ETV Bharat / state

ಕಾಂಗ್ರೆಸ್​ ಚುನಾವಣಾ ಪ್ರಣಾಳಿಕೆ ಪ್ರತಿಗೆ ಬೆಂಕಿಯಿಟ್ಟ ಈಶ್ವರಪ್ಪ: ಕೆಎಸ್​​ಇ ಮಾಡಿದ್ದು ಸರಿಯಲ್ಲ ಎಂದು ಖರ್ಗೆ ಗರಂ

author img

By

Published : May 4, 2023, 12:06 PM IST

Updated : May 4, 2023, 1:27 PM IST

ಅಧಿಕಾರಕ್ಕೆ ಬಂದರೆ ಬಜರಂಗದಳ ನಿಷೇಧಿಸುತ್ತೇವೆ ಎಂದು ಕಾಂಗ್ರೆಸ್​ ಇತ್ತೀಚೆಗೆ ಬಿಡುಗಡೆಗೊಳಿಸಿದ ಪ್ರಣಾಳಿಕೆಯಲ್ಲಿ ಹೇಳಿದೆ. ಈ ವಿಚಾರ ಈಗ ದೇಶಾದ್ಯಂತ ಸದ್ದು ಮಾಡುತ್ತಿದೆ.

Eshwarappa burnt a copy of Congress manifesto
ಕಾಂಗ್ರೆಸ್​ ಚುನಾವಣಾ ಪ್ರಣಾಳಿಕೆ ಪ್ರತಿಗೆ ಬೆಂಕಿಯಿಟ್ಟ ಈಶ್ವರಪ್ಪ

ಕಾಂಗ್ರೆಸ್​ ಚುನಾವಣಾ ಪ್ರಣಾಳಿಕೆ ಪ್ರತಿಗೆ ಬೆಂಕಿಯಿಟ್ಟ ಈಶ್ವರಪ್ಪ

ಕಲಬುರಗಿ‌: ಬಜರಂಗ ದಳ ಸಂಘಟನೆ ನಿಷೇಧಿಸುವ ಕಾಂಗ್ರೆಸ್ ಪಕ್ಷದ ಧೋರಣೆ ಖಂಡಿಸಿ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ಮುಖಂಡ ಕೆ.ಎಸ್. ಈಶ್ವರಪ್ಪ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಪ್ರತಿಗೆ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ರಾಷ್ಟ್ರದ್ರೋಹಿ ಪ್ರಣಾಳಿಕೆ ಎದುರಿಟ್ಟುಕೊಂಡು ಚುನಾವಣೆಗೆ ಹೊರಟಿದೆ. ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿರುವ ಪಿಎಫ್‌ಐ ಪರವಾಗಿರುವ ಕಾಂಗ್ರೆಸ್ ಈಗ ರಾಷ್ಟ್ರಭಕ್ತ ಬಜರಂಗ ದಳ ನಿಷೇಧಿಸುವ ಮಾತನಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಪ್ರತಿಗೆ ಬೆಂಕಿಯಿಟ್ಟರು.

ನಂತರ ಮಾತನಾಡಿದ ಈಶ್ವರಪ್ಪ, ಕಾಂಗ್ರೆಸ್ ಪ್ರಣಾಳಿಕೆಯನ್ನು ಮಹಮ್ಮದ್ ಅಲಿ ಜಿನ್ನಾ ಪ್ರಣಾಳಿಕೆ ಎಂದು ವ್ಯಾಖ್ಯಾನಿಸಿದರಲ್ಲದೇ, ಇಂತಹ ರಾಷ್ಟ್ರ ವಿರೋಧಿ ಪ್ರಣಾಳಿಕೆ ಕೂಡಲೇ ಹಿಂಪಡೆಯಬೇಕು ಎಂದು ತಾಕೀತು ಒತ್ತಾಯಿಸಿದರು. ಕಾಂಗ್ರೆಸ್ ಪಕ್ಷದಲ್ಲಿಯೂ ಕೆಲವು ರಾಷ್ಟ್ರ ಭಕ್ತರು ಇದ್ದಾರೆ. ಆದರೆ, ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಂತಹ ಜಾತಿವಾದಿಗಳ ಕೈಯಲ್ಲಿ ಕಾಂಗ್ರೆಸ್ ಪಕ್ಷ ಸಿಕ್ಕಿಕೊಂಡಿದೆ. ಆ ಮೂಲಕ ಆ ಪಕ್ಷದ ಚುನಾವಣಾ ಪ್ರಣಾಳಿಕೆ ಎಂಬುದು 'ಹಿಂದೂ ವರ್ಸಸ್ ಮುಸ್ಲಿಂ ಚುನಾವಣೆ' ಎನ್ನುವಂತಾಗಿದೆ ಎಂದು ಅವರು ಹರಿಹಾಯ್ದರು.

