ಕರ್ನಾಟಕ

karnataka

ETV Bharat / international

ನೇಪಾಳ: ಪ್ರವಾಹದಲ್ಲಿ ಸಿಕ್ಕ ಶವಗಳ ಸಾಮೂಹಿಕ ಅಂತ್ಯಸಂಸ್ಕಾರ, ಕಣ್ಮರೆಯಾದವರಿಗೂ ಅಂತಿಮ ವಿದಾಯ

ನೇಪಾಳ ಮಹಾದುರಂತದಲ್ಲಿ ಕಣ್ಮರೆಯಾದ ಜನರು ಇನ್ನೂ ಸಿಗದ ಕಾರಣ ಅವರ ಆತ್ಮಕ್ಕೆ ಶಾಂತಿ ಕೋರಿ ಕುಟುಂಬಸ್ಥರು ಅಂತಿಮ ವಿಧಿವಿಧಾನ ನಡೆಸುತ್ತಿದ್ದಾರೆ.

ಶವಗಳನ್ನು ಗುರುತಿಸಲು ಇಡಲಾದ ಫಲಕಗಳು.
ಶವಗಳನ್ನು ಗುರುತಿಸಲು ಇಡಲಾದ ಫಲಕಗಳು. (AP)

By ETV Bharat Karnataka Team

Published : September 2, 2026 at 1:35 PM IST

ನುವಾಕೋಟ್ (ನೇಪಾಳ):ಒಂದು ವಾರದ ಹಿಂದೆ ಹಿಮಾಲಯ ಪ್ರದೇಶದಲ್ಲಿ ಸಂಭವಿಸಿದ ಭೀಕರ ಹಠಾತ್​ ಪ್ರವಾಹ, ಭೂಕುಸಿತದಲ್ಲಿ ಕಣ್ಮರೆಯಾಗಿರುವವರು ಇನ್ನು ಸಿಗುವ ಸಾಧ್ಯತೆ ಕ್ಷೀಣಿಸಿದ ಹಿನ್ನೆಲೆ ಕುಟುಂಬಸ್ಥರು ಅವರ ಆತ್ಮಕ್ಕೆ ಮುಕ್ತಿ ನೀಡಲು ಸಾಂಕೇತಿಕವಾಗಿ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸುತ್ತಿದ್ದಾರೆ.

ಆಗಸ್ಟ್ 26 ರಂದು ಚೀನಾ-ನೇಪಾಳ ಗಡಿಯಲ್ಲಿ ಸಂಭವಿಸಿದ ಹಿಮನದಿ ಕುಸಿತದಿಂದ ಮಂಜುಗಡ್ಡೆ, ಕಲ್ಲು, ಮಣ್ಣಿನ ಜೊತೆ ಧುಮ್ಮಿಕ್ಕಿ ಬಂದ ನೀರಿನ ಅಲೆಯಲ್ಲಿ ಈವರೆಗಿನ ಅಂದಾಜಿನ ಪ್ರಕಾರ, 4500 ಜನರು ನಾಪತ್ತೆಯಾಗಿದ್ದಾರೆ. ಇದರಲ್ಲಿ 1,127 ಕ್ಕೂ ಅಧಿಕ ಶವಗಳನ್ನು ಪತ್ತೆ ಮಾಡಲಾಗಿದೆ.

ದುರಂತ ಸಂಭವಿಸಿ 8 ದಿನ ಕಳೆದಿವೆ. ಪರಿಹಾರ ಶಿಬಿರಗಳು, ಶವಾಗಾರಗಳಲ್ಲಿ ಹುಡುಕಾಡಿದ ನಂತರವೂ ತಮ್ಮವರು ಸಿಗದಿದ್ದಾಗ ಬದುಕಿ ಬರುವ ಭರವಸೆಯೂ ಇಲ್ಲವಾದ ಕಾರಣ ಅವರ ಸಂಬಂಧಿಕರು ಅಂತಿಮ ಸಂಸ್ಕಾರ ನಡೆಸುತ್ತಿದ್ದಾರೆ.

