ETV Bharat / bharat

ದೇಶದಲ್ಲಿ ಸರ್ವಾಧಿಕಾರಿ ಆಡಳಿತ: ಪ್ರಧಾನಿ ವಿರುದ್ಧ ಖರ್ಗೆ ವಾಗ್ದಾಳಿ

author img

By

Published : Mar 13, 2023, 5:58 PM IST

ದೇಶದಲ್ಲಿ ಸರ್ವಾಧಿಕಾರಿ ಆಡಳಿತ: ಪ್ರಧಾನಿ ವಿರುದ್ಧ ಖರ್ಗೆ ವಾಗ್ದಾಳಿ
No rule of law under Modi country being run as dictatorship says Kharge

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸರ್ವಾಧಿಕಾರಿ ರೀತಿಯಲ್ಲಿ ಆಡಳಿತ ನಡೆಸುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು. ಮೋದಿ ಅಡಿಯಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವಾಗಿದೆ ಎಂದು ಅವರು ಹೇಳಿದರು.

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ. ಲಂಡನ್‌ನಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಹೇಳಿಕೆಗೆ ಸಂಬಂಧಿಸಿದಂತೆ ಉಭಯ ಸದನಗಳನ್ನು ಮುಂದೂಡಿದ ನಂತರ ಸಂಸತ್ತಿನ ಹೊರಗಿನ ವಿಜಯ್ ಚೌಕ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಮೋದಿ ಜಿ ಅಡಿಯಲ್ಲಿ ಕಾನೂನು ಮತ್ತು ಪ್ರಜಾಪ್ರಭುತ್ವವಿಲ್ಲ. ಅವರು ದೇಶವನ್ನು ಸರ್ವಾಧಿಕಾರ ರೀತಿಯಲ್ಲಿ ನಡೆಸುತ್ತಿದ್ದಾರೆ ಮತ್ತು ಅವರೇ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತಾರೆ ಎಂದರು.

ಪ್ರಜಾಪ್ರಭುತ್ವವನ್ನು ಹತ್ತಿಕ್ಕುವವರು ಮತ್ತು ಅದನ್ನು ನಾಶ ಮಾಡುತ್ತಿರುವವರು ಅದನ್ನು ಉಳಿಸುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು. ಅದಾನಿ ವಿಷಯದ ಕುರಿತು ಮಾತನಾಡಿದ ಖರ್ಗೆ, ನಾವು ಅದಾನಿ ಷೇರುಗಳ ವಿಚಾರದಲ್ಲಿ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚನೆಗೆ ಒತ್ತಾಯಿಸುತ್ತಿದ್ದೇವೆ. ನಾವು ಈ ವಿಷಯವನ್ನು ಪ್ರಸ್ತಾಪಿಸಿದಾಗ ಮೈಕ್‌ಗಳು ಸ್ವಿಚ್ ಆಫ್ ಆಗುತ್ತವೆ ಮತ್ತು ಸದನದಲ್ಲಿ ಗದ್ದಲ ಉಂಟಾಗುತ್ತದೆ. ಆದರೆ, ಪ್ರತಿಪಕ್ಷಗಳು ಒಟ್ಟಾಗಿವೆ ಮತ್ತು ಅದಾನಿ ವಿಷಯದ ಬಗ್ಗೆ ಜೆಪಿಸಿ ಬೇಡಿಕೆಯನ್ನು ಮುಂದುವರಿಸಲಿವೆ ಎಂದು ಅವರು ಹೇಳಿದರು.

