದೆ. ಕಳೆದ ಎರಡೇ ದಿನಗಳಲ್ಲಿ ಬಾಲ್ಯ ವಿವಾಹಗಳಲ್ಲಿ ತೊಡಗಿದ ಮತ್ತು ಇವುಗಳಿಗೆ ಕಾರಣವಾದ ಎರಡು ಸಾವಿರಕ್ಕೂ ಹೆಚ್ಚಿನ ಜನರನ್ನು ಬಂಧಿಸಿ ಜೈಲಿಗೆ ಹಾಕಲಾಗಿದೆ. ಇದೀಗ ತನ್ನ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಇದನ್ನೂ ಓದಿ: ಬಾಲ್ಯ ವಿವಾಹಗಳ ವಿರುದ್ಧ ಅಸ್ಸಾಂನಲ್ಲಿ ಕಠಿಣ ಕ್ರಮ: 10 ದಿನದಲ್ಲಿ 4 ಸಾವಿರ ಕೇಸ್ ದಾಖಲು

ಅಸ್ಸೋಂ ರಾಜ್ಯದಾದ್ಯಂತ ಕಳೆದ ಎರಡು ದಿನಗಳಿಂದ ಬಾಲ್ಯ ವಿವಾಹ ಪ್ರಕರಣಗಳ ವಿರುದ್ಧದ ಕಠಿಣ ಕ್ರಮವು ದೇಶದಾದ್ಯಂತ ಸದ್ದು ಮಾಡುತ್ತಿದೆ. ಮತ್ತೊಂದೆಡೆ, ಬಾಲ್ಯ ವಿವಾಹಗಳನ್ನು ಆದ ಪುರುಷರು ಮತ್ತು ಈ ಮದುವೆಗಳನ್ನು ಮಾಡಿಸಿದ ಕಾಜಿಗಳು, ಮೌಲಾನಾಗಳು ಮತ್ತು ಪೂಜಾರಿಗಳನ್ನು ಗುಂಪು-ಗುಂಪಾಗಿ ಏಕಕಾಲಕ್ಕೆ ಬಂಧಿಸಲಾಗುತ್ತಿದೆ. ಇದರಿಂದ ಈ ಬಾಲ್ಯ ವಿವಾಹಗಳಲ್ಲಿ ತೊಡಗಿದವರಲ್ಲಿ ಬಂಧನ ಭೀತಿ ಆವರಿಸಿದೆ.

ಎರಡು ಮಕ್ಕಳ ತಾಯಿ ಆತ್ಮಹತ್ಯೆ: ಇದೇ ಕಾರಣದಿಂದ ಮಂಕಾಚಾರ್ ಜಿಲ್ಲೆಯಲ್ಲಿ 22 ವರ್ಷದ ಯುವತಿ ಸಾವಿಗೆ ಶರಣಾಗಿದ್ದಾರೆ. ಇಲ್ಲಿನ ಝೌಡಾಂಗ್ ಪುಬೇರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಯುವತಿಯನ್ನು ಸೀಮಾ ಖಾತುನ್ ಅಲಿಯಾಸ್ ಖುಸ್ಬು ಬೇಗಂ ಎಂದು ಗುರುತಿಸಲಾಗಿದೆ. ಸೀಮಾ ತನ್ನ 12ನೇ ವಯಸ್ಸಿನಲ್ಲೇ ಮದುವೆಯಾಗಿದ್ದರು. ಇದೀಗ ಆಕೆ ಎರಡು ಮಕ್ಕಳ ತಾಯಿಯೂ ಆಗಿದ್ದಳು ಎಂದು ತಿಳಿದು ಬಂದಿದೆ.

