ETV Bharat / bharat

ಅಕ್ರಮ ಆಸ್ತಿ ಗಳಿಕೆ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾದ ಎ. ರಾಜಾ

author img

By

Published : Jan 10, 2023, 8:15 PM IST

ಹಿಂದೆ ಕೇಂದ್ರ ಮಂತ್ರಿಯಾಗಿದ್ದಾಗ ಅಕ್ರಮ ಆಸ್ತಿ ಗಳಿಸಿದ ಆರೋಪದ ಪ್ರಕರಣ ವಿಚಾರಣೆಗಾಗಿ ಡಿಎಂಕೆ ಸಂಸದ ಎ. ರಾಜಾ ಇಂದು ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಫೆಬ್ರವರಿ 8 ರಂದು ಮುಂದಿನ ವಿಚಾರಣೆ ನಡೆಯಲಿದೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣ; ನ್ಯಾಯಾಲಯಕ್ಕೆ ಹಾಜರಾದ ಎ. ರಾಜಾ
A case of ill-gotten gains A appeared in the court Raja

ಚೆನ್ನೈ: ಮಾಜಿ ಕೇಂದ್ರ ಸಚಿವ ಮತ್ತು ಹಾಲಿ ಡಿಎಂಕೆ ಸಂಸದ ಎ ರಾಜಾ ಅವರು ಮಂಗಳವಾರ ಚೆನ್ನೈನ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಸಚಿವರಾಗಿದ್ದಾಗ ಅಕ್ರಮ ಆಸ್ತಿ ಗಳಿಕೆ ಆರೋಪದ ವಿಚಾರಣೆಗಾಗಿ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಲಯವು ಅವರಿಗೆ ಆರೋಪಪಟ್ಟಿ ಮತ್ತು ಪ್ರಥಮ ಮಾಹಿತಿ ವರದಿಯ ಪ್ರತಿಗಳನ್ನು ನೀಡಿತು.

ಕೇಂದ್ರೀಯ ತನಿಖಾ ದಳವು ಮಾಜಿ ಸಚಿವ ಎ. ರಾಜಾ ಮತ್ತು ಅವರ ಕುಟುಂಬ ಸದಸ್ಯರು, ಸಹಚರರು ಸೇರಿದಂತೆ 16 ಇತರರ ವಿರುದ್ಧ ಆಗಸ್ಟ್ 18, 2015 ರಂದು ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ದಾಖಲಿಸಿತ್ತು. ಇವರು 27.92 ಕೋಟಿ ರೂಪಾಯಿ ಮೊತ್ತದ ಅಕ್ರಮ ಆಸ್ತಿಯನ್ನು ಸಂಗ್ರಹಿಸಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಪ್ರಾಥಮಿಕ ತನಿಖೆಗಳ ಆಧಾರದ ಮೇಲೆ, ಅಕ್ಟೋಬರ್ 1999 ರಿಂದ ಸೆಪ್ಟೆಂಬರ್ 2010 ರ ಅವಧಿಯಲ್ಲಿ ಅವರ ಬಳಿ ಇರುವ ಸಂಪತ್ತು ಅವರ ತಿಳಿದಿರುವ ಆದಾಯದ ಮೂಲಗಳಿಗೆ ಅಸಮಾನವಾಗಿದೆ ಎಂದು ಸಂಸ್ಥೆ ಹೇಳಿದೆ.

ವಿಶೇಷ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಿದ್ದ ಸಿಬಿಐ: ಏಳು ವರ್ಷಗಳ ಹಿಂದಿನ ಪ್ರಕರಣದ ತನಿಖೆ ಪೂರ್ಣಗೊಂಡ ನಂತರ, ಸಿಬಿಐ ಇತ್ತೀಚೆಗೆ ಚೆನ್ನೈನ ವಿಶೇಷ ನ್ಯಾಯಾಲಯದಲ್ಲಿ ರಾಜಾ ಮತ್ತು ಇತರ ಐವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ಅಂತಿಮ ತನಿಖಾ ವರದಿಯಲ್ಲಿ ರಾಜಾ 5.53 ಕೋಟಿ ರೂಪಾಯಿಗಳಷ್ಟು ಅಕ್ರಮ ಸಂಪತ್ತನ್ನು ಗಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದು ಅವರ ತಿಳಿದಿರುವ ಆದಾಯದ ಮೂಲಗಳಿಗೆ ಅನುಗುಣವಾಗಿಲ್ಲ. ರಾಜಾ ಸೇರಿದಂತೆ ಆರೋಪಿಗಳಿಗೆ ಖುದ್ದು ಹಾಜರಾಗುವಂತೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು.

