ETV Bharat / state

ಬಜರಂಗದಳ ಬ್ಯಾನ್ ವಿಚಾರ ಕಾನೂನು ಪ್ರಕಾರ ನಡೆದರೆ ಬಿಜೆಪಿಯವರಿಗೆ ಏನು ಸಮಸ್ಯೆ: ವೀರಪ್ಪ ಮೊಯ್ಲಿ

author img

By

Published : May 4, 2023, 5:28 PM IST

ಅಮಿತ್​​ ಶಾ ಮತ್ತು ಪ್ರಧಾನಿ ಮೋದಿ ಕರ್ನಾಟಕದಲ್ಲಿಯೇ ಇದ್ದಾರೆ. ರಾಜ್ಯದ ಚುನಾವಣೆಗೆಂದು ದೇಶದ ಪ್ರಧಾನಿಯವರು ಇಷ್ಟೊಂದು ಸಮಯ ಕಳೆದದ್ದು ಇತಿಹಾಸದಲ್ಲಿಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಹೇಳಿದರು.

veerappa-moily-press-conference-in-mangaluru
ಬಜರಂಗದಳ ಬ್ಯಾನ್ ವಿಚಾರ ಕಾನೂನು ಪ್ರಕಾರ ನಡೆದರೆ ಬಿಜೆಪಿಯವರಿಗೆ ಏನು ಸಮಸ್ಯೆ: ವೀರಪ್ಪ ಮೊಯ್ಲಿ

ವೀರಪ್ಪ ಮೊಯ್ಲಿ ಸುದ್ದಿಗೋಷ್ಟಿ

ಮಂಗಳೂರು: ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ಬ್ಯಾನ್ ಮಾಡುವ ಸಂಬಂಧ ಮಂಗಳೂರಿನಲ್ಲಿಂದು ಮಾತನಾಡಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಯಾವುದೇ ಸಂಸ್ಥೆ ಅಥವಾ ವ್ಯಕ್ತಿಯೊಬ್ಬನು ಭಯದ ವಾತಾವರಣ ಸೃಷ್ಟಿಸುತ್ತಿದ್ದರೆ, ವಿಧ್ವಂಸಕ ಕೃತ್ಯವನ್ನು ಪ್ರಚುರಪಡಿಸುತ್ತಿದ್ದರೆ ಅದು ಸಂವಿಧಾನ ವಿರೋಧಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅಂಥವರ ವಿರುದ್ಧ ಸುಮೋಟೊ ಕೇಸು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದೆ. ಆದ್ದರಿಂದ ಈ ವಿಚಾರದಲ್ಲಿ ಕಾನೂನು ಪ್ರಕಾರ ನಡೆದರೆ ಬಿಜೆಪಿಯವರಿಗೆ ಏನು ಸಮಸ್ಯೆ ಎಂದು ಪ್ರಶ್ನಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಮಾತನಾಡಿದ ಅವರು, ಬಿಜೆಪಿಯವರು ದೇಶದಲ್ಲಿ ಅತೀ ದೊಡ್ಡ ಪ್ರತಿಮೆ ಸ್ಥಾಪಿಸಿದ ವಲ್ಲಭಭಾಯ್ ಪಟೇಲ್ ಅವರೇ ಹಿಂದೆ ಆರ್​​ಎಸ್ಎಸ್ (ರಾಷ್ಟ್ರೀಯ ಸ್ವಯಂ ಸೇವಕ ಸಂಘ) ನಿಷೇಧ ಮಾಡಿದ್ದರು. ಆದರೆ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ನಿಷೇಧವನ್ನು ಹಿಂಪಡೆಯುವಂತೆ ಹೇಳಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೇ ಇದ್ದಾರೆ. ರಾಜ್ಯದ ಚುನಾವಣೆಗೆಂದು ದೇಶದ ಪ್ರಧಾನಿಯವರು ಇಷ್ಟೊಂದು ಸಮಯ ಕಳೆದದ್ದು ಇತಿಹಾಸದಲ್ಲಿಯೇ ಇಲ್ಲ. ತಾವು ಗೆಲ್ಲುತ್ತೇವೆಂದು ನಂಬಿಕೆಯಿದ್ದರೆ ಅವರು ಇಷ್ಟೊಂದು ಸಮಯ ಇಲ್ಲಿ ಇರಬೇಕಾಗಿರಲಿಲ್ಲ. ಇದಕ್ಕೆ ಅವರಿಗಿರುವ ಸೋಲುವ ಭೀತಿಯೇ ಕಾರಣ ಎಂದರು.

