ETV Bharat / bharat

ತಿರುಮಲದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿದ್ದಾಗ ಚಿರತೆ ದಾಳಿ: 6 ವರ್ಷದ ಮಗು ಸಾವು

author img

By

Published : Aug 12, 2023, 8:48 AM IST

Updated : Aug 12, 2023, 9:24 AM IST

leopard attack
ಚಿರತೆ ದಾಳಿ

ಆರು ವರ್ಷದ ಬಾಲಕಿ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿರುವ ಭಯಾನಕ ಘಟನೆ ಆಂಧ್ರಪ್ರದೇಶದ ತಿರುಮಲದಲ್ಲಿ ನಡೆದಿದೆ.

ಆಂಧ್ರಪ್ರದೇಶ: ತಿರುಮಲದಲ್ಲಿ ದಾರುಣ ಘಟನೆಯೊಂದು ನಡೆದಿದೆ. ಚಿರತೆ ದಾಳಿಯಿಂದ 6 ವರ್ಷದ ಮಗುವೊಂದು ಪ್ರಾಣ ಕಳೆದುಕೊಂಡಿದೆ. ಬಾಲಕಿಯ ದೇಹದ ಅರ್ಧ ಭಾಗವನ್ನು ಚಿರತೆ ತಿಂದು ಹಾಕಿದ್ದು, ಕುಟುಂಬಸ್ಥರಲ್ಲಿ ದುಃಖ ಮನೆ ಮಾಡಿದೆ.

ಮಾಹಿತಿ ಪ್ರಕಾರ, ನೆಲ್ಲೂರು ಜಿಲ್ಲೆಯ ಪೋತಿರೆಡುಪದವು ಎಂಬಲ್ಲಿನ ಕುಟುಂಬವೊಂದು ದೇವರ ದರ್ಶನ ಪಡೆಯಲು ತಿರುಮಲಕ್ಕೆ ತೆರಳಿತ್ತು. ಶುಕ್ರವಾರ ರಾತ್ರಿ 8 ಗಂಟೆಗೆ ತಿರುಪತಿ ತಲುಪಿ ಬಳಿಕ ಅಲಿಪಿರಿ ಕಾಲುದಾರಿ ಮೂಲಕ ರಾತ್ರಿ 11 ಗಂಟೆ ವೇಳೆಗೆ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಕಾಲ್ನಡಿಗೆ ಮೂಲಕ ಬೆಟ್ಟ ಹತ್ತಿ ಹೋಗುತ್ತಿದ್ದ ಕುಟುಂಬಸ್ಥರ ಮೇಲೆ ಚಿರತೆ ದಾಳಿ ಮಾಡಿದೆ. ಈ ವೇಳೆ, ಮುಂದೆ ನಡೆದುಕೊಂಡು ಹೋಗುತ್ತಿದ್ದ 6 ವರ್ಷದ ಲಕ್ಷಿತಾ ಎಂಬ ಬಾಲಕಿಯ ಮೇಲೆ ದಾಳಿ ನಡೆಸಿ, ಕಾಡಿಗೆ ಎಳೆದೊಯ್ದಿದೆ. ಇನ್ನೇನು ಕೆಲವೇ ತಾಸಿನಲ್ಲಿ ಕುಟುಂಬಸ್ಥರು ಬೆಟ್ಟದ ತುದಿ ತಲುಪಬೇಕು ಎನ್ನುವಷ್ಟರಲ್ಲಿ ಈ ಘಟನೆ ನಡೆದಿದೆ.

ಚಿರತೆ ದಾಳಿಗೆ ಹೆದರಿದ ಕುಟುಂಬಸ್ಥರು ಜೋರಾಗಿ ಕಿರುಚಿಕೊಂಡಿದ್ದಾರೆ. ಚಿರತೆ ಮಗುವನ್ನು ಕಾಡಿಗೆ ಎಳೆದೊಯ್ದ ಬಳಿಕ ಪೋಷಕರು ಭದ್ರತಾ ಸಿಬ್ಬಂದಿಗೆ ದೂರು ನೀಡಿದ್ದಾರೆ. ರಾತ್ರಿ ಸಮಯ ಆಗಿದ್ದರಿಂದ ಭದ್ರತಾ ಸಿಬ್ಬಂದಿ ಶೋಧ ಕಾರ್ಯ ನಡೆಸಲು ಸಾಧ್ಯವಾಗಿರಲಿಲ್ಲ. ಇಂದು ಬೆಳಗ್ಗೆ ಪೊಲೀಸರು ಶೋಧ ನಡೆಸಿದಾಗ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಮಗುವಿನ ಶವ ಪತ್ತೆಯಾಗಿದೆ. ಚಿರತೆ ಮಗುವಿನ ದೇಹದ ಅರ್ಧ ಭಾಗವನ್ನು ತಿಂದು ಹಾಕಿದ್ದು, ಭಕ್ತರು ಆತಂಕಗೊಂಡಿದ್ದಾರೆ.


