ETV Bharat / bharat

ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡರ್‌ ಇಳಿಸಿದ ಮೊದಲ ದೇಶ ಭಾರತ! ಇತಿಹಾಸ ಸೃಷ್ಟಿಸಿದ ಇಸ್ರೋ!

author img

By ETV Bharat Karnataka Team

Published : Aug 23, 2023, 6:18 PM IST

Updated : Aug 23, 2023, 8:35 PM IST

ಚಂದ್ರಯಾನ-3 ಗಗನ ನೌಕೆಯ ಲ್ಯಾಂಡರ್‌ ವಿಕ್ರಮ್ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಸಾಫ್ಟ್‌ ಲ್ಯಾಂಡಿಂಗ್‌ ಆಗಿದೆ. ಈ ಮೂಲಕ ಇಸ್ರೋ ವಿಜ್ಞಾನಿಗಳು ಬಾಹ್ಯಾಕಾಶ ಲೋಕದಲ್ಲಿ ಹೊಸ ಚರಿತ್ರೆ ನಿರ್ಮಿಸಿದರು.

Etv Bharat
Etv Bharat

ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಇಂದು ಭಾರತ ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿತು. ಇಡೀ ವಿಶ್ವವೇ ಎದುರು ನೋಡುತ್ತಿದ್ದ ಚಂದ್ರಯಾನ-3 ಗಗನ ನೌಕೆಯ ಲ್ಯಾಂಡರ್‌ ವಿಕ್ರಮ್‌ ಅನ್ನು ಇಸ್ರೋ ವಿಜ್ಞಾನಿಗಳು ಸಂಜೆ 6:04ಕ್ಕೆ ಸರಿಯಾಗಿ ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್ ಮಾಡಿದರು. ಈ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಯಶಸ್ವಿಯಾಗಿ ಇಳಿಸಿದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು.

ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಚಂದ್ರಯಾನ-3 ಗಗನನೌಕೆಯನ್ನು ಇಸ್ರೋ ಯಶಸ್ವಿಯಾಗಿ ಉಡಾಯಿಸಿತ್ತು. ಅಂದಿನಿಂದ ಯೋಜನೆಯ ಯಶಸ್ಸಿಗಾಗಿ ಭಾರತ ಮಾತ್ರವಲ್ಲದೇ ಜಗತ್ತು ಹಾರೈಸಿ ಕಾತುರದಿಂದ ಕಾಯುತ್ತಿತ್ತು. ಭೂಮಿಯಿಂದ ನಭಕ್ಕೆ ಚಿಮ್ಮಿದ 41ನೇ ದಿನದ ನಂತರ ಇಂದು ಸಂಜೆ ಚಂದ್ರನನ್ನು ವಿಕ್ರಮ್‌ ಲ್ಯಾಂಡರ್‌ ಸ್ಪರ್ಶಿಸಿತು. ಈ ಮೂಲಕ ಭಾರತದ ಹೆಜ್ಜೆ ಗುರುತುಗಳು ಚಂದ್ರನೂರಿನಲ್ಲಿ ಮೂಡಿವೆ.

  • Chandrayaan-3 Mission:
    'India🇮🇳,
    I reached my destination
    and you too!'
    : Chandrayaan-3

    Chandrayaan-3 has successfully
    soft-landed on the moon 🌖!.

    Congratulations, India🇮🇳!#Chandrayaan_3#Ch3

    — ISRO (@isro) August 23, 2023 " class="align-text-top noRightClick twitterSection" data=" ">

ಇಂದು ಸಂಜೆ ಸರಿಯಾಗಿ 5:20ಕ್ಕೆ ಚಂದ್ರನ ಮೇಲೆ ಲ್ಯಾಂಡರ್​ ಇಳಿಸುವ ಪ್ರಕ್ರಿಯೆಯನ್ನು ಇಸ್ರೋ ವಿಜ್ಞಾನಿಗಳು ಆರಂಭಿಸಿದ್ದರು. ಈ ಕೆಲಸ ಆರಂಭವಾಗುತ್ತಿದ್ದಂತೆ ಕೋಟ್ಯಂತರ ಭಾರತೀಯರ ಎದೆ ಬಡಿತವೂ ಕೂಡ ಹೆಚ್ಚುತ್ತಿತ್ತು. ಜಗತ್ತೇ ಕುತೂಹಲದಿಂದ ಎದುರು ನೋಡುತ್ತಿದ್ದ ಐತಿಹಾಸಿಕ ಪ್ರಕ್ರಿಯೆಯನ್ನು ಇಸ್ರೋ ನೇರಪ್ರಸಾರ ಮಾಡಿತ್ತು. ಗಣ್ಯರು ಸೇರಿದಂತೆ ಜನಸಾಮಾನ್ಯರೂ ಸಹ ಇದನ್ನು ವೀಕ್ಷಿಸುತ್ತಾ, ಎಲ್ಲೆಡೆ ಲ್ಯಾಂಡರ್‌ ಚಂದ್ರನ ಮೇಲೆ 'ಮೃದು ಲ್ಯಾಂಡಿಂಗ್​ ಆಗಲಿ' ಎಂದು ಪ್ರಾರ್ಥನೆ ಸಲ್ಲಿಸುತ್ತಿದ್ದರು.