ಈ ಬಾರಿಯ ಚುನಾವಣೆ ರಾಜ್ಯದಲ್ಲಿ, ರಾಜ್ಯಾಡಳಿತದಲ್ಲಿ ಬದಲಾವಣೆ ಆಗಬೇಕಾದ ಚುನಾವಣೆ. ರಾಜ್ಯದ ಇತಿಹಾಸದಲ್ಲಿಯೇ ಅತ್ಯಂತ ಭ್ರಷ್ಟ ಸರ್ಕಾರ ಈಗಿನ ಬಿಜೆಪಿ ಸರ್ಕಾರ. ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಪಾಲಾಗಿರುವ ಯಡಿಯೂರಪ್ಪನವರನ್ನೇ ಮುಂದಿಟ್ಟುಕೊಂಡು ಅಮಿತ್ ಶಾ ಹಾಗೂ ಮೋದಿಯವರು ಚುನಾವಣೆ ಎದುರಿಸಲು ಹೊರಟಿದ್ದಾರೆ. ರೋಮ್ ನಗರಕ್ಕೆ ಬಂದ ಅಂದಿನ ಪರಿಸ್ಥಿತಿ ಇಂದು ಭಾರತಕ್ಕೆ ಬಂದಿದ್ದು, ಅತ್ಯಂತ ದುರದೃಷ್ಟಕರ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಲ್ಲಿ ಗಲಭೆಯಾಗುತ್ತದೆ ಎಂಬ ಅಮಿತ್ ಶಾ ಹೇಳಿಕೆ ನೋಡಿದರೆ ಅವರು ಎಂಥಹ ಜವಾಬ್ದಾರಿಯುತ ರಾಜಕಾರಣಿ, ಆಡಳಿತಗಾರ ಎಂದು ತಿಳಿದು ಬರುತ್ತದೆ. ಇದು ಸಂವಿಧಾನ ವಿರೋಧಿ ಹೇಳಿಕೆ. ಹಾಗಾದರೆ ಚುನಾವಣೆ ಏಕೆ ಬೇಕು?. ಗುಜರಾತ್ ನಿಂದ ಗಡಿಪಾರು ಆಗಿದ್ದ ಅಮಿತ್ ಶಾ ರಿಂದ ಇದಕ್ಕಿಂತ ಹೆಚ್ಚು ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಆ ಬಳಿಕ ಬಿಜೆಪಿ ಸರ್ಕಾರ ಬಂದು ಅವರಿಗೆ ಅವರೇ ಕ್ಷಮೆ ನೀಡಿ ಬಿಟ್ಟಿದ್ದಾರೆ ಎಂದು ಲೇವಡಿ ಮಾಡಿದ್ರು.

ಅಧಿಕಾರಕ್ಕೆ ಬಂದರೆ ಆಂಜನೇಯ ದೇವಸ್ಥಾನಗಳ ಅಭಿವೃದ್ಧ- ಡಿಕೆ ಶಿವಕುಮಾರ್​​​: ಬಿಜೆಪಿಗರು ಭಾವನೆ ಮೇಲೆ ಹೋದರೆ ಕಾಂಗ್ರೆಸ್ ಬದುಕಿನ ಮೇಲೆ ಹೋಗುತ್ತಿದೆ. ನಾನು ಹಿಂದೂ, ಸಿದ್ದರಾಮಯ್ಯ ಕೂಡ ಹಿಂದೂ. ಎಲ್ಲಾ ಹಿಂದು ಧರ್ಮದ ಆಚರಣೆಗಳನ್ನು ನಾವು ಪಾಲನೆ ಮಾಡುತ್ತೇವೆ. ಬಂಗಾರಪ್ಪ ಸಿಎಂ ಆದಾಗ ಆರಾಧನ ಸ್ಕೀಮ್ ತಂದು ಹಳ್ಳಿಯಲ್ಲಿರುವ ದೇವಸ್ಥಾನಗಳನ್ನು ಅಭಿವೃದ್ಧಿ ಮಾಡಿದರು. ನಾವು ಕೂಡ ಅಧಿಕಾರಕ್ಕೆ ಬಂದರೆ ಹಳ್ಳಿಗಳಲ್ಲಿನ ದೇವಸ್ಥಾನ, ಆಂಜನೇಯ ದೇವಸ್ಥಾನಗಳ ಅಭಿವೃದ್ಧಿ ಮಾಡಿ ಹಿಂದೂ ಯುವಕರಿಗೆ ಶಕ್ತಿ ತುಂಬಲು ಗರಡಿ ಸ್ಥಾಪನೆ ಮಾಡುತ್ತೇವೆ ಎಂದು ಕಾರವಾರದಲ್ಲಿ ತಿಳಿಸಿದರು.

ಇದನ್ನೂ ಓದಿ: ಬಿಜೆಪಿ ಸರ್ಕಾರ ರೈತ ವಿರೋಧಿ ಸರ್ಕಾರ: ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.