ಹಾಗೊಂದು ವೇಳೆ, ಕಾಂಗ್ರೆಸ್ ಪಕ್ಷದ ನೀಯತ್ತು ಸ್ಪಷ್ಟವಾಗಿದ್ದರೆ ನಮಗೆ ಹಿಂದೂಗಳ ಮತ ಬೇಡ ಎಂದು ಘೋಷಿಸಲಿ ಎಂದು ಸವಾಲು ಹಾಕಿದ ಈಶ್ವರಪ್ಪ, ನಮಗೆ ರಾಷ್ಟ್ರದ್ರೋಹಿ ಮುಸ್ಲಿಂ ಮತಗಳು ಬೇಕಿಲ್ಲ. ನಮಗೇನಿದ್ದರೂ ರಾಷ್ಟ್ರಭಕ್ತ ಮುಸ್ಲಿಮರ ಮತ ಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ರಾಷ್ಟ್ರದ್ರೋಹಿ: ಈ ದೇಶದಲ್ಲಿ ಪಿಎಫ್‌ಐ ಒಂದು ನಿಷೇಧಿತ ಸಂಘಟನೆ ಎಂಬುದು ಕೂಡ ಕಾಂಗ್ರೆಸ್ ನಾಯಕರಿಗೆ ಗೊತ್ತಿಲ್ಲ. ಈ ಹಿಂದೆ ಪಿಎಫ್ಐ ಮುಖಂಡರ ಮೇಲಿದ್ದ 173 ಪ್ರಕರಣಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು. ದೇಶದ್ರೋಹಿ ಕೃತ್ಯಗಳನ್ನು ಬೆಂಬಲಿಸುವ ಕಾಂಗ್ರೆಸ್ ಪಕ್ಷಕ್ಕೆ ‘ಸಂವಿಧಾನವೇ ಪವಿತ್ರ’ ಎಂದು ಹೇಳುವ ಯಾವುದೇ ಅಧಿಕಾರವಿಲ್ಲ. ಪಿಎಫ್‌ಐ ಒಂದು ರಾಷ್ಟ್ರದ್ರೋಹಿ ಸಂಘಟನೆ ಎನ್ನುವ ಕಾರಣಕ್ಕಾಗಿ ಬಿಜೆಪಿ ಸರ್ಕಾರ ಆ ಸಂಘಟನೆಯನ್ನು ನಿಷೇಧಿಸಿದೆ. ಮತ್ತೊಂದೆಡೆ, ಆಂಜನೇಯನ ಬಾಲಕ್ಕೆ ರಾವಣ ಬೆಂಕಿಯಿಟ್ಟ, ರಾವಣ ಅಧಿಕಾರ ಕಳೆದುಕೊಂಡ ರೀತಿಯಲ್ಲೇ ಬಜರಂಗ ದಳ ನಿಷೇಧಿಸುವ ಮಾತನಾಡಿರುವ ಕಾಂಗ್ರೆಸ್ ಈ ಬಾರಿ ವಿರೋಧ ಪಕ್ಷದ ಸ್ಥಾನ ಪಡೆಯುವಷ್ಟು ಸಹ ಸ್ಥಾನ ಗೆಲ್ಲುವುದಿಲ್ಲ ಎಂದು ಭವಿಷ್ಯ ನುಡಿದರು.

