ETV Bharat / bharat

ಪ್ರಧಾನಿ ಮೋದಿ, ಸಿಎಂ ಯೋಗಿ ಆದಿತ್ಯನಾಥ್​​ಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಬಂಧನ

author img

By ETV Bharat Karnataka Team

Published : Nov 21, 2023, 11:02 PM IST

ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಬಂಧನ
ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಬಂಧನ

ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಆದಿತ್ಯನಾಥ್​ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೆಸರಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಕಮ್ರಾನ್ ಅಮೀರ್ ಖಾನ್ ಎಂಬ ಯುವಕನನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಆರೋಗ್ಯ ಸರಿಯಲ್ಲ ಎಂದು ಚಿಕಿತ್ಸೆಗಾಗಿ ಆಸ್ಪತ್ರೆಯೊಂದಕ್ಕೆ ತೆರಳಿದ್ದ ವೇಳೆ ಸರಿಯಾದ ಚಿಕಿತ್ಸೆ ಸಿಗದ ಕಾರಣ ಕಮ್ರಾನ್ ಹೀಗೆ ಮಾಡಿರುವುದಾಗಿ ತನಿಖೆ ವೇಳೆ ಹೇಳಿದ್ದಾನೆ. ಈ ಸಂಬಂಧ ಆರೋಪಿ ಕಮ್ರಾನ್‌ನ ವೈದ್ಯಕೀಯ ಚಿಕಿತ್ಸೆಯ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಆಜಾದ್ ಮೈದಾನ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ನಿತಿನ್ ತಡಖೆ ತಿಳಿಸಿದ್ದಾರೆ.

ಕಮ್ರಾನ್ ಖಾನ್ ನಿನ್ನೆ ಸಂಜೆ ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಗೂಂಡಾಗಳು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮೇಲೆ ಬಾಂಬ್ ದಾಳಿ ನಡೆಸಿ ಹತ್ಯೆ ಮಾಡುವಂತೆ ಹೇಳಿರುವುದಾಗಿ ಬೆದರಿಕೆ ಹಾಕಿದ್ದ. ಈ ಬಗ್ಗೆ ತನಿಖೆ ದಾಖಲಿಸಿಕೊಂಡು ಆರೋಪಿ ಫೋನ್​ ಟ್ರ್ಯಾಕ್​ ಮಾಡಿದ ವೇಳೆ ಆರೋಪಿ ಯುವಕನ ಬಗ್ಗೆ ಮಾಹಿತಿ ದೊರೆತಿದೆ.

ಇಂದು ಮುಂಬೈನ ಚುನಭಟ್ಟಿ ಪ್ರದೇಶದಲ್ಲಿ ಬಂಧಿಸಿದ್ದಾರೆ. ಮುಂಬೈನ ಆಜಾದ್ ಮೈದಾನ್ ಪೊಲೀಸರು ಬಂಧಿತ ಆರೋಪಿ ಕಮ್ರಾನ್ ಖಾನ್ ಸೆಕ್ಷನ್ 505 (1) ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಬಂಧಿತ ಆರೋಪಿ ಕಮ್ರಾನ್ ಸಿಯಾನ್ ನಿವಾಸಿಯಾಗಿದ್ದು, ನಿರುದ್ಯೋಗಿಯಾಗಿದ್ದಾನೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಈ ಹಿಂದೆ ಕೂಡ ಬೆದರಿಕೆ: ಈ ಹಿಂದೆ ಕೂಡ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೊಲೆ ಬೆದರಿಕೆಯೊಡ್ಡಿರುವ ಪ್ರಕರಣ ನೋಯ್ಡಾದ ಸೆಕ್ಟರ್-20 ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಈ ವೇಳೆ ಪೊಲೀಸರು ಸಂಬಂಧಿತ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಪ್ರಧಾನಿ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಅವರನ್ನು ಕೊಲ್ಲುವ ಬೆದರಿಕೆಯನ್ನು ಯುವಕನೊಬ್ಬ ಖಾಸಗಿ ಸುದ್ದಿ ವಾಹಿನಿಯ ಸಿಇಒಗೆ ಇ-ಮೇಲ್ ಮಾಡಿದ್ದ.

ಈ ಪ್ರಕರಣದಲ್ಲಿ ಕಾರ್ತಿಕ್ ಸಿಂಗ್ ಎಂಬ ಯುವಕ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಕೊಲ್ಲುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಪತ್ರ ಬರೆದಿದ್ದ. ಈ ಕುರಿತು ಖಾಸಗಿ ಸುದ್ದಿ ವಾಹಿನಿಯ ಸಿಇಒ ನೀಡಿದ ದೂರಿನ ಆಧಾರದ ಮೇಲೆ ನೋಯ್ಡಾದ ಸೆಕ್ಟರ್ 20 ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದರು.

ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಸ್ಪೋಟಿಸುವ ಬೆದರಿಕೆ: ಖಲಿಸ್ತಾನ್​ ಉಗ್ರರಿಗೆ ಭಾರತ ಖಡಕ್​ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.