ಅಂತಿಮವಾಗಿ ಕೋಟ್ಯಂತರ ಜನರ ಆಶಯ, ಪ್ರಾರ್ಥನೆ ಫಲಿಸಿದೆ. ನಿಗದಿತ ಸಮಯದಂತೆ ಸಂಜೆ 6 ಗಂಟೆ 4 ನಿಮಿಷಕ್ಕೆ ಸರಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್​ ಇಳಿಯುವ ಮೂಲಕ ತನ್ನ ಪರಾಕ್ರಮ ಮರೆಯಿತು. ಚಂದ್ರನಿಗೆ ಸನಿಹವಾಗುತ್ತಿದ್ದಂತೆ ಹಾರಿಜಾಂಟರ್​ ಮಾದರಿಯಿಂದ ವರ್ಟಿಕಲ್​ ಮಾದರಿಗೆ ಲ್ಯಾಂಡರ್​ ಬಂದು ಚಂದ್ರನನ್ನು ಚುಂಬಿಸಿತು. ಭಾರತದ ಚಂದ್ರ ಚುಂಬನ ಯಶಸ್ವಿಯಾಗುತ್ತಿದ್ದಂತೆ ಇಸ್ರೋ ವಿಜ್ಞಾನಿಗಳು ಸಂಭ್ರಮಾಚರಿಸಿದರು.

ಬೆಂಗಳೂರಿನ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ನಲ್ಲಿ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಮಾಜಿ ಅಧ್ಯಕ್ಷ ಶಿವನ್ ಹಾಗೂ ಅನೇಕ ವಿಜ್ಞಾನಿಗಳು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್‌ ಪ್ರಕ್ರಿಯೆಯನ್ನು ವೀಕ್ಷಿಸಿ ಪರಸ್ಪರ ಅಭಿನಂದನೆಗಳನ್ನು ಸಲ್ಲಿಸಿದರು. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿಂದಲೇ ವರ್ಚುವಲ್‌ ಮೂಲಕ ವೀಕ್ಷಣೆ ಮಾಡಿ, ಇಸ್ರೋಗೆ ಅಭಿನಂದನೆ ಸಲ್ಲಿಸಿದರು.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ.ಜೀತೇಂದ್ರ ಸಿಂಗ್​ ಅವರು ದೆಹಲಿಯ ಸಿಎಸ್​ಐಆರ್​ ಪ್ರಧಾನ ಕಚೇರಿಯಲ್ಲಿ ನೇರಪ್ರಸಾರ​ ವೀಕ್ಷಿಸಿದರು. ಅಲ್ಲದೇ, ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಹಾಗೂ ಇತರ ರಾಜಕೀಯ ನಾಯಕರು ಸಹ ಚಂದ್ರಯಾನ-3ರ ಯಶಸ್ವಿಯನ್ನು ಪ್ರಕ್ರಿಯೆಯನ್ನು ವೀಕ್ಷಿಸಿ ವಿಜ್ಞಾನಿಗಳಿಗೆ ಅಭಿನಂದಿಸಿದರು.

ಗಮ್ಯಸ್ಥಾನ ತಲುಪಿದೆ ಚಂದ್ರಯಾನ-3: ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್​ ವಿಕ್ರಮ್ ಯಶಸ್ವಿಯಾಗಿ ಇಳಿಯುತ್ತಿದ್ದಂತೆ ಇಸ್ರೋ ಟ್ವೀಟ್​ ಮಾಡಿ ಖಚಿತಪಡಿಸಿದೆ. ''ಚಂದ್ರಯಾನ-3 ಮಿಷನ್, ಭಾರತ, ನಾನು ನನ್ನ ಗಮ್ಯಸ್ಥಾನವನ್ನು ತಲುಪಿದೆ ಮತ್ತು ನೀವೂ ಕೂಡ!'' ಎಂದು ಇಸ್ರೋ ಟ್ವೀಟ್​ ಮಾಡಿದೆ. ಮುಂದುವರೆದು, ''ಚಂದ್ರಯಾನ-3 ಯಶಸ್ವಿಯಾಗಿದೆ. ಚಂದ್ರನ ಮೇಲೆ ಮೃದುವಾಗಿ ಇಳಿದಿದೆ. ಅಭಿನಂದನೆಗಳು, ಭಾರತ!'' ಎಂದು ತಿಳಿಸಿದೆ.

ಇದನ್ನೂ ಓದಿ: ಚಂದ್ರಯಾನದ ಯಶಸ್ಸು ಭಾರತಕ್ಕೆ ಮಾತ್ರವಲ್ಲ, ಇಡೀ ಮಾನವತೆಗೆ ಸೇರಿದ್ದು: ಪ್ರಧಾನಿ ಮೋದಿ

Last Updated :Aug 23, 2023, 8:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.