ಖರ್ಗೆ ಈಗ ಸೋನಿಯಾ ಚೇಲಾ: ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾದ ಮೇಲೆ ಸೋನಿಯಾ ಗಾಂಧಿ ಚೇಲಾ ಆಗಿ ಬದಲಾಗಿದ್ದಾರೆ. ಸೋನಿಯಾ ಹೇಗೆ ಹೇಳುತ್ತಾರೋ ಹಾಗೇ ಖರ್ಗೆ ಪ್ರಧಾನಿ ಮೋದಿ ಅವರನ್ನು ಬೈಯುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದರು. ಇತ್ತೀಚೆಗೆ ಖರ್ಗೆ ಅವರು ಪ್ರಧಾನಿ ಮೋದಿ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. 'ಪ್ರಧಾನಿ ಮೋದಿಯವರ ಕುರಿತು ಹಗುರವಾಗಿ ಮಾತನಾಡಿ, ದೊಡ್ಡ ಮನುಷ್ಯರಾಗಲು ಹೋಗಬೇಡಿ' ಎಂದು ಅವರು ಖರ್ಗೆಯವರಿಗೆ ಟಾಂಗ್ ನೀಡಿದರು.

ಪ್ರಣಾಳಿಕೆ ಸುಟ್ಟಿರುವ ಬಗ್ಗೆ ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಜರಂಗ ದಳ ಬ್ಯಾನ್ ಪ್ರಣಾಳಿಕೆ ಬಗ್ಗೆ ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸುರ್ಜೆವಾಲಾ ಇದಕ್ಕೆ ಉತ್ತರ ಕೊಡ್ತಾರೆ. ಆದರೆ, ಈಶ್ವರಪ್ಪ ಪ್ರಣಾಳಿಕೆ ಸುಟ್ಟಿದ್ದು ಸರಿಯಲ್ಲ. ನಿಮಗೆ ಇಷ್ಟ ಆಗಲಿ, ಆಗದೇ ಇರಲಿ ಸುಡುವುದು ಸರಿಯಲ್ಲ. ಈಶ್ವರಪ್ಪ ಅವರು, ನಮ್ಮ ಪಕ್ಷ ಜನರಿಗೆ ಕೊಟ್ಟಿರುವ ಗ್ಯಾರಂಟಿ ಸುಟ್ಟಂತೆ. ಈ ಮೂಲಕ ಈಶ್ವರಪ್ಪ ಜನತೆಗೆ ಅವಮಾನ ಮಾಡಿದ್ದಾರೆ. ಈಶ್ವರಪ್ಪ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದಂತೆ ಆಗಿದೆ. ಇದು ಸರಿಯಾದ ಕ್ರಮ ಅಲ್ಲ. ಪ್ರಜಾಪ್ರಭುತ್ವದಲ್ಲಿ ಟಾಲರೆನ್ಸ್​ ಇಟ್ಟುಕೊಂಡು ಮಾಡಬೇಕು ಎಂದು ಹೇಳಿದರು.

ಕಾಂಗ್ರೆಸ್ ಹಿಂದೂ ವಿರೋಧಿ ಎನ್ನುವ ಆರೋಪಕ್ಕೆ ತಿರುಗೇಟು ನೀಡಿದ ಖರ್ಗೆ, ಅದು ಅವರ ವಿಚಾರ, ಅವರ ನಂಬಿಕೆ ಬೇರೆ, ನಮ್ಮ ನಂಬಿಕೆ ಬೇರೆ. ನಾನು ಹಿಂದೂ ನೀವು ಹಿಂದೂ ಇದೀರಿ, ನಿಮಗಿರುವ ಸ್ವಾತಂತ್ರ್ಯ ನನಗಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

ಇದನ್ನೂ ಓದಿ: ಕಾಂಗ್ರೆಸ್ ನಾಯಕರಿಗೆ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕಾಗಿದೆ : ಸಚಿವ ಶ್ರೀರಾಮಲು

Last Updated : May 4, 2023, 1:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.