ETV Bharat / bharat

ವಿಶೇಷ ಅಂಕಣ: ಆರೋಗ್ಯ ಕೇಂದ್ರಗಳೆ ಅಥವಾ ಕಸಾಯಿಖಾನೆಗಳೇ?

author img

By

Published : Jan 12, 2020, 4:47 PM IST

Special artical
ಹೆಚ್ಚುತ್ತಿರುವ ನವಜಾತ ಶಿಶುಗಳ ಸಾವಿನ ಪ್ರಮಾಣ

ಮಕ್ಕಳು ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಭಾಗವಾಗಿರುವುದರಿಂದ ಪ್ರತಿಯೊಂದು ರಾಷ್ಟ್ರವೂ ತನ್ನ ಮಕ್ಕಳನ್ನು ನಿಜವಾದ ಸ್ವತ್ತೆಂದು ಪರಿಗಣಿಸುತ್ತದೆ. ಆದಾಗ್ಯೂ, ಭಾರತದಲ್ಲಿನ ಈ ಚಿತ್ರಣ ಭಿನ್ನವಾಗಿದೆ. ಇಲ್ಲಿ ನವಜಾತ ಶಿಶುಗಳ ಸಾವಿನ ಪ್ರಮಾಣ ಶೇ.27ರಷ್ಟಾಗಿದ್ದರೆ, ಮತ್ತು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವಿನ ಪ್ರಮಾಣ ಶೇ.21ರಷ್ಟಿದೆ. ಕೋಟಾದ ದುರಂತ ಘಟನೆ ಭಾರತದಲ್ಲಿನ ಈ ಸ್ಥಿತಿಗೊಂದು ಹೊಚ್ಚಹೊಸ ಸಾಕ್ಷಿಯಾಗಿದೆ.

ಮಕ್ಕಳು ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಭಾಗವಾಗಿರುವುದರಿಂದ ಪ್ರತಿಯೊಂದು ರಾಷ್ಟ್ರವೂ ತನ್ನ ಮಕ್ಕಳನ್ನು ನಿಜವಾದ ಸ್ವತ್ತೆಂದು ಪರಿಗಣಿಸುತ್ತದೆ. ಆದಾಗ್ಯೂ, ಭಾರತದಲ್ಲಿನ ಈ ಚಿತ್ರಣ ಭಿನ್ನವಾಗಿದೆ. ಇಲ್ಲಿ ನವಜಾತ ಶಿಶುಗಳ ಸಾವಿನ ಪ್ರಮಾಣ ಶೇ.27ರಷ್ಟಾಗಿದ್ದರೆ, ಮತ್ತು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವಿನ ಪ್ರಮಾಣ ಶೇ.21ರಷ್ಟಿದೆ. ಕೋಟಾದ ದುರಂತ ಘಟನೆ ಭಾರತದಲ್ಲಿನ ಈ ಸ್ಥಿತಿಗೊಂದು ಹೊಚ್ಚಹೊಸ ಸಾಕ್ಷಿಯಾಗಿದೆ.

ಇಲ್ಲಿಯವರೆಗೆ ರಾಜಸ್ಥಾನದ ಕೋಟಾ, ಪ್ರಸ್ತುತ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಕ್ಷೇತ್ರ ಎಂದೇ ಜನಪ್ರಿಯವಾಗಿತ್ತು. ಆದರೀಗ ಅದು ಶಿಶುಗಳ ಸಾವಿನಿಂದಾಗಿ ದೇಶದ ಗಮನ ಸೆಳೆಯುತ್ತಿದೆ. ಶಿಶುಗಳ ಮರಣ ಪ್ರಮಾಣ ಹೆಚ್ಚಳವು ಸರ್ಕಾರದ ಕಡೆಯಿಂದ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿನ ಕಳಪೆ ಸಾಧನೆಗೆ ಹಿಡಿದ ಕನ್ನಡಿಯಂತಿದೆ. ಜೊತೆಗೆ ಆರೋಗ್ಯ ಕ್ಷೇತ್ರ ಆತ್ಮಾಲೋಕನ ಮಾಡಿಕೊಳ್ಳಬೇಕು ಎಂಬ ಸ್ಥಿತಿಯನ್ನು ತಂದಿಟ್ಟಿದೆ.