ಎರಡು ವರ್ಷಗಳ ಹಿಂದೆ ಪತಿ ಸಾವು: ಸೀಮಾ ತನ್ನ ಅಪ್ರಾಪ್ತ ವಯಸ್ಸಿನಲ್ಲೇ ವಿವಾಹ ಬಂಧನಕ್ಕೆ ಒಳಗಾಗಿದ್ದಲ್ಲದೇ, ಈಕೆಯನ್ನು ವರಿಸಿದ್ದ ಮನೋಜ್ ಮಿಯಾ ಎಂಬಾತ ಎರಡು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ಕೋವಿಡ್​ ಸಾಂಕ್ರಾಮಿಕ ರೋಗದ ಸಮಯದಲ್ಲಿ ಮಿಯಾ ಸಾವನ್ನಪ್ಪಿದ್ದು, ಈಗ ಮದುವೆ ಮಾಡಿಸಿದ ಪೋಷಕರ ಬಂಧನದಿಂದ ಹೆದರಿ ಸೀಮಾ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದುವೆರೆಗೆ 2,221 ಆರೋಪಿಗಳ ಬಂಧನ: ಸಾಮಾಜಿಕ ಪಿಡುಗಾದ ಬಾಲ್ಯ ವಿವಾಹ ನಿರ್ಮೂಲನೆಗೆ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದ್ದು, 2020, 2021 ಮತ್ತು 2022ರ ಸಾಲಿನಲ್ಲಿ ನಡೆದ ವಿವಾಹಗಳ ಮಾಹಿತಿಯನ್ನು ಕಲೆ ಹಾಕಿ ಜನವರಿ 3ರ ನಂತರದ ಕೇವಲ ಹತ್ತು ದಿನಗಳಲ್ಲಿ ಬಾಲ್ಯ ವಿವಾಹಗಳಿಗೆ ಸಂಬಂಧಿಸಿದಂತೆ ಒಟ್ಟು 4,004 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಅಲ್ಲದೇ, ಇದಕ್ಕೆ ಸಂಬಂಧಿಸಿದಂತೆ ಒಟ್ಟಾರೆ 8,134 ಆರೋಪಿಗಳ ಪಟ್ಟಿಯನ್ನು ಪೊಲೀಸರು ಸಿದ್ಧಪಡಿಸಿದ್ದಾರೆ.

ಗುರುವಾರ ರಾತ್ರಿಯಿಂದ ಆರೋಪಿಗಳ ಬಂಧನ ಕಾರ್ಯಾಚರಣೆ ಆರಂಭಿಸಿದ್ದು, ಇದುವರೆಗೆ ಬಾಲ್ಯ ವಿವಾಹ ತಡೆ ಹಾಗೂ ಪೋಕ್ಸೋ ಕಾಯ್ದೆಗಳಡಿ 2,221 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಂಧಿತರಲ್ಲಿ 52 ಕಾಜಿಗಳು, ಮೌಲಾನಾಗಳು ಹಾಗೂ ಪೂಜಾರಿಗಳು ಕೂಡ ಸೇರಿದ್ದಾರೆ ಎಂಬುವುದು ಗಮನಾರ್ಹವಾಗಿದೆ. ಅನೇಕ ಆರೋಪಿಗಳು ತಮ್ಮ ಮನೆಗಳಿಂದ ಓಡಿಹೋಗಿ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡುವಂತೆ ಆಗಿದೆ. ಜೊತೆಗೆ ಕಳೆದ ಎರಡು ದಿನಗಳಿಂದ ರಾಜ್ಯದ ಹಲವು ಪೊಲೀಸ್ ಠಾಣೆಗಳ ಮುಂದೆ ಬಂಧಿತರ ಸಂಬಂಧಿಕರು ಜಮಾಯಿಸಿದ್ದರು.

ಆರೋಪಿಗಳಿಗೆ ಜಾಮೀನು ಇಲ್ಲ - ಸಿಎಂ: ಇದರ ನಡುವೆ ಅಸ್ಸೋಂ ಗೃಹ ಸಚಿವರು ಆಗಿರುವ ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ಬಾಲ್ಯ ವಿವಾಹಗಳ ವಿರುದ್ಧದ ಈ ಕ್ರಮವು ಯಾವುದೇ ಮಾನವೀಯತೆಯ ಆಧಾರದ ಮೇಲೆ ರಾಜಿಯೂ ಆಗುವುದಿಲ್ಲ. ಬಾಲ್ಯ ವಿವಾಹಗಳ ವಿರುದ್ಧ ಕಾರ್ಯಾಚರಣೆ 2026ರ ವಿಧಾನಸಭೆ ಚುನಾವಣೆವರೆಗೂ ಮುಂದುವರಿಯಲಿದೆ. ಅಲ್ಲದೇ, 14 ವರ್ಷ ಮೇಲ್ಪಟ್ಟ ಬಾಲಕಿಯನ್ನು ಮದುವೆಯಾಗುವವರಿಗೆ ಜಾಮೀನು ಸಿಗುತ್ತದೆ. 14 ವರ್ಷದೊಳಗಿನವರನ್ನು ಮದುವೆಯಾಗಿದ್ದರೆ, ಅಂತಹ ಆರೋಪಿಗಳಿಗೆ ಜಾಮೀನು ಸಿಗುವುದಿಲ್ಲ ಎಂದು ಸಿಎಂ ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ: ಬಾಲ್ಯ ವಿವಾಹದ ವಿರುದ್ಧ ಅಸ್ಸಾಂನಲ್ಲಿ ಶಿಸ್ತು ಕ್ರಮ: ಮೌಲಾನಾ, ಪೂಜಾರಿಗಳು ಸೇರಿ 2044 ಜನರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.