ಸಂಸತ್ತಿನ ಎರಡನೇ ಹಂತದ ಬಜೆಟ್ ಅಧಿವೇಶನವು ಇಂದು ಗದ್ದಲದೊಂದಿಗೆಯೇ ಆರಂಭವಾಯಿತು. ಬಿಜೆಪಿ ಮತ್ತು ಪ್ರತಿಪಕ್ಷ ಸದಸ್ಯರು ಪರಸ್ಪರ ವಾಗ್ವಾದ ನಡೆಸಿದರು. ವಿದೇಶದಲ್ಲಿ ರಾಹುಲ್ ಗಾಂಧಿ ನೀಡಿದ ಹೇಳಿಕೆಗಳಿಗಾಗಿ ಬಿಜೆಪಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿತು. ಇನ್ನು ಪ್ರತಿಪಕ್ಷ ಸದಸ್ಯರು ಸರ್ಕಾರವು ಸರ್ವಾಧಿಕಾರಿ ರೀತಿಯಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದರು. ವಾದ - ವಿವಾದಗಳು ತಣ್ಣಗಾಗದ ಕಾರಣದಿಂದ ಸಂಸತ್ತಿನ ಉಭಯ ಸದನಗಳ ಕಲಾಪ ನಾಳೆಗೆ ಮುಂದೂಡಲಾಯಿತು.

ರಾಜನಾಥ್ ಸಿಂಗ್ ಹೇಳಿಕೆ: ಲೋಕಸಭೆಯಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಈ ಸದನದ ಸದಸ್ಯರಾಗಿರುವ ರಾಹುಲ್ ಗಾಂಧಿ ಲಂಡನ್‌ನಲ್ಲಿ ಭಾರತವನ್ನು ಅವಮಾನಿಸಿದ್ದಾರೆ. ಅವರ ಹೇಳಿಕೆಯನ್ನು ಈ ಸದನದ ಎಲ್ಲ ಸದಸ್ಯರು ಖಂಡಿಸಬೇಕು ಮತ್ತು ಸದನದ ಮುಂದೆ ಕ್ಷಮೆಯಾಚಿಸಲು ಅವರನ್ನು ಕೇಳಬೇಕು ಎಂದು ನಾನು ಒತ್ತಾಯಿಸುತ್ತೇನೆ. ಈ ಮಧ್ಯೆ, ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್, ಸದನದಲ್ಲಿ ಮಾತನಾಡದಂತೆ ನಾನು ಯಾರನ್ನೂ ತಡೆದಿಲ್ಲ ಎಂದು ಹೇಳಿದ್ದಾರೆ. ಕಳೆದ ವಾರ ಬ್ರಿಟಿಷ್ ಸಂಸತ್ತಿನಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಭಾರತೀಯ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರ ಮೈಕ್‌ಗಳನ್ನು ಆಫ್ ಮಾಡಲಾಗುತ್ತಿದೆ ಎಂದಿದ್ದರು.

ಪಿಯೂಷ್ ಗೋಯಲ್ ವಾಗ್ದಾಳಿ: ಇಂದು ಲೋಕಸಭೆ ಕಲಾಪ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಪಿಯೂಷ್ ಗೋಯಲ್, ಪ್ರಮುಖ ಪ್ರತಿಪಕ್ಷದ ನಾಯಕರೊಬ್ಬರು ವಿದೇಶಕ್ಕೆ ಹೋಗಿ ಭಾರತೀಯ ಪ್ರಜಾಪ್ರಭುತ್ವದ ಮೇಲೆ ದಾಳಿ ಮಾಡುತ್ತಾರೆ. ಅವರು ಭಾರತದ ಜನರನ್ನು ಮತ್ತು ಸಂಸತ್ತನ್ನು ಅವಮಾನಿಸಿದ್ದಾರೆ. ಭಾರತದಲ್ಲಿ ವಾಕ್ ಸ್ವಾತಂತ್ರ್ಯವಿದೆ ಮತ್ತು ಸಂಸದರು ಸಂಸತ್ತಿನಲ್ಲಿ ಮಾತನಾಡಬಹುದು. ರಾಹುಲ್ ಗಾಂಧಿ ಅವರು ಸಂಸತ್ತಿಗೆ ಬಂದು ರಾಷ್ಟ್ರದ ಜನರಿಗೆ ಮತ್ತು ಸದನದಲ್ಲಿ ಕ್ಷಮೆಯಾಚಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದರು.

ಇದನ್ನೂ ಓದಿ : ಚಲೋ ರಾಜಭವನ್​ .. ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.