ಜೂನ್​ನಲ್ಲೂ ನಡೆದಿತ್ತು ಮಗುವಿನ ಮೇಲೆ ಚಿರತೆ ದಾಳಿ: ಜೂನ್​ 23ರಂದು ತಿರುಪತಿ ಸನ್ನಿಧಿಯಲ್ಲಿ ಇಂತಹುದೇ ಭಯಾನಕ ಘಟನೆ ನಡೆದಿತ್ತು. ಆಗ ಮಗುವೊಂದು ದಾಳಿಯಿಂದ ಹೇಗೋ ಬಚಾವ್​ ಆಗಿತ್ತು. ತಂದೆ - ತಾಯಿ ಎದುರೇ ಆಟವಾಡುತ್ತಿದ್ದ ಮಗುವನ್ನು ಚಿರತೆಯೊಂದು ಕತ್ತು ಹಿಡಿದು ಕಾಡಿಗೆ ಎಳೆದೊಯ್ದಿತ್ತು. ಕರ್ನೂಲ್ ಜಿಲ್ಲೆಯ ಆದೋನಿ ನಿವಾಸಿ ದಂಪತಿ ತಮ್ಮ ನಾಲ್ಕು ವರ್ಷದ ಮಗ ಕೌಶಿಕ್ ಜೊತೆಗೆ ಅಲಿಪಿರಿಯಿಂದ ತಿರುಮಲಕ್ಕೆ ತೆರಳಿದ್ದರು. ಒಂದನೇ ಘಾಟ್ ರಸ್ತೆಯ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಕುಳಿತು ಊಟ ಮಾಡುತ್ತಿದ್ದಾಗ ಚಿರತೆ ದಾಳಿ ಮಾಡಿ ಮಗುವನ್ನು ಹೊತ್ತೊಯ್ದಿತ್ತು.

ಮಗುವಿನ ಮೇಲೆ ಚಿರತೆ ದಾಳಿ ಮಾಡಿದ್ದರಿಂದ ಗಾಬರಿಗೊಂಡ ಪೋಷಕರು ರಕ್ಷಣೆಗಾಗಿ ಕೂಗಾಡಿ ಚಿರತೆಯಿಂದೆ ಓಡಿದ್ದರು. ಆಗ ಪೋಷಕರ ಸಹಾಯಕ್ಕೆ ಸ್ಥಳೀಯ ಅಂಗಡಿಯಾತ ಹಾಗೂ ಅಲ್ಲಿದ್ದ ಭದ್ರತಾ ಸಿಬ್ಬಂದಿ ಬಂದಿದ್ದರು. ಅಂತಿಮವಾಗಿ ಚಿರತೆಯ ದವಡೆಯಿಂದ ಮಗುವನ್ನು ಉಳಿಸಿಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದರು. ಪೋಷಕರು ಮತ್ತು ಸ್ಥಳೀಯರು ಚಿರತೆಗೆ ಟಾರ್ಚ್​ ಬಿಟ್ಟು, ಕಲ್ಲಿನಿಂದ ದಾಳಿ ಮಾಡಿದ್ದರು. ಕಲ್ಲೇಟು ತಿಂದ ಚಿರತೆ ಮಗುವನ್ನು ಪೊಲೀಸ್ ಔಟ್ ಪೋಸ್ಟ್ ಬಳಿ ಬಿಟ್ಟು ಓಡಿ ಹೋಗಿತ್ತು. ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

ಇದನ್ನೂ ಓದಿ : ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪ್ರತ್ಯಕ್ಷ.. ತಾಯಿ ಚಿರತೆ ಸೆರೆ ಹಿಡಿಯುವಂತೆ ಮನವಿ

Last Updated :Aug 12, 2023, 9:24 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.