ETV Bharat / bharat

ಎಸ್​ಟಿ ಕೋ-ಆಪ್ ಬ್ಯಾಂಕ್​ನಲ್ಲಿ ಅಕ್ರಮ ಆರೋಪ: ಮಹಾರಾಷ್ಟ್ರ ವಿಧಾನ ಪರಿಷತ್​ನಲ್ಲಿ ಕೋಲಾಹಲ

author img

By ETV Bharat Karnataka Team

Published : Dec 11, 2023, 7:26 PM IST

Ruckus over ST Co-operative Bank in Maharashtra Legislative Council
Ruckus over ST Co-operative Bank in Maharashtra Legislative Council

ಸಾರಿಗೆ ನೌಕರರ ಸಹಕಾರಿ ಬ್ಯಾಂಕಿನ ಅಕ್ರಮಗಳ ಬಗ್ಗೆ ಮಹಾರಾಷ್ಟ್ರ ವಿಧಾನ ಪರಿಷತ್​ನಲ್ಲಿ ಇಂದು ಕೋಲಾಹಲ ಸೃಷ್ಟಿಯಾಯಿತು.

ನಾಗಪುರ (ಮಹಾರಾಷ್ಟ್ರ): ದಿವಾಳಿಯಂಚಿಗೆ ಬಂದಿರುವ ಗುಣರತ್ನ ಸದಾವರ್ತೆ ನೇತೃತ್ವದ ಎಸ್​ಟಿ ಕೋ-ಆಪರೇಟಿವ್ (ಸಾರಿಗೆ ನೌಕರರ ಕೋ-ಆಪರೇಟಿವ್ ಬ್ಯಾಂಕ್ - ಮಹಾರಾಷ್ಟ್ರದಲ್ಲಿ ಸಾರಿಗೆ ಸಂಸ್ಥೆಯನ್ನು ಎಸ್​ಟಿ ಎಂದು ಕರೆಯಲಾಗುತ್ತದೆ) ಬ್ಯಾಂಕಿನ ನಿರ್ದೇಶಕರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗದಿರುವುದನ್ನು ಖಂಡಿಸಿ ಮಹಾರಾಷ್ಟ್ರ ವಿಧಾನ ಪರಿಷತ್​ನಲ್ಲಿ ಸೋಮವಾರ ಕೋಲಾಹಲ ಉಂಟಾಯಿತು.

ಪ್ರಶ್ನೋತ್ತರ ಅವಧಿಯ ನಂತರ ಈ ವಿಷಯ ಪ್ರಸ್ತಾಪಿಸಿದ ಶಿವಸೇನೆ (ಯುಬಿಟಿ) ಹಿರಿಯ ನಾಯಕ ಅನಿಲ್ ಪರಬ್, ಸದಾವರ್ತೆ ಮತ್ತು ಅವರ ಪತ್ನಿಯನ್ನು ತಾಂತ್ರಿಕ ಮಂಡಳಿಯ ಸದಸ್ಯರಾಗಿ ಸೇರಿಸಿಕೊಳ್ಳಲಾಗಿದ್ದು, ಯಾವುದೇ ಅನುಭವವಿಲ್ಲದ ಸದಾವರ್ತೆ ಅವರ ಕೇವಲ 23 ವರ್ಷದ ಸೋದರಳಿಯನನ್ನು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಿಸಲಾಗಿದೆ ಎಂದು ಆರೋಪಿಸಿದರು.

ಇದಲ್ಲದೇ ಹೊಸ ನಿರ್ದೇಶಕರು ಬಡ್ಡಿದರವನ್ನು ಶೇಕಡಾ 9 ರಿಂದ 7ಕ್ಕೆ ಇಳಿಸಿದ್ದರಿಂದ ಖಾತೆದಾರರು 180 ಕೋಟಿ ರೂಪಾಯಿ ಮೊತ್ತದ ಎಫ್​ಡಿಗಳನ್ನು ಹಿಂತೆಗೆದುಕೊಂಡಿದ್ದಾರೆ ಮತ್ತು ಇನ್ನೂ 450 ಕೋಟಿ ರೂ. ಎಫ್​ಡಿ ವಾಪಸ್ ಕೇಳಿದ ಅರ್ಜಿಗಳು ಬ್ಯಾಂಕಿನಲ್ಲಿ ಬಾಕಿ ಇವೆ ಎಂದು ಅವರು ಹೇಳಿದರು.