ನನ್ನ ಪತಿ ಚೀನಾಕ್ಕೆ ತೆರಳುವಾಗ ಈ ದುರಂತ ಸಂಭವಿಸಿತು. ಟಿವಿಯಲ್ಲಿ ನೋಡಿ ಅವರಿಗೆ ಕರೆ ಮಾಡಿದೆ. ಆದರೆ, ಅವರು ಪ್ರತಿಕ್ರಿಯಿಸಲಿಲ್ಲ. ಅಂದಿನಿಂದ ಹುಡುಕಾಡುತ್ತಲೇ ಇದ್ದೇನೆ. ಈವರೆಗೂ ಅವರ ಸುಳಿವು ಸಿಕ್ಕಿಲ್ಲ. ಕಾಣೆಯಾದವರ ಆತ್ಮಕ್ಕೆ ಶಾಂತಿ ಸಿಗಲಿ. ಅವರು ಎಲ್ಲಿದ್ದರೂ ಶಾಂತಿ ಮತ್ತು ಸಂತೋಷವಾಗಿರಲಿ ಎಂಬ ಕಾರಣಕ್ಕೆ ನಾನು ಈ ಸಾಂಕೇತಿಕ ಅಂತ್ಯ ಸಂಸ್ಕಾರ ನಡೆಸುತ್ತಿದ್ದೇನೆ ಎಂದು ಡೋಲ್ಮಾ ನೇವಾರ್ ತಮಾಂಗ್ ಎಂಬವರು ಕಣ್ಣೀರಿಡುತ್ತಾ ಹೇಳಿದರು.

ಬದುಕುಳಿದವರಿಗಾಗಿ ತೀವ್ರ ಶೋಧ:ದುರಂತ ಸಂಭವಿಸಿ ಒಂದು ವಾರ ಕಳೆದರೂ, ಜಲವಿದ್ಯುತ್​ ಯೋಜನೆಗಳ ಸುರಂಗಗಳಲ್ಲಿ ಸಿಲುಕಿದವರನ್ನು ಜೀವಂತವಾಗಿ ರಕ್ಷಿಸಬಹುದು ಎಂಬ ಭರವಸೆಯನ್ನು ನೇಪಾಳದ ರಕ್ಷಣಾ ಸಿಬ್ಬಂದಿ ಹೊಂದಿದ್ದಾರೆ.

ಸಾಮೂಹಿಕ ಅಂತ್ಯಸಂಸ್ಕಾರ (AP)

ಕೆಸರು ತುಂಬಿಕೊಂಡಿರುವ ಸುರಂಗಗಳಿಂದ ಮೃತದೇಹಗಳನ್ನು ಹೊರ ತೆಗೆಯಲಾಗುತ್ತಿದೆ. ಅವಶೇಷಗಳನ್ನು ಕೊರೆದು ಕಾರ್ಯಾಚರಣೆ ಮುಂದುವರಿಸಿದ್ದಾರೆ. ನಾಪತ್ತೆಯಾದ ಸಾವಿರಾರು ಜನರಲ್ಲಿ ಕೆಲವರಾದರೂ ಉಳಿದುಕೊಂಡಿರುವ ಭರವಸೆ ಇದೆ. ಕೆಲವೊಮ್ಮೆ ಪವಾಡಗಳು ಜರುಗುತ್ತವೆ. ಅವರಿಗಾಗಿ ಹುಡುಕಾಡುತ್ತೇವೆ. ಇನ್ನೂ ಭರವಸೆ ಕಳೆದುಕೊಂಡಿಲ್ಲ ಎಂದು ನೇಪಾಳದ ವಿದೇಶಾಂಗ ಸಚಿವ ಶಿಶಿರ್​ ಖನಾಲ್​ ಹೇಳಿದ್ದಾರೆ.

'ಇದು ಜಾಗತಿಕ ಜವಾಬ್ದಾರಿ':ಈ ಮಹಾದುರಂತದ ಕುರಿತು ಫೇಸ್​ಬುಕ್​​ನಲ್ಲಿ ಪೋಸ್ಟ್​ ಹಂಚಿಕೊಂಡಿರುವ ನೇಪಾಳ ಪ್ರಧಾನಿ ಬಾಲೇಂದ್ರ ಶಾ, ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಹಿಮಾಲಯ ಪ್ರದೇಶದಲ್ಲಿ ಅಪಾಯಗಳು ಹೆಚ್ಚುತ್ತಿವೆ ಎಂಬುದಕ್ಕೆ ಈ ವಿಪತ್ತೇ ಸಾಕ್ಷಿ ಮತ್ತು ಮುನ್ಸೂಚನೆ. ಹವಾಮಾನ ವೈಪರೀತ್ಯ ಜಾಗತಿಕ ಕೊಡುಗೆಯಾಗಿದೆ. ಆದ್ದರಿಂದ, ಈ ವಿಪತ್ತಿನ ನಿರ್ವಹಣೆಯೂ ಜಾಗತಿಕ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