ಸಮನ್ಸ್ ನಂತರ ರಾಜಾ ಮತ್ತು ಇತರ ನಾಲ್ವರು ಸಿಂಗರವೇಲನ್ ಮಾಳಿಗೈಯಲ್ಲಿನ ಸಂಸದರು ಮತ್ತು ಶಾಸಕರಿಗೆ ಸಂಬಂಧಿಸಿದ ಪ್ರಕರಣಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಡಿ. ಶಿವಕುಮಾರ್ ಅವರ ಮುಂದೆ ಹಾಜರಾದರು. ರಾಜಾ ಮತ್ತು ಇತರರಿಗೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಪಟ್ಟಿ ಮತ್ತು ಇತರ ದಾಖಲೆಗಳ ಪ್ರತಿಗಳನ್ನು ಪೂರೈಸಲು ನ್ಯಾಯಾಧೀಶರು ಆದೇಶಿಸಿದರು. ಮುಂದಿನ ವಿಚಾರಣೆಗಾಗಿ ಪ್ರಕರಣವನ್ನು ಫೆಬ್ರವರಿ 8ಕ್ಕೆ ಮುಂದೂಡಲಾಗಿದೆ.

ಡಿಸೆಂಬರ್​ನಲ್ಲಿ ಆಸ್ತಿ ಜಪ್ತಿ ಮಾಡಿತ್ತು ಇಡಿ: ಮಾಜಿ ಕೇಂದ್ರ ಸಚಿವ ಹಾಗೂ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದ ಎ. ರಾಜಾ ಅವರಿಗೆ ಸೇರಿದ 55 ಕೋಟಿ ರೂಪಾಯಿ ಮೌಲ್ಯದ ಕೊಯಮತ್ತೂರಿನಲ್ಲಿರುವ 45 ಎಕರೆ ಬೇನಾಮಿ ಭೂಮಿಯನ್ನು ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಪ್ತಿ ಮಾಡಲಾಗಿದೆ ಎಂದು 2022ರ ಡಿಸೆಂಬರ್ 23 ರಂದು ಜಾರಿ ನಿರ್ದೇಶನಾಲಯ (ಇಡಿ) ಹೇಳಿತ್ತು.

2004 ಮತ್ತು 2007 ರ ನಡುವೆ ಪರಿಸರ ಮತ್ತು ಅರಣ್ಯ ಖಾತೆ ಕೇಂದ್ರ ಕ್ಯಾಬಿನೆಟ್ ಸಚಿವರಾಗಿದ್ದ ರಾಜಾ ಅವರು ಗುರುಗ್ರಾಮ್ ಮೂಲದ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ಲಿಸ್ಟೆಡ್ ರಿಯಲ್ ಎಸ್ಟೇಟ್ ಕಂಪನಿಗೆ ಪರಿಸರ ಅನುಮತಿಗಳನ್ನು ನೀಡಿದ್ದರು ಎಂದು ಸಿಬಿಐ ಹೇಳಿದೆ. ಪ್ರಸ್ತುತ ನೀಲಗಿರಿ ಲೋಕಸಭಾ ಕ್ಷೇತ್ರದಿಂದ ಡಿಎಂಕೆ ಸಂಸದರಾಗಿರುವ ರಾಜಾ, ಇಡಿ ಆರೋಪವನ್ನು ತಿರಸ್ಕರಿಸಿದ್ದಾರೆ. ಇದು ನನ್ನ ಭೂಮಿ ಅಲ್ಲ. ಇಡಿಯವರು ಇದು ಬೇನಾಮಿ ಭೂಮಿ ಎಂದು ಹೇಳಿಕೊಳ್ಳುತ್ತಾರೆ ಎಂದು ಹೇಳಿದ ರಾಜಾ, ಇಡಿ ಕ್ರಮವನ್ನು ರಾಜಕೀಯ ಪ್ರೇರಿತ ಎಂದು ಟೀಕಿಸಿದ್ದರು.

ಇದನ್ನು ಓದಿ: ಐಸಿಐಸಿಐ ವಂಚನೆ ಪ್ರಕರಣ: ಜಾಮೀನು ಕೋರಿದ ವೇಣುಗೋಪಾಲ್ ಧೂತ್, 13 ರಂದು ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.