ಸುತ್ತಮುತ್ತಲಿನ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯ ಮಕ್ಕಳನ್ನು ತುರ್ತು ಚಿಕಿತ್ಸೆಗಾಗಿ ರಾಜಸ್ಥಾನದ ಕೋಟಾ ನಗರದ ಜೆಕೆ ಲೋನ್ ಆಸ್ಪತ್ರೆಗೆ ಕರೆತರಲಾಗುತ್ತದೆ. ಡಿಸೆಂಬರ್ ತಿಂಗಳಲ್ಲಿ ಒಂದೇ ಆಸ್ಪತ್ರೆಯಲ್ಲಿ 100 ಕ್ಕೂ ಹೆಚ್ಚು ನವಜಾತ ಶಿಶುಗಳು ಸಾವನ್ನಪ್ಪಿರುವುದು ಆತಂಕಕಾರಿ. ಹೆಚ್ಚುತ್ತಿರುವ ಪ್ರತಿಭಟನೆಗಳ ನಡುವೆ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ (ಎನ್‌ಸಿಪಿಆರ್) ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ 2019ರಲ್ಲಿ ಆಸ್ಪತ್ರೆಯಲ್ಲಿ ಒಟ್ಟು 940 ಸಾವಿನ ಪ್ರಕರಣಗಳು ದಾಖಲಾಗಿವೆ ಎಂಬ ಅಂಶವನ್ನು ಬೆಳಕಿಗೆ ತಂದಿದೆ.

ರಾಜ್ಯ ಸರ್ಕಾರವು ಈ ಸಮಸ್ಯೆಗೆ ಸಮನಾಗಿ ದೊಡ್ಡ ಸಮಸ್ಯೆಯೊಂದನ್ನು ಬಿಂಬಿಸುವ ಮೂಲಕ ಈ ವಾಸ್ತವವನ್ನು ಮರೆಮಾಚಲು ಯತ್ನಿಸಿತು. ಆಸ್ಪತ್ರೆಯು ಒಂದು ವರ್ಷದಲ್ಲಿ 1,300-1,500 ಸಾವುಗಳಿಗೆ ಸಾಕ್ಷಿಯಾದ ಉದಾಹರಣೆಗಳಿವೆ ಎಂದು ವಾದಿಸುವ ಮೂಲಕ ಅದು ನಾಚಿಕೆಯಿಲ್ಲದೆ ತನ್ನ ಮರ್ಯಾದೆಯನ್ನು ತಾನೇ ಕಳೆದುಕೊಂಡಿತು. ಸಾಲದೆಂಬಂತೆ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರಸ್ತುತ ಸಾವಿನ ಸಂಖ್ಯೆ ಸಾಮಾನ್ಯ ಪ್ರವೃತ್ತಿಯಾಗಿದೆ ಎಂಬ ಬೇಜವಬ್ದಾರಿಯುತ ಹೇಳಿಕೆ ನೀಡಿದರು.

ಪ್ರತಿವರ್ಷ ಸಾವಿರಾರು ಮಕ್ಕಳು ಸಾಯುತ್ತಿದ್ದರೆ, ಈ ಎಲ್ಲಾ ವರ್ಷಗಳಲ್ಲಿ ಸರ್ಕಾರ ಆ ಸಾವುಗಳನ್ನು ತಡೆಗಟ್ಟಲು ಯಾವ ಕ್ರಮಗಳನ್ನು ತೆಗೆದುಕೊಂಡಿದೆ? ಅಲ್ಲಿನ ಆರೋಗ್ಯ ಸ್ಥಿತಿಯನ್ನು ಸುಧಾರಿಸಲು ಹೇಗೆ ಯತ್ನಿಸಿದೆ? ಈ ಪ್ರಶ್ನೆಗಳಿಗೆ ಅಲ್ಲಿನ ಯಾವುದೇ ರಾಜಕಾರಣಿಗಳಲ್ಲಿ ಉತ್ತರವಿಲ್ಲ ಎಂದು ತೋರುತ್ತದೆ.
ಎನ್‌ಸಿಪಿಆರ್ ತಪಾಸಣೆಯ ನಂತರವೇ ಜೆಕೆ ಲೋನ್ ಆಸ್ಪತ್ರೆ ಆವರಣ ಮತ್ತು ಅದರ ಸುತ್ತಮುತ್ತಲಿನ ಬಗ್ಗೆ ಹಲವಾರು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದವು. ತುರ್ತು ವೈದ್ಯಕೀಯ ಉಪಕರಣಗಳಾದ ವಾರ್ಮರ್‌ಗಳು, ನೆಬ್ಯುಲೈಜರ್‌ಗಳು ಮತ್ತು ವೆಂಟಿಲೇಟರ್‌ಗಳಲ್ಲಿ 50 ಪ್ರತಿಶತಕ್ಕಿಂತಲೂ ಹೆಚ್ಚು ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆತಂಕಕಾರಿ ವಿಚಾರವನ್ನು ಆಯೋಗವು ಹೊರಹಾಕಿತು.

ಆಸ್ಪತ್ರೆಯ ಆವರಣದಲ್ಲಿ ಹಂದಿಗಳು ತಿರುಗಾಡುತ್ತಿರುವುದನ್ನು ನೋಡಿ ಆಯೋಗದ ಸದಸ್ಯರು ಆಘಾತಕ್ಕೊಳಗಾದರು. ಘಟನೆಗಳನ್ನು ಪರಿಶೀಲಿಸಲು ಆಸ್ಪತ್ರೆ ಆಡಳಿತ ಮಂಡಳಿಯಿಂದ ನೇಮಿಸಲ್ಪಟ್ಟ ಸಮಿತಿಯು ವ್ಯವಸ್ಥಿತ ಅಥವಾ ಮೂಲಸೌಕರ್ಯ ನಿರ್ಲಕ್ಷ್ಯವನ್ನು ತಳ್ಳಿಹಾಕಿದೆ. ವೈದ್ಯಕೀಯ ಸಾಧನಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅದು ಘೋಷಿಸಿತು. ಸಾವಿರಾರು ಮಕ್ಕಳ ಜೀವಕ್ಕೆ ಬೆಲೆ ಕೊಡದೆ ಆಸ್ಪತ್ರೆಯ ಖ್ಯಾತಿಯನ್ನು ಉಳಿಸಿಕೊಳ್ಳಲು ಸಮಿತಿಯ ಉತ್ಸುಕವಾಗಿದೆ ಎಂಬುದು ಅದರ ಪರಿಶೀಲನಾ ವರದಿಯಿಂದ ಸ್ಪಷ್ಟವಾಗುತ್ತದೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಈ ಸಮಸ್ಯೆಯನ್ನು ಸ್ವಯಂಪ್ರೇರಣೆಯಿಂದ ಕೈಗೆತ್ತಿಕೊಂಡು ರಾಜಸ್ಥಾನ ಸರ್ಕಾರಕ್ಕೆ ನೋಟಿಸ್ ನೀಡಿದೆ. ಮಾಧ್ಯಮ ವರದಿಗಳು ನಿಜವಾಗಿದ್ದರೆ, ಸರ್ಕಾರ ನಡೆಸುತ್ತಿರುವ ಜೆಕೆ ಲೋನ್ ಆಸ್ಪತ್ರೆಯಲ್ಲಿ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಗಿದೆ. ಈ ಕುರಿತು ತಾನು ಗಮನ ಹರಿಸಿದ್ದೇನೆ ಎಂದು ಆಯೋಗ ಹೇಳಿದೆ. ಸಮಿತಿಯನ್ನು ನೇಮಕ ಮಾಡುವ ಮೂಲಕ ಆಡಳಿತ ಮಂಡಳಿಯು ಆಯೋಗದ ಆರೋಪವನ್ನು ತಳ್ಳಿಹಾಕಲು ಪ್ರಯತ್ನಿಸಿದರೂ, ಎನ್‌ಎಚ್‌ಆರ್‌ಸಿ ಈ ವಿಷಯದಲ್ಲಿ ಮುಖ್ಯಮಂತ್ರಿಗಳ ಸೂಕ್ತ ಸ್ಪಷ್ಟೀಕರಣ ಸಿಗದೆ ಹಿಂದೆ ಸರಿಯುವುದಿಲ್ಲ. ಕೇವಲ ರಾಜಸ್ಥಾನ ಮಾತ್ರವಲ್ಲ ದೇಶದ ಬೇರೆ ಭಾಗದಲ್ಲಿನ ಇತ್ತೀಚಿನ ಆರೋಗ್ಯ ಕ್ಷೇತ್ರದಲ್ಲಿನ ಬೆಳವಣಿಗೆಗಳು ಭಾರತದಲ್ಲಿ ಸಾರ್ವಜನಿಕ ಆರೋಗ್ಯದ ಭೀಕರ ಸ್ಥಿತಿಯನ್ನು ತೋರಿಸುತ್ತಿದೆ.

ಏಕಾಏಕಿಯಾಗಿ ಆಕ್ರಮಿಸಿದ ಬಿಹಾರದಲ್ಲಿ ಎನ್ಸೆಫಾಲಿಟಿಸ್ ಮತ್ತು ಉತ್ತರಪ್ರದೇಶದಲ್ಲಿ ಗೋರಖ್​ ಪುರ ಆಸ್ಪತ್ರೆಯ ದುರಂತಗಳು ಇದಕ್ಕೆ ಉತ್ತಮ ನಿದರ್ಶನಗಳಾಗಿವೆ. ಸಾಮಾನ್ಯ ಜನರು ಈ ಕಾಯಿಲೆಯನ್ನು ಮೆದುಳಿನ ಜ್ವರ ಎಂದೂ ಕರೆಯುತ್ತಾರೆ.ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್ (ಎಇಎಸ್) ಮುಜಫರ್​ ಪುರದಿಂದ ಬಿಹಾರದ ಇತರ 18 ಜಿಲ್ಲೆಗಳಿಗೆ ವೇಗವಾಗಿ ಹರಡಿತು. ಸಾವಿರಾರು ಮಕ್ಕಳು ಸತ್ತರೂ, ಸರ್ಕಾರವು ದುರಂತದ ಬಗ್ಗೆ ಕೊನೆಗೂ ಕಾಳಜಿ ವಹಿಸಲಿಲ್ಲ. ಇದೇ ನಿರ್ಲಕ್ಷ್ಯವು ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದ ಸಾರ್ವಜನಿಕ ಆರೋಗ್ಯ ದುರಂತಕ್ಕೆ ಕಾರಣವಾಗಿದೆ.

ಶಿಶು ಮರಣ ಪ್ರಮಾಣ ಕಡಿಮೆಗೊಳಿಸುವ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿಯೇ ಹೆರಿಗೆಯಾಗುವುದನ್ನು ಉತ್ತೇಜಿಸುವ ಸಲುವಾಗಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಜ್ಯ ಸರ್ಕಾರಗಳಿಗೆ ಹಲವಾರು ಉಪಕ್ರಮಗಳನ್ನು ಪರಿಚಯಿಸುವಂತೆ ಕರೆ ನೀಡಿತ್ತು. ಪ್ರಸ್ತಾಪ ಮಾಡಿ 4 ವರ್ಷಗಳು ಕಳೆದಿವೆ. ಆದರೆ ಶಿಶು ಮರಣ ಪ್ರಮಾಣದಲ್ಲಿ ಯಾವುದೇ ಕುಸಿತ ಕಂಡುಬಂದಿಲ್ಲ. ಯಾವುದೇ ನಗರ ಅಥವಾ ರಾಜ್ಯದಲ್ಲಿ ಗುಣಮಟ್ಟದ ಸರ್ಕಾರಿ ಆಸ್ಪತ್ರೆಗಳಿಲ್ಲ. ಸಿಬ್ಬಂದಿ, ತುರ್ತು ಔಷಧಿಗಳು ಮತ್ತು ಮೂಲ ಸೌಕರ್ಯಗಳ ತೀವ್ರ ಕೊರತೆಯೊಂದಿಗೆ ಆಸ್ಪತ್ರೆಗಳೇ ರೋಗಗ್ರಸ್ಥವಾಗಿವೆ. ಮಕ್ಕಳು ಮತ್ತು ನವಜಾತ ಶಿಶುಗಳ ಪಾಲಿಗೆ ನರಕವೆಂದು ಮತ್ತೆಮತ್ತೆ ಸಾಬೀತುಪಡಿಸುತ್ತಿವೆ. ಅಪೌಷ್ಟಿಕತೆ, ಅಕಾಲಿಕ ಹೆರಿಗೆ ಮತ್ತು ರಕ್ತಹೀನತೆಯಂತಹ ವ್ಯವಸ್ಥಿತ ಸಮಸ್ಯೆಗಳು ಜನರನ್ನು, ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದವರನ್ನು ಪೀಡಿಸುತ್ತಿವೆ.

ಅಧಿಕೃತ ಸಮೀಕ್ಷೆಯ ಪ್ರಕಾರ, ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್, ಛತ್ತೀಸ್‌ಗಢ ಮತ್ತು ಅಸ್ಸಾಂನ 115 ಜಿಲ್ಲೆಗಳು ದೇಶದ ಒಟ್ಟು ಶಿಶು ಸಾವುಗಳಲ್ಲಿ ಶೇ.50ರಷ್ಟು ಪಾಲು ಪಡೆದಿವೆ. ಈ ಅಂಕಿಅಂಶಗಳು ನಮ್ಮ ಮಕ್ಕಳನ್ನು ರಕ್ಷಿಸುವಲ್ಲಿ ನಮ್ಮ ರಾಷ್ಟ್ರ ಹೇಗೆ ವಿಫಲರಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ನೆರೆಯ ರಾಷ್ಟ್ರಗಳಾದ ಚೀನಾ, ಶ್ರೀಲಂಕಾ, ನೇಪಾಳ, ಭೂತಾನ್ ಮತ್ತು ಬಾಂಗ್ಲಾದೇಶಕ್ಕೆ ಹೋಲಿಸಿದರೆ ಭಾರತ ಆರೋಗ್ಯ ರಕ್ಷಣೆ ಮತ್ತು ಗುಣಮಟ್ಟದ ಸೂಚ್ಯಂಕದಲ್ಲಿ ಬಹಳ ಹಿಂದುಳಿದಿದೆ. ನಾಗರಿಕರಿಗೆ ಆರೋಗ್ಯ ರಕ್ಷಣೆಯ ಪ್ರಾಥಮಿಕ ಹಕ್ಕನ್ನು ನಿರಾಕರಿಸಲು ಸರ್ಕಾರಗಳು ನಿರ್ಧರಿಸಿದರೆ, ಸರ್ಕಾರಿ ಆಸ್ಪತ್ರೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಗೆ ನಿರೀಕ್ಷಿಸಬಹುದು?

ಎಲ್ಲಾ ನಾಗರಿಕರಿಗೆ ಮೂಲಭೂತ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಮತ್ತು ನವಜಾತ, ತಾಯಿಯ ಮರಣ ಪ್ರಮಾಣವನ್ನು ಕಡಿಮೆ ಮಾಡಲು ರಾಷ್ಟ್ರೀಯ ಆರೋಗ್ಯ ಯೋಜನೆಯನ್ನು (ಎನ್‌ಎಚ್‌ಎಂ) ಪ್ರಾರಂಭಿಸಲಾಯಿತು. ಆಂಧ್ರಪ್ರದೇಶ ಮತ್ತು ತೆಲಂಗಾಣದ ಸಾಮಾನ್ಯ ಹೈಕೋರ್ಟ್, ಇತ್ತೀಚಿನ ದಿನಗಳಲ್ಲಿ ಎನ್ಎಚ್ಎಂ ಈ ನಿಟ್ಟಿನಲ್ಲಿ ಮಾಡಿದ ನಿಜವಾದ ಕೆಲಸದ ಬಗ್ಗೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಅವರನ್ನು ಪ್ರಶ್ನಿಸಿತ್ತು. ಸಾವಿರಾರು ಅಂಗನವಾಡಿ ಕೇಂದ್ರಗಳು, ಗ್ರಾಮೀಣ ಆರೋಗ್ಯ ಕೇಂದ್ರಗಳು ಮತ್ತು ಸರ್ಕಾರಿ ಆಸ್ಪತ್ರೆಗಳು ಸಾರ್ವಜನಿಕ ಆರೋಗ್ಯ ಸುರಕ್ಷತೆಯ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯವಾದ ಪೂರ್ತಿ ವ್ಯವಸ್ಥೆಗಳನ್ನು ಹೊಂದಿಲ್ಲ. ಹಲವಾರು ಸಮೀಕ್ಷೆಗಳು ಗ್ರಾಮೀಣ ಪ್ರದೇಶದಲ್ಲಿ ಶಿಶು ಸಾವಿನ ಪ್ರಮಾಣ ಹೆಚ್ಚಾಗಿದೆ ಎಂದು ಬಹಿರಂಗಪಡಿಸಿದೆ.

ಇತ್ತೀಚಿನ ಸಮೀಕ್ಷೆಯ ಪ್ರಕಾರ ದೇಶಾದ್ಯಂತ 54 ಪ್ರತಿಶತಕ್ಕಿಂತ ಹೆಚ್ಚು ವೈದ್ಯಕೀಯ ಮತ್ತು ಅರೆವೈದ್ಯಕೀಯ ವೈದ್ಯರು ವೃತ್ತಿಗೆ ಅಗತ್ಯ ಅರ್ಹತೆಯನ್ನೇ ಹೊಂದಿಲ್ಲ. ಕೋಟಾ, ಗೋರಖ್‌ಪುರ ಮತ್ತು ಮುಜಾಫರ್​ ಪುರನಲ್ಲಿ ದುರಂತಗಳು ಸಂಭವಿಸಿದಾಗ ಸಮಿತಿಗಳನ್ನು ರಚಿಸುವುದು, ದುರ್ಘಟನೆ ಕುರಿತು ತನಿಖೆ ನಡೆಸುವುದು ಅಥವಾ ಸಂತ್ರಸ್ತರಿಗೆ ಹಣಕಾಸಿನ ನೆರವು ನೀಡುವುದು ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವುದಿಲ್ಲ. ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದು, ಮೂಲಭೂತ ಸೌಕರ್ಯಗಳನ್ನು ಬಲಪಡಿಸುವುದು ಮತ್ತು ಆರೋಗ್ಯ ಸ್ಥಿತಿಯನ್ನು ಅಭಿವೃದ್ಧಿಪಡಿಸಲು ಸಾಕಷ್ಟು ಹಣವನ್ನು ನಿಗದಿಪಡಿಸುವುದು ಅಗತ್ಯವಿದೆ. ರಾಜ್ಯದಾದ್ಯಂತ ಪ್ರತಿಯೊಂದು ಆರೋಗ್ಯ ಕೇಂದ್ರವನ್ನು ಸಂಭವನೀಯ ಆರೋಗ್ಯ ಸಮಸ್ಯೆಗಳಿಗೆ ಪರಿಣಾಕಾರಿ ಚಿಕಿತ್ಸೆ ನೀಡುವಂತೆ ಬಲಪಡಿಸಬೇಕು. ವ್ಯವಸ್ಥಿತ ಬದಲಾವಣೆಗಳು ಮರೀಚಿಕೆಯಾಗಿ ಉಳಿದಿರುವವರೆಗೂ, ದೇಶದ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿನ ದುರಂತಗಳನ್ನು ತಪ್ಪಿಸಲು ಯಾರಿದಂಲೂ ಸಾಧ್ಯವಿಲ್ಲ.




ETV Bharat Logo

Copyright © 2024 Ushodaya Enterprises Pvt. Ltd., All Rights Reserved.