ಮಂಡಳಿಯ 18 ಸದಸ್ಯರಲ್ಲಿ 14 ಮಂದಿ ಸದಾವರ್ತೆ ಕಾರ್ಯನಿರ್ವಹಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿಗೆ ನೋಟಿಸ್ ನೀಡಿದೆ. ಹೀಗಾಗಿ ಸರ್ಕಾರ ಪ್ರಸ್ತುತ ನಿರ್ದೇಶಕರ ಮಂಡಳಿಯನ್ನು ವಿಸರ್ಜಿಸಬೇಕು ಮತ್ತು ಬಡ ಎಸ್​ಟಿ ಕಾರ್ಮಿಕರ ಕೋಟ್ಯಂತರ ಎಫ್​ಡಿ ಮತ್ತು ಖಾತೆಗಳನ್ನು ಉಳಿಸಲು ಹೊಸ ಆಡಳಿತ ಮಂಡಳಿಯನ್ನು ನೇಮಿಸಬೇಕು ಎಂದು ಪರಬ್ ಹೇಳಿದರು.

ವಿರೋಧ ಪಕ್ಷದ ನಾಯಕರಾದ ಶಿವಸೇನೆಯ ಅಂಬಾದಾಸ್ ದಾನ್ವೆ, ಸಚಿನ್ ಅಹಿರ್ ಮತ್ತು ಇತರರು ಈ ವಿಷಯದ ಬಗ್ಗೆ ಸದನದಲ್ಲಿ ಕೋಲಾಹಲ ಸೃಷ್ಟಿಸಿದರು ಮತ್ತು ಮಂಡಳಿಯನ್ನು ತಕ್ಷಣ ವಿಸರ್ಜಿಸಿ ಆಡಳಿತಾಧಿಕಾರಿಯನ್ನು ನೇಮಿಸಬೇಕೆಂದು ಒತ್ತಾಯಿಸಿದರು. ಬ್ಯಾಂಕಿನ ನಿರ್ದೇಶಕರ ವಿರುದ್ಧ ತಮ್ಮ ಇಲಾಖೆಗೆ ಮತ್ತು ಆರ್​ಬಿಐಗೆ ದೂರುಗಳು ಬಂದಿವೆ. ಆರ್​ಬಿಐನಿಂದ ಪತ್ರ ಬಂದ ನಂತರ ಸಹಕಾರಿ ನಿಯಮ 89 (ಎ) ಅಡಿಯಲ್ಲಿ ಅಕ್ರಮಗಳ ವಿರುದ್ಧ ತನಿಖೆ ಪ್ರಾರಂಭಿಸಲಾಗಿದೆ ಎಂದು ರಾಜ್ಯ ಸಹಕಾರ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಹೇಳಿದರು.

ನಿಯಮಗಳ ಪಾಲನೆ ಮಾಡದ ಕಾರಣಕ್ಕಾಗಿ ರಿಸರ್ವ್ ಬ್ಯಾಂಕ್ ನಾಲ್ಕು ಸಹಕಾರಿ ಬ್ಯಾಂಕುಗಳಾದ ಸಿಟಿಜನ್ಸ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಎಚ್​ಸಿಬಿಎಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಶ್ರೀ ವಾರಣಾ ಸಹಕಾರಿ ಬ್ಯಾಂಕ್ ಲಿಮಿಟೆಡ್ ಮತ್ತು ಎಸ್​ಟಿ ಸಹಕಾರಿ ಬ್ಯಾಂಕ್ ಲಿಮಿಟೆಡ್ ಗಳಿಗೆ ಸೆಪ್ಟೆಂಬರ್​ನಲ್ಲಿ ನಗದು ದಂಡ ವಿಧಿಸಿತ್ತು.

ಇದನ್ನೂ ಓದಿ : ಭಾರತದ ಜಿಡಿಪಿ ಶೇ 7.6ರಷ್ಟು ಬೆಳವಣಿಗೆ: ಪೂರಕ ಅಂಶಗಳೇನು? ಇಲ್ಲಿದೆ ಅವಲೋಕನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.