ETV Bharat / bharat

ಜಬಲ್‌ಪುರದ ಕಾಂಗ್ರೆಸ್ ಕಚೇರಿ ಮೇಲೆ ಬಜರಂಗ ದಳದ ಕಾರ್ಯಕರ್ತರಿಂದ ದಾಳಿ

author img

By

Published : May 4, 2023, 6:46 PM IST

Bajrang Dal workers  protest at Congress office in Jabalpur
ಜಬಲ್‌ಪುರದ ಕಾಂಗ್ರೆಸ್ ಕಚೇರಿ ಮೇಲೆ ಭಜರಂಗ ದಳದ ಕಾರ್ಯಕರ್ತರ ದಾಳಿ

ಮಧ್ಯಪ್ರದೇಶದ ಜಬಲ್‌ಪುರದ ಕಾಂಗ್ರೆಸ್ ಕಚೇರಿ ಮುಂದೆ ಬಜರಂಗ ದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕಚೇರಿ ಮೇಲೆ ದಾಳಿ ಮಾಡಿದ್ದಾರೆ.

ಜಬಲ್‌ಪುರ (ಮಧ್ಯಪ್ರದೇಶ): ಕರ್ನಾಟಕದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಪ್ರಕಟಿಸಿರುವ ಪ್ರಣಾಳಿಕೆಯು ವಿವಾದಕ್ಕೆ ಕಾರಣವಾಗಿದೆ. ಈ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು ನಿಷೇಧಿಸುವ ಕುರಿತು ಕಾಂಗ್ರೆಸ್​ ಘೋಷಿಸಿದೆ ಎಂದು ಆರೋಪಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಇದರ ನಡುವೆ ಮಧ್ಯಪ್ರದೇಶದ ಜಬಲ್‌ಪುರದ ಕಾಂಗ್ರೆಸ್ ಕಚೇರಿ ಮೇಲೆ ಬಜರಂಗ ದಳದ ಕಾರ್ಯಕರ್ತರು ದಾಳಿ ಮಾಡಿದ್ದಾರೆ.

ಬಜರಂಗ ದಳವನ್ನು ನಿಷೇಧಿಸುವ ಕುರಿತ ಕರ್ನಾಟಕ ಕಾಂಗ್ರೆಸ್​ ಪ್ರಣಾಳಿಕೆ ವಿರೋಧಿಸಿ ಕಾಂಗ್ರೆಸ್ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುವುದಾಗಿ ಬಜರಂಗ ದಳದ ಕಾರ್ಯಕರ್ತರು ನಿನ್ನೆ ಘೋಷಿಸಿದ್ದರು. ಅಂತೆಯೇ, ಇಂದು ಬಲದೇವ್ ಬಾಗ್‌ನಲ್ಲಿರುವ ಕಾಂಗ್ರೆಸ್ ಕಚೇರಿಯ ಮುಂದೆ ಪ್ರತಿಭಟನೆಗೆ ಆಗಮಿಸಿದ್ದರು. ಸುಮಾರು ಅರ್ಧ ಗಂಟೆ ರಸ್ತೆಯಲ್ಲೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ: ಬಜರಂಗದಳ ಬ್ಯಾನ್​ ಮಾಡುವುದು ಮೂರ್ಖತನದ ಪರಮಾವಧಿ : ಬಿ ವೈ ವಿಜಯೇಂದ್ರ