ತಮ್ಮವರಿಗಾಗಿ ಹುಡುಕಾಡುತ್ತಿರುವ ವ್ಯಕ್ತಿ (AP)

ವಿಶ್ವದ ತಪ್ಪಿಗೆ ನಮಗೇಕೆ ಶಿಕ್ಷೆ?:3 ಕೋಟಿ ಜನಸಂಖ್ಯೆ ಹೊಂದಿರುವ, ಹೆಚ್ಚಾಗಿ ಗ್ರಾಮೀಣ ಭಾಗವನ್ನೇ ಒಳಗೊಂಡ ನೇಪಾಳದಲ್ಲಿ ಆಗಿರುವ ವಿನಾಶದ ಕುರಿತು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗುವ ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ ನೇಪಾಳದ ಪಾಲು ಅತ್ಯಲ್ಪವಾಗಿದ್ದರೂ, ಭೀಕರ ಪರಿಣಾಗಳನ್ನು ಮಾತ್ರ ನಾವೇಕೆ ಅನುಭವಿಸಬೇಕು ಎಂದು ಅಲ್ಲಿನ ಜನರು ಆಕ್ರೋಶಭರಿತರಾಗಿ ಪ್ರಶ್ನಿಸುತ್ತಿದ್ದಾರೆ.

ಸಾಮೂಹಿಕ ಅಂತ್ಯಸಂಸ್ಕಾರ:ದುರಂತದಲ್ಲಿ ಸಿಕ್ಕ ಮೃತದೇಹಗಳಿಂದ ಶವಾಗಾರಗಳು ತುಂಬುತ್ತಿವೆ. ಗುರುತು ಪತ್ತೆಯಾಗದ ನೂರಾರು ಶವಗಳನ್ನು ಡಿಎನ್​ಎ ಮಾದರಿ ಸಂಗ್ರಹಿಸಿ ಸಾಮೂಹಿಕವಾಗಿ ಅಂತ್ಯಸಂಸ್ಕಾರ ನಡೆಸಲಾಗುತ್ತಿದೆ. ಮಂಗಳವಾರದವರೆಗೆ 1050 ಮೃತದೇಹಗಳು ಪತ್ತೆಯಾಗಿದ್ದು, ಇನ್ನೂ 3,916 ಜನರು ಕಾಣೆಯಾಗಿದ್ದಾರೆ. ಇತ್ತ, ಚೀನಾದಲ್ಲಿ 16 ಮಂದಿ ಸಾವನ್ನಪ್ಪಿದ್ದು, 546 ಜನರು ಕಾಣೆಯಾಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಇದರಿಂದ ಒಟ್ಟು ಸಾವಿನ ಸಂಖ್ಯೆ 1,066 ಕ್ಕೆ ಏರಿದರೆ, ಕಾಣೆಯಾದವರ ಸಂಖ್ಯೆ 4,462 ಕ್ಕೆ ತಲುಪಿದೆ. ಭಾರತದ ಗಡಿಯ ಕೆಳಹಂತದ ನದಿಗಳಲ್ಲಿ ಕನಿಷ್ಠ 17 ಮೃತದೇಹಗಳನ್ನು ಪತ್ತೆಮಾಡಲಾಗಿದೆ.

ಟಿಬೆಟ್‌ನಲ್ಲಿ ವಿದೇಶಿ ಪತ್ರಕರ್ತರು ವರದಿ ಮಾಡಲು ಚೀನಾ ನಿರ್ಬಂಧಿಸಿದ್ದರಿಂದ ಅಲ್ಲಿನ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ. ಚೀನಾ ನೀಡುತ್ತಿರುವ ಅಂಕಿಅಂಶಗಳು ಸರಿಯಾಗಿಲ್ಲ ಎಂದು ದೇಶಭ್ರಷ್ಟ ಹಣೆಪಟ್ಟಿ ಹೊತ್ತಿರುವ ಟಿಬೆಟ್​​ನ ಸಂಘಟನೆಗಳು ಸಂಶಯ ವ್ಯಕ್ತಪಡಿಸುತ್ತಿವೆ.

ಇವುಗಳನ್ನೂ ಓದಿ: