ETV Bharat / bharat

ಲಾಕ್​ಡೌನ್​ ಟೈಮಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳ ವೀಕ್ಷಣೆ ಹೆಚ್ಚಳ: ಗೂಗಲ್, ಟ್ವಿಟ್ಟರ್​, ವಾಟ್ಸ್​ಆ್ಯಪ್​​ಗೆ ನೋಟಿಸ್

author img

By

Published : Apr 26, 2020, 11:13 AM IST

NCPCR issues notice to online platforms
ಅಶ್ಲೀಲ ಚಿತ್ರಗಳ ವೀಕ್ಷಣೆ ಹೆಚ್ಚಳ

ಲಾಕ್‌ಡೌನ್ ಸಮಯದಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಹುಡುಕುತ್ತಿರುವವರ ಸಂಖ್ಯೆ ತೀವ್ರ ಏರಿಕೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸುವಂತೆ ಗೂಗಲ್‌, ಟ್ವಿಟರ್‌ ಮತ್ತು ವಾಟ್ಸ್​ಆ್ಯಪ್‌ಗಳಿಗೆ ನೋಟಿಸ್ ನೀಡಲಾಗಿದೆ.

ನವದೆಹಲಿ: ಕೊರೊನಾ ಸೋಂಕು ತಡೆಯಲು ಕೇಂದ್ರ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿರುವ ಸಮಯದಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳ ವೀಕ್ಷಣೆ ಅಧಿಕವಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸುವಂತೆ ಗೂಗಲ್‌, ಟ್ವಿಟರ್‌ ಮತ್ತು ವಾಟ್ಸ್​ಆ್ಯಪ್‌ ಗೆ ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗ ನೋಟಿಸ್‌ ಜಾರಿಮಾಡಿದೆ.

ಆನ್‌ಲೈನ್‌ನಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ವಿಡಿಯೋ ಲಭ್ಯತೆಯ ಬಗ್ಗೆ ಸ್ವತಂತ್ರ ವಿಚಾರಣೆ ಪ್ರಾರಂಭಿಸಿದೆ. ಭಾರತ ಮಕ್ಕಳ ಸಂರಕ್ಷಣಾ ನಿಧಿಯ ಇತ್ತೀಚಿನ ವರದಿಯನ್ನು ಉಲ್ಲೇಖಿಸಿದೆ. ಲಾಕ್‌ಡೌನ್ ಸಮಯದಲ್ಲಿ ಮಕ್ಕಳ ಅಶ್ಲೀಲ ಚಿತ್ರಗಳನ್ನು ಹುಡುಕುತ್ತಿರುವವರಲ್ಲಿ ತೀವ್ರ ಏರಿಕೆ ಕಂಡುಬಂದಿದೆ ಎಂದು ಉಲ್ಲೇಖಿಸಿದ್ದು, ಏಪ್ರಿಲ್‌ 30ರ ಒಳಗೆ ಪ್ರತಿಕ್ರಿಯಿಸುವಂತೆ ಸೂಚಿಸಿದೆ.

ಭಾರತ ಸೇರಿದಂತೆ ವಿದೇಶಿ ಪೋರ್ನ್‌ ಸೈಟ್‌ಗಳ ಮೂಲಕ ಜನರು, ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ಚಿತ್ರಗಳನ್ನು ನೋಡುವುದು ಹೆಚ್ಚಾಗಿದ್ದು, ಈ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗ ಆತಂಕ ವ್ಯಕ್ತಪಡಿಸಿದೆ.

13 ವರ್ಷದ ಮೇಲಿ ಮಕ್ಕಳು ಕೂಡ ಟ್ವಿಟರ್‌ ಖಾತೆಯನ್ನು ತೆರೆಯುವುದಕ್ಕೆ ಅವಕಾಶವಿದೆ. ಟ್ವಿಟರ್‌ನಲ್ಲಿ ಲಭ್ಯವಿರುವ ಲಿಂಕ್‌ಗಳನ್ನು ಬಳಸಿ ಮಕ್ಕಳು ಸಹ ಅಶ್ಲೀಲ ಚಿತ್ರಗಳನ್ನು ನೋಡಲು ಅವಕಾಶ ಕಲ್ಪಿಸಿದಂತಾಗಿದೆ. ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗ ತಿಳಿಸಿದೆ.

ಗೂಗಲ್ ಇಂಡಿಯಾಕ್ಕೆ ನೀಡಿದ ನೋಟಿಸ್‌ನಲ್ಲಿ, 'ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಅಪ್ಲಿಕೇಶನ್‌ಗಳ ಮೂಲಕ ಅಶ್ಲೀಲ ಚಿತ್ರಗಳನ್ನು ಡೌನ್‌ಲೋಡ್ ಮಾಡಬಹುದು. ಆ ಮೂಲಕ ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ವಿಡಿಯೊಗಳನ್ನು ವೀಕ್ಷಿಸಬಹುದು. ಇದು ಆತಂಕಕಾರಿ ವಿಚಾರ' ಎಂದು ಹೇಳಿದೆ.

ಇತ್ತ ವಾಟ್ಸ್​ಆ್ಯಪ್ ಗ್ರೂಪ್​ಗಳಲ್ಲೂ ವಿಪರೀತವಾಗಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಲಿಂಕ್​ಗಳು ಹರಿದಾಡುತ್ತಿರುವುದನ್ನು ಆಯೋಗ ಗಮನಿಸಿದೆ ಎಂದು ನೋಟೀಸ್​ನಲ್ಲಿ ತಿಳಿಸಿದೆ.

ಲಾಕ್‌ಡೌನ್‌ಗೂ ಮೊದಲ ಸಮಯಕ್ಕೆ ಹೋಲಿಸಿದರೆ ಮಾರ್ಚ್ 24 ಮತ್ತು 26ರ ನಡುವೆ ಮಕ್ಕಳ ಅಶ್ಲೀಲತೆಗೆ ಸಂಬಂಧಿಸಿದ ಹುಡುಕಾಟದಲ್ಲಿ ಇಂಟರ್ನೆಟ್ ದಟ್ಟಣೆ ಶೇಕಡಾ 95 ರಷ್ಟು ಹೆಚ್ಚಾಗಿದೆ ಎಂದು ಆಯೋಗ ಹೇಳಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.