ಆದರೆ, ನಂತರ ಇದ್ದಕ್ಕಿದ್ದಂತೆ ಪ್ರತಿಭಟನಾನಿರತ ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಮತ್ತು ಕಟ್ಟಡದ ಕಡೆಗೆ ತಿರುಗಿದರು. ಕಾಂಗ್ರೆಸ್ ಕಚೇರಿಗೆ ನುಗ್ಗಿ ಕಲ್ಲು ತೂರಾಟ ನಡೆಸಿದರು. ಇದೇ ವೇಳೆ ಅಕ್ಕ-ಪಕ್ಕದ ಖಾಸಗಿ ಆಸ್ತಿ-ಪಾಸ್ತಿಗೂ ಹೆಚ್ಚಿನ ಹಾನಿಯಾಗಿದೆ. 100ಕ್ಕೂ ಹೆಚ್ಚು ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ. ಮತ್ತೊಂದೆಡೆ, ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್​ ನಾಯಕರು, ಬಜರಂಗ ದಳದ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಆದರೆ, ಈ ವೇಳೆ ಒಬ್ಬ ಪೊಲೀಸ್ ಕೂಡ ಸ್ಥಳದಲ್ಲಿ ಇರಲಿಲ್ಲ ಎಂದು ದೂರಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ ಚುನಾವಣಾ ಪ್ರಣಾಳಿಕೆ ಪ್ರತಿಗೆ ಬೆಂಕಿಯಿಟ್ಟ ಈಶ್ವರಪ್ಪ: ಕೆಎಸ್​​ಇ ಮಾಡಿದ್ದು ಸರಿಯಲ್ಲ ಎಂದು ಖರ್ಗೆ ಗರಂ

ನಾವು ದಾಳಿ ಮಾಡಿಲ್ಲ ಎಂದ ಮುಖಂಡ: ಸೇವಾ, ಸುರಕ್ಷಾ, ಸಂಸ್ಕಾರದ ಕಾರ್ಯದಲ್ಲಿ ಬಜರಂಗದಳ ತೊಡಗಿದೆ. ಆದರೆ, ಇಂತಹ ಸಂಘಟನೆಯನ್ನು ಕಾಂಗ್ರೆಸ್​ ಪಿಎಫ್​ಐನೊಂದಿಗೆ ಹೋಲಿಕೆ ಮಾಡಿದೆ. ಹಿಂದೂ ಸಂಘಟನೆಯನ್ನು ಜಿಹಾದಿ ಸಂಘಟನೆಯೊಂದಿಗೆ ಹೋಲಿಕೆ ಮಾಡುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ಮಧ್ಯಪ್ರದೇಶದಲ್ಲೂ ಕಾಂಗ್ರೆಸ್​ಗೆ ನಾವು ಪಾಠ ಕಲಿಸುತ್ತೇವೆ. ಆದರೆ, ಪ್ರತಿಭಟನೆ ವೇಳೆ ನಾವು ಯಾವುದೇ ಹಾನಿಯನ್ನು ಉಂಟು ಮಾಡಿಲ್ಲ. ಬಜರಂಗ ದಳಕ್ಕೆ ಕೆಟ್ಟ ಹೆಸರು ತರಲು ಕಾಂಗ್ರೆಸ್​ ಈ ಕುತಂತ್ರ ನಡೆಸಿದೆ. ನಾವು ಸಾಂಕೇತಿಕವಾಗಿ ಪ್ರತಿಭಟನೆಯಷ್ಟೇ ಮಾಡಿದ್ದೇವೆ ಎಂದು ಬಜರಂಗ ದಳದ ಪ್ರಚಾರ ಪ್ರಮುಖ್ ಸುಮಿತ್​ ಸಿಂಗ್​ ಠಾಕೂರ್​​ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್​ ಅಧಿಕಾರಿ ಪ್ರಭಾತ್ ಶುಕ್ಲಾ, ಏಕಾಏಕಿ ಬಂದು ದಾಳಿ ಮಾಡಿ ಹೋಗಿದ್ದಾರೆ. ಸದ್ಯ ಪರಿಸ್ಥಿತಿ ಶಾಂತವಾಗಿದೆ. ಪೊಲೀಸ್​ ತಮ್ಮ ಕೆಲಸ ಮಾಡುತ್ತಿದ್ದರು. ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದಷ್ಟೇ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ದಿನೇಶ್ ಯಾದವ್ ಮಾತನಾಡಿ, ಇದೊಂದು ಹೇಡಿ ಕೃತ್ಯವಾಗಿದೆ. ಈ ಘಟನೆ ಬಗ್ಗೆ ನಾವು ದೂರು ದಾಖಲಿಸುತ್ತೇವೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಬಜರಂಗದಳ ಬ್ಯಾನ್ ವಿಚಾರ ಕಾನೂನು ಪ್ರಕಾರ ನಡೆದರೆ ಬಿಜೆಪಿಯವರಿಗೆ ಏನು ಸಮಸ್ಯೆ: ವೀರಪ್ಪ ಮೊಯ್ಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.